ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಾಕಿ ಸ್ಪರ್ಧೆಯಲ್ಲಿ ಐರ್ಲೆಂಡ್ ಎದುರು ಭಾರತ ತಂಡವು ಗೆಲುವು ಸಾಧಿಸುವುದರೊಂದಿಗೆ ಬಹುತೇಕ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನ ಕಂಚು ವಿಜೇತ ಭಾರತ ಪುರುಷರ ಹಾಕಿ ತಂಡ, ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಮಂಗಳವಾರ ಐರ್ಲೆಂಡ್‌ ವಿರುದ್ಧ ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್‌ 13 ಹಾಗೂ 19ನೇ ನಿಮಿಷಗಳಲ್ಲಿ ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಇದರೊಂದಿಗೆ ಭಾರತ ಆಡಿರುವ 3 ಪಂದ್ಯಗಳಲ್ಲಿ 2 ಜಯ, 1 ಡ್ರಾದೊಂದಿಗೆ 7 ಅಂಕ ಸಂಪಾದಿಸಿದ್ದು, ‘ಬಿ’ ಗುಂಪಿನಲ್ಲಿ ಅಗ್ರ 2 ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಗುರುವಾರ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ಬಳಿಕ ಕೊನೆ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಗುಂಪಿನಲ್ಲಿ 6 ತಂಡಗಳಿದ್ದು, ಅಗ್ರ-4 ತಂಡಗಳು ಕ್ವಾರ್ಟರ್‌ ಪ್ರವೇಶಿಸಲಿವೆ. ಭಾರತ ಕೊನೆ 2 ಪಂದ್ಯಗಳಲ್ಲಿ ಸೋತರೂ ಕ್ವಾರ್ಟರ್‌ಗೇರುವ ಸಾಧ್ಯತೆಯಿದೆ.

Scroll to load tweet…

ಕೆಟ್ಟ ದಿನ , ಕೆಟ್ಟ ಸೋಲು: ಅಷ್ಟಕ್ಕೆ ಆ ಹೆಣ್ಣುಮಗಳ ಮೇಲೇಕೆ ಇಷ್ಟೊಂದು ನಿಂದನೆ?

ಬಾಕಿಂಗ್: ಪ್ರಿ ಕ್ವಾರ್ಟರ್‌ನಲ್ಲೇ ಅಮಿತ್‌ ಗೆ ಸೋಲಿನ ಆಘಾತ!

ಮಾಜಿ ವಿಶ್ವ ನಂ.1, ಭಾರತದ ತಾರಾ ಬಾಕ್ಸರ್ ಅಮಿತ್ ಪಂಘಲ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ. ಪುರುಷರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ 2019ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಅಮಿತ್, ಮಂಗಳವಾರ ಪ್ರಿ ಕ್ವಾರ್ಟರ್ ನಲ್ಲಿ ಝಾಂಬಿಯಾದ ಪ್ಯಾಟ್ರಿಕ್ ಚಿನ್ ಯೆಂಬಾ ವಿರುದ್ಧ 1-4 ಅಂತರದಲ್ಲಿ ಪರಾಭವಗೊಂಡರು. 

ಪ್ಯಾಟ್ರಿಕ್ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ್ದರಿಂದ ಅಮಿತ್ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟರು. ಕೊನೆಯಲ್ಲಿ ಅಮಿತ್ ಆಕ್ರಮಣಕಾರಿ ಆಟವಾಡಿದರೂ ಗೆಲುವು ಒಲಿಯಲಿಲ್ಲ. ಇನ್ನು ಮಹಿಳೆಯರ 57 ಕೆ.ಜಿ. ವಿಭಾಗ ದಲ್ಲಿ ಜ್ಯಾಸ್ಟಿನ್ ಲಂಬೋರಿಯಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾರೂ ಮಾಡದ ಸಾಧನೆ ಮಾಡಿದ ಮನು ಭಾಕರ್..!

ರೋಯಿಂಗ್: ಕ್ವಾರ್ಟರ್‌ನಲ್ಲಿ ಬಾಲ್‌ರಾಜ್‌ಗೆ ಐದನೇ ಸ್ಥಾನ

ಪ್ಯಾರಿಸ್ ಒಲಿಂಪಿಕ್ಸ್‌ನ ರೋಯಿಂಗ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಬಾಲ್ ರಾಜ್ ಪನ್ವಾರ್, ಪುರುಷರ ಸ್ಕಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 25 ವರ್ಷದ ಬಾಲ್‌ರಾಜ್ ಅವರು ಕ್ವಾರ್ಟರ್ ಫೈನಲ್ ಹೀಟ್ಸ್‌ನಲ್ಲಿ 7 ನಿಮಿಷ 5.10 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಪ್ರತಿ ಹೀಟ್ ನಲ್ಲಿ ಅಗ್ರ-3 ಸ್ಥಾನ ಪಡೆದ ಸ್ಪರ್ಧಿಗಳು ಸೆಮಿಫೈನಲ್ ಪ್ರವೇಶಿಸಿದರು.

ಇದರೊಂದಿಗೆ ಪದಕದ ರೇಸ್‌ನಿಂದ ಹೊರಬಿದ್ದಿರುವ ಬಾಲ್‌ರಾಜ್, ಇನ್ನು 13-24ನೇ ಸ್ಥಾನಕ್ಕಾಗಿ ಆಡಬೇಕಿದೆ.