8 ದಿನ ಕರ್ನಾಟಕಕ್ಕೆ ಉಷ್ಣ ಅಲೆ ಭೀತಿ, ಮೂರು ತಿಂಗಳು ಆತಂಕ..!
ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಉತ್ತರ ಒಡಿಶಾದ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. ಈ ಅವಧಿಯಲ್ಲಿ ಬಯಲು ಸೀಮೆಯ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ದಿನಗಳು ಕಂಡುಬರುತ್ತವೆ. ದೇಶದ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 4ರಿಂದ 8 ದಿನಗಳವರೆಗಿನ ಶಾಖದ ದಿನಗಳು ಈ ಸಲ 20ಕ್ಕೆ ಏರುವ ಸಾಧ್ಯತೆ ಇದೆ.
ನವದೆಹಲಿ(ಏ.02): ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ. ಕರ್ನಾಟಕವು ಏಪ್ರಿಲ್‌ನಲ್ಲಿ ಸಾಮಾನ್ಯದ 1ರಿಂದ 3 ದಿನಗಳ ಬದಲು 2ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ.
ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಾಧ್ಯತೆಯಿದೆ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಇದರ ಹೆಚ್ಚಿನ ಸಂಭವನೀಯತೆ ಇರುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ರಾಜ್ಯದಲ್ಲಿ ರಣಬಿಸಿಲು: ಉಷ್ಣಮಾರುತಕ್ಕೆ ಮೊದಲ ಸಾವು?
ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಉತ್ತರ ಒಡಿಶಾದ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. ಈ ಅವಧಿಯಲ್ಲಿ ಬಯಲು ಸೀಮೆಯ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ದಿನಗಳು ಕಂಡುಬರುತ್ತವೆ. ದೇಶದ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 4ರಿಂದ 8 ದಿನಗಳವರೆಗಿನ ಶಾಖದ ದಿನಗಳು ಈ ಸಲ 20ಕ್ಕೆ ಏರುವ ಸಾಧ್ಯತೆ ಇದೆ ಎಂದಿದ್ದಾರೆ.
ದಕ್ಷಿಣದಲ್ಲೂ ಹೆಚ್ಚು ಶಾಖ
ಏಪ್ರಿಲ್‌ನಲ್ಲಿ ಮಧ್ಯ ಭಾರತ ಮತ್ತು ಉತ್ತರ ಬಯಲು ಪ್ರದೇಶ ಮತ್ತು ದಕ್ಷಿಣ ಭಾರತದ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬೇಸಿಗೆ ವಾತಾವರಣ ಇರಲಿದೆ. ಈ ಪ್ರದೇಶಗಳಲ್ಲಿ ಸಾಮಾನ್ಯ 1ರಿಂದ 3 ದಿನಗಳ ಬದಲು 2ರಿಂದ 8 ದಿನ ಬಿಸಿ ಗಾಳಿ ಉಂಟಾಗಬಹುದು. ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಪಶ್ಚಿಮ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳು ಏಪ್ರಿಲ್‌ನಲ್ಲಿ ಬಿಸಿ ಗಾಳಿಯ ಕೆಟ್ಟ ಪರಿಣಾಮವನ್ನು ಅನುಭವಿಸುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೇಶದ ಇನ್ನೂ ಯಾವ ರಾಜ್ಯಗಳಿಗೆ ಆತಂಕ?
ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶಗಳು ಬಿಸಿ ಗಾಳಿಯ ಕೆಟ್ಟ ಪರಿಣಾಮವನ್ನು ಅನುಭವಿಸುವ ಸಾಧ್ಯತೆಯಿದೆ.
ಏಪ್ರಿಲ್‌ನಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.