Asianet Suvarna News Asianet Suvarna News

ನಿದ್ರೆ ಕಸಿದ ಲಾಕ್‍ಡೌನ್; ರಾತ್ರಿ ನಿದ್ರೆ ಬರುತ್ತಿಲ್ಲ ಎನ್ನೋದೇ ಬಹುತೇಕರ ಅಳಲು

ಲಾಕ್‍ಡೌನ್, ಕೊರೋನಾ ಭೀತಿ ಪರಿಣಾಮ ಮನೆಯಿಂದಲೇ ಕೆಲಸ ಮಾಡುವವರಲ್ಲಿ ಒತ್ತಡ ಹೆಚ್ಚುತ್ತಿರುವ ಜೊತೆಗೆ ನಿದ್ರೆ ಕೂಡ ದೂರವಾಗುತ್ತಿದೆ ಎಂಬುದನ್ನು ಇತ್ತೀಚೆಗಿನ ಅಧ್ಯಯನ ಬಹಿರಂಗಪಡಿಸಿದೆ.
Lock down reduces sleeping time due to other activities
Author
Bangalore, First Published Apr 15, 2020, 5:57 PM IST
ಮನೆಯಿಂದ ಕೆಲ್ಸ ಮಾಡೋದು ಎಷ್ಟು ಕಷ್ಟ ಎಂಬುದು ಈಗಾಗಲೇ ಬಹುತೇಕರಿಗೆ ಅರ್ಥವಾಗಿರುತ್ತೆ. ಲಾಕ್‍ಡೌನ್ ಪರಿಣಾಮ ಮನೆ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಹೀಗಾಗಿ ಆಫೀಸ್ ಕೆಲಸದ ಜೊತೆಗೆ ಮನೆಕೆಲಸಗಳ ಹೊರೆಯೂ ಹೆಗಲೇರಿದೆ. ಇನ್ನು ಮಕ್ಕಳಿಗೆ ಸ್ಕೂಲ್ ಕೂಡ ಇಲ್ಲ. ಡೇ ಕೇರ್‍ಗಳಿಗೂ ಬೀಗ ಬಿದ್ದಿದೆ. ಹೀಗಾಗಿ ಮನೆಯಲ್ಲೇ ಅವರನ್ನು ನೋಡಿಕೊಳ್ಳಬೇಕಿದೆ. ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸೋದು ಅಂದ್ಕೊಂಡಷ್ಟು ಸುಲಭವೇನಲ್ಲ. ಆಫೀಸ್ ಕೆಲಸದೊತ್ತಡದ ಜೊತೆಗೆ ಮನೆಗೆಲಸ ಅನೇಕರ ನೆಮ್ಮದಿಯ ಜೊತೆಗೆ ನಿದ್ರೆಯನ್ನು ಕೂಡ ಕೆಡಿಸಿದೆ.

ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಹೀಗೆ ಕಾಪಾಡಿ..!

ಹೆಚ್ಚಿದ ನಿದ್ರಾಹೀನತೆ
ಇತ್ತೀಚೆಗೆ ಬೆಂಗಳೂರು ಮೂಲದ ಸ್ಲೀಫ್ ಸೊಲ್ಯೂಷನ್ ಸ್ಟಾರ್ಟ್‍ಅಪ್ ವೇಕ್‍ಫಿಟ್ ಡಾಟ್ ಕೋ ನಡೆಸಿದ ಅಧ್ಯಯನದ ಪ್ರಕಾರ ಲಾಕ್‍ಡೌನ್ ಪ್ರಾರಂಭವಾದ ಬಳಿಕ ಭಾರತದಲ್ಲಿ ಶೇ.67ರಷ್ಟು ಮಂದಿ ರಾತ್ರಿ 11 ಗಂಟೆ ಬಳಿಕವೇ ಹಾಸಿಗೆಗೆ ಹೋಗೋದು. ಲಾಕ್‍ಡೌನ್‍ಗಿಂತ ಮೊದಲು ಇವರು 11 ಗಂಟೆಯಾಗೋದಕ್ಕೂ ಮೊದಲೇ ನಿದ್ರೆಗೆ ಜಾರುತ್ತಿದ್ದರು. ಇದರಿಂದಾಗಿ ಇವರ ಶರೀರದ ಜೈವಿಕ ಗಡಿಯಾರದಲ್ಲಿ ಬದಲಾವಣೆಯಾಗುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ.

ನಿದ್ರೆ ಟ್ರ್ಯಾಕ್‍ಗೆ ಬರೋದು ಯಾವಾಗ?
ಈ ಅಧ್ಯಯನದಲ್ಲಿ 1,500 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಶೇ.81 ಜನರ ಪ್ರಕಾರ ಅವರ ನಿದ್ರೆಯ ಅವಧಿ ಮರಳಿ ಟ್ರ್ಯಾಕ್‍ಗೆ ಬರೋದು ಲಾಕ್‍ಡೌನ್ ಮುಗಿದ ಬಳಿಕವೇ. ಈ ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ ಲಾಕ್‍ಡೌನ್‍ಗೂ ಮುನ್ನ ಶೇ.46ರಷ್ಟು ಮಂದಿ ರಾತ್ರಿ 11 ಗಂಟೆಗೂ ಮುನ್ನ ನಿದ್ರೆಗೆ ಜಾರುತ್ತಿದ್ದರು. ಆದ್ರೆ ಲಾಕ್‍ಡೌನ್ ಬಳಿಕ 11 ಗಂಟೆಗೂ ಮುನ್ನ ನಿದ್ರೆ ಮಾಡುತ್ತಿರುವವರ ಪ್ರಮಾಣ ಶೇ.39ಕ್ಕೆ ಕುಸಿದಿದೆ. ಸಾಮಾನ್ಯ ದಿನಗಳಲ್ಲಿ ಶೇ.25ರಷ್ಟು ಮಂದಿ ರಾತ್ರಿ 12 ದಾಟಿದ ಬಳಿಕ ನಿದ್ರಿಸಲು ಅಣಿಗೊಳ್ಳುತ್ತಿದ್ದರು. ಆದ್ರೆ ಲಾಕ್‍ಡೌನ್ ನಂತರ ಮಧ್ಯರಾತ್ರಿ ಬಳಿಕ ಹಾಸಿಗೆಗೆ ಹೋಗುವವರ ಪ್ರಮಾಣ ಶೇ.35. ಈ ಎಲ್ಲ ಅಂಕಿಅಂಶಗಳು ಲಾಕ್‍ಡೌನ್ ಬಳಿಕ ತಡರಾತ್ರಿ ನಿದ್ರೆಗೆ ಜಾರುತ್ತಿರುವವರ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆಯಾಗಿರೋದನ್ನು ಸೂಚಿಸುತ್ತಿವೆ.

ಡ್ರಗ್ಸ್‌ನಿಂದ ಗನ್‌ವರೆಗೆ, ಇಲ್ಲಿ ಬದುಕೋ 'ಅತ್ಯಗತ್ಯ'ಗಳಲ್ಲಿ ಏನುಂಟು ಏನಿಲ್ಲ?!

ಹಿಂಗ್ ಆಗಲು ಕಾರಣವೇನು?
ಮನೆಯೊಳಗೇ ಇದ್ರೂ ಮಾಡಲು ಕೈ ತುಂಬಾ ಕೆಲಸವಿದ್ರೂ ಏನೋ ಆತಂಕ, ಒತ್ತಡ. ಲಾಕ್‍ಡೌನ್ ಅವಧಿ ಬೇರೆ ಮತ್ತಷ್ಟು ವಿಸ್ತರಣೆಯಾಗಿದೆ. ಇನ್ನೊಂದೆಡೆ ಅಮೆರಿಕ ಸೇರಿದಂತೆ ಬಲಾಢ್ಯ ರಾಷ್ಟ್ರಗಳಲ್ಲಿ ಕೊರೋನಾ ರುದ್ರನರ್ತನ ಮುಂದುವರಿದಿದೆ. ಜೊತೆಗೆ ಆ ರಾಷ್ಟ್ರಗಳ ಆರ್ಥಿಕತೆಯೂ ಕುಸಿಯುತ್ತಿದೆ. ಇದು ಐಟಿ ಕಂಪನಿಗಳ ನೌಕರರ ಆತಂಕವನ್ನು ಹೆಚ್ಚಿಸಿದೆ. ಇನ್ನು ಭಾರತದಲ್ಲೂ ಮುಂದೆ ಪರಿಸ್ಥಿತಿ ಹೇಗಿರುತ್ತದೋ ಎಂಬ ಆತಂಕವೂ ಶುರುವಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತದಂತಹ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಆರ್ಥಿಕ ಸಮಸ್ಯೆಗಳು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಹೊರದೇಶ ಹಾಗೂ ದೂರದ ಊರುಗಳಲ್ಲಿರುವ ಬಂಧುಗಳ ಸುರಕ್ಷತೆ ಕೂಡ ಹಲವರಲ್ಲಿ ಆತಂಕ ಮೂಡಿಸುತ್ತಿದೆ. ಇವೆಲ್ಲವೂ ಸಹಜವಾಗಿ ರಾತ್ರಿಯ ನಿದ್ರೆಯನ್ನು ಕಸಿಯುತ್ತಿವೆ. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಶೇ.49ರಷ್ಟು ಮಂದಿ ಈ ಮೇಲಿನ ಎಲ್ಲ ಕಾರಣಗಳಿಂದಾಗಿಯೇ ರಾತ್ರಿ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!

ಈ ಸಮಸ್ಯೆಗೆ ಪರಿಹಾರವೇನು?
ಜಗತ್ತಿನಾದ್ಯಂತ ಕೊರೋನಾ ವೈರಸ್ ಸೃಷ್ಟಿಸಿರುವ ಸಾವು-ನೋವು ಆತಂಕ ಮೂಡಿಸೋದು ಸಹಜ. ಹಾಗಂತ ಆ ಬಗ್ಗೆ ಅತಿಯಾಗಿ ಯೋಚಿಸುವ, ಭಯಪಡುವ ಅಗತ್ಯವೂ ಇಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಜೊತೆಗೆ ನಮ್ಮ ಆತ್ಮೀಯರಿಗೂ ಈ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಾರ್ಯವನ್ನು ನಾವು ಈಗ ಮಾಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಬಿಟ್ಟು ಹೊರಗೆ ಹೋಗದಿರೋದೆ ಸದ್ಯ ನಾವು ಮಾಡಬೇಕಾದ ಅತ್ಯಂತ ಮಹತ್ವದ ಕೆಲಸ. ಇನ್ನು ಕೆಲಸದ ಹೊರೆಯ ಬಗ್ಗೆ ಯೋಚಿಸೋದಾದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಕೆಲಸದವರನ್ನು ಇಟ್ಟುಕೊಳ್ಳೋದು ಸೇಫ್ ಅಲ್ಲ. ಆದಕಾರಣ ಕೆಲಸವನ್ನು ಪತಿ-ಪತ್ನಿ ಇಬ್ಬರೂ ಸಮನವಾಗಿ ಹಂಚಿಕೊಂಡು ಮಾಡಿ. ಆಗ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಮಕ್ಕಳನ್ನು ಆನ್‍ಲೈನ್ ಸಮ್ಮರ್ ಕ್ಯಾಂಪ್ ಅಥವಾ ಕ್ರಾಫ್ಟಿಂಗ್, ಪೇಯಿಂಟಿಂಗ್ ತರಗತಿಗಳಿಗೆ ಸೇರಿಸಿ. ಇದರಿಂದ ಅವರು ಕೂಡ ಬ್ಯುಸಿಯಾಗುತ್ತಾರೆ. ಇನ್ನು ಪ್ರತಿದಿನ ಸರಿಯಾದ ಸಮಯಕ್ಕೆ ಮಲಗುವ ಹಾಗೂ ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳಿ. ಅದೆಷ್ಟೇ ಕೆಲಸವಿದ್ರೂ ನಿದ್ರೆ ವಿಷಯದಲ್ಲಿ ರಾಜೀ ಬೇಡ. ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲ ಎಂದಾದ್ರೆ ಪುಸ್ತಕ ಓದಿ ಅಥವಾ ಸ್ವಲ್ಪ ಹೊತ್ತು ಧ್ಯಾನ ಮಾಡಿ. ಇದರಿಂದ ಮನಸ್ಸು ಪ್ರಶಾಂತವಾಗುವ ಜೊತೆಗೆ ಕಣ್ತುಂಬಾ ನಿದ್ರಿಸಲು ಸಾಧ್ಯವಾಗುತ್ತದೆ. 

"
 
Follow Us:
Download App:
  • android
  • ios