ನವದೆಹಲಿ(ಜ.28): ಸಿಎಎ ವಿರೋಧಿ ಶಹೀನ್ ಬಾಗ್ ಪ್ರತಿಭಟನಾಕಾರರು ನಿಮ್ಮ ಮನೆಯ ಅಕ್ಕ-ತಂಗಿಯರನ್ನು ಅತ್ಯಾಚಾರ ಮಾಡಬಹುದು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸಿದ ಪರ್ವೇಶ್ ವರ್ಮಾ, ಶಹೀನ್ ಬಾಗ್’ನಲ್ಲಿ ಹರಡಿರುವ ಪ್ರತಿಭಟನೆಯ ಬೆಂಕಿ ನಿಮ್ಮ ಮನೆಯನ್ನೂ ತಲುಪಬಹುದು ಎಂದು ಮತದಾರರನ್ನು ಎಚ್ಚರಿಸಿದ್ದಾರೆ.

ಲಕ್ಷಾಂತರ ಸಂಖ್ಯೆಯಲ್ಲಿರುವ ಪ್ರತಿಭಟನಾಕಾರರು, ನಿಮ್ಮ ಮನೆಗೆ ನುಗ್ಗಿ ನಿಮ್ಮ ಅಕ್ಕ-ತಂಗಿಯಂದಿರನ್ನು ಅತ್ಯಾಚಾರ ಮಾಡಬಹುದು. ಅವರು ನಿಮ್ಮನ್ನು ಕೊಲ್ಲಬಹುದು ಎಂದು ಪರ್ವೇಶ್ ವರ್ಮಾ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿಮಗೆ ಸುರಕ್ಷತೆ ನೀಡುವ ಸರ್ಕಾರ ಬೇಕಾಗಿದ್ದು, ದೆಹಲಿ ಗದ್ದುಗೆ ಮೇಲೆ ಬಿಜೆಪಿಯನ್ನು ಕೂರಿಸಿ ಎಂದು ಪರ್ವೇಶ್ ವರ್ಮಾ ಮತದಾರರಲ್ಲಿ ಮನವಿ ಮಾಡಿದರು.

ಒಂದು ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದೇ ಆದರೆ, ಒಂದು ಗಂಟೆಯಲ್ಲಿ ಶಹೀನ್ ಬಾಗ್'ನ್ನು ನೆಲಸಮ ಮಾಡಲಾಗುವುದು ಎಂದು ವರ್ಮಾ ಭರವಸೆ ನೀಡಿದರು.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಬಿಜೆಪಿ ಸರ್ಕಾರ ಬಂದ ನಂತರ ಶಹೀನ್ ಬಾಗ್'ನ ಎಲ್ಲಾ ಪ್ರತಿಭಟನಾಕಾರರನ್ನು ಒಂದು ಗಂಟೆಯಲ್ಲಿಓಡಿಸಿ, ಇಡೀ ಪ್ರದೇಶವನ್ನು ನೆಲಸಮಗೊಳಿಸಲಾಗುವುದು ಎಂದು ಪರ್ವೇಶ್ ವರ್ಮಾ ಹೇಳಿದ್ದಾರೆ.