- ಒಮಿಕ್ರೋನ್‌ ವಿರುದ್ಧ ಕೋವಿಶೀಲ್ಡ್‌ 3ನೇ ಡೋಸ್‌ ಅಗತ್ಯ- ಮೊದಲೆರಡು ಡೋಸ್‌ ಪರಿಣಾಮಕಾರಿಯಾಗಿಲ್ಲ- ಲಸಿಕೆಯ  ಬಗ್ಗೆ ಐಎಮ್‌ಆರ್‌ಸಿಯ ವಿಜ್ಞಾನಿಗಳು ಅಧ್ಯಯನ

ಪುಣೆ(ಏ.25): ಕೋವಿಶೀಲ್ಡ್‌ ಲಸಿಕೆಯು ಒಮಿಕ್ರೋನ್‌ ಬಿ.ಎ.1 ಉಪತಳಿಯ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಮ್‌ಆರ್‌ಸಿ) ಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.

ಇತ್ತೀಚೆಗೆ ಕೋವಿಡ್‌ ವೈರಸ್‌ನ ರೂಪಾಂತರಿಯ ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಐಎಮ್‌ಆರ್‌ಸಿಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಈ ಅಧ್ಯಯನದಲ್ಲಿ ಕೋವಿಶೀಲ್ಡ್‌ನ ಎರಡೂ ಡೋಸನ್ನು ಪಡೆದ ಒಮ್ಮೆಯೂ ಸೋಂಕಿಗೆ ತುತ್ತಾಗದವರ ಸೀರಂ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ ಕೋವಿಡ್‌ 2 ಲಸಿಕೆ ಪಡೆದ ನಂತರವೂ ಒಮಿಕ್ರೋನ್‌ ರೂಪಾಂತರಿಯ ಉಪತಳಿಗಳ ವಿರುದ್ಧ ಹೋರಾಡುವ ಪ್ರತಿಕಾಯಗಳು ಶೇ. 0.11 ರಷ್ಟುಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿವೆ.

ಬೂಸ್ಟರ್ ಡೋಸ್ ಆರಂಭಕ್ಕೂ ಮುನ್ನ ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೆಲೆಗಳಲ್ಲಿ ಭಾರಿ ಇಳಿಕೆ!

ಅಧ್ಯಯನದಲ್ಲಿ ಬೀಟಾ, ಹಾಗೂ ಡೆಲ್ಟಾರೂಪಾಂತರಿಯ ವಿರುದ್ಧ ಹೋರಾಡುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಆದರೆ ಒಮಿಕ್ರೋನ್‌ ಉಪತಳಿಯ ವಿರುದ್ಧ ಕೋವಿಶೀಲ್ಡ್‌ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಕೋವಿಶೀಲ್ಡ್‌ 2 ಡೋಸು ಪಡೆದವರೂ ನಿಗದಿತ ಅವಧಿಯ ನಂತರ ಬೂಸ್ಟರ್‌ ಡೋಸು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕೋವಿಶೀಲ್ಡ್‌ ಉತ್ಪಾದನೆ ಸ್ಥಗಿತ: ಪೂನಾವಾಲಾ
ಕೋವಿಶೀಲ್ಡ್‌ ಲಸಿಕೆ ತಯಾರಿಸುವ ಇಲ್ಲಿನ ಸೀರಂ ಇನ್ಸ್‌ಟಿಟ್ಯೂಟ್‌ ತನ್ನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ‘ಭಾರತ ವಿದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಕೆಯನ್ನು ನಿಲ್ಲಿಸಿದ ಕಾರಣ, ಸೀರಂ ಇನ್‌ಸ್ಟಿಟ್ಯೂಟ್‌ ಬಳಿ 20 ಕೋಟಿ ಡೋಸ್‌ ಕೊರೋನಾ ಲಸಿಕೆಯ ದಾಸ್ತಾನು ಮಾರಾಟವಾಗದೇ ಹಾಗೇ ಉಳಿಸಿದೆ. ಹೀಗಾಗಿ ಕಂಪನಿಯು ಹೊಸದಾಗಿ ಲಸಿಕೆ ಉತ್ಪಾದನೆಯನ್ನು ಡಿಸೆಂಬರ್‌ನಲ್ಲೇ ನಿಲ್ಲಿಸಿದೆ’ ಸೀರಂ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲ ಹೇಳಿದ್ದಾರೆ.

5 ವರ್ಷಗಳಿಂದ ಮಲಗಿದಲ್ಲಿಯೇ ಇದ್ದ, ಕೋವಿಶೀಲ್ಡ್‌ ಹಾಕಿಸಿಕೊಂಡ ಬಳಿಕ ಎದ್ದು ಓಡಾಡುವಂತಾದ...!

ಕಾರ‍್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ನಮ್ಮ ಬಳಿ 20 ಕೋಟಿ ಡೋಸ್‌ ಲಸಿಕೆ ದಾಸ್ತಾನಿದೆ. ಲಭ್ಯವಿರುವ ಡೋಸ್‌ ಅವಧಿ ಮೀರುವ ಆತಂಕ ಎದುರಾಗಿದೆ. ಹೀಗಾಗಿ ಲಸಿಕೆಯನ್ನು ತೆಗೆದುಕೊಳ್ಳಲು ಬಯಸುವವರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

18+ ವರ್ಷದವರಿಗೆ ಬೂಸ್ಟರ್‌ ಡೋಸ್‌ ಲಸಿಕೆ ಆರಂಭ
ಕೋವಿಡ್‌ ಲಸಿಕೆಯ ಎರಡನೇ ಡೋಸನ್ನು ಪಡೆದು 9 ತಿಂಗಲೂ ಪೂರ್ಣವಾಗಿರುವ ಎಲ್ಲ 18 ವರ್ಷ ಮೇಲ್ಪಟ್ಟವರಿಗೆ ಭಾನುವಾರದಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಯನ್ನು ನೀಡಲು ಆರಂಭಿಸಲಾಗಿದೆ.

‘ಜನರಿಗೆ ಮೊದಲು ಪಡೆದ ಕೋವಿಡ್‌ ಲಸಿಕೆ ಪಡೆದ ಕಂಪನಿಯದ್ದೇ ಮುಂಜಾಗ್ರತಾ ಡೋಸನ್ನು ನೀಡಬೇಕು. ಅಲ್ಲದೇ ಖಾಸಗಿ ಲಸಿಕಾ ಕೇಂದ್ರಗಳು ಗರಿಷ್ಠ 150 ರು.ವರೆಗೆ ಲಸಿಕೆ ವೆಚ್ಚಕ್ಕಿಂತ ಹೆಚ್ಚಿನ ಸೇವಾ ಶುಲ್ಕವನ್ನು ವಿಧಿಸಬಹುದು. ಈಗಾಗಲೇ ಕೋವಿನ್‌ ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಕೊಂಡವರು ಮುಂಜಾಗ್ರತಾ ಡೋಸಿಗಾಗಿ ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ 225 ರು. ದರವನ್ನು ಲಸಿಕೆಗೆ ನಿಗದಿಪಡಿಸಿದ್ದು, 150 ರು. ಸೇವಾ ಶುಲ್ಕ ಹಾಗೂ ತೆರಿಗೆ ಸೇರಿ ಲಸಿಕೆ ದರ 400 ರು. ಆಗಿದೆ.

‘ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟನಾಗರಿಕರಿಗೆ ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಉಚಿತವಾಗಿ ಮುಂಜಾಗ್ರತಾ ಡೋಸನ್ನು ನೀಡಲಾಗುವುದು’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.