ಈ ಪ್ರೇಮಿಗಳ ದಿನವೆಂದು ರುಜುವಾತಾದ ಫೆ.14ರ ದಿನಕ್ಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಇತ್ತೀಚೆಗೆ ಮತ್ತಷ್ಟು ರಂಗು ನೀಡಿದೆ. ಅದ್ಹೇಗೆ ಅಂತೀರಾ ಈ ಸ್ಟೋರಿ ನೋಡಿ. 

ನವದೆಹಲಿ: ಫೆಬ್ರವರಿ 14 ಅಂದರೆ ಎಲ್ಲರಿಗೂ ಅದು ಪ್ರೇಮಿಗಳ ದಿನ ಎಂದು ಗೊತ್ತು. ಆ ದಿನ ಹೊಸ ಪ್ರೇಮಿಗಳು ಪೂರ್ತಿ ಸೆಲೆಬ್ರೇಷನ್‌ನಲ್ಲಿ ತೊಡಗಿದರೆ ಇತ್ತ ಕೆಲ ಸಂಘಟನೆಗಳು ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೋರಾಟ ಪ್ರತಿಭಟನೆ ಮಾಡಿ ಪಾರ್ಕ್‌ಗಳಿಗೆ ಭೇಟಿ ನೀಡಿ ಪ್ರೇಮಿಗಳಿಗೆ ಕಾಟ ಕೊಡ್ತಾರೆ. ಅದೇನೆ ಇರಲಿ ಭಾರತದಲ್ಲಿ ಅಂದು ಎರಡು ಸಿದ್ಧಾಂತಗಳ ಹೋರಾಟ ನಡೆಯುತ್ತದೆ. ಆದರೆ ಈ ಪ್ರೇಮಿಗಳ ದಿನವೆಂದು ರುಜುವಾತಾದ ಫೆ.14ರ ದಿನಕ್ಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಇತ್ತೀಚೆಗೆ ಮತ್ತಷ್ಟು ರಂಗು ನೀಡಿದೆ. ಅದ್ಹೇಗೆ ಅಂತೀರಾ ಈ ಸ್ಟೋರಿ ನೋಡಿ. 

ಫೆಬ್ರುವರಿ 14ನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು (Animal Welfare Board of India) ಹಸು ಅಪ್ಪುಗೆಯ ದಿನ ಎಂದು ಇತ್ತೀಚೆಗೆ ಘೋಷಣೆ ಮಾಡಿದೆ. ಈ ಘೋಷಣೆಯೂ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಜೊತೆ ಹಲವು ಹಾಸ್ಯದ ಅಲೆ ಸೃಷ್ಟಿಸಿದೆ. ಹಲವರು ಹಸುವನ್ನು ಅಪ್ಪುವ ದಿನ ಎಂದು ಘೋಷಿಸಿದ್ದನ್ನು ವ್ಯಂಗ್ಯವಾಡಿದ್ದಾರೆ. ಈ ಹಾಸ್ಯ ಪರ ವಿರೋಧಗಳ ಹೊರತಾಗಿಯೂ ಹಸುವನ್ನು ಅಪ್ಪಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಹಸುಗಳನ್ನು ತಬ್ಬಿಕೊಳ್ಳುವುದರ ಮಹತ್ವ ಮತ್ತು ಅದರಿಂದ ಮಾನಸಿಕ ಆರೋಗ್ಯದಲ್ಲಿ ಆಗುವ ಚೇತರಿಕೆಯ ಬಗ್ಗೆ ಜಾಗತಿಕವಾಗಿ ಹಲವು ಸಂಶೋಧನೆಗಳು ಆಗಿದ್ದು, ಅವೆಲ್ಲವೂ ಸಕಾರಾತ್ಮಕ ಫಲಿತಾಂಶಗಳನ್ನೇ ನೀಡಿವೆ. ಆದರೆ ಬೀದಿಯಲ್ಲಿ ಹೋಗುವ ಹಸುವನ್ನು ತಬ್ಬಿಕೊಳ್ಳಲು ಹೋದರೆ ಒದೆ ಗ್ಯಾರಂಟಿ. ಸಾಕುಪ್ರಾಣಿಗಳನ್ನು ಯಾವಾಗಲೂ ಒತ್ತಡ ನಿವಾರಿಸುವವು ಎಂದು ಕರೆಯಲಾಗುತ್ತದೆ. ಅದರಲ್ಲೂ ಶ್ವಾನಗಳು ಸಾಕುಪ್ರಾಣಿಗಳಾಗಿ ಅತ್ಯಂತ ಜನಪ್ರಿಯವಾಗಿವೆ. ಆದರೆ ಇವುಗಳಂತೆ ಇತರ ಪ್ರಾಣಿಗಳು ಕೂಡ ಒತ್ತಡ ನಿವಾರಿಸುತ್ತವೆ. ಅವುಗಳೊಂದಿಗಿನ ಬಾಂಧವ್ಯ ಮನುಷ್ಯರ ಒತ್ತಡವನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಈ ಹಸುಗಳ ತಬ್ಬಿಕೊಳ್ಳುವ ಪದ್ಧತಿ. ಭಾರತದಲ್ಲಿ ಹಸುಗಳಿಗೆ ದೇವರ ಸ್ಥಾನಮಾನವಿದ್ದರೂ ಅದನ್ನು ಒಂದು ದಿನಕ್ಕೆ ಸೀಮಿತವಾಗಿಸಿಲ್ಲ. ಹಸುವಿನೊಂದಿಗೆ ದಿನ ಕಳೆಯುವವರು ಅವುಗಳೊಂದಿಗೆ ಸದಾ ಆತ್ಮೀಯ ಒಡನಾಟ ಹೊಂದಿರುತ್ತವೆ. 

ಮನೆಯಿಂದ ಹೊರಡುವಾಗ ಗೋಮಾತೆಯ ದರ್ಶನ ಮಾಡಿದರೆ ಹೋದ ಕೆಲಸ ಆಯ್ತೆಂದೇ ಅರ್ಥ!

ಆದರೆ ಈ ಕೌ ಹಗ್ಗಿಂಗ್ ಡೇ (cow hugging) ನಮ್ಮದಲ್ಲ, ಇದು ನೆದರ್‌ಲ್ಯಾಂಡ್‌ನ (Netherlands) ಒಂದು ಪ್ರಾಚೀನ ಪದ್ಧತಿಯಾಗಿದೆ. ನೆದರ್‌ಲ್ಯಾಂಡ್‌ನಲ್ಲಿ ಹಸುಗಳನ್ನು ತಬ್ಬಿಕೊಂಡು ತನ್ನ ಮಾನಸಿಕ ತೊಳಲಾಟವನ್ನು ಕಡಿಮೆ ಮಾಡಿಕೊಳ್ಳುವ ಚಿಕಿತ್ಸಾ ವಿಧಾನವಿದೆ. ಆದರೆ ಇದು ಜಾಗತಿಕವಾಗಿ ಟ್ರೆಂಡ್ ಆಗಿದ್ದು, 2020ರಲ್ಲಿ. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾದ ಜನ ಹಸುಗಳ ಫಾರ್ಮ್‌ನತ್ತ ತೆರಳಿ ಅವುಗಳ ಸಾಂಗತ್ಯ ಮಾಡಲು ಶುರು ಮಾಡಿದರು. ಹಸುಗಳ ಜೊತೆ ಎರಡರಿಂದ ಮೂರು ಗಂಟೆ ಕಳೆಯಲು ಶುರು ಮಾಡಿದರು. 

ಈ ಹಸುವನ್ನು ಮುದ್ದಾಡಿ ಆರೋಗ್ಯ ಪಡೆಯುವ ಚಿಕಿತ್ಸಾ ವಿಧಾನ ನಂತರ ಅಮೆರಿಕಾದಲ್ಲಿ (US) ಸಾಕಷ್ಟು ಪ್ರಖ್ಯಾತಿ ಗಳಿಸಿದ್ದು, ಅಮೆರಿಕಾದಾದ್ಯಂತ ಇಂದು ಈ ಚಿಕಿತ್ಸಾ ವಿಧಾನವನ್ನು ಜನರಿಗೆ ಒದಗಿಸುವ ಹಸುಗಳ ಫಾರ್ಮ್‌ಗಳಿವೆ (ಗೋ ಶಾಲೆ) ಹಸುವಿನೊಂದಿಗಿನ ಬಾಂಧವ್ಯವೂ ವ್ಯಕ್ತಿಗೆ, ಪ್ರೀತಿ, ಸಂತೋಷ ಹಾಗೂ ಒತ್ತಡ ಕಡಿಮೆಗೊಳಿಸುವ ಹಾರ್ಮೋನ್‌ (hormones) ಅನ್ನು ಬಿಡುಗಡೆ ಮಾಡುತ್ತದೆ. 

ಹಸುವಿನ ನಿಧಾನಗತಿಯ ಹೃದಯ ಬಡಿತ, ಬೆಚ್ಚಗಿನ ದೇಹದ ಉಷ್ಣತೆ ಮತ್ತು ದೊಡ್ಡ ಗಾತ್ರವೂ ಹಸುವನ್ನು ತಬ್ಬಿಕೊಳ್ಳುವ ಮಾನವರಿಗೆ ಹಿತವಾದ ಅನುಭವವನ್ನು ನೀಡುತ್ತದೆ ಮತ್ತು ಅವರಿಗೆ ವಿಶ್ರಾಂತಿ ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಕೇರಿಂಗ್ ಸೈನ್ಸ್‌ ಈ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದು, ಇದರಲ್ಲಿ 'ಮಾನಸಿಕ ಆರೋಗ್ಯದಲ್ಲಿ ಪ್ರಾಣಿಗಳ ಸಹಾಯದ ಚಿಕಿತ್ಸೆಯ ಪ್ರಯೋಜನಗಳು' ಎಂಬ ಶೀರ್ಷಿಕೆಯ ಲೇಖನವೂ ಪ್ರಾಣಿಗಳ ಸಂಪರ್ಕವು ಜನರ ಯೋಗಕ್ಷೇಮಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಹೇಳಿದೆ. ಜನರು ಪ್ರಾಣಿಗಳೊಂದಿಗೆ ಬೆರೆತಾಗ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಂತಹ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇದು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ಸಂತೋಷ ಮತ್ತು ಶಾಂತತೆಯ ಭಾವನೆಯನ್ನು ಉಂಟು ಮಾಡುತ್ತದೆ. 

ಸುರಪುರ: ವರಾಹಕ್ಕೆ ಹಾಲುಣಿಸಿದ ಗೋಮಾತೆ..!

ಇನ್ನು ಭಾರತಕ್ಕೆ ಬಂದರೆ, ಗೋವುಗಳನ್ನು ಹಿಂದೂ ಧರ್ಮದಲ್ಲಿ ಮತ್ತು ಭಾರತದಾದ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಇಲ್ಲಿನ ಗ್ರಾಮೀಣ ಭಾಗದಲ್ಲಿ ಜನ ಅವುಗಳನ್ನು ತಮ್ಮ ಮಕ್ಕಳಂತೆ ಪರಿಗಣಿಸುತ್ತಾರೆ. ಹಸುಗಳನ್ನು ಅಪ್ಪಿಕೊಳ್ಳುವ ಅಭ್ಯಾಸವು ಹೊಲಗಳಲ್ಲಿ ಅಥವಾ ಹಸುಗಳ ಸುತ್ತಲೂ ಬೆಳೆದವರಿಗೆ ಹೊಸದೇನಲ್ಲ. ಇದು ಮಹಾನಗರ ಮತ್ತು ನಗರಗಳಲ್ಲಿ ವಾಸಿಸುವವರಿಗೆ ಮಾತ್ರ ಹೊಸದು.

ಆದರೆ ಫೆ.14ರಂದು ಹಸುವನ್ನು ಅಪ್ಪಿಕೊಳ್ಳುವ ದಿನ ಎಂದು ಘೋಷಿಸಿದ ನಂತರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ, 'ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು, ಇದು ನಮ್ಮ ಜೀವನವನ್ನು ಸಂಪತ್ಬರಿತವಾಗಿಸುತ್ತದೆ. ಹಸು ಸಂಪತ್ತು ಮತ್ತು ಜೀವ ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ತಾಯಿ, ಎಲ್ಲವನ್ನು ನೀಡುವವಳು, ಮಾನವೀಯತೆಗೆ ಐಶ್ವರ್ಯವನ್ನು ಒದಗಿಸುವ ಅದರ ಪೋಷಣೆಯ ಸ್ವಭಾವದಿಂದಾಗಿ ಇದನ್ನು 'ಕಾಮಧೇನು' ಮತ್ತು 'ಗೋ ಮಾತಾ' ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಹಲವಾರು ಸಂಸ್ಕೃತಿಗಳಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ತಾಯಿ, ಭೂಮಿ ಅಥವಾ ಜೀವ ನೀಡುವವರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದೆ. 

13 ವಾರದ ಕಂದನ ಪ್ರಾಣ ಕಾಪಾಡಿದ ಗೋಮಾತೆ, ಪುಟ್ಟ ಹೃದಯ ಸೇರಿದ ಹಸುವಿನ ಟಿಶ್ಯೂ!

ವಿಶೇಷವಾಗಿ ಜಾಗತಿಕವಾಗಿ, ಗ್ರಾಮೀಣ ಸಮುದಾಯಗಳಲ್ಲಿ ಹಸುಗಳನ್ನು ಸಾಕುವ ಸಂಸ್ಕೃತಿ ಇರುವಲ್ಲೆಲ್ಲಾ, ಭಾವನಾತ್ಮಕ ಮತ್ತು ಮಾನಸಿಕ ಮಟ್ಟದಲ್ಲಿ ಹಸುಗಳೊಂದಿಗೆ ಬಾಂಧವ್ಯ ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ. ಪಶ್ಚಿಮದಲ್ಲಿ, ಹಸುವನ್ನು ಅಪ್ಪಿಕೊಳ್ಳುವುದು ಇಂದು ಜನಪ್ರಿಯ ಕ್ಷೇಮ ಪ್ರವೃತ್ತಿಯಾಗಿದ್ದು,ಇದನ್ನು ಭಾರತ ಹೊಸ ಹೆಸರಿನೊಂದಿಗೆ ಮತ್ತೆ ತನ್ನ ಸಂಸ್ಖೃತಿಯ ಭಾಗವಾಗಿಸುತ್ತಿದೆ. ಅದೇನೆ ಇರಲಿ ನೀವೇನಾದರೂ ಹಸು ಅಪ್ಪಿಕೊಳ್ಳುವ ದಿನ ಆಚರಿಸಲು ಬಯಸಿದ್ದರೆ ನೀವು ಅಪ್ಪಿಕೊಳ್ಳುವ ಹಸುವಿನ ಬಗ್ಗೆ ತಿಳಿದಿರುವುದು ಒಳಿತು. ಇಲ್ಲದಿದ್ದರೆ ಅದು ಅಪ್ಪಿಕೊಳ್ಳಲು ಬಂದ ನಿಮ್ಮನ್ನು ತಿವಿದು ದೂರ ಎಸೆಯುವುದರಲ್ಲಿ ಸಂಶಯವಿಲ್ಲ.