ಹರಡುತ್ತಿದೆ ಡೇಂಜರಸ್ ಡಿಂಗಾ ಡಿಂಗಾ ವೈರಸ್, ಏನಿದು ಹೊಸ ಖಾಯಿಲೆ, ಇದರ ಲಕ್ಷಣವೇನು?

ಕೊರೋನಾ ವೈರಸ್ ಸೃಷ್ಟಿಸಿದ ಅವಾಂತರಗಳು ಒಂದೆರೆಡಲ್ಲ. ಇದೀಗ ಕೋವಿಡ್ ಕಾಲ ಮರೆಯಾಗಿದೆ. ಆದರೆ ಹೊಸ ಡಿಂಗಾ ಡಿಂಗಾ ವೈರಸ್ ಹರಡುತ್ತಿದೆ. ಹೊಸ ಖಾಯಿಲೆ ಎಲ್ಲೆಲ್ಲಿ ಹರಡುತ್ತಿದೆ. ಇದರ ಲಕ್ಷಣವೇನು? ಈ ವಿಚಿತ್ರ ಹೆಸರು ಬಂದಿದ್ದೇಕೆ?
 

New Dinga dinga disease spreading in Uganda what is new mysterious health cases ckm

ನವದೆಹಲಿ(ಡಿ.18) ಕೋವಿಡ್ ಮಹಾಮಾರಿ ಸರಿದು ಕೆಲ ವರ್ಷಗಳಾಗಿದೆ. ಬಳಿಕ ಹಲವು ರೂಪಾಂತರ ತಳಿಗಳು ಬಂದರೂ ಕೋವಿಡ್ ಅಲೆಯಾಗಿ ಸೃಷ್ಟಿಯಾಗಿಲ್ಲ. ಕೊರೋನಾ ಲಸಿಕೆ, ಜನರಲ್ಲಿನ ಜಾಗೃತಿ, ಮುಂಜಾಗ್ರತೆಗಳಿಂದ ತುರ್ತು ಆರೋಗ್ಯ ಪರಿಸ್ಥಿತಿಗೆ ತಳ್ಳಲಿಲ್ಲ. ಇದೀಗ ಹೊಸ ಖಾಯಿಲೆಯೊಂದು ವೇಗವಾಗಿ ಹರಡುತ್ತಿದೆ. ಇದು ಡಿಂಗಾ ಡಿಂಗಾ ಖಾಯಿಲೆ. ಹೆಸರು ವಿಚಿತ್ರವಾದರೂ ಕೋವಿಡ್ ರೀತಿಯಲ್ಲೇ ಡೇಂಜರಸ್ ಖಾಯಿಲೆ ಇದೆ. ಸದ್ಯ ಉಗಾಂಡದಲ್ಲಿ ಈ ಖಾಯಿಲೆ ಹರಡುತ್ತಿದೆ. ಪ್ರಮುಖವಾಗಿ ಇದು ಮಹಿಳೆಯರು, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಈ ವೈರಸ್ ಕಾಣಿಸಿಕೊಂಡವರ ದೇಹ ಡ್ಯಾನ್ಸ್ ರೀತಿ ನಡುಗುತ್ತದೆ. ನಡೆದಾಡಲು ಸಾಧ್ಯವಾಗುವುದಿಲ್ಲ. ಕೈಗಾಲುಗಳು ಅತೀವವಾಗಿ ನಡುಗಲು ಆರಂಭಿಸುತ್ತದೆ. ಹೀಗಾಗಿ ಈ ಖಾಯಿಲೆಗೆ ಡಿಂಗಾ ಡಿಂಗಾ ಅನ್ನೋ ಹೆಸರು ಬಂದಿದೆ. ಸಂಪೂರ್ಣ ದೇಹವೇ ನಡುಗಲು ಆರಂಭಿಸುತ್ತದೆ. ಆಫ್ರಿಕನ್ ದೇಶಗಳಲ್ಲಿ ಈ ಖಾಯಿಲೆ ಕಾಣಿಸಿಕೊಂಡಿದೆ. ಈ ಪೈಕಿ ಉಗಾಂಡದಲ್ಲಿ ವೇಗವಾಗಿ ಹರಡುತ್ತಿದೆ. ಜೊತೆಗೆ ಆತಂಕ ಹೆಚ್ಚಿಸುತ್ತಿದೆ. ಇದರ ಹರಡುವಿಕೆ ವೇಗ ನೋಡಿದರೆ ಉಗಾಂಡ ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯನ್ನು ಸೂಚಿಸುತ್ತಿದೆ. 

ಕ್ಯಾನ್ಸರ್ ಟ್ಯೂಮರ್ ನಿಯಂತ್ರಿಸುತ್ತೆ ಕೋವಿಡ್ ವೈರಸ್, ಅಚ್ಚರಿ ಹುಟ್ಟಿಸಿದ ವೈದ್ಯರ ಸಂಶೋಧನೆ!

ಸದ್ಯ ಡಿಂಗಾ ಡಿಂಗಾ ಖಾಯಿಲೆ ಕಾಣಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ.ಆದರೆ ಖಾಯಿಲೆಯಿಂದ ಮೃತಪಟ್ಟಿರುವ ವರದಿಯಾಗಿಲ್ಲ. ಉಗಾಂಡದ ಬುಂಡಿಬುಗಿಯೋ ಜಿಲ್ಲೆಯಲ್ಲಿ ವಿಪರೀತವಾಗಿ ಈ ಖಾಯಿಲೆ ಕಾಣಿಸಿಕೊಂಡಿದೆ. 

ಡಿಂಗಾ ಡಿಂಗಾ ಖಾಯಿಲೆಯ ಲಕ್ಷಣಗಳೇನು?
ಡಿಂಗಾ ಡಿಂಗಾ ವಿಚಿತ್ರ ಖಾಯಿಲೆಯಾಗಿದೆ. ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರ ವಿಪರೀತವಾಗಿ ಕೈಕಾಲು, ದೇಹವೇ ನಡುಗಲು ಆರಂಭವಾಗುತ್ತದೆ. ಡ್ಯಾನ್ಸ್ ರೀತಿ ಶೇಕ್ ಆಗಲಿದೆ ಎಂದು ಲಕ್ಷಣಗಳನ್ನು ಉಗಾಂಡ ಪಟ್ಟಿ ಮಾಡಿದೆ. ಡಿಂಗಾ ಡಿಂಗಾ ಕಾಣಿಸಿಕೊಂಡವರಲ್ಲಿ ತೀವ್ರ ವೀಕ್ನೆಸ್, ನಿಶಕ್ತಿ, ರೋಗ ನಿರೋಧ ಶಕ್ತಿ ಕುಂದುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಕೆಲ ಪ್ರಕರಣಗಳಲ್ಲಿ ಪಾರ್ಶ್ವವಾಯು ಸಂಭವಿಸಿದೆ ಎಂದು ವರದಿಯಾಗಿದೆ.

ಕೆಲ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಡಿಂಗಾ ಡಿಂಗಾ ಖಾಯಿಲೆ ಕಾಣಿಸಿಕೊಂಡ ವ್ಯಕ್ತಿಗಳಿಗೆ ನಡೆದಾಡಲು ಸಾಧ್ಯವಾಗುವುದಿಲ್ಲ. ತಕ್ಕ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖವಾಗಲಿದೆ. ಆದರೆ ವಿಪರೀತವಾದರೆ ಇದರಿಂಗ ಅಗುವ ಪಾರ್ಶ್ವವಾಯು ಸೇರಿದಂತೆ ಇತರ ಸಮಸ್ಯೆಗಳು ಜೀವನ ಪರ್ಯಂತ ಸಂಕಷ್ಟಕ್ಕೆ ದೂಡವು ಸಾಧ್ಯವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

 

 

ಸದ್ಯ ಉಗಾಂಡ ಬುಂಡಿಬುಗ್ಯೋ ಜಿಲ್ಲೆಯಲ್ಲಿ ಈ ಡಿಂಗಾ ಡಿಂಗಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿದೆ. ಒಟ್ಟು 300 ಪ್ರಕರಣಗಳು ದಾಖಲಾಗಿದೆ. ಈ ಖಾಯಿಲೆಗೆ ಮೂಲ ಯಾವುದು? ಪ್ರಾಣಿಗಳಿಂದಲೋ ಅಥವಾ ಬೇರೆ ಕಾರಣಗಳಿಂದ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಾ ಅನ್ನೋ ಕರಿತು ಸಂಶೋಧನೆಗಳು ಆರಂಭಗೊಂಡಿದೆ. ಡಿಂಗಾ ಡಿಂಗಾ ಕೊರೋನಾ ರೀತಿಯಲ್ಲೇ ಹರಡುತ್ತಾ ಅನ್ನೋ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ಸಲುವಾಗಿ ಸಂಶೋಧನೆಗಳು ತೀವ್ರಗೊಂಡಿದೆ. 

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಯಿತಾ ಕ್ರಿಸ್ಟೋಫರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಖಾಯಿಲೆಗೆ ಆ್ಯಂಟಿಬಯೋಟಿಕ್ ಔಷಧಿ ನೀಡಲಾಗುತ್ತಿದೆ. ಸದ್ಯ ಆ್ಯಂಟಿಬಯೋಟಿಕ್ ಮೂಲಕವೇ ಗುಣಪಡಿಸಲಾಗುತ್ತಿದೆ. ಪ್ರತ್ಯೇಕವಾದ ಔಷಧಿ ಲಭ್ಯವಿಲ್ಲ. ಆದರೆ ಆ್ಯಂಟಿಬಯೋಟಿಕ್ ಮೂಲಕ ಖಾಯಿಲೆ ಗುಣಮುಖವಾಗುತ್ತಿದೆ ಎಂದಿದ್ದಾರೆ. ಕೆಲ ಗ್ರಾಮಗಳಲ್ಲಿ ಕೇವಲ ಒಂದೇ ವಾರಕ್ಕೆ ಹಲವರು ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಆರೋಗ್ಯ ಅಧಿಕಾರಿ, ಅಥವಾ ಆರೋಗ್ಯ ತುರ್ತು ಕೇಂದ್ರಕ್ಕೆ ಸಂಪರ್ಕಿಸಲು ಸೂಚಿಸಿದ್ದಾರೆ. ಶುಚಿತ್ವ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.  ಇನ್ನು ಜನರ ಸಂಪರ್ಕ, ಜನಸಂದಣಿಯಿಂದ ದೂರವಿರಲು ಸೂಚಿಸಲಾಗಿದೆ. ಹರಡುವಿಕೆಗೆ ನಿರ್ದಿಷ್ಠ ಕಾರಣಗಳು ಇನ್ನು ಪತ್ತೆಯಾಗಿಲ್ಲ. 
 

Latest Videos
Follow Us:
Download App:
  • android
  • ios