ಜಗತ್ತನ್ನೇ ಬೆಚ್ಚಿ ಬೀಳಿಸಿದ 10 ಮಹಾ ನಾಯಕರ ಹತ್ಯೆಗಳು!
- ಮಹಾ ನಾಯಕರ ಹತ್ಯೆ ನೆನಪಿಸಿದ ಶಿಂಜೋ ಅಬೆ ಘಟನೆ
- ಅಮೆರಿಕ ಅಧ್ಯಕ್ಷ ಲಿಂಕನ್‌ನಿಂದ ರಾಜೀವ್ ಗಾಂಧಿ ಹತ್ಯೆ
- ಬಿಗಿ ಭದ್ರತೆ ನಡುವೆ ಹತ್ಯೆಯಾದ ವಿಶ್ವ ನಾಯಕರ ವಿವರ ಇಲ್ಲಿವೆ
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅನಾರೋಗ್ಯದ ಕಾರಣಕ್ಕೆ ಕಳೆದ ವರ್ಷ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾಗ ಅವರನ್ನ ಯಮಗಾಮಿ ಎಂಬ ವ್ಯಕ್ತಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಶಿಂಜೋ ಅಬೆ ಜಪಾನ್ ಪ್ರಧಾನಿಯಾಗಿದ್ದಾಗ ಭಾರತ-ಜಪಾನ್ ಸಂಬಂಧ ಸಾಕಷ್ಟು ಗಟ್ಟಿಯಾಗಿತ್ತು. ಇಂಥಾ ಶಿಂಜೋ ಅಬೆಯನ್ನ ಕೊಂದ ಯಮಗಾಮಿ ತಾನೇ ಮನೆಯಲ್ಲಿ ಪಿಸ್ತೂಲ್ ತಯಾರಿಸಿಕೊಂಡಿದ್ದ. ಸೇನೆಯಲ್ಲಿ ಕೆಲಸ ಮಾಡಿದ್ದರಿಂದಾಗಿ ಆತನಿಗೆ ಪಿಸ್ತೂಲು, ಬಂದೂಕುಗಳ ಬಗ್ಗೆ ಜ್ಞಾನವಿತ್ತು. ಆದರೆ ಯಮಗಾಮಿಯ ಟಾರ್ಗೆಟ್ ಶಿಂಜೋ ಅಬೆಯಾಗಿರಲಿಲ್ಲ. ಅದೇ ಕಾರ್ಯಕ್ರಮದಲ್ಲಿದ್ದ ಧಾರ್ಮಿಕ ನಾಯಕನೊಬ್ಬನನ್ನ ಕೊಲ್ಲುವ ಉದ್ದೇಶದಿಂದ ಆತ ಅಲ್ಲಿಗೆ ಬಂದಿದ್ದ. ತನ್ನ ತಾಯಿಗೆ ಧಾರ್ಮಿಕ ಮುಖಂಡ ಮೋಸ ಮಾಡಿದ್ದ ಎಂಬ ಕಾರಣಕ್ಕೆ ಆತನನ್ನು ಕೊಲ್ಲಲು ಬಂದಿದ್ದ, ಆದ್ರೆ ಅವನ ಗುಂಡಿಗೆ ಮಾಜಿ ಪ್ರಧಾನಿ ಶಿಂಜೋ ಅಬೆ ಬಲಿಯಾದ್ರು ಅನ್ನೋ ಮಾಹಿತಿ ತನಿಖೆ ವೇಳೆ ಹೊರಬಂದಿದೆ. ಆದ್ರೆ ಇದೇ ಸತ್ಯ ಅಂತ ಇನ್ನೂ ಜಪಾನ್ ಸರ್ಕಾರ ಹೇಳಿಲ್ಲ. ಜಪಾನ್ ನ ಮಾಜಿ ಪ್ರಧಾನಿ ಹತ್ಯೆ, ಈ ಹಿಂದೆ ನಡೆದ ಹಲವು ಇಂಥಾದ್ದೇ ಘಟನೆಗಳನ್ನ ನೆನಪಿಸುತ್ತಿದೆ. ಭಾರೀ ಬಿಗಿ ಭದ್ರತೆಯಿದ್ದರೂ ದೇಶದ ಅಧ್ಯಕ್ಷರು, ಪ್ರಧಾನಿಗಳು, ಮಹಾನ್ ನಾಯಕರು ಹತ್ಯೆಯಾದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ.
ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್ ಹತ್ಯೆ- 1865
ಇಡೀ ಜಗತ್ತನ್ನ ಬೆಚ್ಚಿ ಬೀಳಿಸಿದ ಆ ಒಂದು ಘಟನೆ 1865ರ ಏಪ್ರಿಲ್ 14 ರಂದು ಅಮೆರಿಕದಲ್ಲಿ ನಡೆದಿತ್ತು. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರನ್ನ ಹತ್ಯೆ ಮಾಡಲಾಗಿತ್ತು. ಒಂದು ದೇಶದ ಅಧ್ಯಕ್ಷರನ್ನ ಕೊಂದು ಹಾಕಿದ ಘಟನೆ ಹಿಂದ್ಯಾವತ್ತೂ ನಡೆದಿರಲಿಲ್ಲ. ರಾಜ ಮಹಾರಾಜರ ಹತ್ಯೆಗಳು ಇತಿಹಾಸಲ್ಲಿ ದಾಖಲಾಗಿದ್ದವಾದರೂ, ಆಧುನಿಕ ಜಗತ್ತಿನ ಒಂದು ದೇಶದ ಮುಖ್ಯಸ್ಥ ಹತ್ಯೆಯಾಗಿದ್ದು ಅದೇ ಮೊದಲು. ರಾಜಧಾನಿ ವಾಷಿಂಗ್ ಟನ್ ನಲ್ಲಿನ ರಂಗ ಮಂದಿರವೊಂದರಲ್ಲಿ ನಾಟಕ ನೋಡಲು ಬಂದಿದ್ದ ಅಬ್ರಹಾಂ ಲಿಂಕನ್ ಅವ್ರನ್ನ ಜಾನ್ ವಿಲ್ಕ್ಸ್ ಎಂಬ ರಂಗಭೂಮಿ ನಟ ಕೊಂದು ಗುಂಡಿಟ್ಟು ಕೊಂದು ಹಾಕಿದ್ದ. ರಂಗಭೂಮಿ ನಟನಾಗಿದ್ದರಿಂದ ಅಧ್ಯಕ್ಷರ ಸಮೀಪಕ್ಕೆ ಹೋದರೂ ಭದ್ರತಾ ಸಿಬ್ಬಂದಿಗೆ ಯಾವ ಅನುಮಾನವೂ ಬಂದಿರಲಿಲ್ಲ. ಹಾಗೆ ಅಮೆರಿಕದ 16ನೇ ಅಧ್ಯಕ್ಷ 157 ವರ್ಷಗಳ ಹಿಂದೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದರು. ಅಬ್ರಹಾಂ ಲಿಂಕನ್ ಅಮೆರಿಕದಲ್ಲಿದ್ದ ಗುಲಾಮಗಿರಿಯನ್ನ ನಿಷೇಧಿಸುವ ಕಾನೂನು ತಂದು ಅಲ್ಲಿನ ಜಮೀನ್ದಾರರ ವಿರೋಧ ಕಟ್ಟಿಕೊಂಡಿದ್ದರು. ಜತೆಗೆ ಕಪ್ಪು ವರ್ಣೀಯರಿಗೆ ಮತದಾನದ ಹಕ್ಕು ಕೊಟ್ಟಿದ್ದರು. ಗುಲಾಮಗಿರಿಯನ್ನ ಬೆಂಬಲಿಸುತ್ತಿದ್ದವರು ಮತ್ತು ಜಮೀನ್ದಾರರ ಗುಂಪು ಅಬ್ರಹಾಂ ಲಿಂಕನ್ನರ ಕಾನೂನುಗಳನ್ನ ವಿರೋಧಿಸಿದರು. ಕಪ್ಪು ವರ್ಣೀಯರಿಗೆ ಮತದಾನದ ಹಕ್ಕು ಕೊಟ್ಟಿದ್ದು ಅವರನ್ನ ಸಿಟ್ಟಿಗೇಳಿಸಿತ್ತು. ಇದರ ಪರಿಣಾಮವಾಗೇ ಅಬ್ಹಾಂ ಲಿಂಕನ್ನರ ಹತ್ಯೆ ನಡೆದಿತ್ತು.
ಶಿಂಜೋ ಅಬೆ to ಇಂದಿರಾ ಗಾಂಧಿ, ಗುಂಡೇಟಿಗೆ ಬಲಿಯಾದ ಜನಪ್ರಿಯ ನಾಯಕರು!
ಅಮೆರಿಕ ಅಧ್ಯಕ್ಷ ಜೇಮ್ಸ್ ಗಾರ್ ಫೀಲ್ಡ್ ಹತ್ಯೆ-1881
ಅಬ್ರಹಾಂ ಲಿಂಕನ್ ನಂತರ ಹತ್ಯೆಯಾದ ಮತ್ತೊಬ್ಬ ಅಧ್ಯಕ್ಷ ಜೇಮ್ಸ್ ಗಾರ್ ಫೀಲ್ಡ್. 1881ರ ಜುಲೈ 2ನೇ ತಾರೀಕು ಅಮೆರಿಕದ 20ನೇ ಅಧ್ಯಕ್ಷನಾಗಿದ್ದ ಜೇಮ್ಸ್ ಜಾರ್ ಫೀಲ್ಡ್ ಅವರ ಮೇಲೆ ಗುಂಡಿನ ದಾಳಿ ನಡೀತು. ದಾಳಿ ನಡೆದ 79 ದಿನಗಳ ನಂಗತರ ಸಾವು ಬದುಕಿನ ಹೋರಾಟ ನಡೆಸಿ ಸೆಪ್ಟಂಬರ್ 19ರಂದು ಜೀವ ಬಿಟ್ಟರು ಜೇಮ್ಸ್ ಗಾರ್ ಫೀಲ್ಡ್. ಚಾರ್ಲ್ ಜೆ ಎಂಬಾತ ಜೇಮ್ಸ್ ಗಾರ್ ಫೀಲ್ಡ್ ರನ್ನ ಹತ್ಯೆ ಮಾಡಿದ್ದ. ಜೇಮ್ಸ್ ಗಾರ್ ಫೀಲ್ಡ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದ ಚಾರ್ಲ್ಸ್ ತನಗೆ ಯಾವುದೇ ಸ್ಥಾನ ಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಜೇಮ್ಸ್ ರನ್ನ ಹತ್ಯೆ ಮಾಡಿದ್ದ.
ಅಮೆರಿಕ ಅಧ್ಯಕ್ಷ ವಿಲಿಯಮ್ ಮೆಕೆನ್ ಲೀ ಹತ್ಯೆ-1901
ಅಬ್ರಹಾಂ ಲಿಂಕನ್, ಜೇಮ್ಸ್ ಗಾರ್ ಫೀಲ್ಡ್ ನಂತರ ಹತ್ಯೆಯಾದ ಮತ್ತೊಬ್ಬ ಅಮೆರಿಕಾ ಅಧ್ಯಕ್ಷ ವಿಲಿಯಮ್ ಮೆಕೆನ್ಲೀ. 1901ರ ಸೆಪ್ಟಂಬರ್ 14 ರಂದು ನ್ಯೂಯಾರ್ಕ್ ನಲ್ಲಿ ಗುಂಟಿಡ್ಡು ಹತ್ಯೆ ಮಾಡಲಾಯ್ತು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಧ್ಯಕ್ಷ ವಿಲಿಯಮ್ ಅವರನ್ನ ಲಿಯೋನ್ ಜೋಲ್ಗಾಸ್ ಎಂಬಾತ ಗುಂಡು ಹಾರಿಸಿ ಕೊಂದುಹಾಕಿದ್ದ. 1893ರ ಆರ್ಥಿಕ ಹಿಂಜರಿತದ ಪರಿಣಾಮ ಕೆಲಸ ಕಳೆದುಕೊಂಡಿದ್ದ ಲಿಯೋನ್, ತನ್ನ ದೇಶದ ಅಧ್ಯಕ್ಷನ ಮೇಲೆ ಸಿಟ್ಟಿಗೆದ್ದು ಅವರನ್ನ ಹತ್ಯೆಗೈದಿದ್ದ.
ಮಹಾತ್ಮ ಗಾಂಧಿ ಹತ್ಯೆ-1948
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಮಹಾತ್ಮ ಗಾಂಧಿಯವರನ್ನ 1948ರ ಜನವರಿ 30 ರಂದು ದೆಹಲಿಯಲ್ಲಿ ನಾತೂರಾಮ್ ಗೋಡ್ಸೆ ಹತ್ಯೆ ಮಾಡಿದ್ದ. ಅಖಂಡ ಭಾರತ ವಿಭಜನೆಯಾಗಿ ಭಾರತ-ಪಾಕಿಸ್ತಾನ ಎರಡು ಭಾಗ ಆಗಲು ಗಾಂಧೀಜಿ ಕಾರಣ ಅಂತ ಗೋಡ್ಸೆ ಗಾಂಧೀಜಿಯವರನ್ನ ಹತ್ಯೆ ಮಾಡಿದ್ದ. ದೇಶ ವಿಭಜನೆ ನಂತರದ ಹಿಂಸಾಚಾರ, ವಿಪರೀತ ಮುಸ್ಲಿಂ ಓಲೈಕೆ, ಪಾಕಿಸ್ತಾನದಿಂದ ಬದುಕಿ ಬಂದ ಹಿಂದೂಗಳ ಬಗ್ಗೆ ತಿರಸ್ಕಾರ ಗಾಂಧಿ ಹತ್ಯೆಗೆ ಕಾರಣವಾದವು. ದೆಹಲಿಯ ಬಿರ್ಲಾ ಹೌಸ್ ನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಗಾಂಧೀಜಿಯನ್ನ ನಾತುರಾಮ್ ಗೋಡ್ಸೆ ಬೆರೆಟ್ಟಾ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಂದು ಹಾಕಿದ್ದ. ಬಿರ್ಲಾ ಹೌಸ್ ನ ವೇದಿಕೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ಗಾಂಧಿಯನ್ನು ತಡೆದ ಗೋಡ್ಸೆ ಮೂರು ಗುಂಡು ಹಾರಿಸಿದ್ದ. ಸ್ಥಳದಲ್ಲೇ ಕುಸಿದು ಬಿದ್ದ ಗಾಂಧೀಜಿ ಜೀವ ಬಿಟ್ಟಿದ್ದರು.
'ನೇತಾಜಿ ಸುಭಾಷ್ ಚಂದ್ರ ಬೋಸ್ ಹತ್ಯೆ ಮಾಡಿಸಿದ್ದು ಗಾಂಧೀಜಿ' ಬಿಜೆಪಿ ನಾಯಕನ ವಿವಾದಿತ ಹೇಳಿಕೆ!
ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ-1963
ಅಮೆರಿಕದ ಅಧ್ಯಕ್ಷರಾಗಿದ್ದಾಗಲೇ ಕೊಲೆಯಾದ ನಾಲ್ಕನೆಯವರು ಜಾನ್ ಎಫ್ ಕೆನಡಿ. 1963ರ ನವೆಂಬರ್ 22 ರಂದು ಅಮೆರಿಕದ 35ನೇ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿಯನ್ನ ಗುಂಡಿಟ್ಟು ಹತ್ಯೆ ಮಾಡಲಾಯ್ತು. ಟೆಕ್ಸಾಸ್ ನ ರಾಜಧಾನಿ ಡಲ್ಲಾಸ್ ನಲ್ಲಿ ಮಧ್ಯಾಹ್ನ 12.30ರ ಸಮಯದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಕೆನಡಿಯನ್ನ ಹಂತಕನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದ. ಭಾರೀ ಜನಸ್ತೋಮದ ಮಧ್ಯೆ ತೆರೆದ ಕಾರಿನಲ್ಲಿ ಕುಳಿತಿದ್ದ ಕೆನಡಿ ಕುತ್ತಿಗೆಗೆ ತುಂಬಾ ಸಮೀಪದಿಂದ ಗುಂಡು ಹಾರಿಸಿ ಕೊಲ್ಲಲಾಯ್ತು. ಒಂದು ಗುಂಡು ತಲೆಗೆ, ಮತ್ತೊಂದು ಗುಂಡು ಕುತ್ತಿಗೆಯನ್ನ ಸೀಳಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ರೂ ಕೆನಡಿ ಬದುಕುಳಿಯಲಿಲ್ಲ. ಜಾನ್ ಎಫ್ ಕೆನಡಿ ಹತ್ಯೆಗೆ ಕಾರಣ ಏನು..? ಈ ಘಟನೆ ನಡೆದು 60 ವರ್ಷಗಳಾದರೂ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿಲ್ಲ ಅಮೆರಿಕ. ಜಾನ್ ಎಫ್ ಕೆನಡಿ ಹತ್ಯೆಗೆ ಕಾರಣ ಎಂದು ಲಿ ಹಾರ್ವೇ ಓಸ್ವಾಲ್ಡ್ ಎಂಬಾತನನ್ನ ಬಂಧಿಸಲಾಯ್ತು. ಕೆನಡಿ ಹತ್ಯೆಯಾದ ಎರಡೇ ದಿನಕ್ಕೆ ಪೊಲೀಸರ ವಶದಲ್ಲಿದ್ದ ಲಿ ಹಾರ್ವೆಯನ್ನ ಜಾಕ್ ರೂಬೇ ಎಂಬಾತ ಗುಂಡಿಟ್ಟು ಹತ್ಯೆ ಮಾಡಿದ. ಜಾನ್ ಎಫ್ ಕೆನಡಿ ಹತ್ಯೆ ಹಿಂದೆ ರಷ್ಯಾ ಕೈವಾಡ ಇದೆ ಅನ್ನೋ ಆರೋಪ ಕೇಳಿಬಂತು. ಆದರೆ ಅಮೆರಿಕದ ತನಿಖಾ ಸಂಸ್ಥೆಗಳು ಇದನ್ನು ಇಲ್ಲಿಯವರೆಗೂ ಖಚಿತಪಡಿಸಿಲ್ಲ. ಕೆನಡಿ ಹತ್ಯೆ ಬಗ್ಗೆ ಹಲವು ಕಾನ್ಸಿಪಿರೆಸಿ ಥಿಯರಿಗಳಿವೆಯೇ ಹೊರತು ಖಚಿತವಾಗಿ ಇಂಥಾ ಕಾರಣಕ್ಕೆ ಕೆನಡಿ ಹತ್ಯೆಯಾದ್ರು ಅನ್ನೋ ಮಾಹಿತಿ ಇಲ್ಲ.
ಮಾರ್ಟಿನ್ ಲೂಥರ್ ಕಿಂಗ್ ಹತ್ಯೆ-1968
ಮಾರ್ಟಿನ್ ಲೂತರ್ ಕಿಂಗ್ ಜೂನಿಯರ್... ಮಹತ್ಮಾ ಗಾಂಧೀಜಿಯವರ ತತ್ವಗಳ ಅನುಯಾಯಿಯಾಗಿದ್ದ, ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರನಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರನ್ನ 1968ರ ಏಪ್ರಿಲ್ 4 ರಂದು ಗುಂಡಿಟ್ಟು ಹತ್ಯೆ ಮಾಡಲಾಯ್ತು. ಅಮರಿಕದಲ್ಲಿ ವರ್ಣಬೇಧ ನೀತಿಯ ವಿರುದ್ಧ, ಬಿಳಿಯರ ದೌರ್ಜನ್ಯದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಸಂಘಟಿಸಿದ್ದವರು ಮಾರ್ಟಿನ್ ಲೂಥರ್ ಕಿಂಗ್. ಅಮೆರಿಕದ ಟೆನ್ನಿಸ್ಸೀ ರಾಜ್ಯದ ಮೆಮ್ ಪಿಸ್ ನಲ್ಲಿ ಹೋಟೆಲ್ ವೊಂದರ ಬಾಲ್ಕನಿಯಲ್ಲಿ ನಿಂತಿದ್ದ ಲೂತರ್ ಕಿಂಗ್ ಅವರನ್ನ ಗುಂಡು ಹಾರಿಸಿ ಕೊಲ್ಲಲಾಯ್ತು. ಜೇಮ್ಸ್ ರೇ ಎಂಬಾತ ಈ ಹತ್ಯೆ ಮಾಡಿದ್ದ. ಅಮೆರಿಕದಲ್ಲಿ ಕಪ್ಪು ವರ್ಣೀಯರನ್ನ ಒಗ್ಗೂಡಿಸಲು ಮಾರ್ಟಿನ್ ಲೂಥರ್ ಕಿಂಗ್ ನಡೆಸುತ್ತಿದ್ದ ಹೋರಾಟದ ಕಾರಣದಿಂದ ಅವರನ್ನ ಹತ್ಯೆ ಮಾಡಲಾಯ್ತು...
ಇಂದಿರಾ ಗಾಂಧಿ ಹತ್ಯೆ-1984
ಮಹತ್ಮಾ ಗಾಂಧೀಜಿ ಹತ್ಯೆ ನಂತರ ಇಡೀ ಭಾರತವನ್ನ ನಡುಗಿಸಿದ್ದು ಇಂದಿರಾಗಾಂಧಿ ಹತ್ಯೆ. 1984ರ ಅಕ್ಟೋಬರ್ 30ರಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರನ್ನ ಅವರ ರಕ್ಷಣೆಗಿದ್ದ ಬಾಡಿಗಾರ್ಡ್ ಗಳೇ ಗುಂಡಿಟ್ಟು ಕೊಂದು ಹಾಕಿದರು. ಇಂದಿರಾ ದೇಹಕ್ಕೆ 33 ಗುಂಡುಗಳನ್ನ ನುಗ್ಗಿಸಿದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಘಟನೆ ನಂತರ ಶರಣಾಗತರಾದ್ರು. ಈ ಹತ್ಯೆಗೆ ಕಾರಣವಾಗಿದ್ದು ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿದ್ದ ಖಾಲಿಸ್ತಾನಿ ಉಗ್ರ ವಿರುದ್ಧದ ಕಾರ್ಯಾಚರಣೆಗಾಗಿ ಆಪರೇಷನ್ ಬ್ಲೂ ಸ್ಟಾರ್ ನಡೆಸಲಾಯ್ತು. ಗೋಲ್ಡನ್ ಟೆಂಪಲ್ ಗೆ ಸೇನೆ ನುಗ್ಗಲು ಇಂದಿರಾ ಒಪ್ಪಿಗೆ ಸೂಚಿಸಿದ್ದರು. 1984ರ ಜೂನ್ ನಲ್ಲಿ 10 ದಿನಗಳ ಕಾಲ ನಡೆದಿದ್ದ ಕಾರ್ಯಾಚರಣೆಯೇ ಆಪರೇಷನ್ ಬ್ಲೂ ಸ್ಟಾರ್. ಗೋಲ್ಡನ್ ಟೆಂಪಲ್ ನಲ್ಲಿ ಆಶ್ರಯ ಪಡೆದಿದ್ದ ಖಲಿಸ್ತಾನಿ ಉಗ್ರ ಬಿಂದ್ರನ್ ವಾಲೆ ಮತ್ತು ಆತನ ಸಹಚರರ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಅದು. ಈ ಕಾರ್ಯಾಚರಣೆಯಲ್ಲಿ ಬಿಂದ್ರನ್ ವಾಲೆ ಸೇರಿದಂತೆ ನೂರಾರು ಖಲಿಸ್ತಾನಿ ಉಗ್ರರನ್ನ ಬಗ್ಗುಬಡಿಯಲಾಯಿತು. ಇದಕ್ಕೆ ಪ್ರತೀಕಾರವಾಗಿಯೇ ಇಂದಿರಾ ಹತ್ಯೆಯಾಯ್ತು.
ರಾಜೀವ್ ಗಾಂಧಿ ಹತ್ಯೆ-1991
ಇಂದಿರಾ ಗಾಂಧಿ ಹತ್ಯೆಯಾದ ಐದೇ ವರ್ಷಕ್ಕೆ ರಾಜೀವ್ ಗಾಂಧಿಯವರನ್ನ ಎಲ್ ಟಿಟಿಇ ಉಗ್ರರು ಕೊಂದು ಹಾಕಿದರು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಮಾನವ ಬಾಂಬ್ ಸ್ಫೋಟಿಸಿ ರಾಜೀವ್ ಗಾಂಧಿಯವರನ್ನ ಹತ್ಯೆ ಮಾಡಲಾಯ್ತು. ಭೀಕರ ಮಾನವ ಬಾಂಬ್ ಸ್ಫೋಟಕ್ಕೆ ರಾಜೀವ್ ಗಾಂಧಿ ದೇಹ ಛಿದ್ರ ಛಿದ್ರವಾಗಿತ್ತು. ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧ ತಡೆಯಲು ಮತ್ತು ಎಲ್ ಟಿ ಟಿ ಇ ಮಟ್ಟ ಹಾಕಲು ಅಲ್ಲಿಗೆ ಸೇನೆ ಕಳಿಸಿಕೊಟ್ಟಿದ್ದಕ್ಕೆರಾಜೀವ್ ಗಾಂಧಿಯವರನ್ನ ಹತ್ಯೆ ಮಾಡಲಾಯ್ತು.
ಬೆನಜೀರ್ ಬುಟ್ಟೋ ಹತ್ಯೆ-2007
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಬುಟ್ಟೋ ಅವರನ್ನ 2007ರ ಡಿಸೆಂಬರ್ 27ರಂದು ಇಸ್ಲಾಮಿಕ್ ಉಗ್ರರು ಕೊಂದು ಹಾಕಿದರು. 9 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬಂದಿದ್ದ ಬೆನಜೀರ್ ಬುಟ್ಟೋ ಚುನಾವಣೆಯಲ್ಲಿ ಸ್ಪರ್ಧಿಸಲು ಬಂದಿದ್ದರು. ಚುನಾವಣೆಗಿನ್ನು 15 ದಿನವಿತ್ತಷ್ಟೇ. ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಬೆನಜೀರ್ ಬುಟ್ಟೋ ಅವರ ಮೇಲೆ ಇಸ್ಲಾಮಿಕ್ ಉಗ್ರರು ಗುಂಡಿನ ದಾಳಿ ನಡೆಸಿ ಕೊಂದರು. ಗುಂಡಿನ ದಾಳಿ ನಡೆದ ಬೆನ್ನಲ್ಲೇ ನಡೆದ ಬಾಂಬ್ ಸ್ಫೋಟ 23 ಜನರನ್ನ ಬಲಿ ತೆಗೆದುಕೊಳ್ತು. ಅವತ್ತಿಗೆ ಅಲ್ ಖೈದಾ ಉಗ್ರ ಸಂಘಟನೆಯ ಎರಡನೇ ನಾಯಕನಾಗಿದ್ದ ಅಲ್ ಜವಾಹಿರಿ ಈ ಹತ್ಯೆಗೆ ಆದೇಶ ನೀಡಿದ್ದ.
1993ರಲ್ಲಿ ಶ್ರೀಲಂಕಾದ ನಾಆಯಕ ರಣಸಿಂಘೆ ಪ್ರೇಮದಾಸ, 1995ರಲ್ಲಿ ಇಸ್ರೇಲ್ ಪ್ರಧಾನಿ ಯಿಟ್ ಜಾಕ್ ರಾಬಿನ್, 2001ರಲ್ಲಿ ನೇಪಾಳದ ರಾಜ ಬೀರೇಂದ್ರ ಮತ್ತು ಅವರ ಇಡೀ ಕುಟುಂಬವನ್ನ ಸಾಮೂಹಿಕ ಹತ್ಯೆ ಮಾಡಲಾಯ್ತು. ಅಧಿಕಾರ, ಧ್ವೇಷ, ರಾಜಕೀಯ, ಹಣದ ಕಾರಣಕ್ಕೆ ಈ ಜಗತ್ತಿನಲ್ಲಿ ಹಲವು ಪ್ರಮುಖ ನಾಯಕರ ಹತ್ಯೆಗಳು ನಡೆದು ಹೋಗಿವೆ.