ನೂತನ ಸಂಸತ್ ಭವನ ಸಿದ್ಧವಾಯ್ತು, ಏನಾಗಲಿದೆ ಹಳೆಯ ಸಂಸತ್ ಭವನ?
ವಿಪಕ್ಷಗಳ ಬಾಯ್ಕಾಟ್ ನಡುವೆ ದೇಶದ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಇದರ ನಡುವೆ ಹಳೆಯ ಸಂಸತ್ ಭವನ ಏನಾಗಲಿದೆ ಎನ್ನುವ ಕುತೂಹಲವೂ ಹುಟ್ಟುಕೊಂಡಿದೆ.
ನವದೆಹಲಿ (ಮೇ.28): ಸರ್ವಧರ್ಮಗಳ ಪ್ರಾರ್ಥನೆ ಹಾಗೂ ಮಂತ್ರಗಳ ಘೋಷಣೆಯ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹೊಸ ಫಲಕದ ಮೇಲಿದ್ದ ಪರದೆಯನ್ನು ಸರಿಸುವುದರೊಂದಿಗೆ, ಹೊಸ ಸಂಸತ್ ಭವನ ದೇಶಕ್ಕೆ ಲೋಕಾರ್ಪಣೆಗೊಂಡಿದೆ. ಇದಕ್ಕೂ ಮುನ್ನ ಪೂಜೆ ಸಲ್ಲಿಸಿದ್ದ ಪ್ರಧಾನಿ ಮೋದಿ, ಲೋಕಸಭೆಯ ಸ್ಪೀಕರ್ ಪಕ್ಕದಲ್ಲಿ ಐತಿಹಾಸಿಕ ರಾಜದಂಡವಾದ ಸೆಂಗೋಲ್‌ಅನ್ನು ಪ್ರತಿಷ್ಠಾಪನೆ ಮಾಡಿದರು. ಬ್ರಿಟಿಷರು ಭಾರತಕ್ಕೆ ಅಧಿಕಾರ ವರ್ಗಾವಣೆ ಮಾಡಿದ ಸಂಕೇತವಾಗಿ ಇದನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಿದ್ದರು. ಇಲ್ಲಿಯವರೆಗೂ ಇತಿಹಾಸದ ಪುಟದಿಂದ ಮರೆಮಾಚಲಾಗಿದ್ದ ಸೆಂಗೋಲ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ಪ್ರತಿಷ್ಠಾಪನೆ ಮಾಡಿದರು. ಹೊಸ ಸಂಸತ್ ಭವನ ಅನಾವರಣವಾದ ಬೆನ್ನಲ್ಲಿಯೇ ದೇಶವನ್ನು ರೂಪಿಸಿದ, ಸಂವಿಧಾನದ ರಚನೆಗೂ ಕಾರಣವಾಗಿದ್ದ ಹಳೆಯ ಸಂಸತ್ ಭವನ ಏನಾಗಲಿದೆ ಎನ್ನುವ ಕುತಹಲವೂ ಎಲ್ಲರಲ್ಲಿದೆ. ದೇಶ ಕಂಡ ಮುತ್ಸದ್ಧಿ ರಾಜಕಾರಣಿಗಳು ನಡೆದಾಡಿದ, ಪ್ರತಿಭಟನೆಹಾಗೂ ದೇಶಕ್ಕೆ ಮಾರ್ಗ ರೂಪಿಸಿದ ಭಾಷಣ ಹಾಗೂ ರಾಷ್‌ಟರದ ಪ್ರಗತಿಗೆ ಕಾರಣವಾಗಿದ್ದ ವೃತ್ತಾಕಾರದ ಹಳೆಯ ಸಂಸತ್ ಭವನ ಏನಾಗಲಿದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿಯ ಪ್ರಕಾರ, ಹಳೆಯ ಸಂಸತ್ ಭವನ ಹದಗೆಡುವ ಸ್ಥತಿಯಲ್ಲಿದೆ. ಈಗಾಗಲೇ ಈ ಭವನವನ್ನು ಅತಿಯಾಗಿ ಬಳಕೆ ಮಾಡಲಾಗಿದೆ. ಹಳೆಯ ಸಂಸತ್ ಭವನದ ಪ್ರಮುಖ ಭಾಗಗಳಲ್ಲಿ ಮಳೆ ಬಂದಾಗ ನೀರು ಸೋರಿಕೆ ಕೂಡ ಆಗುತ್ತಿದ್ದವು. ಅದರೊಂದಿಗೆ ಆಧುನಿಕ ತಂತ್ರಜ್ಞಾನ, ಸ್ಥಳಾವಕಾಶ ಹಾಗೂ ವಿವಿಧ ಸೌಕರ್ಯಗಳನ್ನು ಪೂರೈಸಲು ಹಳೆಯ ಸಂಸತ್ ಭವನದಲ್ಲಿ ಸಾಧ್ಯವಾಗುತ್ತಿರಲಿಲ್ಲ.
ಆದ್ದರಿಂದ, ಸುಮಾರು 60,000 ಕಾರ್ಮಿಕರನ್ನು ಬಳಸಿಕೊಂಡು, ಎರಡು ವರ್ಷಗಳ ಕಠಿಣ ನಿರ್ಮಾಣ ಕಾರ್ಯದ ನಂತರ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಇಂದು ಹೊಸ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಯಾಗುತ್ತಿದ್ದಂತೆ, ಸ್ವತಂತ್ರ ಭಾರತದ ಮೊದಲ ಸಂಸತ್ತಿನ ಹಳೆಯ ಕಟ್ಟಡದ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ದೇಶದ ಸಂವಿಧಾನದ ಅಂಗೀಕಾರಕ್ಕೆ ಸಾಕ್ಷಿಯಾದ ಕಟ್ಟಡವನ್ನು ಸಂರಕ್ಷಿಸಲು ಮತ್ತು ಮರು ನವೀಕರಣಗೊಳಿಸುವ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯ ಕಟ್ಟಡ ಎಂದು ಪರಿಗಣಿಸಲು ಸರ್ಕಾರ ನಿರ್ಧಾರ ಮಾಡಿದೆ.
ಹಳೆಯ ಸಂಸತ್ ಭವನದ ಇತಿಹಾಸ: ಮೂಲತಃ ಕೌನ್ಸಿಲ್ ಹೌಸ್ ಎಂದು ಕರೆಯಲ್ಪಟ್ಟಿದ್ದ ಈ ಕಟ್ಟಡವನ್ನು ಭಾರತದ ಪ್ರಜಾಪ್ರಭುತ್ವದ ಆತ್ಮದ ಐಕಾನ್ ಎಂದು ಪರಿಗಣಿಸಲಾಗಿದೆ. ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದಾರೆ. ಕಟ್ಟಡದ ನಿರ್ಮಾಣವು ಆರು ವರ್ಷಗಳನ್ನು ತೆಗೆದುಕೊಂಡಿತ್ತಲ್ಲದೆ, 1927 ರಲ್ಲಿ ಪೂರ್ಣಗೊಂಡಿತು. 1956 ಹಾಗೂ 2006ರ ನವೀಕರಣ ಮಾಡುವ ಮೂಲಕ ಎರಡು ಮಹಡಿಗಳನ್ನು ಸೇರಿಸಲಾಗಿದೆ. ಇದೇ ಕಟ್ಟಡದಲ್ಲಿ 2,500 ವರ್ಷಗಳ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂಸತ್ತಿನ ವಸ್ತುಸಂಗ್ರಹಾಲಯವನ್ನು ಕೂಡ ಇತ್ತು.
ಬಸವಣ್ಣನ ವಚನ, ಹಂಪಿಯ ರಥ; ಮೋದಿ ಉದ್ಘಾಟಿಸಿದ ನೂತನ ಸಂಸತ್ ಭವನದಲ್ಲಿ ಕನ್ನಡ ಕಂಪು!
ಧ್ವಂಸವಾಗಲಿದೆಯೇ ಹಳೆಯ ಸಂಸತ್ ಭವನ (Will The Old Parliament Building Be Demolished): 2021ರ ಮಾರ್ಚ್‌ನಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಗೆ ಮಾಹಿತಿ ನೀಡುವ ವೇಳೆ, ಒಮ್ಮೆ ಹೊಸ ಸಂಸತ್ತಿನ ಕಟ್ಟಡ ಪೂರ್ಣಗೊಂಡರೆ, ಅಸ್ತಿತ್ವದಲ್ಲಿರುವ ಕಟ್ಟಡದ ದುರಸ್ತಿ ಮತ್ತು ಪರ್ಯಾಯ ಬಳಕೆಗೆ ಪರಿಗಣನೆಗೆ ಅಗತ್ಯವಿರುತ್ತದೆ ಎಂದಿದ್ದರು. ಹಾಗಿದ್ದರೂ, ಅದರ ಭವಿಷ್ಯದ ಉದ್ದೇಶದ ಬಗ್ಗೆ ಯಾವುದೇ ಸಮಗ್ರ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ಹಳೆಯ ಸಂಸತ್ ಭವನವನ್ನು ಧ್ವಂಸ ಮಾಡೋದಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಪುರಾತತ್ವ ಇಲಾಖೆಯ ಆಸ್ತಿಯಾಗಿ, ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚಿ ಕ್ರಿಯಾತ್ಮಕ ಸ್ಥಳಗಳಿಗೆ ಅವಕಾಶ ಕಲ್ಪಿಸಲು ಅದನ್ನು ಸುರಕ್ಷಿತವಾಗಿ ಇಡಲಾಗುತ್ತದೆ ಹಾಗೂ ಮರುಹೊಂದಿಕೆ ಮಾಡಲಾಗುತ್ತದೆ. ಹೊಸ ಭವನದೊಂದಿಗೆ ಹಳೆಯ ಕಟ್ಟಡವನ್ನು ಬಳಕೆ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ.
ಆರ್‌ಜೆಡಿ ವಿವಾದಾತ್ಮಕ ಟ್ವೀಟ್: ಶವ ಪೆಟ್ಟಿಗೆಗೆ ನೂತನ ಸಂಸತ್ ಭವನ ಹೋಲಿಕೆ !
2022 ರ ಮಾಧ್ಯಮ ವರದಿಯ ಪ್ರಕಾರ, ಹಳೆಯ ಸಂಸತ್ತಿನ ಕಟ್ಟಡದ ಒಂದು ಭಾಗವನ್ನು ಮ್ಯೂಸಿಯಂ ಆಗಿ ಪರಿವರ್ತಿಸಬಹುದು. ಕಟ್ಟಡವನ್ನು ವಸ್ತುಸಂಗ್ರಹಾಲಯವಾಗಿ ತೆರೆದರೆ, ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯ ಸಭಾಂಗಣಗಳನ್ನು ನೋಡುವ ಮತ್ತು ಅನುಭವಿಸುವ ಅವಕಾಶ ಜನರಿಗೆ ಸಿಗಲಿದೆ. ಕೇಂದ್ರ ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಹಳೆಯ ಸಂಸತ್ತಿನ ಕಟ್ಟಡವು ಭಾರತದ ಶ್ರೀಮಂತ ಐತಿಹಾಸಿಕ ಗತಕಾಲದ ಮಹತ್ವದ ಭಾಗವಾಗಿ ಸಂರಕ್ಷಿಸಲ್ಪಡುತ್ತದೆ ಎಂಬುದು ಖಚಿತ.