ಒಡಲೊಳಗೊಂದು ಜೀವ ಕುಡಿಯೊಡೆಯುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ಮಹಿಳೆ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಪ್ರಾರಂಭಿಸುತ್ತಾಳೆ. ಈ ಸಮಯದಲ್ಲಿ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದ್ರೂ ಗಾಬರಿಯಾಗುತ್ತೆ. ಅಂಥದರಲ್ಲಿ ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೋನಾ ಗರ್ಭಿಣಿಯರಲ್ಲಿ ಆತಂಕ ಮೂಡಿಸದಿರಲು ಸಾಧ್ಯವೆ? ಸದ್ಯದ ಪರಿಸ್ಥಿತಿಯಲ್ಲಿ ಕ್ವಾರಂಟೈನ್, ಲಾಕ್‍ಡೌನ್ ಪರಿಣಾಮವಾಗಿ ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ಇಂಥ ಸಮಯದಲ್ಲಿ ಮಹಿಳೆಯರ ಮನಸ್ಸಿನಲ್ಲಿ ಕೊರೋನಾ ಕುರಿತು ನಾನಾ ಸಂಶಯಗಳು, ಆತಂಕಗಳು ಮನೆ ಮಾಡಿರಬಹುದು. ಅಂಥ ಕೆಲವೊಂದು ಸಂಶಯಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಹೊಟ್ಟೆಯ ಅಜೀರ್ಣ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಮದ್ದು

ಗರ್ಭಿಣಿಯರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆಯಾ?
ಇತರರಿಗೆ ಹೋಲಿಸಿದ್ರೆ ಗರ್ಭಿಣಿ ಮಹಿಳೆಯರು ಕೊರೋನಾ ಸೋಂಕಿಗೆ ಬೇಗ ತುತ್ತಾಗುತ್ತಾರೆ ಎಂಬ ಬಗ್ಗೆ ಈ ತನಕ ಯಾವುದೇ ಬಲವಾದ ಆಧಾರ ಸಿಕ್ಕಿಲ್ಲ ಎನ್ನುತ್ತದೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪೆವೆನ್ಷನ್ (CDC). ಗರ್ಭಿಣಿಯರ ಶರೀರದಲ್ಲಿ ಅನೇಕ ಬದಲಾವಣೆಗಳಾಗುವ ಕಾರಣ ಅವರು ಕೆಲವೊಂದು ಸೋಂಕಿಗೆ ಬೇಗ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದೇನೋ ನಿಜ. ಇನ್‍ಫ್ಲುಯೆಂಜಾ ಮುಂತಾದ ಗಂಭೀರ ಉಸಿರಾಟ ಸಮಸ್ಯೆಗಳಿಗೆ ಕಾರಣವಾಗುವ ಕೋವಿಡ್-19 ಕುಟುಂಬಕ್ಕೆ ಸೇರಿದ ವೈರಸ್‍ಗಳಿಗೆ ಗರ್ಭಿಣಿಯರು ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?
ಕೊರೋನಾ ಹರಡದಂತೆ ತಡೆಯಲು ಇತರರು ವಹಿಸುವ ಮುನ್ನೆಚ್ಚರಿಕೆಯನ್ನೇ ಗರ್ಭಿಣಿಯರು ವಹಿಸಿದ್ರೆ ಸಾಕು. ಆಗಾಗ ಸೋಪ್ ಹಾಗೂ ನೀರು ಬಳಸಿ ಕೈ ತೊಳೆಯೋದು. ನೀರು ಸಿಗದಿದ್ದ ಸ್ಥಳಗಳಲ್ಲಿ ಶೇ.60ಕ್ಕಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಸರ್ ಬಳಸೋದು. ಬೇರೆಯವರೊಂದಿಗೆ ಮಾತನಾಡುವಾಗ ಅಂತರ ಕಾಯ್ದುಕೊಳ್ಳೋದು. ಕೆಮ್ಮು, ಶೀತ, ಜ್ವರ ಹೊಂದಿರುವ ವ್ಯಕ್ತಿಗಳಿಂದ ದೂರವಿರೋದು. ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಹೊರ ಹೋಗದಿರೋದೇ ಸೇಫ್. 

ಈ ಸಮಯದಲ್ಲಿ ರೆಗ್ಯುಲರ್ ಚೆಕ್‍ಅಪ್‍ಗೆ ಆಸ್ಪತ್ರೆಗೆ ಭೇಟಿ ನೀಡುವುದು ಸುರಕ್ಷಿತವೇ?
ರೆಗ್ಯುಲರ್ ಚೆಕ್‍ಅಪ್‍ಗೆ ಸಂಬಂಧಿಸಿ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಈ ಸಮಯದಲ್ಲಿ ನಿಮ್ಮ ವೈದ್ಯರು ಕೂಡ ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಆಸ್ಪತ್ರೆಗೆ ಭೇಟಿ ನೀಡುವುದು ಬೇಡ ಎಂದೇ ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯದಲ್ಲಿ ಏನೂ ಏರುಪೇರಿಲ್ಲ, ಎಲ್ಲ ಸಮರ್ಪಕವಾಗಿದೆ ಅಂದ್ರೆ ಸ್ವಲ್ಪ ಸಮಯದ ತನಕ ಚೆಕ್‍ಅಪ್‍ಗಾಗಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಬರುವುದು ಬೇಡ ಎಂದೇ ಹೇಳಬಹುದು. ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ಫೋನ್ ಮೂಲಕವೇ ವೈದ್ಯರ ಸಲಹೆ ಪಡೆಯಿರಿ. ವೈದ್ಯರು ಆಸ್ಪತ್ರೆಗೆ ಬರಲೇಬೇಕು ಎಂದರೆ ಮಾತ್ರ ಹೋಗಿ. 

ಜಂಕ್ ಫುಡ್ ದ್ವೇಷಿಸೋಕೆ ಮೆದುಳಿಗೆ ಟ್ರೇನ್ ಮಾಡಿ, ಇಲ್ಲಿದೆ ನೋಡಿ ಟಿಪ್ಸ್

ಜ್ವರ ಅಥವಾ ಶೀತ ಕಾಣಿಸಿಕೊಂಡ್ರೆ ಏನ್ ಮಾಡ್ಬೇಕು?
ಜ್ವರ ಅಥವಾ ಶೀತ, ಕೆಮ್ಮು ಕಾಣಿಸಿಕೊಂಡ ತಕ್ಷಣ ಅದು ಕೊರೋನಾ ಎಂದು ಭಾವಿಸಬೇಕಿಲ್ಲ. ನಿಮ್ಮ ರೋಗಲಕ್ಷಣಗಳ ಬಗ್ಗೆ ವೈದ್ಯರಿಗೆ ಫೋನ್‍ನಲ್ಲಿ ಮಾಹಿತಿ ನೀಡಿ, ಸಲಹೆ ಪಡೆಯಿರಿ. ಒಂದು ವೇಳೆ ನೀವು ಕೊರೋನಾ ಪಾಸಿಟಿವ್ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ರೆ ಅಂಥ ಸಂದರ್ಭದಲ್ಲಿ ವೈದ್ಯರಿಗೆ ಫೋನ್‍ನಲ್ಲೇ ಆ ಬಗ್ಗೆ ಮಾಹಿತಿ ನೀಡಿ, ಮುಂದೇನು ಮಾಡಬೇಕು ಎಂಬ ಬಗ್ಗೆ ಸಲಹೆ ಪಡೆಯಿರಿ. 

ಕೋವಿಡ್-19 ಗರ್ಭಿಣಿಗೆ ತಗುಲಿದರೆ ಗರ್ಭಪಾತವಾಗುವ ಸಾಧ್ಯತೆಯಿದೆಯೇ?
CDC ಪ್ರಕಾರ ಕೋವಿಡ್-19 ಸೋಂಕು ತಗುಲಿರುವ ಗರ್ಭಿಣಿಯರಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುವ ಅಥವಾ ಭ್ರೂಣದ ಅಸಮರ್ಪಕ ಬೆಳವಣಿಗೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ರೆ ಸಾರ್ಸ್ ಹಾಗೂ ಮೆರ್ಸ್‍ಗೆ ಕಾರಣವಾಗುವ ಇತರ ಕೊರೋನಾ ವೈರಸ್‍ಗಳಿಗೆ ಸಂಬಂಧಿಸಿದ ದಾಖಲೆಗಳ ಆಧಾರದಲ್ಲಿ ಕೋವಿಡ್ -19 ಸೋಂಕಿಗೆ ತುತ್ತಾದ ಗರ್ಭಿಣಿಯರು ಅವಧಿಗೂ ಮುನ್ನ ಮಗುವಿಗೆ ಜನ್ಮ ನೀಡುವುದು ಸೇರಿದಂತೆ ಕೆಲವೊಂದು ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕನ್ ಕಾಲೇಜ್ ಆಫ್ ಒಬ್‍ಸ್ಟೆರಿಯನ್ ಹಾಗೂ ಗೈನಾಕಾಲಜಿಸ್ಟ್‍ಸ್ ಎಚ್ಚರಿಸಿದೆ.

ಗರ್ಭಿಣಿಗೆ ಕೊರೋನಾ ಇದ್ರೆ ಹುಟ್ಟುವ ಮಗುವಿಗೂ ತಗುಲುವ ಅಪಾಯವಿದೆಯಾ?
ಕೋವಿಡ್-19 ಸೋಂಕು ತಗುಲಿರುವ ಗರ್ಭಿಣಿಯಿಂದ ಮಗುವಿಗೆ ವೈರಸ್ ಹರಡುವುದಕ್ಕೆ ಸಂಬಂಧಿಸಿ ನಡೆದ ಸೀಮಿತ ಅಧ್ಯಯನಗಳ ಪ್ರಕಾರ, ಇಂಥ ಸಾಧ್ಯತೆ ಕಡಿಮೆ. ಕೊರೋನಾ ಪೀಡಿತ ಒಂಭತ್ತು ಗರ್ಭಿಣಿಯರನ್ನು ಆಧರಿಸಿ ನಡೆದ ಅಧ್ಯಯನದಲ್ಲಿ ಇವರು ಜನ್ಮ ನೀಡಿದ ಮಕ್ಕಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಅಮಿನೋಟಿಕ್ ಫ್ಲೂಯಿಡ್, ಶಿಶುವಿನ ಗಂಟಲು ಅಥವಾ ಎದೆಹಾಲಿನಲ್ಲಿ ವೈರಸ್ ಇರುವುದಿಲ್ಲ ಎಂಬುದನ್ನು ಈ ಅಧ್ಯಯನ ಸ್ಪಷ್ಟಪಡಿಸಿದೆ. 38 ಕೋರೋನಾ ಪೀಡಿತ ಗರ್ಭಿಣಿಯರನ್ನು ಆಧರಿಸಿ ನಡೆದ ಇನ್ನೊಂದು ಅಧ್ಯಯನದಲ್ಲಿ ಕೂಡ ಇವರಿಗೆ ಜನಿಸಿದ ಮಕ್ಕಳಲ್ಲಿ ಈ ವೈರಸ್ ಪತ್ತೆಯಾಗಿಲ್ಲ. ದೆಹಲಿ ಏಮ್ಸ್ನಲ್ಲಿ ಇತ್ತೀಚೆಗೆ ಕೊರೋನಾ ಪಾಸಿಟಿವ್ ಆಗಿರುವ ಮಹಿಳೆಯೊಬ್ಬರಿಗೆ ಜನಿಸಿರುವ ಮಗುವಿನಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂಬುದನ್ನು ಅಲ್ಲಿನ ವೈದ್ಯರು ದೃಢಪಡಿಸಿದ್ದರು. 

ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!

ಕೊರೋನಾ ಪಾಸಿಟಿವ್ ತಾಯಿ ತನ್ನ ಮಗುವಿಗೆ ಎದೆಹಾಲು ಕುಡಿಸಬಹುದೇ?
ಖಂಡಿತವಾಗಿ ಕುಡಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಆದ್ರೆ ತಾಯಿ ಎದೆಹಾಲು ಕುಡಿಸುವ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯ ಎಂದಿದೆ. ತಾಯಿ ಮಾಸ್ಕ್ ಧರಿಸಿಕೊಳ್ಳುವ ಜೊತೆಗೆ ಮಗುವನ್ನು ಮುಟ್ಟುವ ಮುನ್ನ ಹಾಗೂ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಜೊತೆಗೆ ಆಕೆ ಮುಟ್ಟಿದ ವಸ್ತುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಎದೆಹಾಲಿನಲ್ಲಿ ಕೊರೋನಾ ವೈರಸ್ ಇರುವ ಬಗ್ಗೆ ಈ ತನಕ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ಎದೆಹಾಲು ಕುಡಿಸಿದ್ರೆ ತಾಯಿಯಿಂದ ಮಗುವಿಗೆ ವೈರಸ್ ವರ್ಗಾವಣೆಯಾಗುವ ಸಾಧ್ಯತೆಯನ್ನು ತಡೆಯಬಹುದು ಎಂದು CDC ಹೇಳಿದೆ. 

"