India@75: ಬ್ರಿಟಿಷರಿಗೆ ದುಃಸ್ವಪ್ನವಾಗಿದ್ದ ಹೋರಾಟ ಸ್ಥಳ ಸಂಗೂರು
ಬ್ರಿಟಿಷರ ಬಾಂಬ್ ಅನ್ನು ಒತ್ತಿ ಹಿಡಿದು ಕೈ ಕಳೆದುಕೊಂಡಿದ್ದ ಸ್ವಾತಂತ್ರ್ಯ ಸೇನಾನಿ ಕರಿಯಪ್ಪ
ನಾರಾಯಣ ಹೆಗಡೆ
ಹಾವೇರಿ(ಜು.27): ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು, ಹೋರಾಟಕ್ಕೆ ರೂಪಕೊಟ್ಟ ಮೌಲ್ಯಗಳು ಹಾವೇರಿ ಜಿಲ್ಲೆಯಲ್ಲಿ ಸಮೃದ್ಧವಾಗಿವೆ. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಆತ್ಮಾರ್ಪಣೆಯ ರೋಮಾಂಚಕ ಕಥೆಗಳಲ್ಲಿ ಸಂಗೂರು ವಿಶಿಷ್ಟ ಸ್ಥಾನ ಪಡೆದಿದೆ. ಇಲ್ಲಿನ ಕರಿಯಪ್ಪನವರ ಹೋರಾಟ ರೋಮಾಂಚನಕಾರಿಯಾಗಿದೆ. ಶಾಂತಿ ಮತ್ತು ಕ್ರಾಂತಿಗಳ ಸಂಗಮವೆನಿಸಿದ್ದ ಸಂಗೂರು ಸ್ವಾತಂತ್ರ್ಯ ಹೋರಾಟಕ್ಕೆ ಕರಿಯಪ್ಪನವರನ್ನು ಕೊಡುಗೆಯಾಗಿ ನೀಡಿದೆ. ಸಂಗೂರಿನ ಕರಿಯಪ್ಪ ಯರೇಶಿಮೆ ಅವರ ಪಾತ್ರ ಅಸಹಕಾರ ಚಳವಳಿ, ವೈಯಕ್ತಿಕ ಕಾಯಿದೆ ಭಂಗ ಚಳವಳಿಗಳ ಪ್ರಾತಿನಿಧಿಕ ಸತ್ಯಾಗ್ರಹದಲ್ಲಿ ಹಿರಿದಾಗಿತ್ತು. ಸುಮಾರು 10 ವರ್ಷಗಳ ಕಾಲ ಸೆರೆವಾಸ ಕಂಡ ಕರಿಯಪ್ಪ, ದಶರಥ ಎಂಬ ಗುಪ್ತನಾಮದಿಂದ ಬ್ರಿಟಿಷರಿಗೆ ತಲೆನೋವಾಗಿದ್ದರು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ತಂಡ:
ಬ್ಯಾಡಗಿ ರೈಲು ನಿಲ್ದಾಣ ಭಸ್ಮ, ಮಾಸೂರು ಚಾವಡಿ ಸುಟ್ಟಿದ್ದು, ಅರಣ್ಯ ಅಧಿಕಾರಿಯ ಹಣ ಕೊಳ್ಳೆ ಹೊಡೆದಿದ್ದು, ಸರ್ಕಾರಿ ದಾಖಲೆಗಳ ನಾಶ, ಅಂಚೆ ತಂತಿ ಕತ್ತರಿಸಿದ್ದು ಹೀಗೆ ಹತ್ತಾರು ಬಗೆಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರನ್ನು ಹುಡುಕಿಕೊಟ್ಟರೆ .500 ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿ, ಜಿಲ್ಲೆಯ ವಿವಿಧೆಡೆ ಈ ಕುರಿತು ಭಿತ್ತಿಪತ್ರಗಳನ್ನು ಅಂಟಿಸುವ ವ್ಯವಸ್ಥೆ ಮಾಡಿತ್ತು. ಇದಕ್ಕೆ ಜಗ್ಗದ ಸಂಗೂರ ಕರಿಯಪ್ಪ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹೋರಾಟ ಮಾಡಿ ಬ್ರಿಟಿಷರನ್ನು ಕಾಡಿದ್ದರು.
India@75: ಬ್ರಿಟಿಷರ ನಿದ್ದೆಗೆಡಿಸಿದ್ದ ಕೋಗನೂರಿನ ವೀರರು
ಸ್ವಾತಂತ್ರ್ಯಕ್ಕಾಗಿ ಕೈ ಕಳೆದುಕೊಂಡ ಕರಿಯಪ್ಪ:
ಸಂಗೂರ ಕರಿಯಪ್ಪನವರ ತಂಡ ಜೋಳದ ಹೊಲದಲ್ಲಿ, ಪೊದೆ, ಕಾನುಗಳಲ್ಲಿ ಬೀಡುಬಿಡುತ್ತಿತ್ತು. 1943ರಲ್ಲಿ ಒಮ್ಮೆ ಹಿರೇಕೆರೂರು ತಾಲೂಕು ಸುಣಕಲ್ಲಬಿದರಿನ ಜೋಳದ ಹೊಲದಲ್ಲಿ ಅಡಗಿರುವ ಮಾಹಿತಿ ಬ್ರಿಟಿಷರ ಕಿವಿಗೆ ಬಿತ್ತು. ಆಗ ಪೊಲೀಸರು 15 ಎಕರೆ ಹೊಲದ ಸುತ್ತ ಕಾವಲು ಹಾಕಿದರು. ಹೊಲದಲ್ಲಿ ಬಾಂಬ್ ಇಟ್ಟರು. ಬಾಂಬ್ ಸಿಡಿದರೆ ತಾವೆಲ್ಲ ಪೊಲೀಸರ ವಶವಾಗುವುದು ಖಚಿತ ಎಂದರಿತ ಕರಿಯಪ್ಪನವರು ಬಾಂಬನ್ನು ಕೈಯಲ್ಲಿ ಒತ್ತಿ ಹಿಡಿದರು. ಎಲ್ಲರೂ ಮುಂದೆ ಹೋದ ಬಳಿಕ ಕೈ ಬಿಟ್ಟು ಓಡಿದರು. ಆದರೂ ಬಾಂಬ್ ಸಿಡಿದು ಬಲಗೈಯ ಮುಂಗೈ ಛಿದ್ರಗೊಂಡಿತು.
ಗರ್ಭಿಣಿ ವೇಷ ಧರಿಸಿ ಬ್ರಿಟಿಷರಿಗೆ ಚಳ್ಳೆಹಣ್ಣು:
ಕರಿಯಪ್ಪನವರು ಛಿದ್ರಗೊಂಡ ಕೈಗೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿತ್ತು. ದಾವಣಗೆರೆಯ ವೈದ್ಯರ ಬಳಿ ಹೋಗಲು ನಿರ್ಧರಿಸಿದ್ದರು. ಬ್ರಿಟಿಷ್ ಪೊಲೀಸರ ಕಣ್ಣು ತಪ್ಪಿಸಲು ಚಕ್ಕಡಿಯೊಂದರಲ್ಲಿ ಹೊಟ್ಟೆಹಾಗೂ ಮುಖದ ಸುತ್ತ ಬಟ್ಟೆಸುತ್ತಿ ಗರ್ಭಿಣಿಯಂತೆ ಮಲಗಿಕೊಂಡು ಮೂವರು ಹೆಂಗಸರು, ಮೂವರು ಗಂಡಸರೊಂದಿಗೆ ಆಸ್ಪತ್ರೆಗೆ ತೆರಳಿದರು. ಮಾರ್ಗಮಧ್ಯೆ ಪೊಲೀಸರು ತಡೆದಾಗ ಕರಿಯಪ್ಪನವರು ಗರ್ಭಿಣಿಯಂತೆ ನರಳಾಡಿದರೆ, ಉಳಿದವರು ಹೆರಿಗೆ ನೋವು ಎನ್ನುತ್ತ ಆಸ್ಪತ್ರೆಗೆ ಕರೆತಂದರು. ಗಂಭೀರ ಗಾಯದ ಕಾರಣ ವೈದ್ಯರು ಮುಂಗೈ ಕತ್ತರಿಸಿ ಚಿಕಿತ್ಸೆ ನೀಡಿದರು.
Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!
ವಿಷಯ ಪೊಲೀಸರಿಗೆ ಗೊತ್ತಾದಾಗ ಕರಿಯಪ್ಪನವರು ಆಸ್ಪತ್ರೆಯ ಹಿಂಬಾಗಿಲಿನಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾಯಿತು. ಮರುದಿನ ಕರಿಯಪ್ಪನವರ ಮೈಗೆ ಬಣ್ಣ ಬಳಿದ ಪೊಲೀಸರು ದಾವಣಗೆರೆಯಲ್ಲಿ ಮೆರವಣಿಗೆ ಮಾಡಿಕೊಂಡು ಒಯ್ದರು. ತುಂಡಾದ ಕೈಯ ನೋವು, ಬ್ರಿಟಿಷರ ಹಿಂಸೆ ಅನುಭವಿಸುತ್ತಲೇ ಜೈಲು ಸೇರಿಸಿದರು. ಬಳಿಕ ಗಾಂಧೀಜಿಯವರ ಅಣತಿಯಂತೆ ತಡಸ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿ ಗ್ರಾಮ ಸ್ವರಾಜ್ಯದ ಗಾಂಧೀಜಿ ಕನಸನ್ನು ನನಸಾಗಿಸಲು ದುಡಿದು ಮೌನ ಸೇವಕ ಎಂದು ಕರೆಸಿಕೊಂಡರು. 20-7-1981ರಲ್ಲಿ ಇಹಲೋಕ ತ್ಯಜಿಸಿದರು.
ತಲುಪುವುದು ಹೇಗೆ?
ಹಾವೇರಿ ತಾಲೂಕು ಸಂಗೂರು ಗ್ರಾಮದಲ್ಲಿ ಸಂಗೂರು ಕರಿಯಪ್ಪನವರ ಪುತ್ಥಳಿ ಸ್ಥಾಪಿಸಲಾಗಿದ್ದು, ಇಲ್ಲಿಗೆ ತೆರಳಬೇಕೆಂದರೆ ಹಾವೇರಿಯಿಂದ ಹಾನಗಲ್ಲ ಮಾರ್ಗದಲ್ಲಿ 10 ಕಿ.ಮೀ. ದೂರ ಕ್ರಮಿಸಬೇಕು. ಬಸ್ ವ್ಯವಸ್ಥೆಯಿದೆ.