ಹನಿಟ್ರ್ಯಾಪ್‌ಗೆ ಬಲಿಯಾದ್ರಾ ಭಾರತದಲ್ಲಿ ಹತ್ಯೆಯಾದ ಬಾಂಗ್ಲಾದೇಶದ ಸಂಸದ
ಪಶ್ಚಿಮ ಬಂಗಾಳದಲ್ಲಿ ಹತ್ಯೆಯಾದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನರ್ ಅವರನ್ನು ಹನಿಟ್ರ್ಯಾಪ್ ಮಾಡಿ ಬಳಿಕ ಹತ್ಯೆ ಮಾಡಲಾಯ್ತಾ? ಹೀಗೊಂದು ಸಂಶಯ ತನಿಖಾ ಅಧಿಕಾರಿಗಳಿಗೆ ಮೂಡಿದ್ದು, ಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿವೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹತ್ಯೆಯಾದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನರ್ ಅವರನ್ನು ಹನಿಟ್ರ್ಯಾಪ್ ಮಾಡಿ ಬಳಿಕ ಹತ್ಯೆ ಮಾಡಲಾಯ್ತಾ? ಹೀಗೊಂದು ಸಂಶಯ ತನಿಖಾ ಅಧಿಕಾರಿಗಳಿಗೆ ಮೂಡಿದ್ದು, ಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿವೆ. ಮೇ 12 ರಂದು ಚಿಕಿತ್ಸೆಗೆಂದು ಕೋಲ್ಕತ್ತಾಗೆ ಆಗಮಿಸಿದ ಅವರು ಮೇ 13 ರ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು. ನಂತರ ಮೇ 22 ರಂದು ಅವರ ಶವ ಕೋಲ್ಕತ್ತಾದ ನ್ಯೂ ಟೌನ್‌ನ ಫ್ಲಾಟೊಂದರಲ್ಲಿ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ನ್ಯೂ ಟೌನ್‌ನ ಫ್ಲಾಟ್‌ನಲ್ಲೇ ಅನ್ವರುಲ್ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಬಳಿಕ ಅವರ ಚರ್ಮ ಸುಲಿದು ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತುಂಬಿಸಿ ನಗರದ ವಿವಿಧೆಡೆ ಎಸೆದಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬಾಂಗ್ಲಾದೇಶಿಗರೇ ಆಗಿದ್ದಾರೆ. ಇಂದು ಮುಂಜಾನೆ ಪ್ರಕರಣದ ಕಿಂಗ್‌ಪಿನ್ ಜಿಹಾದ್ ಹವಾಲ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತ ಕನಿಷ್ಠ ಐವರಿಗೆ ಸಂಸದ ಅನ್ವರುಲ್ ಹತ್ಯೆಯ ಕಾರ್ಯತಂತ್ರ ತಿಳಿಸಿ ಅವರನ್ನು ಭೀಕರವಾಗಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದ.
ಅನ್ವರ್ ಹತ್ಯೆ ಮಾಡಿದವರು ಯಾರು?
ಅನ್ವರ್ ಅವವರನ್ನು ಕೊಲೆ ಮಾಡಿದ್ದು ಯಾರು? ಯಾಕೆ ಕೊಲೆ ಮಾಡಿದ್ರು? ಅವವರು ಮೇ 14 ರಂದು ಎಲ್ಲಿಗೆ ಹೋಗಲು ಬಯಸಿದ್ದರು. ಈ ರೀತಿ ಹಲವು ಪ್ರಶ್ನೆಗಳು ಈಗ ಕೋಲ್ಕತಾ ಹಾಗೂ ಬಾಂಗ್ಲಾದೇಶದ ಢಾಕಾ ಪೊಲೀಸರ ತಲೆಯನ್ನು ಕೊರೆಯುತ್ತಿದ್ದವು. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ಅಕ್ರಮ ಬಾಂಗ್ಲಾ ವಲಸಿಗ ಜಿಹಾದ್ ಹವಾಲ್ದಾರ್‌ನನ್ನು ಇಂದು ಮುಂಜಾನೆ ಪೊಲೀಸರು ಬಂಧಿಸುತ್ತಿದ್ದಂತೆ ಪ್ರಕರಣದ ತನಿಖೆ ತಿರುವು ಪಡೆದಿದೆ. ಈತ ತಾನು ಸಂಸದನ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ನಾಪತ್ತೆಯಾದ ಬಾಂಗ್ಲಾದೇಶದ ಸಂಸದ ಕೋಲ್ಕತಾದಲ್ಲಿ ಶವವಾಗಿ ಪತ್ತೆ: ಕೊಲೆ ಎಂದ ಬಾಂಗ್ಲಾ ಗೃಹ ಸಚಿವ
ಈ ಕೊಲೆ ಪ್ರಕರಣದಲ್ಲಿ ಶಿಲಾಸ್ಟಿ ರೆಹಮಾನ್ ಎಂಬ ಮಹಿಳೆಯ ಪಾತ್ರದ ಬಗ್ಗೆಯೂ ಈಗ ಢಾಕಾ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶಿಲಾಸ್ಟಿ ರೆಹಮಾನ್ ಕೊಲೆಗಾರರಲ್ಲಿ ಒಬ್ಬರಿಗೆ ಪರಿಚಯವಿದ್ದಾಳೆ. ಹೀಗಾಗಿ ಬಾಂಗ್ಲಾದೇಶ ಸಂಸದನನ್ನು ಹನಿಟ್ರ್ಯಾಪ್ ಮಾಡಿ ಕೊಲೆ ಮಾಡಲಾಯ್ತ ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ರೆಹಮಾನ್ ಹನಿಟ್ರ್ಯಾಪ್‌ಗೆ ಒಳಗಾಗಿ ತಮ್ಮ ಸಾವನ್ನು ತಾವೇ ಬರಮಾಡಿಕೊಂಡರು ಎಂಬುದು ತನಿಖೆಯಿಂದ ತಿಳಿದಿದೆ ಎಂದು ವರದಿ ಆಗಿದೆ.
ಹನಿಟ್ರ್ಯಾಪ್ ಎಂಬುದು ತಿಳಿಯದೇ ಮಹಿಳೆಯ ಆಮಿಷಕ್ಕೆ ಒಳಗಾಗಿ ಬಾಂಗ್ಲಾದೇಶ ಸಂಸದ ನ್ಯೂಟೌನ್ ಫ್ಲಾಟ್‌ಗೆ ಹೋಗಿದ್ದು, ಫ್ಲಾಟ್‌ಗೆ ಹೋದ ಸ್ವಲ್ಪ ಹೊತ್ತಿನಲ್ಲೇ ಅವರ ಕೊಲೆಯಾಗಿದೆ ಎಂದು ಢಾಕಾದಿಂದ ಮಾಹಿತಿ ಬಗ್ಗೆ ಪೊಲೀಸರು ಹೇಳಿದ್ದಾರೆ. ಅಲ್ಲದೇ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳು ಕೂಡ ಅನ್ವರುಲ್ ಮಹಿಳೆಯ ಜೊತೆ ಫ್ಲಾಟ್‌ಗೆ ಎಂಟ್ರಿ ಕೊಡುವುದನ್ನು ತೋರಿಸಿದೆ. ಇತ್ತ ಮಹಿಳೆ ಶಿಲಾಸ್ಟಿ ರೆಹಮಾನ್‌ಳನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾ ಅಕ್ರಮ ವಲಸಿಗರಿಂದಲೇ ಭಾರತದಲ್ಲಿ ಬಾಂಗ್ಲಾದೇಶದ ಸಂಸದನ ಕೊಲೆ: ಸಿಐಡಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು
ಇಂದು ಮುಂಜಾನೆ ಜಿಹಾದ್ ಹವಾಲ್ದಾರ್ ಬಂಧನದೊಂದಿಗೆ ಪ್ರಕರಣಕ್ಕೆ ಹಲವು ಟ್ವಿಸ್ಟ್‌ಗಳು ಸಿಕ್ಕಿದ್ದವು. ಸಿಐಡಿ ಮೂಲಗಳ ಪ್ರಕಾರ, ಅಕ್ರಮ ವಲಸಿಗನಾಗಿರುವ ಜಿಹಾದ್ ಹವಾಲ್ದಾರ್ ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಫ್ಲಾಟ್‌ನಲ್ಲಿ ಸಂಸದನ ಕೊಲೆ ಮಾಡಿ ದೇಹವನ್ನು ತುಂಡು ಮಾಡುವುದರಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಕೃತ್ಯವನ್ನು ಹೇಗೆ ನಿಖರವಾಗಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಯ್ತು ಎಂಬ ಬೆಚ್ಚಿ ಬೀಳಿಸುವ ವಿವರಗಳನ್ನು ಸಿಐಡಿ ತನಿಖೆ ಬಹಿರಂಗಪಡಿಸಿದೆ ಎಂದು ವರದಿ ಆಗಿದೆ. ಅಲ್ಲದೇ ಈ ಹೇಯ ಕೃತ್ಯದ ಮಾಸ್ಟರ್ ಮೈಂಡ್ ಬಾಂಗ್ಲಾದೇಶ ಮೂಲದ ಅಮೆರಿಕಾ ಪ್ರಜೆ ಅಖ್ತರುಝಾಮಾನ್ ಎಂದು ಈಗ ಸಿಕ್ಕಿಬಿದ್ದಿರುವ ಆರೋಪಿ ಜಿಹಾದ್ ಹವಾಲ್ದಾರ್ ಬಹಿರಂಗಪಡಿಸಿದ್ದಾನೆ. ಈತ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ನ್ಯೂಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದ ಅನ್ವರುಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಅಮೆರಿಕಾ ಪ್ರಜೆ ಅಖ್ತರುಝಾಮಾನ್‌ಗೆ ಬಂಧಿತ ಶಿಲಾಸ್ಟಿ ರೆಹಮಾನ್ ಜೊತೆಯೂ ಸಂಪರ್ಕವಿದ್ದು, ಆತ ಅನ್ವರುಲ್ ಹತ್ಯೆಗೆ 5 ಕೋಟಿ ಹನ ನೀಡಿರಬಹುದು ಎಂದು ಹೇಳಲಾಗುತ್ತಿದೆ.