ರಷ್ಯಾದ ಬೇಹುಗಾರಿಕಾ ಪ್ರಪಂಚ: ರಹಸ್ಯ ಯುದ್ಧಕ್ಕೆ ಬಲಿಯಾದರೇ ಜನರಲ್ ಕಿರಿಲೊವ್?
ರಷ್ಯನ್ ಸೇನೆಯ ಪರಮಾಣು, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೊವ್ ಅವರನ್ನು ಮಾಸ್ಕೋದಲ್ಲಿ ಸ್ಕೂಟರ್ ಬಾಂಬ್ ಸ್ಫೋಟದಲ್ಲಿ ಹತ್ಯೆ ಮಾಡಲಾಗಿದೆ. ಈ ಸ್ಫೋಟದಲ್ಲಿ ಅವರ ಸಹಾಯಕ ಕೂಡ ಸಾವನ್ನಪ್ಪಿದ್ದಾರೆ. ಈ ಘಟನೆ ಕ್ರೆಮ್ಲಿನ್‌ನಿಂದ ಕೇವಲ 4 ಮೈಲಿ ದೂರದಲ್ಲಿ ನಡೆದಿದೆ.
- ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ರಷ್ಯನ್ ಸೇನೆಯ ಪರಮಾಣು, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಒಬ್ಬರನ್ನು ವಿದ್ಯುತ್ ಚಾಲಿತ ಸ್ಕೂಟರ್ ಒಂದರಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಿಸಿ ಹತ್ಯೆಗೊಳಿಸಲಾಗಿದೆ.
ಡಿಸೆಂಬರ್ 17, ಮಂಗಳವಾರ ಬೆಳಗ್ಗೆ, ಮಾಸ್ಕೋದ ವಸತಿ ಸಮುಚ್ಚಯವೊಂದರ ಹೊರಭಾಗದಲ್ಲಿದ್ದ ಇಲೆಕ್ಟ್ರಿಕ್ ಸ್ಕೂಟರ್ ಒಂದರಲ್ಲಿ ರಹಸ್ಯವಾಗಿ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತು. ಈ ದಾಳಿಯಲ್ಲಿ 54 ವರ್ಷ ವಯಸ್ಸಿನ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೊವ್ ಮತ್ತು ಅವರ ಸಹಾಯಕ ಸಾವಿಗೀಡಾದರು. ರಷ್ಯನ್ ಸೇನೆಯ ಜನರಲ್ ಮತ್ತು ಅವರ ಸಹಾಯಕನ ಸಾವಿಗೆ ಸಂಬಂಧಿಸಿದ ತನಿಖೆ ನಡೆಸಲು ರಷ್ಯನ್ ಇನ್ವೆಸ್ಟಿಗೇಟಿವ್ ಕಮಿಟಿ ಕ್ರಿಮಿನಲ್ ಮೊಕದ್ದಮೆಯೊಂದನ್ನು ದಾಖಲಿಸಿಕೊಂಡಿತು. ರಷ್ಯನ್ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಕ್ರೆಮ್ಲಿನ್‌ನಿಂದ ಕೇವಲ 4 ಮೈಲಿ (7 ಕಿಲೋಮೀಟರ್) ದೂರದಲ್ಲಿರುವ ವಸತಿ ಸಮುಚ್ಚಯದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದಿವೆ.
ರಷ್ಯಾದ ತುರ್ತು ಪ್ರತಿಕ್ರಿಯಾ ತಂಡ ಈ ಕುರಿತು ಮಾಹಿತಿ ನೀಡಿದ್ದ, ಈ ಸ್ಫೋಟಕವನ್ನು ದೂರದಿಂದಲೇ ಚಾಲ್ತಿಗೊಳಿಸಲಾಗಿತ್ತು ಎಂದಿದೆ. ಅಂದರೆ, ಈ ಸ್ಫೋಟ ಯಾವುದೋ ಸಾಧಾರಣ ದಾಳಿಯಾಗಿರದೆ, ಅತ್ಯಂತ ಜಾಗರೂಕವಾಗಿ ಯೋಜಿಸಿ, ಕಿರಿಲೊವ್‌ರನ್ನು ಗುರಿಯಾಗಿಸಿ ನಡೆಸಿರುವ ದಾಳಿಯಾಗಿದೆ. ರಷ್ಯಾದ ಸರ್ಕಾರಿ ಮಾಧ್ಯಮ ಟಿಎಎಸ್ಎಸ್ ಸ್ಫೋಟದ ಕುರಿತು ಮಾಹಿತಿ ನೀಡಿದ್ದು, ಈ ಸ್ಫೋಟ 300 ಗ್ರಾಮ್ಸ್ ಟಿಎನ್‌ಟಿಗೆ ಸಮನಾದ ಶಕ್ತಿ ಹೊಂದಿತ್ತು ಎಂದಿದೆ.
ವಿಜಯ ದಿವಸದ ಸಂಭ್ರಮಕ್ಕೆ ಪ್ರತಿಭಟನೆ, ಉದ್ವಿಗ್ನತೆಗಳ ಕರಿನೆರಳು
ರಷ್ಯಾದ ಆಂತರಿಕ ಸಚಿವಾಲಯದ ಮಾಸ್ಕೋ ಇಲಾಖೆಯ ಮುಖ್ಯ ಅಧಿಕಾರಿಗಳು, ತನಿಖಾ ತಂಡದ ಸದಸ್ಯರು, ವೈದ್ಯಕೀಯ ಸಿಬ್ಬಂದಿ, ಮತ್ತು ತುರ್ತು ಪ್ರತಿಕ್ರಿಯಾ ತಂಡಗಳು ಈಗಾಗಲೇ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿವೆ.
ದಾಳಿಗೆ ಒಂದು ದಿನ ಮುನ್ನ ಲೆಫ್ಟಿನೆಂಟ್ ಜನರಲ್ ಮೇಲೆ ಉಕ್ರೇನ್ ನಿರ್ಬಂಧ!
ಇಗೊರ್ ಕಿರಿಲೊವ್ ಸಾವಿನ ಕೇವಲ ಒಂದು ದಿನ ಹಿಂದೆ, ಉಕ್ರೇನಿನ ನ್ಯಾಯಾಂಗ ಇಲಾಖೆ ಕೀವ್ ಪಡೆಗಳ ವಿರುದ್ಧ ರಾಸಾಯನಿಕ ಆಯುಧಗಳನ್ನು ಪ್ರಯೋಗಿಸಲು ಅನುಮತಿ ನೀಡಿದ ಆರೋಪದಡಿ, ಕಿರಿಲೊವ್‌ರನ್ನು ಅವರ ಅನುಪಸ್ಥಿತಿಯಲ್ಲಿ ಅಪರಾಧಿ ಎಂದು ಘೋಷಿಸಿತ್ತು.
ಅಂದರೆ, ಉಕ್ರೇನಿನ ನ್ಯಾಯಾಲಯದಲ್ಲಿ ಕಿರಿಲೊವ್ ವಿರುದ್ಧ ದಾವೆ ಹೂಡಿದ್ದ ಸಂದರ್ಭದಲ್ಲಿ, ಅದರ ವಿಚಾರಣೆಯ ಸಂದರ್ಭದಲ್ಲಿ, ಕಿರಿಲೊವ್ ಅಲ್ಲಿ ಉಪಸ್ಥಿತರಿರಲಿಲ್ಲ.
ಕಿರಿಲೊವ್ ರಷ್ಯನ್ ಸೇನಾ ಪಡೆಗಳಿಗೆ ಪೂರ್ವ ಮತ್ತು ದಕ್ಷಿಣದ ಯುದ್ಧ ಭೂಮಿಯಲ್ಲಿ ನಿರ್ಬಂಧಿತ ರಾಸಾಯನಿಕ ಆಯುಧಗಳನ್ನು ಪ್ರಯೋಗಿಸುವಂತೆ ಆದೇಶಿಸಿದ್ದರು ಎಂದು ಉಕ್ರೇನ್ ಆರೋಪಿಸಿತ್ತು.
ಯುದ್ಧ ಆರಂಭಗೊಂಡ ಬಳಿಕ, ಲೆಫ್ಟಿನೆಂಟ್ ಜನರಲ್ ಕಿರಿಲೊವ್ ಅವರ ಆದೇಶದ ಅನುಸಾರ, ರಷ್ಯನ್ ಪಡೆಗಳು 4,800 ಬಾರಿ ರಾಸಾಯನಿಕ ಆಯುಧಗಳನ್ನು ಪ್ರಯೋಗಿಸಿವೆ ಎಂದು ಉಕ್ರೇನ್ ನ್ಯಾಯಾಲಯ ಹೇಳಿದೆ. ಇವಿಷ್ಟೂ ಸಂಖ್ಯೆಯ ದಾಳಿಗಳು ಕಿರಿಲೊವ್ ಅವರ ಕಮಾಂಡ್‌ಗೆ ಸಂಬಂಧಿಸಿದ ರಾಸಾಯನಿಕ ಆಯುಧಗಳ ಬಳಕೆಯ ಕುರಿತು ಲಭ್ಯವಿರುವ ದಾಖಲೆಗಳನ್ನು ಅನುಸರಿಸಿವೆ.
ಕಿರಿಲೊವ್ ಅವರ ಆದೇಶದ ಅನುಸಾರ, ರಷ್ಯನ್ ಪಡೆಗಳು ಉಕ್ರೇನ್ ವಿರುದ್ಧ ಕೆ-1 ಕಾಂಬ್ಯಾಟ್ ಗ್ರೆನೇಡ್, ಮತ್ತು ಉಸಿರು ಕಟ್ಟುವಂತೆ ಮಾಡುವ ಕ್ಲೋರೋಪಿಕ್ರಿನ್ ಸೇರಿದಂತೆ, ವಿವಿಧ ರಾಸಾಯನಿಕ ಆಯುಧಗಳನ್ನು ಪ್ರಯೋಗಿಸಿವೆ. ಈ ದಾಳಿಗಳ ಪರಿಣಾಮವಾಗಿ, ಬಹಳಷ್ಟು ಸಂಖ್ಯೆಯಲ್ಲಿ ಉಕ್ರೇನ್ ಯೋಧರು ವಿವಿಧ ಹಂತಗಳ ರಾಸಾಯನಿಕ ವಿಷ ಪ್ರಾಶನದಿಂದ ನರಳುವಂತಾಯಿತು.
ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಕರ್ನಾಟಕವೇ ಕೇಂದ್ರಬಿಂದು: ಚಿತ್ರದುರ್ಗದಲ್ಲಿ ವೊರೊನೆಜ್ ರೇಡಾರ್
ಆದರೆ, ಕಿರಿಲೊವ್ ಅವರ ಸಾವು ಸಂಭವಿಸಿರುವ ಸಮಯ, ಈ ದಾಳಿಯ ಹಿಂದೆ ಏನಾದರೂ ದೊಡ್ಡ ಹಂಚಿಕೆ ಇರಬಹುದು ಎಂಬ ಅಜುಮಾನಗಳನ್ನು ಮೂಡಿಸಿವೆ. ಈ ಕುರಿತ ಅನುಮಾನಗಳನ್ನು ಪರಿಹರಿಸಲು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್ಎಸ್‌ಬಿ) ಶಂಕಿತ ಕೊಲೆಗಾರನನ್ನು ಇನ್ನೂ ಗುರುತಿಸಿಲ್ಲವಾದರೂ, ಆತ 1995ರಲ್ಲಿ ಜನಿಸಿದ್ದಾನೆ ಎಂದಿದೆ. ಶಂಕಿತ ವ್ಯಕ್ತಿಯನ್ನು ಉಕ್ರೇನಿನ ವಿಶೇಷ ಪಡೆಗಳು ನೇಮಕ ಮಾಡಿದ್ದವು ಎಂದು ಎಫ್ಎಸ್‌ಬಿ ಆರೋಪಿಸಿದೆ. ಆದರೆ ಶಂಕಿತ ವ್ಯಕ್ತಿ ಯಾವ ಸಂದರ್ಭದಲ್ಲಿ ಭದ್ರತಾ ಪಡೆಗಳೊಡನೆ ಮಾತನಾಡಿದ್ದ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕಿರಿಲೊವ್ ಹತ್ಯೆ ನಡೆಸುವುದಕ್ಕೆ ಪ್ರತಿಯಾಗಿ, ಆ ವ್ಯಕ್ತಿಗೆ 1 ಲಕ್ಷ ಡಾಲರ್ ಮೊತ್ತ ಮತ್ತು ಐರೋಪ್ಯ ಒಕ್ಕೂಟದ ಯಾವುದಾದರೂ ದೇಶದಲ್ಲಿ ಶಾಶ್ವತ ವಾಸ್ತವ್ಯ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು ಎಂದು ಎಫ್ಎಸ್‌ಬಿ ಹೇಳಿದೆ.
ಉಕ್ರೇನಿನ ಸೂಚನೆಗಳನ್ನು ಅನುಸರಿಸಿ, ಶಂಕಿತ ಕೊಲೆಗಾರ ಮಾಸ್ಕೋಗೆ ಹೋಗಿ, ಮನೆಯಲ್ಲಿ ತಯಾರಿಸಿರುವ ಸ್ಫೋಟಕವನ್ನು ಪಡೆದುಕೊಂಡಿದ್ದ ಎಂದು ಎಫ್ಎಸ್‌ಬಿ ವಿವರಿಸಿದೆ. ಆತ ಸ್ಫೋಟಕವನ್ನು ಒಂದು ವಿದ್ಯುತ್ ಚಾಲಿತ ಸ್ಕೂಟರ್‌ಗೆ ಅಳವಡಿಸಿ, ಅದನ್ನು ಕಿರಿಲೊವ್ ವಾಸಿಸುವ ಕಟ್ಟಡದ ಹೊರಗೆ ನಿಲ್ಲಿಸಿದ್ದ.
ಆ ಬಳಿಕ, ಶಂಕಿತ ವ್ಯಕ್ತಿ ಒಂದು ಬಾಡಿಗೆ ಕಾರನ್ನು ಪಡೆದುಕೊಂಡು, ಆ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಉಕ್ರೇನಿನ ಡಿನಿಪ್ರೋದಲ್ಲಿದ್ದ ತನ್ನ ಗುರುತಿನವರಿಗೆ ಅದರ ನೇರ ಪ್ರಸಾರ ಒದಗಿಸಲು ಕ್ಯಾಮರಾಗಳನ್ನು ಅಳವಡಿಸಿದ್ದ. ಕಿರಿಲೊವ್ ಕಟ್ಟಡದಿಂದ ಹೊರಬಂದಾಗ, ಶಂಕಿತ ಕೊಲೆಗಾರ ಬಾಂಬ್ ಅನ್ನು ಸ್ಫೋಟಿಸಿದ. ಎಫ್ಎಸ್‌ಬಿ ಪ್ರಕಾರ, ಶಂಕಿತ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ಲಭಿಸುವ ಸಾಧ್ಯತೆಗಳಿವೆ.
ಶಂಕಿತನನ್ನು ಮಾಸ್ಕೋ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬಂಧಿಸಲಾಯಿತು ಎಂದು ರಷ್ಯಾದ ಆಂತರಿಕ ವ್ಯವಹಾರಗಳ ಸಚಿವಾಲಯದ ಇರಿನಾ ವೋಕ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಉಕ್ರೇನಿನಲ್ಲಿ ರಾಸಾಯನಿಕ ಆಯುಧಗಳ ಬಳಕೆಗೆ ಅನುಮತಿ ನೀಡಿದ ಕಾರಣಕ್ಕಾಗಿ ಅಕ್ಟೋಬರ್ 2024ರಲ್ಲಿ ಯುನೈಟೆಡ್ ಕಿಂಗ್‌ಡಮ್ ಕಿರಿಲೊವ್ ವಿರುದ್ಧ ನಿರ್ಬಂಧ ಹೇರಿತ್ತು.
ಅಕ್ಟೋಬರ್ ತಿಂಗಳಲ್ಲಿ, ಕ್ರೆಮ್ಲಿನ್‌ನ ತಪ್ಪು ಮಾಹಿತಿಗಳ ಅತಿದೊಡ್ಡ ಮೂಲವೇ ಕಿರಿಲೊವ್ ಎಂದು ಯುನೈಟೆಡ್ ಕಿಂಗ್‌ಡಮ್ ಆರೋಪಿಸಿತ್ತು. ರಷ್ಯಾ ನಡೆಸಿರುವ ಅವಮಾನಕರ ಮತ್ತು ಅಪಾಯಕಾರಿ ಕ್ರಮಗಳನ್ನು ಮುಚ್ಚಿಹಾಕಲು ಸುಳ್ಳು ಕತೆಗಳನ್ನು ಕಿರಿಲೊವ್ ಹಂಚಿದ್ದರು ಎನ್ನಲಾಗಿದೆ.