ಕೆಲಸದ ಮಧ್ಯೆ ಯೋಗನಿದ್ರೆ ಮಾಡಿ ರಿಲ್ಯಾಕ್ಸ್ ಆಗ್ತಾರೆ ಸುಂದರ್ ಪಿಚೈ, ನೀವ್ಯಾಕೆ ಟ್ರೈ ಮಾಡ್ಬಾರ್ದು?
ಗೂಗಲ್ ಸಿಇಒ ಸುಂದರ್ ಪಿಚೈ, ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಸಹಾಯಕವಾಗುವ ತಮ್ಮ NSDR ತಂತ್ರದ ಬಗ್ಗೆ ಇತ್ತೀಚೆಗೆ ವಿವರಿಸಿದ್ದಾರೆ. ನೀವೂ ಅದರ ಲಾಭ ಪಡೆಯಿರಿ.
ಗೂಗಲ್ (Google) ಮತ್ತು ಆಲ್ಫಾಬೆಟ್ (Alphabet) ಕಂಪನಿಯ ಸಿಇಒ , ಭಾರತೀಯ ಮೂಲದ ಸುಂದರ್ ಪಿಚೈ (Sundar Pichai) ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ, ತಾನು ತೀವ್ರ ಒತ್ತಡಕ್ಕೆ ಒಳಗಾದಾಗ ಮತ್ತು ಕೆಲಸದ ಸ್ಥಳದಲ್ಲಿ ವಿಶ್ರಾಂತಿ ಬೇಕಾದಾಗ, 'ನಿದ್ರೆಯಲ್ಲದ ಆಳ ವಿಶ್ರಾಂತಿ' (ನಾನ್ ಸ್ಲೀಪ್ ಡೀಪ್ ರೆಸ್ಟ್- Non Sleep Deep Rest- NSDR) ಮಾಡುತ್ತೇನೆ ಎಂದು ಹೇಳಿದರು. ಇದದು ಒಂದು ಬಗೆಯ ಧ್ಯಾನ (Meditation) ತಂತ್ರವೆಂದೂ ಅವರೇ ಹೇಳಿದ್ದಾರೆ. ಅದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಪಿಚೈ ತಮ್ಮ ವಿಶ್ರಾಂತಿಯ ಬಗ್ಗೆ ಹೇಳಿದ್ದು ಹೀಗೆ- 'ಧ್ಯಾನದ ಸಮಯಕ್ಕಿಂತಲೂ, ಅದರ ಮೌಲ್ಯವನ್ನು ನಾನು ನೋಡುತ್ತೇನೆ. ಆದರೆ ಅದನ್ನು ಮಾಡಲು ಕಷ್ಟಪಡುತ್ತೇನೆ. ವಾಕಿಂಗ್‌ಗೆ (Walking) ಆದ್ಯತೆ ಕೊಡುತ್ತೇನೆ. ನಡಿಗೆ ನನಗೆ ತುಂಬಾ ಸಹಾಯಕವಾಗಿದೆ. ನಡೆಯುವಾಗ ಅಥವಾ ಹೆಜ್ಜೆ ಹಾಕುವಾಗ ಯೋಚಿಸುವುದು ತುಂಬಾ ಸುಲಭ ಎಂದು ನಾನು ಕಂಡುಕೊಂಡಿದ್ದೇನೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲವೊಮ್ಮೆ ನನ್ನ ನಾಯಿಯನ್ನು ವಾಕ್‌ಗೆ ಕರೆದೊಯ್ಯುತ್ತಿದ್ದಾಗಲೂ ನಾನು ವಿಶ್ರಾಂತಿ ಕಂಡುಕೊಂಡಿದ್ದೇನೆ. ಆಗ ಪಾಡ್‌ಕಾಸ್ಟ್‌ಗಳನ್ನು ಕೇಳುವ ಮೂಲಕ ನಾನು ವಿಶ್ರಾಂತಿ ಪಡೆಯುತ್ತಿದ್ದೆ. ಇನ್ನು, ಧ್ಯಾನ ಮಾಡಲು ಕಷ್ಟವಾಗುತ್ತಿದ್ದಾಗ ನಾನು ಯೂಟ್ಯೂಬ್‌ಗೆ ಹೋಗಿ, NSDR ವೀಡಿಯೊಗಳನ್ನು ಹುಡುಕಿ ಅದರ ಪ್ರಯೊಜನ ಪಡೆದುಕೊಳ್ಳುತ್ತಿದ್ದೆ.' 2004ರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಮೊದಲ ಬಾರಿಗೆ ಗೂಗಲ್‌ಗೆ ಸೇರಿದ ಸುಂದರ್ ಪಿಚೈ ಈಗ ಅದರ CEO.
Walk After Dinner: ರಾತ್ರಿ ಊಟ ಮಾಡಿ ನಡೆದ್ರೆ ಆರೋಗ್ಯ ಹದಗೆಡೋ ಭಯವಿಲ್ಲ
NSDR ಅಂದ್ರೆ ಮುಖ್ಯವಾಗಿ ಯಾವುದೇ ಸ್ಥಿತಿಯಲ್ಲಿ ಇದ್ದಾಗಲೂ ಆಳವಾದ ವಿಶ್ರಾಂತಿ ಅನುಭವಿಸುವ ಒಂದು ತಂತ್ರ. ಇದಕ್ಕೆ ನೀವು ಮಲಗಲೇಬೇಕೆಂದಿಲ್ಲ ಅಥವಾ ನಿದ್ರೆ ಮಾಡಬೇಕೆಂದಿಲ್ಲ. ಚಲಿಸದೆ ಇರುವುದು ಮತ್ತು ನಿಮ್ಮ ಉಸಿರಾಟದ ಏರಿಳಿತ ಮತ್ತು ದೇಹದ ವಿವಿಧ ಭಾಗಗಳಲ್ಲಿನ ಸಂವೇದನೆಗಳ ಬಗ್ಗೆ ನಿಮ್ಮ ಅರಿವನ್ನು ಗಮನಿಸುವುದು ಇದರಲ್ಲಿ ಮುಖ್ಯ.
NSDRನ ಗುರಿಯು ಅತ್ಯಂತ ಆಳವಾದ, ದೇಹ ಮತ್ತೆ ಪುನಶ್ಚೇತನ ಪಡೆಯುವ ವಿಶ್ರಾಂತಿಯ ಮಟ್ಟವನ್ನು ಸಾಧಿಸುವುದು. ಇದಕ್ಕೆ ನಿದ್ರೆಯ ಅಗತ್ಯವಿಲ್ಲ. ಆಂಡ್ರ್ಯೂ ಡಿ. ಹ್ಯೂಬರ್‌ಮ್ಯಾನ್ ಎಂಬ ವೈದ್ಯ ಧ್ಯಾನ ಅಥವಾ ಸಾವಧಾನತೆಯ ಅಭ್ಯಾಸಗಳ ಬಗ್ಗೆ ತಿಳಿದಿಲ್ಲದ ಜನರನ್ನು ಆಕರ್ಷಿಸುವ ಪ್ರಯತ್ನದಲ್ಲಿ NSDR ಎಂಬ ಪದವನ್ನು ಮೊದಲು ಸೃಷ್ಟಿಸಿದರು. ಹ್ಯೂಬರ್‌ಮ್ಯಾನ್ ಅವರು ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಲ್ಯಾಬ್ ಮುಖ್ಯಸ್ಥರು. ಅವರು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ, ಗಾಯ ಅಥವಾ ಕಾಯಿಲೆಯಿಂದ ಹಾನಿಗೊಳಗಾದ ನರಮಂಡಲವನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಅಧ್ಯಯನ ಮಾಡುತ್ತಾರೆ. ಅವರು ಎನ್‌ಎಸ್‌ಡಿಆರ್‌ನ ದೀರ್ಘಾವಧಿಯ ಅಭ್ಯಾಸಕಾರ. "ನಾನು ವೈಯಕ್ತಿಕವಾಗಿ 10 ವರ್ಷಗಳಿಂದ ಪ್ರತಿದಿನ NSDR ಬಳಸುತ್ತಿದ್ದೇನೆ. ನ್ಯೂರೋಪ್ಲ್ಯಾಸ್ಟಿಟಿಯನ್ನು ಚೇತರಿಸಿಕೊಳ್ಳಲು ಹೆಚ್ಚು ಶಕ್ತಿಶಾಲಿ ವಿಧಾನಗಳಲ್ಲಿ ಇದು ಒಂದು ಎನ್ನುತ್ತಾರೆ ಅವರು. ನ್ಯೂರೋಪ್ಲ್ಯಾಸ್ಟಿಸಿಟಿ ಎಂದರೆ ಅನುಭವಕ್ಕೆ ಪ್ರತಿಕ್ರಿಯೆಯಾಗಿ ಬದಲಾಗುವ ಮೆದುಳಿನ ಸಾಮರ್ಥ್ಯ.
Health Tips: ಹೊಟ್ಟೆಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ. ಇದು ಖಿನ್ನತೆಗೂ ಕಾರಣವಾಗುತ್ತೆ !
ಯೋಗನಿದ್ರೆ (Yoga Nidra)
NSDR ಭಾರತೀಯರಿಗೆ ಹೊಸದೇನಲ್ಲ. ಸಂಸ್ಕೃತದಲ್ಲಿ ಇದನ್ನು ಯೋಗನಿದ್ರೆ ಎಂದು ಕರೆಯಲಾಗಿದೆ. "ಉಸಿರಾಟವನ್ನು ಬಿಡದೇ ಗಮನಿಸುವುದು, ದೃಷ್ಟಿಯ ಮೂಲಕ ಶಾಂತ ಸ್ಥಿತಿಯನ್ನು ಸ್ವಯಂ-ಪ್ರಚೋದನೆಯ ಮೂಲಕ ಪಡೆಯುವುದು ಯೋಗನಿದ್ರೆಯ ವಿಶಿಷ್ಟ ಲಕ್ಷಣ. ನಮ್ಮ ಆಲೋಚನೆಗಳು ನಮ್ಮ ದೃಷ್ಟಿ ಮತ್ತು ಉಸಿರಾಟವನ್ನು ಅನುಸರಿಸುತ್ತವೆ. ನಿಮ್ಮ ಆಲೋಚನೆಗಳನ್ನು ಬಿಡದೇ ಗಮನಿಸುತ್ತಿರಿ. ಆದರೆ ಅವುಗಳನ್ನು ನಿಯಂತ್ರಿಸಲು ಮೂಂದಾಗಬೇಡಿ. ಸಾಮಾನ್ಯವಾಗಿ ನಿಮ್ಮ ಮೆದುಳು ದಿನದ ೫೦ ಶೇಕಡಾ ಕಾಲ ಯಾವುದೇ ಉಪಯೋಗವಿಲ್ಲದ, ಋಣಾತ್ಮಕ ಯೋಚನೆಗಳನ್ನು ಮಾಡುತ್ತಿರುತ್ತದೆ. ಇವುಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಬೇಡಿ. ಇದು ಯೋಗನಿದ್ರೆಯ ಮೊದಲ ಹಂತ.
ಎರಡನೇ ಹಂತದಲ್ಲಿ, ನೀವು ನಿಮ್ಮ ದೇಹಕ್ಕೆ ಆಳವಾದ ವಿಶ್ರಾಂತಿಯ ಸಜೆಷನ್‌ಗಳನ್ನು ಕೊಡಬೇಕು. ಯೋಗ ಮಾಡುವವರಿಗೆ, ಶವಾಸನ ಮಾಡುವವರಿಗೆ ಇದರ ಅರಿವು ಇರುತ್ತದೆ. ದೇಹದ ಎಲ್ಲ ಅಂಗಾಂಗಗಳನ್ನೂ ಮಾನಸಿಕವಾಗಿ ಸ್ಪರ್ಶಿಸಿ ಅವುಗಳನ್ನು ಸಮಾಧಾನದ ಸ್ಥಿತಿಗೆ, ಶಾಂತಸ್ಥಿತಿಗೆ ತರುವುದು ಈ ಹಂತದಲ್ಲಿದೆ. ಒಂದು ಬಾರಿಗೆ ಒಂದು ಅಂಗವನ್ನು ಶಾಂತವಾಗಿಸಬೇಕು.
ಮೂರನೇ ಹಂತದಲ್ಲಿ ಈ ಎರಡೂ ಹಂತಗಳನ್ನು ಜೋಡಿಸಲು ಯತ್ನಿಸಬೇಕು. ಇದು ದೇಹದ ಪರಿಪೂರ್ಣ ವಿಶ್ರಾಂತಿ ಹಾಗೂ ಮೆದುಳಿನ ಆಲೋಚನೆಗಳಿಗೆ ಪರಿಪೂರ್ಣ ವಿಶ್ರಾಂತಿ ನೀಡುತ್ತದೆ. ಅಂದರೆ, ವಿಶ್ರಾಂತ ಸ್ಥಿತಿಯಲ್ಲಿ ನೀವು ನಿಮ್ಮ ಆಲೋಚನೆಗಳನ್ನು ಹೆಚ್ಚು ಹೆಚ್ಚು ಗಮನಿಸುತ್ತ ಹೋದಂತೆ, ಋಣಾತ್ಮಕತೆ ನಿಧಾನವಾಗಿ ಕಡಿಮೆಯಾಗುತ್ತ ಹೋಗುತ್ತದೆ ಹಾಗೂ ಧನಾತ್ಮಕತೆ ಬೆಳೆಯುತ್ತ ಹೋಗುತ್ತದೆ. ಇದು ಮೆದುಳಿಗೆ ಪೂರ್ಣ ವಿಶ್ರಾಂತಿ ನೀಡಿ ಮುಂದಿನ ಕೆಲಸಗಳಿಗೆ ಸಜ್ಜಾಗಿಸುತ್ತದೆ.
Health Tips : ಕಿವಿ ಹಣ್ಣಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ
ಸುಂದರ್ ಪಿಚೈ ಸಾಮಾನ್ಯವಾಗಿ ಪ್ರತಿ ರಾತ್ರಿ ಆರೂವರೆಯಿಂದ ಏಳು ಗಂಟೆಗಳ ನಿದ್ದೆ ಮಾಡುತ್ತಾರೆ. 6:45ರಿಂದ 7:30ರವರೆಗೆ ಧ್ಯಾನ ಮಾಡುತ್ತಾರೆ. ನಂತರ ಬಿಸಿಯಾದ ಟೋಸ್ಟ್, ಮೊಟ್ಟೆ ಸೇವಿಸುತ್ತಾರೆ. ಸುದ್ದಿ ಓದುತ್ತಾರೆ. ೧೫ ವರ್ಷಗಳಿಂದ ಇದೇ ದಿನಚರಿ ಅನುಸರಿಸುತ್ತಿದ್ದಾರಂತೆ.