Ayodhya Temple: ತಿರುಪತಿ ಸೇರಿ ದೇಶದ ವಿವಿಧ ತೀರ್ಥಕ್ಷೇತ್ರಗಳಿಂದ ಅಯೋಧ್ಯೆಗೆ ನೇರ ರೈಲು ಸೇವೆ!
ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ವೇಳೆ ಅಯೋಧ್ಯೆಯಲ್ಲಿ ಮಹಾಪ್ರಭು ಶ್ರೀರಾಮನ ದೇವಸ್ಥಾನದ ನಿರ್ಮಾಣ ಸಮಿತಿಯ ಚೇರ್ಮನ್ ಆಗಿರುವ ನೃಪೇಂದ್ರ ಮಿಶ್ರಾ ಏಷ್ಯಾನೆಟ್ ಗ್ರೂಪ್ ವ್ಯವಸ್ಥಾಪಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನವದೆಹಲಿ (ಆ.31): ದಶಕಗಳಿಂದ ದೇಶದ ಹಿಂದೂಗಳು ಕಂಡಿದ್ದ ಕನಸು ನನಸಾಗುವ ಸಮಯ ಬಂದಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬೃಹದಾಕಾರವಾಗಿ ನಿರ್ಮಾಣವಾಗುತ್ತಿದೆ. ಇಡೀ ನಿರ್ಮಾಣದ ವ್ಯವಸ್ಥೆಯನ್ನು ಹೊತ್ತುಕೊಂಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನಿ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ. ಅಯೋಧ್ಯೆಯಲ್ಲಿ ಆಗಿರುವ ಪ್ರಗತಿಗಳನ್ನು ಸವಿವರವಾಗಿ ತಿಳಿಸುವ ನೃಪೇಂದ್ರ ಮಿಶ್ರಾ, ಪ್ರಧಾನಿ ಮೋದಿ ತಮಗೆ ನೀಡಿರುವ ಜವಾಬ್ದಾರಿಯನ್ನು ಇಲ್ಲಿಯವರೆಗೂ ಅತ್ಯುತ್ತಮವಾಗಿ ನಿರ್ವಹಿಸಿರುವ ಖುಷಿಯಲ್ಲಿದ್ದಾರೆ. 2020ರಿಂದ ಅಯೋಧ್ಯೆ ರಾಮ ಜನ್ಮಭೂಮಿಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ 78 ವರ್ಷದ ನೃಪೇಂದ್ರ ಮಿಶ್ರಾ, ಪ್ರತಿ ವಾರ ಅಯೋಧ್ಯೆಗೆ ಬಂದು ಕಾಮಗಾರಿಗಳ ಪರಿಶೀಲನೆಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿ ಶನಿವಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಂದಾಗಬೇಕಿರುವ ಕೆಲಸಗಳು, ಇರುವ ಕೆಲಸಗಳಿಗೆ ಆಗಿರುವ ಅಡ್ಡಿಗಳು ಇವೆಲ್ಲದರ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಅಯೋಧ್ಯೆಯಲ್ಲೀಗ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿರುವಾಗ ದೇವಸ್ಥಾನದ ಉದ್ಘಾಟನೆಯ ಬಗ್ಗೆ ಹಾಗೂ ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಏಷ್ಯಾನೆಟ್ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.
ಕಳೆದ ಬಾರಿ ನಾವು ಚರ್ಚೆ ಮಾಡಿದಾಗ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಮತ್ತು ಅಪಾರ ಭಕ್ತರು ಬಂದಾಗ ಅವರನ್ನು ಮ್ಯಾನೇಜ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೆವು. ಆಡಳಿತಾತ್ಮಕ ವಿಚಾರ ಪ್ರಸ್ತುತ ನಿಮ್ಮ ವಿಷಯ ಅಲ್ಲದಿದ್ದರೂ, ಇದರ ಬಗ್ಗೆ ನಿಮಗೆ ಮಾಹಿತಿ ಇರಬಹುದೇ? ಎಂದು ಕಾಲ್ರಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ, 'ಅಯೋಧ್ಯೆಯ ಜಿಲ್ಲಾಧಿಕಾರಿ ಈಗಾಗಲೇ ಒಂದು ಪ್ರೆಸೆಂಟೇಶನ್ ಅನ್ನೂ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಅಪಾರ ಭಕ್ತರು ನೆಲೆಗೊಂಡಾಗ ಅವರನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ. ಇಲ್ಲಿನ ಪ್ರತಿ ವಿಚಾರಗಳ ಬಗ್ಗೆಯೂ ಅವರು ಇಂಚಿಂಚೂ ಮಾಹಿತಿ ನೀಡಿದ್ದಾರೆ. ಇಲ್ಲಿನ ಹೋಟೆಲ್‌ಗಳ ಸಾಮರ್ಥ್ಯವೆಷ್ಟು? ಧರ್ಮಶಾಲೆಗಳ ಸಾಮರ್ಥ್ಯವೆಷ್ಟು? ರಾನ್ ಬಸೇರಾಗಳ ಸಾಮರ್ಥ್ಯವೆಷ್ಟು? ಎನ್ನುವ ಮಾಹಿತಿ ನೀಡಿದ್ದಾರೆ.
ಅಯೋಧ್ಯೆಗೆ ರೈಲು: ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳು ಕೂಡ ಅಯೋಧ್ಯೆಗೆ ಬಂದಿದ್ದರು. ಈ ವೇಳೆ ಅಯೋಧ್ಯೆಗೆ ವಿಮಾನಯಾನ ಸೇವೆಗಳು ಡಿಸೆಂಬರ್‌ನಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಕನಿಷ್ಠ ಮೂರು ವಿಮಾನಗಳು ನೇರವಾಗಿ ಅಯೋಧ್ಯೆಗೆ ಬರಲಿದೆ. ಇದಕ್ಕೆ ಈಗಾಗಲೇ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇನ್ನು ರೈಲುಗಳ ವಿಚಾರಕ್ಕೆ ಬರುವುದಾದರೆ, ರಾಮೇಶ್ವರಂ, ತಿರುಪತಿ ಸೇರಿ ದೇಶದ ಇನ್ನಿತರ ಕ್ಷೇತ್ರಗಳಿಂದ ಅಯೋಧ್ಯೆಗಾಗಿಯೇ ಬರುವ ರೈಲುಗಳು ಇರಲಿದೆ ಎಂದು ಮಾಹಿತಿ ನೀಡಿದ್ದಾರೆ' ಎಂದು ತಿಳಿಸಿದರು.
Ayodhya Temple: ಜ.14ರಿಂದ ಪೂಜೆ ಪ್ರಾರಂಭ, ರಾಮಲಲ್ಲಾನ ಮೂರ್ತಿಗೂ ಪ್ರಾಣ ಪ್ರತಿಷ್ಠಾಪನೆ!
ಕೇಂದ್ರ ಸರ್ಕಾರ ಅಯೋಧ್ಯೆಯನ್ನು ಇಡೀ ಹಿಂದುಗಳ ಪರಮ ಪವಿತ್ರ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಯೋಧ್ಯೆಗೆ ತಲುಪುವ ಮಾರ್ಗದಲ್ಲಿ ಭಕ್ತಾದಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳ ನಿರ್ಮಾಣವಾಗುತ್ತಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅತ್ಯುತ್ತಮವಾದ ಗ್ರಾನೈಟ್‌ಗಳನ್ನು ಬಳಸಿಕೊಂಡು ಅಯೋಧ್ಯೆಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ, ರಾಜಸ್ಥಾನದ ಗಣಿಗಳಿಂದ ಅಮೃತಶಿಲೆ ಮತ್ತು ರಾಜಸ್ಥಾನದ ಬನ್ಸಿ-ಪಹಾರ್‌ಪುರ ಪ್ರದೇಶದಿಂದ ಕಲ್ಲುಗಳು ಕೂಡ ಅಯೋಧ್ಯೆಗೆ ಬಂದಿದೆ. ಇನ್ನು ಅಯೋಧ್ಯೆಯಲ್ಲಿ ರಾಮನ ವಿಗ್ರಹ ಎದುರು ಭಕ್ತಾದಿಗಳು 30 ಫೀಟ್ ದೂರದಲ್ಲಿ ನಿಲ್ಲುತ್ತಾರೆ. ಅಷ್ಟು ದೂರದಿಂದ ಅವರು ಈಗ ಪೂಜೆ ಮಾಡಲಾಗುತ್ತಿರುವ ರಾಮಲಲ್ಲಾನ ಚಿಕ್ಕ ಮೂರ್ತಿಯನ್ನು ನೋಡಲು ಸಾಧ್ಯವಾಗೋದಿಲ್ಲ. ಅದಕ್ಕಾಗಿ ಶ್ರೀರಾಮ ನಿಂತಿರುವ ದೊಡ್ಡ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇವರ ದರ್ಶನಕ್ಕೆ ಬಂದಾಗ ದೇವರ ಕಣ್ಣುಗಳಿಗೆ ನೇರವಾಗಿ ಭಕ್ತರ ಕಣ್ಣುಗಳು ಇರಬೇಕು. ಸಾಮಾನ್ಯವಾಗಿ ಭಾರತದವರ ಸರಾಸರಿ ಎತ್ತ 5.7 ಇಂಚು. ಅದೇ ಆಧಾರದಲ್ಲಿ ರಾಮನ ಹೊಸ ವಿಗ್ರಹ ಇರಲಿದೆ, ಎಂಬ ಮಾಹಿತಿ ನೀಡಿದ್ದಾರೆ.
Ayodhya: ಕೋಟ್ಯಂತರ ರಾಮಭಕ್ತರ ಶತಮಾನಗಳ ಕನಸು ನನಸು, ಯೋಗಿಯಿಂದ ಗರ್ಭಗುಡಿಯ ಶಿಲಾನ್ಯಾಸ!