ದೆಹಲಿ ಮತಯುದ್ಧ: ಕೆಮ್ಮು, ಧೂಳು, ಭರವಸೆಗಳಲ್ಲಿ ಮುಳುಗಿದ ರಾಷ್ಟ್ರ ರಾಜಧಾನಿ!
ದೆಹಲಿಯಲ್ಲಿ ಮತ್ತೆ ಚುನಾವಣೆ ಸಮೀಪಿಸುತ್ತಿದ್ದು, ಪರಿಸರ ಮಾಲಿನ್ಯ, ಯಮುನಾ ನದಿ ಮಾಲಿನ್ಯ, ಮತ್ತು ಈಡೇರದ ಭರವಸೆಗಳು ಪ್ರಮುಖ ಸಮಸ್ಯೆಗಳಾಗಿವೆ. ಕಳೆದ ದಶಕದ ಆಡಳಿತದಲ್ಲಿ ಕೇಜ್ರಿವಾಲ್ ನೀಡಿದ ಭರವಸೆಗಳು ಈಡೇರಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಡೆಲ್ಲಿ ಮಂಜು, ಏಷ್ಯಾನೆಟ್ ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ
ನವದೆಹಲಿ: ಕೆಮ್ಮಿನ ನಗರಿಯಲ್ಲಿ ಮತ್ತೆ ಮತಸಮರ ಶುರುವಾಗಿದೆ. ಪರಾವಲಂಬನೆಯೇ ತನ್ನ ಆಸ್ಥೆ ಎಂದು ಬೀಗಿದರೂ ವಿಶ್ವರಾಜಕೀಯ ಭೂಪದಲ್ಲಿ ಇದರ ಹೆಸರಿಗೆ ಮಹತ್ವ ಇದೆ. ಇದೇ ನಮ್ಮ ಇಂದ್ರಪ್ರಸ್ಥ ಅರ್ಥಾತ್ ನವದೆಹಲಿ. ದೆಹಲಿ ನವದೆಹಲಿಯಾಗಿ ಮಾರ್ಪಟ್ಟಿದ್ರೂ, ಕೇಂದ್ರಾಡಳಿತ ಪ್ರದೇಶದಿಂದ ರಾಜ್ಯದ ಸ್ಥಾನಮಾನ ಸಿಕ್ಕಿದ್ದರೂ ವರ್ಷದ 12 ತಿಂಗಳು ಇಲ್ಲಿ ಜಗಳ...ಕೆಮ್ಮು... ಇದರಿಂದ ಬದಲಾಗಿಲ್ಲ. ಕುರುಕ್ಷೇತ್ರದ ಭೂಮಿಯಲ್ಲಿ ಜಗಳ ಹೊಸದಲ್ಲ ಅದರಲ್ಲೂ ಊಸರವಳ್ಳಿ ಮಾದರಿಯಲ್ಲಿ ರಂಗು ಬದಲಾಯಿಸುವ ರಾಜಕೀಯ ವಲಯದಲ್ಲಿ ಕೆಸರೆರಚಾಟವೂ ಹೊಸದಲ್ಲ.
ಬಿಜೆಪಿಯ ಸಹೀಬ್ ಸಿಂಗ್ ವರ್ಮಾ, ಮದನಲಾಲ್ ಖುರಾನ, ಸುಷ್ಮಾ ಸ್ವರಾಜ್ ಕಾಂಗ್ರೆಸ್ ನಿಂದ ಶೀಲಾದೀಕ್ಷಿತ್ ಮೂರು ಬಾರಿ ಸಿಎಂ ಆಗಿದ್ದಾಗ ಒಂದು ಮಾದರಿ ರಾಜಕೀಯ ಕೆಸರರೆಚಾಟ ಇರುತ್ತಿತ್ತು. ಆದ್ರೆ ಸಿದ್ದಾಂತಗಳನ್ನು ಪಕ್ಕಕ್ಕೆ ಇಟ್ಟು ಹೊಸ ಆಶಯಗಳನ್ನು ಮುಂದೆ ಇಟ್ಟ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ದಿಕ್ಕು ಬದಲಾಯಿತು.
ಮಾತುಗಳು , ಹೇಳಿಕೆಗಳಿಗೆ ಸೀಮಿತವಾಗಿದ್ದ ರಾಜಕೀಯದ ತಂತ್ರಗಾರಿಕೆ ಹೊಸ ಒನಪು ಕೊಟ್ಟ ಅರವಿಂದ್ ಕೇಜ್ರಿವಾಲ್, ಬೀದಿಗೆ ಬಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಖುದ್ದು ಧರಣಿ ನಡೆಸಿದಾಗ ದೆಹಲಿಗರು ನಿಬ್ಬೆರಗಾಗಿ ನೋಡಿದ್ರು.. ಒಂದು ಹಂತದಲ್ಲಿ ಇದು ಅತಿಯಾದಾಗ ಆಪ್ ನಡೆ ಸರಿ ಅಲ್ಲ ಎಂದರು.
ಇಷ್ಟಾದರೂ ಕಳೆದ ದಶಕದಿಂದ ಆಡಳಿತವನ್ನು ದೆಹಲಿಗರು ಕೇಜ್ರಿವಾಲ್ ಗೆ ಒಪ್ಪಿಸಿದ್ರು. ಆದ್ರೆ ಕೇಜ್ರಿವಾಲ್ ಹೇಳಿದ್ದು, ಕೊಟ್ಟ ಭರವಸೆ ಈಡೇರಿದೆಯಾ? ಕಾಂತ್ರಿಯಾಗಿದೆಯಾ? ಅನ್ನೋ ಪ್ರಶ್ನೆಗಳು ಈ ಬಾರಿ ಬಲವಾಗಿ ಆಪ್ ಪಕ್ಷಕ್ಕೆ ಸವಾಲು ಎಸೆದಿವೆ. ಇದೇ ಪ್ರಶ್ನೆಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಈಟಿಯಂತೆ ಚುಚ್ಚುತ್ತಿವೆ.
ಕೆಮ್ಮೂ ನಿಂತಿಲ್ಲ.. ಧೂಳು ಕಡಿಮೆಯಾಗಿಲ್ಲ: ದೆಹಲಿಯನ್ನು ಇನ್ನಿಲ್ಲದಂತೆ ಕಾಡುವುದು ಪರಿಸರ ಮಾಲಿನ್ಯ ಅರ್ಥತ್ ಧೂಳಿನ ಘಾಟು. ದೀಪಾವಳಿ ಹಬ್ಬ ಎಲ್ಲರ ಬಾಳಲ್ಲು ಬೆಳಕು ತಂದರೆ ದೆಹಲಿಗರಲ್ಲಿ ಎಷ್ಟೋ ಮನೆಗಳಿಗೆ ಕತ್ತಲು ತುಂಬುತ್ತೆ. ಅದೇ ದೀಪದ ಬೆಳಕಲ್ಲಿ ಹೊತ್ತಿ ಉರಿಯುವ ಪಟಾಕಿಗಳು, ಆಗಸಕ್ಕೆ ಚಿಮ್ಮುವ ಬಿರುಸುಗಳು ಅಸ್ತಮ ರೋಗಿಗಳು ಬದುಕನ್ನೇ ಕತ್ತಲಾಗಿಸುತ್ತವೆ. ಒಂದರ್ಥದಲ್ಲಿ ಪರಿಹಾರ ಕಾಣದ ಶಾಶ್ವತ ಸಮಸ್ಯೆಯಾಗಿದೆ.
ವಿಚಿತ್ರವೆಂದರೇ ದೇಶದ ಸಮಸ್ಯೆಗಳಿಗೆ ಪರಿಹಾರ ಸಿಗುವ ಪ್ರಧಾನಿ, ರಾಷ್ಟ್ರಪತಿ ಹಾದಿಯಾಗಿ ಓಡಾಡುವ ಊರಲ್ಲೇ ಪರಿಹಾರ ಸಿಗುತ್ತಿಲ್ಲ ಅನ್ನೋದು ಭ್ರಮನಿರಸಕ್ಕೆ ತಳ್ಳುತ್ತಿದೆ.
ಇದೇ ವಿಚಾರ ಜನರ ಮುಂದಿಟ್ಟು ಮತ ಕೇಳಿದ್ದ ಕೇಜ್ರಿವಾಲ್ ದಶಕ ಕಳೆದರು ಪರಿಹಾರ ನೀಡದೆ ಮತ್ತೆ ಮತ ಕೊಡಿ ಅಂಥ ಬರುತ್ತಿದ್ದಾರೆ. ಕೆಮ್ಮು ಅಥವಾ ಕೆಮ್ಮುವ ಜನರು ಕಡಿಮೆಯಾಗಿಲ್ಲ...ಕೆಮ್ಮಿಸುವ ಧೂಳು ಕಡಿಮೆಯಾಗಿಲ್ಲ..
ಪರಾವಲಂಬಿ ದೆಹಲಿಗೆ ಬಾಧಿಸುವು ಮತ್ತೊಂದು ವಿಚಾರ ಮಲಿನವಾಗುತ್ತಿರುವ ಯಮುನೆ. ಒಮ್ಮೊಮ್ಮೆ ದೆಹಲಿಯ ಮೇಲೆ ಮುನಿಸುವ ಯಮುನೆ, ಪ್ರವಾಹದ ರೂಪದಲ್ಲಿ ನುಗ್ಗಿ ದೆಹಲಿಯನ್ನು ಕ್ಲೀನ್ ಮಾಡಿದ್ದು ಇದೆ. ಆದ್ರೆ ಯುಮುನೆ ಒಡಲು ಸೇರುತ್ತಿರುವ ರಾಸಾಯನಿಕಗಳು, ಕಲುಷಿತ ಪದಾರ್ಥಗಳಿಂದ ಯಮುನೆಯನ್ನು ಕ್ಲೀನ್ ಮಾಡುವುದು ಆಗುತ್ತಿಲ್ಲ. ಕುಡಿಯಲು ಕೂಡ ಯೋಗ್ಯವಾದ ನೀರು ಅಲ್ಲ ಎನ್ನುತ್ತಿವೆ ಸಂಶೋಧನೆಗಳು.
ಫೆಬ್ರವರಿ 5ಕ್ಕೆ ದೆಹಲಿ ವಿಧಾನಸಭೆ ಚುನಾವಣೆ: ಫೆ.8ಕ್ಕೆ ಫಲಿತಾಂಶ
ಇದೇ ವಿಚಾರ ಮುಂದಿಟ್ಟು ಮತ ಕೇಳಿದ್ದ ಕೇಜ್ರಿವಾಲ್, ಕೊಟ್ಟ ಭರವಸೆ ಈಡೇರಿಸಿಲ್ಲ ಅನ್ನೋದು ಗೊತ್ತಾಗುತ್ತಿದೆ. ಕ್ರಾಂತಿಕಾರಿ ಶಿಕ್ಷಣ ಬದಲಾವಣೆ ಲೆಕ್ಕಗಳಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಕಾಣುತ್ತಿದೆ. ಮೊಹಲ್ಲಾ ಕ್ಲೀನಿಕ್ ಅದೆಷ್ಟು ಮತ ತಂದು ಕೊಡುತ್ತೋ ಗೊತ್ತಿಲ್ಲ. ಭ್ರಷ್ಟಚಾರದ ವಿರುದ್ದ ಹೋರಾಟ ಮಾಡಿದ್ದ ಪಕ್ಷದ ನಾಯಕರೇ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದ್ದೂ ದೆಹಲಿಗರು ನೋಡಿದ್ದಾರೆ.
ಇವಿಎಂ ಹ್ಯಾಕ್ ಮಾಡಲಾಗದು ಎಂದು 42 ಸಲ ಕೋರ್ಟು ತೀರ್ಪು ನೀಡಿದೆ: ಚುನಾವಣಾ ಆಯುಕ್ತ
ಸಿಟಿ ಸ್ಟೇಟ್ ನಂತಿರುವ ದೆಹಲಿ, ವಿದ್ಯುತ್ , ಕುಡಿಯುವ ನೀರು, ರಕ್ಷಣೆ, ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಕದ ರಾಜ್ಯಗಳು, ಕೇಂದ್ರದ ಮೇಲೆ ಪರಾವಲಂಬನೆ ಆಗಿರುತ್ತೆ. ಸ್ವಾವಲಂಬನೆಯೇ ಇಲ್ಲದ ಊರಲ್ಲಿ ಮತ ಸಮರ ಶುರುವಾಗಿದೆ. ಸಮಸ್ಯೆಗಳು, ಜಗಳಗಳು ಹಾಗೆಯೇ ಉಳಿದಿವೆ.