ನವದೆಹಲಿ, (ಮೇ.12): ಇದೇ ಮೇ.17ಕ್ಕೆ ಮೂರನೇ ಹಂತದ ಲಾಕ್‌ಡೌನ್‌ ಬಳಿಕ ಮುಂದೆ ಏನು ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.

ಇಂದು (ಮಂಗಳವಾರ) ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ,  20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿ, ಲಾಕ್​ಡೌನ್​ ಕೂಡ ಮುಂದುವರಿಯಲಿದೆ ಎಂಬ ಸೂಚನೆ ನೀಡಿದರು.

ಮೇ.17ರ ನಂತರದ ನಾಲ್ಕನೇ ಹಂತದ ಲಾಕ್‌ಡೌನ್ ಹೊಸ ರೀತಿಯಲ್ಲಿ ಇರಲಿದ್ದು, ಮೇ 18ಕ್ಕೂ ಮೊದಲೇ ದೇಶದ ಜನರಿಗೆ ತಿಳಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ 

ದೇಶದಲ್ಲಿ ಸದ್ಯ ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದ್ದು, ಮೇ 17ಕ್ಕೆ ಅದರ ಅವಧಿ ಮುಕ್ತಾಯವಾಗಲಿದೆ. ಆದರೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಕೊವಿಡ್​-19 ದೇಶಕ್ಕೆ ಕಾಲಿಟ್ಟಾಗಿನಿಂದ ಐದನೇ ಬಾರಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನಕ್ಕಾಗಿ ಒಟ್ಟು 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.

ಈ ಮೂಲಕ ನಾಲ್ಕನೇ ಹಂತದ ಲಾಕ್​ಡೌನ್ ಹೇಗಿರಲಿದೆ? ಅದರ ರೂಪುರೇಷೆಗಳೇನು ಎಂಬುದನ್ನು ಮೋದಿ ಸಸ್ಪೆನ್ಸ್ ಇಟ್ಟಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಿ ಉಳಿದ ಕಡೆಗಳಲ್ಲಿ ಕೊಂಚ ಮಟ್ಟಿಗೆ ಲಾಕ್‌ಡೌನ್ ಸಡಿಲಿಕೆ ನೀಡುವ ಸಾಧ್ಯತೆಗಳಿವೆ. ಆದ್ರೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಆರಂಭವಾಗುವುದು ಡೌಟ್ ಆಗಿದೆ.