ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಗ್ರೇಟ್ ಬ್ರಿಟನ್ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವಿನ ನಗೆ ಬೀರಿದೆ.

ಪ್ಯಾರಿಸ್: ಕ್ರೀಡಾಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಭಾರತ ಹಾಗೂ ಗ್ರೇಟ್ ಬ್ರಿಟನ್ ತಂಡಗಳ ನಡುವಿ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲೇ ರೆಡ್ ಕಾರ್ಡ್‌ ಪಡೆದು ಕೇವಲ 10 ಆಟಗಾರರೊಂದಿಗೆ ಬ್ರಿಟೀಷ್ ತಂಡದ ಎದುರು ಸೆಣಸಾಡಿದ ಭಾರತ ತಂಡವು ಪೆನಾಲ್ಟಿ ಶೂಟ್ ಔಟ್ ಲ್ಲಿ 4-2 ಅಂತರದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಹೌದು ಅಮಿತ್ ರೋಹಿದಾಸ್ ಆರಂಭದಲ್ಲೇ ಆಕ್ರಮಣಕಾರಿ ಆಟವಾಡುವ ಯತ್ನದಲ್ಲಿ ರೆಡ್ ಕಾರ್ಡ್ ಪಡೆದು ಹೊರನಡೆದರು. ಇದರ ಬೆನ್ನಲ್ಲೇ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ 1-0 ಮುನ್ನಡೆ ಗಳಿಸುವಂತೆ ಮಾಡಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ನ ಲೀ ಮೋರ್ಟನ್‌ ಗೋಲು ಬಾರಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು. 

ಒಲಿಂಪಿಕ್ಸ್‌ ಹಾಕಿ: ಕ್ವಾರ್ಟರ್‌ನಲ್ಲಿ ಭಾರತಕ್ಕಿಂದು ಬಲಿಷ್ಠ ಬ್ರಿಟನ್‌ ಸವಾಲು

ಮೊದಲಾರ್ಧದ ಅಂತ್ಯದ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದವು. ಇನ್ನು ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಬಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ ಯಶಸ್ಸು ದಕ್ಕಲಿಲ್ಲ. ಹೀಗಾಗಿ ಅಂತಿಮವಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟ್ ಔಟ್ ಮೊರೆಹೋಗಲಾಯಿತು.

Scroll to load tweet…

ಹೇಗಿತ್ತು ಪೆನಾಲ್ಟಿ ಶೂಟೌಟ್: ಮೊದಲಿಗೆ ಗ್ರೇಟ್ ಬ್ರಿಟನ್ ಪರ ಜೇಮ್ಸ್ ಆಲ್ಬ್ರೇ ಮೊದಲ ಗೋಲು ಬಾರಿಸಿದರು. ಇನ್ನು ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಇಂಗ್ಲೆಂಡ್‌ನ ವೆಲ್ಲೇಸ್ ಗೋಲು ಬಾರಿಸುವ ಮೂಲಕ 2-1ರ ಮುನ್ನಡೆ ಸಾಧಿಸುವಂತೆ ಮಾಡಿದರು. ಇನ್ನು ಭಾರತ ಪರ ಸುಖ್‌ಜೀತ್ ಸಿಂಗ್ ಗೋಲು ಬಾರಿಸಿ 2-2ರ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಮೂರನೇ ಪ್ರಯತ್ನದಲ್ಲಿ ಕೋನೂರ್ ವಿಲಿಯಮ್ಸನ್ ಅವರು ಗೋಲು ಗಳಿಸಲು ವಿಫಲವಾದರು. ಬಳಿಕ ಲಲಿತ್ ಡ್ರಿಬಲ್ ಮೂಲಕ ಗೋಲು ಬಾರಿಸಿದರು. ಇದರ ಬೆನಲ್ಲೇ ರೂಪರ್ ಗೋಲು ಬಾರಿಸುವುದನ್ನು ಶ್ರೀಜೇಶ್ ಮತ್ತೊಮ್ಮೆ ತಡೆದರು. ಇನ್ನು ರಾಜ್‌ಕುಮಾರ್ ಪಾಲ್ ಗೋಲು ಬಾರಿಸುವ ಮೂಲಕ ಭಾರತ ತಂಡವನ್ನು ರೋಚಕವಾಗಿ ಸೆಮಿಫೈನಲ್‌ಗೆ ಕೊಂಡೊಯ್ಯದರು.