ಅನ್ಯಜಾತಿ ಯುವಕರೊಂದಿಗೆ ಪ್ರೀತಿ: ಪೋಷಕರಿಂದಲೇ 18, 16ರ ಇಬ್ಬರು ಹೆಣ್ಣು ಮಕ್ಕಳ ಹತ್ಯೆ
ಬಿಹಾರದ ಹಾಜಿಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅನ್ಯ ಜಾತಿಯ ಯುವಕರನ್ನು ಪ್ರೀತಿಸುತ್ತಿದ್ದರೆಂದು ಪೋಷಕರೇ ತಮ್ಮ 18 ಹಾಗೂ 16 ವರ್ಷ ಪ್ರಾಯದ ಇಬ್ಬರು ಹೆಣ್ಣು ಮಕ್ಕಳನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ.
ಪಾಟ್ನಾ: ಬಿಹಾರದ ಹಾಜಿಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅನ್ಯ ಜಾತಿಯ ಯುವಕರನ್ನು ಪ್ರೀತಿಸುತ್ತಿದ್ದರೆಂದು ಪೋಷಕರೇ ತಮ್ಮ 18 ಹಾಗೂ 16 ವರ್ಷ ಪ್ರಾಯದ ಇಬ್ಬರು ಹೆಣ್ಣು ಮಕ್ಕಳನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಮಕ್ಕಳು ನಿದ್ದೆಗೆ ಜಾರಿದ್ದಾಗ ಅವರನ್ನು ಹತ್ಯೆ ಮಾಡಿದ್ದಾಗಿ ಮಕ್ಕಳ ತಾಯಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದು, ಘಟನೆಯ ಬಳಿಕ ಮಕ್ಕಳ ತಂದೆ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದಾಗ ಮಕ್ಕಳಿಬ್ಬರ ಹೆಣದ ಮುಂದೆ ತಾಯಿ ರಿಂಕುದೇವಿ ಕುಳಿತಿರುವುದು ಕಂಡು ಬಂದಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಿಂಕುದೇವಿ (Rinku devi)ಪತಿ ಪರಾರಿಯಾಗಿರುವ ನರೇಶ್ ಬೈಟಾಗಾಗಿ ಶೋಧ ನಡೆಸುತ್ತಿದ್ದಾರೆ.
ಪೊಲೀಸರು ಮಕ್ಕಳ ತಾಯಿ ರಿಂಕು ದೇವಿ ಬಳಿ ಘಟನೆ ಬಗ್ಗೆ ವಿಚಾರಿಸಿದಾಗ ತನ್ನ ಇಬ್ಬರು ಹೆಣ್ಣು ಮಕ್ಕಳು ಬೇರೆ ಬೇರೆ ಜಾತಿಯ ಯುವಕರನ್ನು ಪ್ರೀತಿಸುತ್ತಿದ್ದು, ಆಗಾಗ ಪಾಲಕರಿಗೆ ತಿಳಿಸದೇ ಮನೆ ಬಿಟ್ಟು ಹೋಗುತ್ತಿದ್ದರು, ಇದರಿಂದ ನೆರೆಹೊರೆಯಲ್ಲಿ ತಮ್ಮ ಮಾನ ಹರಾಜಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಹತ್ಯೆ ಮಾಡಿದ್ದಾಗಿ ರಿಂಕುದೇವಿ ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಈ ಕೊಲೆ ಪ್ರಕರಣದಲ್ಲಿ ಇಬ್ಬರೂ ಪೋಷಕರು ಭಾಗಿಯಾಗಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರದಲ್ಲಿ 'ಮರ್ಯಾದೆಗೇಡು ಹತ್ಯೆ', ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ಮೊದಲಿಗೆ ಮಹಿಳೆ ಮಕ್ಕಳನ್ನು ತನ್ನ ಗಂಡ (Husband) ಹತ್ಯೆ ಮಾಡಿದ್ದಾಗಿ ಹೇಳಿದ್ದಾಳೆ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಇಬ್ಬರೂ ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ ಎಂದು ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಓಂ ಪ್ರಕಾಶ್ (Om Prakash) ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಕ್ಕಳು ಅನ್ಯ ಜಾತಿಯ ಯುವಕರೊಂದಿಗೆ ಕದ್ದು ಮುಚ್ಚಿ ತಿರುಗಾಡುತ್ತಿರುವುದು ಗಮನಕ್ಕೆ ಬಂದ ನಂತರ ಪೋಷಕರು ಅವಮಾನಿತರಾಗಿ ಈ ಕೃತ್ಯವೆಸಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರಲ್ಲಿ 18 ವರ್ಷದ ರೋಶಿನಿ ಕುಮಾರಿ (Roshni Kumari) ಮೊದಲ ವರ್ಷದ ಬಿಎ ಓದುತ್ತಿದ್ದಳು ಹಾಗೆಯೇ 16 ವರ್ಷದ ತನುಕುಮಾರಿ ಈ ವರ್ಷವಷ್ಟೇ ಎಸ್ಎಸ್ಎಲ್‌ಸಿ ಪರೀಕ್ಷೆ ಪಾಸು ಮಾಡಿದ್ದಳು. ಮೃತ ಯುವತಿಯರಿಬ್ಬರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರದ (Hajipur) ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
Honor Killing: ವರ್ಷ ತುಂಬುವುದರೊಳಗೆ ಮಗಳನ್ನು ವಿಧವೆ ಮಾಡಿದ ಕ್ರೂರಿ ಅಪ್ಪ: ಮರ್ಯಾದಾ ಹತ್ಯೆ