Asianet Suvarna News Asianet Suvarna News

ಪ. ಬಂಗಾಳದಲ್ಲಿ ಅತ್ಯಾಚಾರ ವಿರೋಧಿ ‘ಅಪರಾಜಿತಾ’ ಮಸೂದೆ ಅಂಗೀಕಾರ: ಮೋದಿ, ಶಾ ರಾಜೀನಾಮೆಗೆ ದೀದಿ ಆಗ್ರಹ

ಅತ್ಯಾಚಾರ-ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಹಾಗೂ ದೇಶದಲ್ಲೇ ಕಠಿಣ ಎನ್ನಬಹುದಾದ ‘ಅತ್ಯಾಚಾರ ವಿರೋಧಿ ಅಪರಾಜಿತಾ ಮಸೂದೆ’ಗೆ ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನ ಮಂಗಳವಾರ ಸರ್ವಾನುಮತದ ಅಂಗೀಕಾರ ನೀಡಿದೆ. 

Assembly unanimously passes strict anti-rape law aparajita bill mrq
Author
First Published Sep 4, 2024, 10:01 AM IST | Last Updated Sep 4, 2024, 10:01 AM IST

ಕೋಲ್ಕತ್ತಾ: ಅತ್ಯಾಚಾರ-ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಹಾಗೂ ದೇಶದಲ್ಲೇ ಕಠಿಣ ಎನ್ನಬಹುದಾದ ‘ಅತ್ಯಾಚಾರ ವಿರೋಧಿ ಅಪರಾಜಿತಾ ಮಸೂದೆ’ಗೆ ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನ ಮಂಗಳವಾರ ಸರ್ವಾನುಮತದ ಅಂಗೀಕಾರ ನೀಡಿದೆ. ಕಳೆದ ತಿಂಗಳು ಕೋಲ್ಕತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆ ಸಂಭವಿಸಿದ ಕಾರಣ ಜನಾಕ್ರೋಶ ತಣಿಸಲು ಈ ಕಾಯ್ದೆ ತರಲಾಗಿದೆ. ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ (ಪ.ಬಂಗಾಳದ ಅಪರಾಧ ಕಾನೂನುಗಳ ತಿದ್ದುಪಡಿ) ಮಸೂದೆ-2024’ ಎಂದು ವಿಧೇಯಕಕ್ಕೆ ಹೆಸರಿಡಲಾಗಿದೆ. ಶಾಸನವು ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹಾಲಿ ಕಾನೂನನ್ನು ಮತ್ತಷ್ಟು ಕಠಿಣಗೊಳಿಸುವ ಗುರಿ ಹೊಂದಿದೆ.

ಈವರೆಗಿನ ಕೇಂದ್ರೀಯ ಕಾನೂನುಗಳು ಅತ್ಯಾಚಾರ-ಕೊಲೆ ಅಪರಾಧಿಗೆ 20 ವರ್ಷ ಜೈಲಿನಿಂದ ಹಿಡಿದು ಜೀವಾವಧಿ/ಮರಣದಂಡನೆವರೆಗೆ 3 ಥರದ ಶಿಕ್ಷೆ ವಿಧುಸುತ್ತಿದ್ದವು. ಆದರೆ ಬಂಗಾಳದ ಮಸೂದೆಯು, ಅತ್ಯಾಚಾರಿಯ ಕ್ರಿಯೆಗಳು ಸಂತ್ರಸ್ತೆಯ ಸಾವಿಗೆ ಕಾರಣವಾದರೆ ಅಥವಾ ಅವಳನ್ನು ಜೀವನಪೂರ್ತಿ ನಿಸ್ತೇಜ ಸ್ಥಿತಿಯಲ್ಲಿ ಇರಿಸಿದರೆ ಅಂಥ ಅಪರಾಧಿಗಳಿಗೆ ಕಡ್ಡಾಯವಾಗಿ ‘ಮರಣದಂಡನೆ’ ಮಾತ್ರ ವಿಧಿಸುತ್ತದೆ.

ಇದಕ್ಕೆ ಹೆಚ್ಚುವರಿಯಾಗಿ, ಅತ್ಯಾಚಾರದ ಅಪರಾಧಿಗಳಿಗೆ ಪರೋಲ್ ಅವಕಾಶ ಇಲ್ಲದ ಜೀವನಪೂರ್ತಿ ಜೈಲು ಸಜೆ ಅಥವಾ ಗಲ್ಲು ನಿಗದಿಪಡಿಸುತ್ತದೆ. ಈವರೆಗೆ ಈ ವಿಭಾಗದಲ್ಲಿ ಕೇಂದ್ರೀಯ ಕಾನೂನು 10 ವರ್ಷಕ್ಕಿಂತ ಹೆಚ್ಚು ಜೈಲುವಾಸ ಅಥವಾ ಜೀವಾವಧಿ ಶಿಕ್ಷೆ (ಜೀವನಪೂರ್ತಿ ಜೈಲು ಅಲ್ಲ) ವಿಧಿಸುತ್ತಿತ್ತು.

ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಮಸೂದೆ ಮಂಡಿಸಿದರು. ಇದಕ್ಕೆ ಪೂರಕವಾಗಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಕೆಲವು ತಿದ್ದುಪಡಿ ಮಂಡಿಸಿದರು. ಆದರೆ ಅದನ್ನು ಸದನವು ಅಂಗೀಕರಿಸಲಿಲ್ಲ. ಆದರೂ ಮಸೂದೆಗೆ ವಿಪಕ್ಷಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಕಾರಣ ಸರ್ವಾನುಮತದಿಂದ ಅಂಗೀಕಾರ ದೊರಕಿತು.

ಮೋದಿ ರಾಜೀನಾಮೆಗೆ ದೀದಿ ಆಗ್ರಹ

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಮ್ಮ ಸರ್ಕಾರ ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ನಮಗಿಂತ ದುರ್ಬಲವಾದ ಕಾಯ್ದೆ ಇದೆ. ಇದು ನಾಚಿಕೆಗೇಡಿನ ಸಂಗತಿ. ಹೀಗಾಗಿ ಎಲ್ಲ ದೇಶದಲ್ಲೇ ಅತಿ ಕಠಿಣ ಕಾನೂನನ್ನು ನಮ್ಮ ರಾಜ್ಯ ಜಾರಿಗೆ ತಂದಿದೆ. ಮಹಿಳೆಯರ ರಕ್ಷಣೆಗೆ ಪ್ರಧಾನಿ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಅವರು ರಾಜೀನಾಮೆ ನೀಡಬೇಕು ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಆದರೆ ಇದಕ್ಕೆ ತಿರುಗೇಟು ನೀಡಿದ ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ‘ಜನಾಕ್ರೋಶದಿಂದ ಪಾರಾಗಲು ಹಾಗೂ ಜನರ ಗಮನವನ್ನು ಬೇರೆಡೆ ತಿರುಗಿಸಲು ತರಾತುರಿಯಲ್ಲಿ ಈ ಮಸೂದೆ ಮಂಡನೆ ಮಾಡಲಾಗಿದೆ. ಇದರ ವಿಸ್ತೃತ ಚರ್ಚೆ ಅಗತ್ಯ. ಆದರೂ ನಾವು ಮಸೂದೆಗೆ ಬೆಂಬಲ ನೀಡುತ್ತೇವೆ’ ಎಂದರು.

ಚಿತ್ರದುರ್ಗ: ಮಾನಸಿಕ ಖಿನ್ನತೆಗೆ ಒಳಗಾದ ದಲಿತ ಯುವತಿಯ ರೇಪ್‌ ಅಂಡ್‌ ಮರ್ಡರ್‌?

ಹೊಸ ಮಸೂದೆಯಲ್ಲೇನಿದೆ?

- ಅತ್ಯಾಚಾರ ಸಂತ್ರಸ್ತೆ ಮೃತಳಾದರೆ ಅಥವಾ ಆಕೆ ನಿಸ್ತೇಜಗೊಂಡರೆ (ಬ್ರೇನ್‌ ಡೆಡ್ ಸ್ಥಿತಿಗೆ ಹೋದರೆ) ಕೃತ್ಯ ಎಸಗಿದ ಅಪರಾಧಿಗೆ ಕಡ್ಡಾಯವಾಗಿ ‘ಮರಣದಂಡನೆ’ ಮಾತ್ರ. ಈವರೆಗಿನ ಕೇಂದ್ರೀಯ ಕಾನೂನು ಈ ಅಪರಾಧಕ್ಕೆ 20 ವರ್ಷ ಜೈಲು, ಜೀವಾವಧಿ ಅಥವಾ ಗಲ್ಲು ವಿಧಿಸುತ್ತಿತ್ತು.

- ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ‘ಜೀವನಪೂರ್ತಿ ಜೈಲು’ ಅಥವಾ ‘ಗಲ್ಲು’. ಅವರಿಗೆ ಪರೋಲ್‌ ಇಲ್ಲ. ಈವರೆಗಿನ ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಈ ಅಪರಾಧಿಗೆ 10 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ಇತ್ತು,

- ಪುನರಾವರ್ತಿತ ಅಪರಾಧಿಗಳಿಗೆ ಗಂಭೀರ ಪ್ರಕರಣಗಳಲ್ಲಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ.

- ಗ್ಯಾಂಗ್‌ರೇಪ್‌, ಪುನರಾವರ್ತಿತ ಲೈಂಗಿಕ ಕಿರುಕುಳಕ್ಕೆ ಜೀವನಪೂರ್ತಿ ಜೈಲು ಅಥವಾ ಗಲ್ಲು ಸಜೆ. ಈವರೆಗಿನ 20 ವರ್ಷ ಜೈಲು ಶಿಕ್ಷೆ ಎಂಬ ನಿಯಮ ರದ್ದು. ಪೋಕ್ಸೋ ಕಾಯ್ದೆಯ ನಿಯಮ ಮತ್ತಷ್ಟು ಬಿಗಿ

- ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗ ಮಾಡಿದರೆ 2 ವರ್ಷ ಜೈಲ ಎಂಬ ನಿಯಮ ರದ್ದು. ಇನ್ನು 3ರಿಂದ 5 ವರ್ಷ ಜೈಲು

- ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪ್ರಾಥಮಿಕ ವರದಿ ಸಲ್ಲಿಕೆ ಆದ 21 ದಿನಗಳಲ್ಲಿ ಪೂರ್ಣಗೊಳಿಸಬೇಕು. 21 ದಿನ ಅವಧಿಯಯಲ್ಲಿ ತನಿಖೆ ಮುಗಿಯದಿದ್ದರೆ ತನಿಖೆಗೆ 15 ದಿನದ ಹೆಚ್ಚುವರಿ ಕಾಲಾವಕಾಶ

- ಮಹಿಳೆ/ಮಕ್ಕಳ ಮೇಲಿನ ದೌರ್ಜನ್ಯಗಳ ತನಿಖೆಗೆ ಜಿಲ್ಲಾ ಮಟ್ಟದ ‘ಅಪರಾಜಿತಾ ಕಾರ್ಯಪಡೆ’ ರಚನೆ. ಇದಕ್ಕೆ ಡಿವೈಎಸ್ಪಿ ನೇತೃತ್ವ

- ರಾತ್ರಿ ಕೆಲಸ ಮಾಡುವ ಮಹಿಳೆಯರಿಗೆ ಸಂಪೂರ್ಣ ಭದ್ರತೆ. ದಾದಿಯರು ಮತ್ತು ಮಹಿಳಾ ವೈದ್ಯರು ಇರುವ ಸ್ಥಳಗಳಲ್ಲಿ ಪೊಲೀಸ್‌ ನಿಯೋಜನೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ 120 ಕೋಟಿ ರು. ಅನುದಾನ

- ಆಸ್ಪತ್ರೆಗಳ ಎಲ್ಲ ಕಡೆ ಸಿಸಿಟೀವಿ ಕ್ಯಾಮೆರಾಗಳ ಅಳವಡಿಕೆ

- ರಾತ್ರಿ ಪಾಳಿಯ ವೈದ್ಯರು/ಮಹಿಳೆಯರಿಗೆ ‘ರಾತ್ರಿ ಸಾಥಿ’ ಆ್ಯಪ್‌ ಮೂಲಕ ಆಪತ್ಕಾಲೀನ ಫೋನ್‌ ಕರೆ ಮಾಡಲು/ಸಂದೇಶ ಕಳಿಸಲು ಅವಕಾಶ

- ರಾಜ್ಯದಲ್ಲಿ ಮತ್ತಷ್ಟು ತ್ವರಿತ ಕೋರ್ಟ್‌ಗಳ ಸ್ಥಾಪನೆ. ಈ ಮೂಲಕ ರೇಪ್ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನಕ್ಕೆ ಕ್ರಮ

ಮುಂದೇನು?

ಬಂಗಾಳ ವಿಧಾನಸಭೆ ಅಂಗೀಕರಿಸಿರುವ ಅಪರಾಜಿತಾ ಮಸೂದೆ ಜಾರಿಗೆ ರಾಷ್ಟ್ರಪತಿ ಅಂಕಿತ ಬೇಕಾಗುತ್ತದೆ. ರಾಷ್ಟ್ರಪತಿಗಳು ಕೇಂದ್ರ ಸಚಿವ ಸಂಪುಟದ ಸಲಹೆಯನ್ನು ಅಂಕಿತ ಹಾಕುವ ಮುನ್ನ ಪಡೆಯುತ್ತಾರೆ. ಈ ಕಾಯ್ದೆ ಜಾರಿಗೆ ತಂದಿರುವ ಟಿಎಂಸಿ ಸರ್ಕಾರ ಬಿಜೆಪಿ ವಿರೋಧಿಯಾಗಿರುವ ಕಾರಣ, ಮೋದಿ ಸರ್ಕಾರವು ರಾಷ್ಟ್ರಪತಿಗೆ ಯಾವ ಸಲಹೆ ನೀಡುತ್ತದೆ ಎಂಬುದು ಗಮನಾರ್ಹ. ಏಕೆಂದರೆ ಈ ಹಿಂದೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳು ತಮ್ಮದೇ ಆದ ಮಸೂದೆ ಪಾಸು ಮಾಡಿದರೂ ಅವುಗಳಿಗೆ ರಾಷ್ಟ್ರಪತಿ ಸಮ್ಮತಿ ದೊರಕಿರಲಿಲ್ಲ.

Latest Videos
Follow Us:
Download App:
  • android
  • ios