ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಮೊಬೈಲ್ ಕುತ್ತು, ವ್ಯಕ್ತಿತ್ವಹೀನವಾಗಿಸೋ ವ್ಯಸನ
ಮಕ್ಕಳ ಕೈಯಲ್ಲಿ ಮೊಬೈಲ್ ಇರಬಾರದೆಂದು ಈ ಹಿಂದೆ ಶಿಕ್ಷಣ ಸಂಸ್ಥೆಗಳೇ ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದವು. ಇದೀಗ ಆನ್‌ಲೈನ್ ಶಿಕ್ಷಣದ ಹೆಸರಿಲ್ಲಿ ಸ್ಮಾರ್ಟ್ ಫೋನ್ ಒಳಗೇ ಮಕ್ಕಳು ಮುಳುಗುವಂತೆ ಮಾಡುತ್ತಿವೆ ಅದೇ ಶಿಕ್ಷಣ ಸಂಸ್ಥೆಗಳು. ಮಕ್ಕಳ ಮನಸ್ಸು ಕೇಳಬೇಕಾ? ಕೈಯಲ್ಲಿಯೇ ಇರೋ ವಿಶ್ವದಿಂದ ಏನೇನನ್ನೋ ಜಾಲಾಡಿ ಬಿಡುತ್ತವೆ. #MobileAddiction ನಿಂದ ಏನಾಗುತ್ತೆ ಸಮಸ್ಯೆ?
ಏನೋ ಕಳೆದು ಕೊಂಡ ಭಾವ. ಚಡಪಡಿಕೆ. ಸಮಯವೇ ಪಾಸ್ ಆಗುತ್ತಿಲ್ಲ. ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುವುದು ಗೊತ್ತೇ ಆಗುತ್ತಿಲ್ಲ. ನಾನು ಒಬ್ಬಂಟಿಯಾದಾನಾ? ವಿಶ್ವವೇ ನನ್ನನ್ನು ದೂರ ಮಾಡುತ್ತಿದ್ಯಾ?...ಹೀಗೆಲ್ಲಾ ಎನಿಸುತ್ತಿದೆ ಎಂದರೆ ನಿಮ್ಮ ಕೈಯಲ್ಲಿರೋ ಮೊಬೈಲ್ ಸರ್ವಿಸ್‌ಗೆ ಹೋಗಿದೆ ಎಂದೇ ಅರ್ಥ. ಬರೀ ಇಷ್ಟೇ ಭಾವನೆಗಳು ಹಾಗೆ ಬಂದು, ಹೀಗ್ ಹೋಗಿ ಬಿಟ್ಟರೆ ಯಾವುದೇ ಸಮಸ್ಯೆಗಳಿರೋಲ್ಲ. ಆದರೆ, ನಿಮ್ಮ ಆತ್ಮ ವಿಶ್ವಾಸವನ್ನೇ ಕಸಿದುಕೊಂಡು ಬಿಡುತ್ತದೆಯಲ್ಲ, ಅದು ಬಹಳ ಡೇಂಜರಸ್. ಜೀವನದಲ್ಲಿ ಆತ್ಮವಿಶ್ವಾಸವೇ ಇಲ್ಲವೆಂದ ಮೇಲೆ ಬೇರೆ ಎಲ್ಲವೂ ಇದ್ದರೇನು ಭಾಗ್ಯ ಹೇಳಿ?
ಇತ್ತೀಚೆಗೆ ಪ್ರತಿಯೊಬ್ಬರ ಜೀವನಶೈಲಿಯಲ್ಲೂ ಮೊಬೈಲ್ ಪ್ರಮುಖ ಪಾತ್ರವಹಿಸುತ್ತಿದೆ. ಅಷ್ಟೇ ಆಗಿದ್ದರೆ ಓಕೆ ಇತ್ತು, ಆದರೆ, ಇದರ ಮೇಲೆ ಹಿಡಿತ ಸಾಧಿಸಬೇಕಾಗಿದ್ದ ನಾವೇ ಅದರ ದಾಸರಾಗುತ್ತಿರುವುದು ದುರಂತ. ದಿನದ ಬಹುತೇಕ ಸಮಯವನ್ನು ಪತಿ, ಪತ್ನಿ, ಮಕ್ಕಳೊಂದಿಗೆ ಕಳೆಯಬೇಕಾದ ಮನುಷ್ಯ ಮೊಬೈಲ್‌ನೊಂದಿಗೆ ಕಳೆಯುತ್ತಿದ್ದಾನೆ. ಮನೋರಂಜನೆ ನೀಡಲು ಸಾಕಷ್ಟು ವೇದಿಕೆಗಳಿವೆ. ಆದರೆ, ಮನಸ್ಸಿಗೆ ಖುಷಿಯಾಗುವುದೇ ಇಲ್ಲ. ಒಂದು ನೋಡಿದ್ದ ಹಿತವೆನಿಸಲಿಲ್ಲಎಂದೆನಿಸಿದಾಗ ಮತ್ತೊಂದು ನೋಡು. ಮಗದೊಂದು ವೀಕ್ಷಿಸು. ಹೀಗೆ...ದಿನದ ಬಹುತೇಕ ಸಮಯನ್ನು ಕೈಯಲ್ಲಿರುವ ಮೊಬೈಲ್‌ನೊಂದಿಗೇ ಕಳೆಯುತ್ತಿರುವುದು ದುರಂತ. ಆದರೆ, ಮನಸ್ಸಿಗೆ ಸಿಗಬೇಕಾದ ಖುಷಿ ಸಿಗುತ್ತಿದ್ದಾ? ವಾರದಲ್ಲೊಂದು ದಿನ ಅರ್ಧ ಗಂಟೆಯ ಚಿತ್ರ ಮಂಜರಿಯಿಂದ ಸಿಗುತ್ತಿದ್ದ ಆ ಖುಷಿ, ಇದೀಗ ದಿನಪೂರ್ತಿ ಮೊಬೈಲ್ ನೋಡಿದರೂ ಸಿಗುತ್ತಿಲ್ಲ.
ಈ ಅಂಗೈ ಅಗಲದ ಸಾಧನ ಮನುಷ್ಯನ ದೈಹಿಕ ಆರೋಗ್ಯ ಮಾತ್ರವಲ್ಲಿ, ಮನಸ್ಸಿನ ಮೇಲೂ ಬೀರುತ್ತಿರುವ ಪ್ರಭಾವ ಅಷ್ಟಿಷ್ಟಲ್ಲ. ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸುವ ಮೊಬೈಲ್, ಮಕ್ಕಳಿಗೆ ವ್ಯಕ್ತಿತ್ವವೇ ಇಲ್ಲದಂತೆ ಮಾಡುವುದರಲ್ಲಿಯೂ ಅನುಮಾನವೇ ಇಲ್ಲ. ವ್ಯಕ್ತಿ ಹೆಚ್ಚೆಚ್ಚು ಅಮೂಲ್ಯವಾದ ಸಮಯವನ್ನು ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಗೇಮ್‌ನಲ್ಲಿಯೇ ಕಳೆಯುತ್ತಿದ್ದಾನೆ. ನೋಮೋಫೋಬಿಯ ಎಂದು ಕರೆಯುವ ಅಡಿಕ್ಷನ್‌ಗೆ ಗುರಿಯಾಗುತ್ತಿದ್ದಾನೆ ಮನುಷ್ಯ.
ಮಗ ಕುಡೀತಾನೆಂದರೆ ಮುಚ್ಚಿಡಬೇಡಿ: ಸೂಕ್ತ ಚಿಕಿತ್ಸೆ ಕೊಡಿಸಿ
ಕಾಡುವ ಅಭದ್ರತೆ, ಕುಂದುವ ಆತ್ಮ ವಿಶ್ವಾಸ
ಒಂದು ದಿನ ಮೊಬೈಲ್ ಸಿಗಲಿಲ್ಲವೆಂದರೆ ಒಂದು ರೀತಿಯ ಭಯ, ಆತಂಕ, ಚಡಪಡಿಕೆ ಹೆಚ್ಚಾಗುತ್ತಿದೆ. ವ್ಯಕ್ತಿ-ವ್ಯಕ್ತಿಗಳ ನಡುವೆ ಸಂಬಂಧವನ್ನು ಹಾಗೂ ಸಾಮಾಜಿಕ ಹೊಂದಾಣಿಕೆ ಎಂಬುವುದು ಅರ್ಥವೇ ಕಳೆದುಕೊಳ್ಳುತ್ತಿವೆ. ಚಿಕ್ಕ ವಯಸ್ಸಿನ ಮಕ್ಕಳು ಹಾಗೂ ಯುವಕರು ಈ ಜಂಗಮವಾಣಿಯನ್ನು ಅತಿಯಾಗಿ ಬಳಸುವುದರಿಂದ ಲೈಂಗಿಕತೆಯ ಬಗೆಗಿನ ಕೂತೂಹಲವೇ ಹೆಚ್ಚುತ್ತಿದೆ. ಇನ್ನು ಕೆಲವರಿಗೆ ಅದರ ಬಗ್ಗೆ ಅಸಹ್ಯವೂ ಮೂಡುತ್ತಿದೆ. ಒಂದೋ ಏತಿ ಇಲ್ಲವೇ ಪ್ರೇತಿ ಎನ್ನುವಂತೆ ಮನುಷ್ಯನ ಮನಸ್ಸಿನ ಮೇಲಿದು ತನ್ನ ರುದ್ರ ನರ್ತನ ಮಾಡುತ್ತಿದೆ.
ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದಲ್ಲದೇ, ಮಾನವ ಸಂಬಂಧಗಳ ಮೌಲ್ಯಗಳೂ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿದೆ. ತನ್ನ ಭಾವನೆಗಳನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುವುದೇ ಮನುಷ್ಯನಿಗೆ ಅರ್ಥವಾಗುತ್ತಿಲ್ಲ. ಜನರೊಂದಿಗೆ ಬೆರೆತಾಗ, ಹೆಚ್ಚು ಸೋಷಿಯಲೈಸ್ ಆದಾಗ ಕಲಿಯುವ ಜೀವನ ಪಾಠಗಳನ್ನು ಮೊಬೈಲ್ ಕಲಿಸಲು ಸಾಧ್ಯವೇ ಇಲ್ಲ. ಒತ್ತಡ, ಉದ್ವೇಗ, ಖಿನ್ನತೆ, ಒಂಟಿತನವನ್ನು ಹೆಚ್ಚಿಸುತ್ತಿದೆ. ಅಭದ್ರತೆ ಪ್ರತಿಯೊಬ್ಬರನ್ನೂ ಕಿತ್ತು ತಿನ್ನುತ್ತಿದೆ.
ಸ್ವ ಮರುಕದಿಂದ ಮದ್ಯದ ದಾಸನಾಗಿದ್ದ ಈ ಬಾಲಿವುಡ್ ನಟ
ಸ್ಮಾರ್ಟ್ ಫೋನನ್ನು ಹೆಚ್ಚು ಬಳಸುವುದರಿಂದ ಮೆದುಳಿನ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಈಗಾಗಲೇ ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಇದರಿಂದ ಅತಿ ಹೆಚ್ಚು ಸಮಯ ಒಂದೇ ಕಡೆ ಕೇಂದ್ರೀಕಿರಿಸುವುದು ಕಷ್ಟ. ಏಕಾಗ್ರತೆ ಎನ್ನುವುದು ಕಣ್ಮರೆಯಾಗಿ ಎಲ್ಲರೂ ಆಟಿಸಂ ಸಮಸ್ಯೆ ಇರುವವರಂತೆ ಆಡುತ್ತಿದ್ದಾರೆ. ಆಳವಾಗಿ ಯೋಚಿಸಲು ಹಾಗೂ ರಚನಾತ್ಮಕವಾಗಿ ಚಿಂತಿಸುವುದಂತೂ ದೂರದ ಮಾತೇ ಸರಿ. ಇಷ್ಟೆಲ್ಲಾ ಆದ್ಮೇಲೆ ಇದು ಸಹಜವಾಗಿ ಅಗತ್ಯದಷ್ಟು ನಿದ್ರೆ ಮಾಡಲು ಬಿಡುವುದಿಲ್ಲ. ನಿದ್ರೆ ಮಾಡದಿದ್ದರೆ ಮನುಷ್ಯ ಇನ್ಯಾವ ಯಾವರ ಸಮಸ್ಯೆಯಿಂದ ಬಳಲುತ್ತಾನೆಂಬುವುದು ಎಲ್ಲರಿಗೂ ಗೊತ್ತು.
ವ್ಯಕ್ತಿತ್ವ ದೋಷ ಸಹಜವಾಗಿದೆ...
Narrissistic personality disorder ಕಾಮನ್ ಎನ್ನುವಂತಾಗಿದೆ. ತುಂಬಾ ಸ್ವಾರ್ಥಿಯಾಗುವುದು, ಆರೋಗಂಟ್ ಆಗಿ ನಡೆದುಕೊಳ್ಳುವುದು ಮತ್ತು ಯಾವ ವಿಷಯದ ಬಗ್ಗೆಯೂ ಸಹಾನುಭೂತಿ ಇಲ್ಲದಿರುವುದು, ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹಾಕುವುದು, ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಈ ವ್ಯಕ್ತಿತ್ವ ದೋಷದ ಮುಖ್ಯ ಲಕ್ಷಣಗಳು.
ಕೌಟುಂಬಿಕ ಮೌಲ್ಯಗಳು ಕಣ್ಮರೆಯಾಗಿ, ಇವೇ ಹತ್ತು ಹಲವು ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಎಲ್ಲಾ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವೇ ವ್ಯಕ್ತಪಡಿಸುತ್ತಿರುವುದು ವ್ಯಕ್ತಿ-ವ್ಯಕ್ತಿಗಳ ನೇರ ಭೇಟಿ ಹಾಗೂ ಮಾತುಕತೆಯನ್ನು ಕಡಿಮೆ ಮಾಡುತ್ತದೆ. ತನ್ನ ಬಗ್ಗೆ ತಾನು ಹೇಳಿಕೊಳ್ಳುವುದು, ಹೊಗಳಿಕೊಳ್ಳುವುದು ಹೆಚ್ಚುತ್ತಿದೆ. ಇದು ಮನುಷ್ಯನನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತದೆ. ಪದೆ ಪದೇ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುವುದು ಗೀಳಾಗುತ್ತಿದೆ.
ಸಂಶೋಧನಗೆಳು ಹೇಳುವುದೇನು?
ಈ ಮೊಬೈಲ್ ಬಳಕೆ ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಅಮೆರಿಕದಲ್ಲಿ ಸಾಕಷ್ಟು ಸಂಶೋಧನೆಯೊಂದು ನಡೆಯುತ್ತಿದೆ. ಮೊಬೈಲ್ ತರಂಗಗಳು ಮಕ್ಕಳ ಮಾನಸಿಕ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಸಾಬೀತು ಪಡಿಸಿದೆ.
ಲಂಡನ್ ಯೂನಿವರ್ಸಿಟಿ ವರದಿ ಪ್ರಕಾರ ಅತಿಯಾದ ಮೊಬೈಲ್ ಯೂಸ್ ಮಾಡುವುದರಿಂದ ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿಸಿದೆ. ವಿಶ್ವದಲ್ಲಿ ಸುಮಾರು ಶೇ. 66 ಮಂದಿ ಮೊಬೈಲ್ ಅಡಿಕ್ಷನ್‌ಗೆ ಒಳಗಾಗಿದ್ದಾರೆಂದು ಒಂದು ಸರ್ವೇ ಸಾಬೀತು ಪಡಿಸಿದೆ. ಸುಮಾರು ಮೂರೂವರೆ ಗಂಟೆ ಕಾಲ ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿದಿನ ಅದನ್ನು ನೋಡುವುದರಲ್ಲಿಯೇ ಕಳೆಯುತ್ತಿದ್ದಾರೆ. 2017ರಲ್ಲಿ ಒಂದು ಅಧ್ಯಯನದ ಪ್ರಕಾರ ಅತಿಯಾದ ಮೊಬೈಲ್ ಫೋನ್ ಉಪಯೋಗದಿಂದ ಮಾನಸಿಕ ಖಿನ್ನತೆ, ನಿದ್ರಾಹೀನತೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಈ ಪೋನ್ ಬಳಸುವುದರಿಂದ ಹೊರ ಬರುವ ತರಂಗಗಳು ವ್ಯತಿರಿಕ್ತ ಪ್ರಭಾವ ಬೀರುವುದೇ ಹೆಚ್ಚು.
ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನ ಕೊರತೆಯಿಂದ ಮಕ್ಕಳು ಅಂತರ್ಮುಖಿಗಳಾಗುತ್ತಿದ್ದಾರೆ. ಮಕ್ಕಳು ಮತ್ತು ಪೋಷಕರ ನಡುವೆ ಪ್ರೀತಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ.
ನೀವೂ ಈ ಮೊಬೈಲ್‌ಗೆ ಅಡಿಕ್ಟ್ ಅಗಿದ್ದೀರಾ?
- ವಿಥ್‌ಡ್ರಾವಲ್ಸ್.
- ವಿಶ್ರಾಂತಿ ಇಲ್ಲದಿರುವುದು
- ಅನಗತ್ಯ ಕೋಪ ಮತ್ತು ತಳಮಳ.
- ಏಕಾಗ್ರತೆ ಕೊರತೆ, ನಿದ್ರಾಹೀನತೆ.
- ಮೊಬೈಲ್‌ನ ಹೊಸ ವರ್ಷನ್ ಬಗ್ಗೆ ಚಿಂತೆ.
ಓವರ್‌ಕಮ್ ಮಾಡಿಕೊಳ್ಳೋದು ಹೇಗೆ?
- ಫೋನ್ ಬಳಸಲೊಂದು ನಿಯಮಿತ ಸಮಯವಿರಲಿ.
- ತುಸು ಸಮಯ ಮೊಬೈಲ್ ಸ್ವಿಚ್ ಆಫ್ ಮಾಡಿ. ಇದರಿಂದ ಆಕಾಶ ಉದುರುವುದಿಲ್ಲವೆಂಬುವುದು ನಿಮಗೆ ಗೊತ್ತಿರಲಿ.
- ರಾತ್ರಿ ಮಲಗುವಾಗ ಮೊಬೈಲ್ ಮತ್ತು ಟ್ಯಾಬ್ಲೆಟ್ ಅನ್ನು ಹಾಸಿಗೆಯಿಂದ ದೂರ ಇರಿಸಿ.
- ನಿಮ್ಮ ಮೊಬೈಲನ್ನು ಆರೋಗ್ಯಕರ ಚಟುವಟಿಕೆಗೆ ಮಾತ್ರ ಬಳಸಿ. ಯೋಗ ಧ್ಯಾನ ಸಂಗೀತವನ್ನು ಆಲಿಸಲು ಬಳಕೆಯಾಗಲಿ.
- ಮೊಬೈಲ್ ಗೇಮ್ಸ್ ಡೌನ್‌ಲೋಡ್ ಮಾಡಲೇ ಬೇಡಿ.
- ಸೋಶಿಯಲ್ ಮೀಡಿಯಾ ಆ್ಯಪ್ಸ್ ಮೊಬೈಲ್‌ನಲ್ಲಿ ಇಲ್ಲದಿದ್ದರೆ ಒಳಿತು.
- ಅಡಿಕ್ಟ್ ಆಗಿರುವುದು ಕನ್ಫರ್ಮ್ ಆದರೆ ಮನಃಶಾಸ್ತ್ರಜ್ಞರ ಸಹಾಯದಿಂದ ಹೊರ ಬನ್ನಿ.
-ಮೊಬೈಲ್ ಬಳಕೆಯಲ್ಲಿಯೂ ಕೌಟುಂಬಿಕ ಸಂಬಂಧ ಮೌಲ್ಯಗಳು ಬ್ಯಾಲೆನ್ಸ್ ಆಗುವಂತೆ ನೋಡಿಕೊಳ್ಳಿ.
- ಸದಾನಂದ್ ರಾವ್, ಮನಃಶಾಸ್ತ್ರಜ್ಞರು, ಬೆಂಗಳೂರು
9880441703