ಕಮ್ಯೂನಿಸ್ಟ್ ಪಾರ್ಟಿ ಪೂಜೆ, ಪುನಸ್ಕಾರ, ದೇವಸ್ಥಾನ, ದೇವರ ನಂಬಿಕೆಗಳ ವಿರುದ್ಧ ಸಿದ್ಧಾಂತ ಹೊಂದಿದೆ. ಹೀಗಾಗಿ ಭಾರತದ ಕಮ್ಯೂನಿಸ್ಟ್ ನಾಯಕರ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರಾ ಅನ್ನೋ ಕುತೂಹಲ ಮನೆ ಮಾಡಿತ್ತು. ರಾಮ ಮಂದಿರ ಉದ್ಘಾಟನೆಗೆ CPI(M) ಪಕ್ಷದ ನಾಯಕರು ಪಾಲ್ಗೊಳ್ಳುವುದಿಲ್ಲ ಎಂದು ಬೃಂದ್ ಕಾರಾಟ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕಾರಣವನ್ನೂ ಹೇಳಿದ್ದಾರೆ.
ನವದೆಹಲಿ(ಡಿ.26) ಕಮ್ಯೂನಿಸ್ಟ್ ಪಾರ್ಟಿ ಸಿದ್ಧಾಂತಗಳು ಭಿನ್ನ. ಹೀಗಾಗಿ ರಾಮ ಮಂದಿರ ಉದ್ಘಾಟನೆಗೆ ಕಮ್ಯೂನಿಸ್ಟ್ ನಾಯಕರಿಗೆ ಆಮಂತ್ರ ನೀಡಿದ ಬೆನ್ನಲ್ಲೇ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಮ್ಯೂನಿಸ್ಟ್ ನಾಯಕರು ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರಾ ಅನ್ನೋ ಕುತೂಹಲ, ಚರ್ಚೆಗೆ ಉತ್ತರ ಸಿಕ್ಕಿದೆ. ನಿರೀಕ್ಷೆಯಂತೆ CPI(M)ದ ಯಾವುದೇ ನಾಯಕರು ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು CPI(M) ನಾಯಕಿ ಬೃಂದಾ ಕಾರಟ್ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಕಾರಣವನ್ನೂ ಬಿಚ್ಟಿಟ್ಟಿದ್ದಾರೆ.
ಜನವರಿ 22 ರಂದು ಆಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆಯಲ್ಲಿ CPI(M) ಪಕ್ಷ ಪಾಲ್ಗೊಳ್ಳುವುದಿಲ್ಲ. ಪಕ್ಷ ಇತರರ ಧಾರ್ಮಿಕ ನಂಬಿಕೆಯನ್ನು ಗೌರವಿಸುತ್ತದೆ. ಆದರೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ರಾಜಕೀಯದಿಂದ ನಾವು ತೆರಳುತ್ತಿಲ್ಲ ಎಂದು ಬೃಂದಾ ಕಾರಟ್ ಸ್ಪಷ್ಟಪಡಿಸಿದ್ದಾರೆ.
ರಾಮ ಮಂದಿರ ನಿರ್ಮಾಣವೇ ಶೋ ಆಫ್, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಕೆಗೆ ಆಕ್ರೋಶ!
ರಾಮ ಮಂದಿರ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಧಾರ್ಮಿಕ ಭಾವನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಧಾರ್ಮಿಕ ನಂಬಿಕೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಬೃಂದಾ ಕಾರಟ್ ಹೇಳಿದ್ದಾರೆ. ಆದರೆ ಬೃಂದಾ ಕಾರಟ್ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಸರರು ದೇವಲೋಕ ಪ್ರವೇಶಿಸುವುದಿಲ್ಲ ಎಂದು ಜನ ಕಮೆಂಟ್ ಮಾಡಿದ್ದಾರೆ. ಆಮಂತ್ರಣ ಕಳುಹಿಸದಿದ್ದರೆ, ರಾಮ ಮಂದಿರ ಬಿಜೆಪಿ ಪಕ್ಷದಲ್ಲ, ಪ್ರತಿಯೊಬ್ಬರಿಗೂ ಸೇರಿದೆ ಎನ್ನುತ್ತಾರೆ. ಆಹ್ವಾನಿಸಿದರೆ, ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುತ್ತಾರೆ. ಕಮ್ಯೂನಿಸ್ಟ್‌ಗಳು ಯಾವಾಗಿನಿಂದ ಧಾರ್ಮಿಕ ಭಾವನೆ ಗೌರವಿಸಲು ಆರಂಭಿಸಿದ್ದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ರಾಮ ಮಂದಿರ ನಿರ್ಮಾಣ ಬಿಜೆಪಿಯ ಶೋ ಆಫ್ ಎಂದಿದ್ದಾರೆ. ಇದೇ ವೇಳೆ ತಾವು ರಾಮ ಮಂದಿರ ಉದ್ಘಾಟನೆಗೆ ಹೋಗಿ ಶೋ ಆಫ್ ಮಾಡುವುದಿಲ್ಲ ಎಂದು ಪರೋಕ್ಷವಾಗಿ ರಾಮ ಮಂದಿರ ಉದ್ಘಾಟನೆಯಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಇತ್ತ ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಗೂ ಆಹ್ವಾನ ನೀಡಲಾಗಿದೆ. ಜೊತೆಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೂ ಆಮಂತ್ರಣ ಕಳುಹಿಸಲಾಗಿದೆ. ಆದರೆ ಈ ನಾಯಕರು ಅಂದು ರಾಮ ಮಂದಿರಕ್ಕೆ ತೆರಳುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ಎಚ್ ಡಿ ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ.
ರಾಮಮಂದಿರ ಉದ್ಘಾಟನೆಗೆ ಸಿಎಂ ಪೈಕಿ ಯೋಗಿಗೆ ಮಾತ್ರ ಆಹ್ವಾನ, ರಾಜ್ಯಪಾಲರಿಗೂ ಇಲ್ಲ ಆಮಂತ್ರಣ!
