‘ವಿಫಲವಾದ’ ಕಿಡ್ನಿ, ಮರು ಪರೀಕ್ಷೆಯಲ್ಲಿ ನಾರ್ಮಲ್ !
ತಲೆನೋವೆಂದು (Headache) ಆಸ್ಪತ್ರೆಗೆ ಹೋದಾಗ ಕಿಡ್ನಿ ಪರೀಕ್ಷೆ (Kidney Test) ಮಾಡಿಸಿದರು. ಡಯಾಗ್ನೋಸ್ಟಿಕ್ ಸೆಂಟರ್‌ನ ರಿಪೋರ್ಚ್‌ನಲ್ಲಿ ಕಿಡ್ನಿ ಫೈಲ್ಯೂರ್ (Kidney Failure) ವರದಿ ಬಂದಿತ್ತು. ಆಕಾಶ ಕಳಚಿಬಿದ್ದಂತಾದ ಆ ಹಿರಿಯ ನಾಗರಿಕರು ಡಯಾಲಿಸಿಸ್‌ಗೆಂದು ಆಸ್ಪತ್ರೆಗೆ ದೌಡಾಯಿಸಿದರು. ಆದರೆ ಅಲ್ಲಿನ ವೈದ್ಯರ ಸಮಯಪ್ರಜ್ಞೆಯಿಂದ ಮರು ಪರೀಕ್ಷೆ ಮಾಡಿದಾಗ ಕಿಡ್ನಿ ನಾರ್ಮಲ್ (Normal) ಎಂದಿದ್ದಾರೆ.
ಸಂದೀಪ್ ವಾಗ್ಲೆ, ಮಂಗಳೂರು
ಹಲವು ಅಪಸ್ವರಗಳ ನಡುವೆಯೂ ಆರೋಗ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಮಂಗಳೂರಿನಲ್ಲಿ ರೋಗ ನಿರ್ಣಯ ಕೇಂದ್ರ (ಡಯಾಗ್ನೋಸ್ಟಿಕ್ ಸೆಂಟರ್)ವೊಂದರ ಬೇಜವಾಬ್ದಾರಿಯಿಂದಾಗಿ ಸಾವಿನ ದವಡೆಗೆ ಸಿಲುಕುತ್ತಿದ್ದ ಹಿರಿಯ ನಾಗರಿಕರೊಬ್ಬರು (Senior citizen) ಅದೃಷ್ಟವಶಾತ್ ಬಚಾವಾದ ಘಟನೆ ನಡೆದಿದೆ. ಸಣ್ಣಪುಟ್ಟ ತೊಂದರೆಗಳಿಗೂ ನಾನಾ ಪರೀಕ್ಷೆಗೆ ಒಳಪಡುವ ನಾಗರಿಕರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾದರೆ, ಜನರ ಆರೋಗ್ಯ (Health)ದಲ್ಲಿ ಚೆಲ್ಲಾಟವಾಡುವ ಆರೋಗ್ಯ ಸಂಸ್ಥೆಗಳ ಮೇಲೆ ಕಣ್ಗಾವಲಿಡುವ ಅನಿವಾರ್ಯತೆ ಕೂಡ ಬಂದೊದಗಿದೆ.
ಆದದ್ದೇನು ?:
ನಗರದಲ್ಲಿ ವಾಸವಾಗಿರುವ 80 ವರ್ಷ ಹರೆಯದ ಉಸ್ಮಾನ್ ಎಂಬವರಿಗೆ ತೀವ್ರ ತಲೆನೋವು (Headache) ಆರಂಭವಾಗಿದ್ದು, ಏಪ್ರಿಲ್ 25ರಂದು ಪಡೀಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಮೂತ್ರ ಮತ್ತು ರಕ್ತ ಪರೀಕ್ಷೆಗೆ (Blood test) ಸಲಹೆ ನೀಡಿದರು. ಅದರಂತೆ ಅದೇ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಹೊಂದಿದ್ದ, ದೇಶದೆಲ್ಲೆಡೆ ಶಾಖೆಗಳನ್ನು ಹೊಂದಿರುವ ಹೆಸರಾಂತ ಡಯಾಗ್ನೋಸ್ಟಿಕ್ಸ್‌ನ ಪ್ರಯೋಗಾಲಯಕ್ಕೆ (Diagnostic Center) ತೆರಳಿ ಪರೀಕ್ಷೆ ಮಾಡಿಸಿದಾಗ ಕ್ರಿಯೇಟಿನೈನ್ ಮಟ್ಟಸಾಮಾನ್ಯವಾಗಿ 0.6ರಿಂದ 1.4 ಇರಬೇಕಾದಲ್ಲಿ 22 ಬಂದಿರುವ ರಿಪೋರ್ಟ್ ನೀಡಲಾಗಿತ್ತು.
ಒಂದಲ್ಲ..ಎರಡಲ್ಲ, ವ್ಯಕ್ತಿಯ ದೇಹದಿಂದ ಬರೋಬ್ಬರಿ 206 ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು !
ಪರೀಕ್ಷಾ ವರದಿ ನೋಡಿದ ಈ ಆಸ್ಪತ್ರೆ ವೈದ್ಯರು (Doctor) ಎರಡೂ ಕಿಡ್ನಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿ, ಬೇರೆ ವೈದ್ಯರನ್ನು ರೆಫರ್ ಮಾಡಿ ತಕ್ಷಣ ಡಯಾಲಿಸಿಸ್ ಆರಂಭಿಸುವಂತೆ ಸೂಚಿಸಿದರು. ತೀವ್ರ ಆಘಾತಕ್ಕೊಳಗಾದ ಉಸ್ಮಾನ್ ಮನೆಯವರು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು. ರೋಗಿ ಸಾಮಾನ್ಯ ಸ್ಥಿತಿಯಲ್ಲಿದ್ದುದನ್ನು ಕಂಡ ಅಲ್ಲಿನ ವೈದ್ಯರು ಸಂಶಯ ವ್ಯಕ್ತಪಡಿಸಿ ಮರು ಪರೀಕ್ಷೆ ನಡೆಸುವಂತೆ ಹೇಳಿದರು. ಅಲ್ಲಿ ಪರೀಕ್ಷೆ ಮಾಡಿದಾಗ ಕ್ರಿಯೇಟಿನೈನ್ ಲೆವೆಲ್ 1.1 (ಸಾಮಾನ್ಯ ಮಟ್ಟ) ಮಾತ್ರವೇ ಇರುವುದು ಪತ್ತೆಯಾಗಿದೆ. ಕೊನೆಗೂ ಹೋದ ಜೀವ ಮರಳಿ ಬಂದಂತಾಗಿ ರೋಗಿ ಮತ್ತು ಮನೆಯವರು ನಿಟ್ಟುಸಿರುಬಿಟ್ಟಿದ್ದಾರೆ.
ಮತ್ತದೇ ಕೇಂದ್ರದಲ್ಲಿ ಅಸಲಿ ರಿಸಲ್ಟ್:
ತಪ್ಪು ವರದಿ ನೀಡಿದ ಡಯಾಗ್ನೋಸ್ಟಿಕ್ ಸೆಂಟರ್‌ನ ಅಸಲಿಯತ್ತನ್ನು ತಿಳಿಯಲು ಉಸ್ಮಾನ್ ಅವರ ಅಣ್ಣನ ಮಗ ರಫೀಕ್, ಆ ಡಯಾಗ್ನೋಸ್ಟಿಕ್ ಸೆಂಟರ್‌ನ ಫಳ್ನೀರ್ ಲ್ಯಾಬ್‌ಗೆ ಕರೆದೊಯ್ದು ಅದೇ ಪರೀಕ್ಷೆಯನ್ನು ಮತ್ತೆ ಮಾಡಿಸಿದರು. ಆಗ ಕ್ರಿಯೇಟಿನೈನ್ ಮಟ್ಟ1.1 ಮಾತ್ರವೇ ಇರುವುದು ಕಂಡುಬಂದಿದೆ. ಒಂದು ವೇಳೆ, ಹಿಂದಿನ ವರದಿ (Report) ಹಿಡಿದು ನೇರವಾಗಿ ಕಿಡ್ನಿ ಡಯಾಲಿಸಿಸ್ ಮಾಡಿದಿದ್ದರೆ ರೋಗಿ ಶಾಶ್ವತವಾಗಿ ಕಿಡ್ನಿ ಸಮಸ್ಯೆಯಿಂದ ಬಳಲಬೇಕಿತ್ತು, ಪ್ರಾಣಕ್ಕೂ ಕುತ್ತು ಬರುತ್ತಿತ್ತು. ಇದೀಗ ಸಂತ್ರಸ್ತರ ಮನೆಯವರು ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಬೇಜವಾಬ್ದಾರಿಯಿಂದ ತಪ್ಪು ವರದಿ ನೀಡಿದ ಪ್ರಯೋಗಾಲಯದ ವಿರುದ್ಧ ಕ್ರಮಕ್ಕೆ ಹೋರಾಟ ಆರಂಭಿಸಿದ್ದಾರೆ.
ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?
ರೋಗಿಯ ಸಂಬಂಧಿ ರಫೀಕ್ ಎಂಬವರು ಮಾತನಾಡಿ, ಡಯಾಗ್ನೋಸ್ಟಿಕ್ ಸೆಂಟರ್‌ನ ಬೇಜವಾಬ್ದಾರಿಯಿಂದಾಗಿ ಚಿಕ್ಕಪ್ಪನ ಪ್ರಾಣಕ್ಕೇ ಅಪಾಯ ಬರುತ್ತಿತ್ತು. ವೈದ್ಯರ ಸಮಯಪ್ರಜ್ಞೆಯಿಂದ ಇದು ತಪ್ಪಿದೆ. ಜನರ ಆರೋಗ್ಯದಲ್ಲಿ ಡಯಾಗ್ನೋಸ್ಟಿಕ್ ಸೆಂಟರ್‌ಗಳು ಈ ರೀತಿ ಚೆಲ್ಲಾಟ ಆಡುವುದು ಸಲ್ಲದು. ಬೇರೆ ಯಾರಿಗೂ ಇಂಥ ಅನ್ಯಾಯ ಆಗಬಾರದು. ಅದಕ್ಕಾಗಿ ಆರೋಗ್ಯ ಇಲಾಖೆಗೆ ದೂರು ನೀಡಿದ್ದೇವೆ ಎಂದಿದ್ದಾರೆ,
ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ರೋಗಿಯ ಮನೆಯವರು ದಾಖಲೆಗಳೊಂದಿಗೆ ದೂರು ನೀಡಿದ್ದು, ಆ ಸೆಂಟರ್‌ಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಉತ್ತರ ನಿರೀಕ್ಷೆ ಮಾಡುತ್ತಿದ್ದೇವೆ. ಪ್ರಯೋಗಾಲಯದವರು ತಮ್ಮಿಂದ ತಪ್ಪು ಆಗಿಲ್ಲ ಎಂದು ಉತ್ತರ ನೀಡಿದರೆ ಪ್ರಕರಣದ ಸಂಪೂರ್ಣ ತನಿಖೆ ಮಾಡಬೇಕಾಗುತ್ತದೆ. ಮುಂದೆ ಇಂಥ ಘಟನೆ ಮರುಕಳಿಸಿದರೆ ಕೆಪಿಎಂಇ ಕಾಯ್ದೆ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ..