Asianet Suvarna News Asianet Suvarna News

ಮೋದಿ ಸರ್ಕಾರ 2.0ಕ್ಕೆ ವರ್ಷ, 2 ದಶಕಗಳ ಬಳಿಕ ಗಂಗಾವತಿಗೆ ರೈಲು: ಕರಡಿ ಸಂಗಣ್ಣ ಹರ್ಷ

ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ ಸೇರಿದಂತೆ ಹಲವು ಮಹತ್ತರ ವಿಚಾರಗಳನ್ನು ಎರಡನೇ ಬಾರಿಗೆ ಆಯ್ಕೆಯಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಮನದಾಳದ ಮಾತುಗಳು ಇಲ್ಲಿವೆ.

interview with Koppal BJP MP Karadi Sanganna on pm narendra modi govt 2 completing year
Author
Bengaluru, First Published Jun 1, 2020, 2:35 PM IST

ಸಂಸದ ಸಂಗಣ್ಣ ಕರಡಿ ಅವರು ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಕ್ಷೇತ್ರದ ಸಾಧನೆ, ತಂದಿರುವ ಅನುದಾನ, ನನಸು ಮಾಡಿದ ಯೋಜನೆಗಳ ಕುರಿತು ಹಂಚಿಕೊಂಡಿದ್ದು, ಈ ವರ್ಷದಲ್ಲಿಯೇ ಸಾವಿರ ಕೋಟಿ ರು.ಗೂ ಅಧಿಕ ಅನುದಾನ ಕ್ಷೇತ್ರಕ್ಕೆ ಬಂದಿದೆ ಎಂದು ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಅವರೊಂದಿಗಿನ ಮಾತುಕತೆಯ ಪೂರ್ಣಪಾಠ ಇಲ್ಲಿದೆ.

ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

* ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿದೆ, ಏನನಿಸುತ್ತಿದೆ?
ಮತ್ತೊಮ್ಮೆ ಸಂಸದನಾಗಿ ವರ್ಷ ಪೂರೈಸುತ್ತಿರುವುದಕ್ಕೆ ಖುಷಿ ಇದೆ. ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಅನಿಸುತ್ತದೆ. ಆದರೆ, ಭಾರತ ಸೇರಿದಂತೆ ಜಗತ್ತೇ ಕೊರೋನಾ ಸೋಂಕಿನಿಂದ ಸಂಕಷ್ಟಎದುರಿಸುತ್ತಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಇದು ಬಹಳ ನೋವಿನ ಸಂಗತಿ.

* ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟಭರವಸೆಗಳನ್ನು ಈಡೇರಿಸಿದ್ದೀರಾ?
ಗದಗ -ವಾಡಿ ರೈಲ್ವೆ ಯೋಜನೆಯಲ್ಲಿ ಕುಷ್ಟಗಿವರೆಗೂ ರೈಲ್ವೆ ಪೂರ್ಣಗೊಳಿಸುವ ಗುರಿ ಮತ್ತು ಮುನಿರಾಬಾದ್‌- ಮೆಹಬೂಬ ನಗರ ರೈಲ್ವೆ ನಿಲ್ದಾಣ ಸಿಂಧನೂರುವರೆಗೂ ಪೂರ್ಣಗೊಳಿಸುವ ಪ್ರಮುಖ ಭರವಸೆ ನೀಡಿದ್ದೆ. ಇದರ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಬಗ್ಗೆ ಹೆಮ್ಮೆ ಇದೆ.

* ಪ್ರಧಾನಿ ಮೋದಿ ಅವರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರಾವರಿ ಯೋಜನೆಗಾಗಿ 1 ಸಾವಿರ ಕೋಟಿ ರು. ನೀಡುತ್ತೇನೆ ಎಂದಿದ್ದು ಏನಾಯಿತು?
ಇದು ಏಕಾಏಕಿ ಆಗುತ್ತದೆ ಎಂದು ನಾನು ಹೇಳುವುದಿಲ್ಲ. ಪ್ರಧಾನಿ ಅವರು ನೀಡಿದ ಭರವಸೆ ಈಡೇರಿಸಬೇಕು ಎಂದರೆ ಒಂದಿಷ್ಟುನಿಯಮಗಳು ಇವೆ. ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಹೋಗಬೇಕು. ಅಲ್ಲದೆ ಕೇಂದ್ರ ನೀರಾವರಿ ಯೋಜನೆಗಳಿಗೆ ಅನುದಾನ ನೀಡಲು ಅರ್ಧದಷ್ಟುಯೋಜನೆ ಪೂರ್ಣಗೊಂಡಿರಬೇಕು. ಈ ದಿಸೆಯಲ್ಲಿ ಏನೇನು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ನವಲಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಇದರ ಅನುಷ್ಠಾನದ ವೇಳೆಯಲ್ಲಿ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕಾದಿದ್ದೇವೆ.

* ವರ್ಷದಲ್ಲಿ ನಿಮ್ಮ ಸಾಧನೆಯನ್ನು ಪಟ್ಟಿಮಾಡುವುದಾದರೆ ಅವು ಯಾವುವು?
ಈ ಒಂದು ವರ್ಷದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ ಮತ್ತು ಅನೇಕ ಯೋಜನೆಗಳಿಗೆ ಸರ್ಕಾರದ ಹಂತದಲ್ಲಿ ಅನುಮೋದನೆಯಾಗಬೇಕಾಗಿದೆ. ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮ ಪಂಚಾಯಿತಿಯನ್ನು ಆದರ್ಶ ಗ್ರಾಮ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, . 331 ಲಕ್ಷ ಕ್ರಿಯಾಯೋಜನೆ ತಯಾರು ಮಾಡಲಾಗಿದೆ. ಭಾನಾಪುರ ರೈಲ್ವೆ ಮೇಲ್ಸೇತುವೆಗಾಗಿ . 56 ಕೋಟಿ ಬಿಡುಗಡೆಯಾಗಿದೆ. ಕೊಪ್ಪಳ ಕೇಂದ್ರೀಯ ವಿದ್ಯಾಲಯ ಕಟ್ಟಡ ಶೇ. 90ರಷ್ಟುಪೂರ್ಣಗೊಂಡಿದ್ದರೆ, ಗಂಗಾವತಿ ಕೇಂದ್ರೀಯ ವಿದ್ಯಾಲಯ ನಿರ್ಮಾಣ ಪ್ರಗತಿಯಲ್ಲಿದೆ. ಕೊಪ್ಪಳ ನಗರದ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಕುಷ್ಟಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ . 68 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಗದಗ -ವಾಡಿ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು, ಕುಷ್ಟಗಿ ವರೆಗೂ ಇದೇ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಮುನಿರಾಬಾದ್‌ ರೈಲ್ವೆ ಕಾಮಗಾರಿ ಕಾರಟಗಿವರೆಗೂ ಪೂರ್ಣಗೊಂಡಿದ್ದು, ಸಿಂಧನೂರುವರೆಗೂ ಪ್ರಗತಿಯಲ್ಲಿದೆ. ಕೊಪ್ಪಳ, ಕುಷ್ಟಗಿ ರೈಲ್ವೆ ಮೇಲ್ಸೇತುವೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಸಿಂಧನೂರಿನ .63 ಕೋಟಿ ವೆಚ್ಚದ 4 ಲೈನ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಹೊಸಪೇಟೆ ಹುಬ್ಬಳ್ಳಿ ವಿದ್ಯುತ್‌ ಲೈನ್‌ ಪೂರ್ಣಗೊಂಡಿದ್ದು, ಇನ್ನೇನು ಪ್ರಾರಂಭವಾಗಬೇಕಿದೆ. ರಾಷ್ಟ್ರೀಯ ಹೆದ್ದಾರಿ 63ರ ನಾಲ್ಕು ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ.

* ಕೊರೋನಾದಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ಆಗಿರುವ ತೊಂದರೆಯನ್ನು ಹೇಗೆ ನಿಭಾಯಿಸುತ್ತೀರಿ?
ಇಡೀ ಜಗತ್ತೇ ಕೊರೋನಾದಿಂದ ತತ್ತರಿಸಿದೆ. ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥವಾಗಿ ನಿಭಾಯಿಸಿದ್ದರಿಂದ ಭಾರತ ಪಾರಾಗುವ ವಿಶ್ವಾಸವಿದೆ. ಇಂಥ ಸಂದರ್ಭದಲ್ಲಿ ಕಷ್ಟವನ್ನು ಎದುರಿಸಿ ಪ್ರಗತಿ ಕಾಣಬೇಕಾಗಿದೆ. ನಾವಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಹಿನ್ನಡೆಯಾಗುತ್ತಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿ, ಪ್ಯಾಕೇಜ್‌ ಘೋಷಣೆ ಮಾಡಿದ್ದರಿಂದ ಆರ್ಥಿಕ ಚಟು​ವ​ಟಿಕೆ ಚುರುಕು ಪಡೆ​ದು​ಕೊಂಡಿ​ವೆ.

* ನೀರಾವರಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಏನು ಹೇಳುತ್ತಿರಿ?
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಎರಡನೇ ಬೆಳೆ ತೆಗೆಯಲು ಆಗಿರಲಿಲ್ಲ. ಜಲಾಶಯದಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿದಿದ್ದು ಸಮಸ್ಯೆಯಾಗಿತ್ತು. ಆದರೆ, ಈ ವರ್ಷ ಇದರ ಮಧ್ಯೆಯೇ ಎರಡನೇ ಬೆಳೆ ಬಂದಿದೆ. ಆಂಧ್ರದವರು ನದಿ ನೀರಿನ ಕೋಟಾವನ್ನು ಮೊದಲೇ ಬಳಸಿಕೊಂಡಿದ್ದರಿಂದ ರಾಯಚೂರು, ಬಳ್ಳಾರಿ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಿತ್ತು. ಆದರೆ, ಮುಖ್ಯಮಂತ್ರಿಗಳ ಕಾಳಜಿಯಿಂದ ಭದ್ರಾದಿಂದ ನೀರು ಬಂದಿದ್ದರಿಂದ ಸಮಸ್ಯೆ ನೀಗಿ, ಎರಡನೇ ಬೆಳೆ ಬರಲು ಸಾಧ್ಯವಾಯಿತು. ಇದರ ಜತೆಗೆ ನವಲಿ ಸಮಾಂತರ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕ್ಯಾಬಿನೆಟ್‌ ಅನುಮತಿ ನೀಡಿದ್ದು, ಇದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತದೆ.

* ಅತ್ಯಂತ ಖುಷಿ ಕೊಟ್ಟ ಕೆಲಸ ಯಾವುದು?
ನಾನು ಈ ಹಿಂದೆ ಶಾಸಕನಾಗಿದ್ದ ವೇಳೆಯಲ್ಲಿ ಮುನಿರಾಬಾದ್‌ -ಮೆಹಬೂಬ ನಗರ ರೈಲ್ವೆ ಯೋಜನೆಗೆ ಆಗಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಅಡಿಗಲ್ಲು ಹಾಕಿದ್ದರೂ ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈ ವರ್ಷ ಅದು ಗಂಗಾವತಿಯವರೆಗೂ ಪೂರ್ಣಗೊಳಿಸಿ, ಗಂಗಾವತಿಗೆ ರೈಲ್ವೆ ಬಂದಾಗ ಅತ್ಯಂತ ಖುಷಿಯಾಯಿತು. ಜನರಂತೂ ಹಬ್ಬದಂತೆ ಆಚರಣೆ ಮಾಡಿದರು.

* ರೈಲ್ವೆ ಯೋಜನೆಯಲ್ಲಿ ಆಗಿರುವ ಪ್ರಗತಿ ಯಾವುದು?
ಗದಗ -ವಾಡಿ, ಮುನಿರಾಬಾದ್‌ -ಮೆಹಬೂಬನಗರ ರೈಲ್ವೆ ಯೋಜನೆ ಪ್ರಗತಿಯಲ್ಲಿವೆ. ಕೊಪ್ಪಳ ಮಾರ್ಗವಾಗಿ ಎರಡು ಹೊಸ ರೈಲು ಈ ವರ್ಷ ಪ್ರಾರಂಭವಾಗಿವೆ.

* ರಾಷ್ಟ್ರೀಯ ನಾಯಕರ ಮೇಲೆ ಪ್ರಭಾವ ಬೀರಿ ತಂದ ಯೋಜನೆ ಯಾವುದು?
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೊಪ್ಪಳಕ್ಕೆ ಕರೆಯಿಸಿದ್ದು ನಮಗೆ ಅತ್ಯಂತ ಅನುಕೂಲವಾಯಿತು. ಅವರ ಪ್ರಭಾವದಿಂದ ಅನೇಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಬಂದವು. ಕೊಪ್ಪಳ ನಗರದ ಹೆದ್ದಾರಿ ಸಿಮೆಂಟ್‌ ರಸ್ತೆಯ ನಿರ್ಮಾಣವೂ ಒಂದು.

* ಕೊರೋನಾ ಎದುರಿಸುವ ಕುರಿತು ಏನು ಹೇಳಲು ಬಯಸುತ್ತೀರಿ?
ಕೊರೋನಾ ಎದುರಿಸಲು ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಶಕ್ತಿಮೀರಿ ಶ್ರಮಿಸಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಕೊರೋನಾಕ್ಕೆ ಮದ್ದು ಇನ್ನು ಕಂಡು ಹಿಡಿದಿಲ್ಲ. ಅನಿವಾರ್ಯವಾಗಿ ಅದರ ಜತೆಯಲ್ಲೇ ಎಲ್ಲವನ್ನೂ ಸಾಧಿಸಬೇಕಿದೆ. ಆರೋಗ್ಯ ಇಲಾಖೆಯ ಮಾರ್ಗದರ್ಶನಗಳನ್ನು ಪಾಲಿಸಬೇಕು. ಇನ್ನೊಂದು ಮಾತು; ವಿದೇಶದಲ್ಲಿದ್ದವರು ಈಗ ಮರಳಿ ನಾಡಿಗೆ ಬರುತ್ತಿದ್ದಾರೆ. ಅವರು ಇಲ್ಲಿಯೇ ಇದ್ದುಕೊಂಡು ತಮ್ಮ ಜ್ಞಾನ ಬಳಸಿ ಉದ್ಯಮ ಪ್ರಾರಂಭಿಸಬೇಕು, ಉದ್ಯೋಗ ಮಾಡಬೇಕು. ಜತೆಗೆ ಕೃಷಿಯನ್ನು ಪ್ರಗತಿಯತ್ತ ಒಯ್ಯುವುದಕ್ಕೆ ಶ್ರಮಿಸಬೇಕು.

ಸಂದರ್ಶನ: ಸೋಮರಡ್ಡಿ ಅಳವಂಡಿ (ಕೊಪ್ಪಳ)

Follow Us:
Download App:
  • android
  • ios