ಬೆಂಗಳೂರು(ಫೆ.19): ಕೊರೋನಾ ವೈರಾಣು ಮನುಷ್ಯನ ಶ್ವಾಸಕೋಶದ ಮೇಲೆ ಯಾವ ಮಟ್ಟದ ಹಾನಿ ಮಾಡಿದೆ ಎಂಬುದನ್ನು ತ್ವರಿತವಾಗಿ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ‘ಅನಮ್‌ನೆಟ್‌’ ಎಂಬ ಸಾಫ್ಟ್‌ವೇರ್‌ ಉಪಕರಣವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆ ಸಂಶೋಧಕರು ಓಸ್ಲೋ ವಿವಿ ಹಾಸ್ಟಿಟಲ್‌ ಮತ್ತು ನಾರ್ವೆಯ ಅಜ್ಡೆರ್‌ ವಿವಿಯ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಿದ್ದಾರೆ ಎಂದು ಐಐಎಸ್ಸಿಯ ಪ್ರಕಟಣೆ ತಿಳಿಸಿದೆ.

ಕೋವಿಡ್‌ ಶ್ವಾಸ ವ್ಯವಸ್ಥೆ ಮತ್ತು ಶ್ವಾಸಕೋಶದ ಜೀವಕೋಶಗಳ ಮೇಲೆ ದಾಳಿ ನಡೆಸಿ ಹಾನಿ ಮಾಡುತ್ತದೆ. ಈ ಹಾನಿಯನ್ನು ಶ್ವಾಸಕೋಶದ ಕ್ಷ-ಕಿರಣ ಅಥವಾ ಸಿಟಿ ಸ್ಕ್ಯಾನ್‌ ಮೂಲಕ ಪತ್ತೆ ಹಚ್ಚಲಾಗುತ್ತದೆ. ಕೋವಿಡ್‌ ರೋಗಿಯ ಸಿಟಿ ಸ್ಕ್ಯಾನ್‌ ವರದಿಯನ್ನು ಅನಮ್‌ನೆಟ್‌ಗೆ ನೀಡಿದಾಗ ಅದು ತನ್ನಲ್ಲಿರುವ ವಿಶೇಷ ರೀತಿಯ ಜಾಲವನ್ನು ಬಳಸಿಕೊಂಡು ಆಗಿರುವ ಹಾನಿಯನ್ನು ಹೆಚ್ಚು ನಿಖರವಾಗಿ ಪತ್ತೆ ಹಚ್ಚುತ್ತದೆ. ಬಳಿಕ ಮಾಹಿತಿಯನ್ನು ಚಿಕಿತ್ಸೆ ನೀಡುವ ವೈದ್ಯರಿಗೆ ನೀಡುತ್ತದೆ. ಇದರಿಂದ ವೈದ್ಯರು ತ್ವರಿತವಾಗಿ ಚಿಕಿತ್ಸೆ ನೀಡಲು ಮತ್ತು ಕೋವಿಡ್‌ ರೋಗಿಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ.

ಅಪ್ಪುಗೆ ಆರೋಗ್ಯಕರ, ಆದ್ರೆ ಸದ್ಯಕ್ಕೆ ನಡುವೆ ಅಂತರವಿರಲಿ..!

ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟೇಷನಲ್‌ ಮತ್ತು ದತ್ತಾಂಶ ವಿಜ್ಞಾನ (ಸಿಡಿಎಸ್‌) ಮತ್ತು ಇನ್‌ಸ್ಟು್ರಮೆಂಟೇಷನ್‌ ಮತ್ತು ಆನ್ವಯಿಕ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್‌ ಫಣೀಂಧ್ರ ಯಲವರ್ತಿ, ಪಿಎಚ್‌ಡಿ ವಿದ್ಯಾರ್ಥಿ ನವೀಲ್‌ ಪಾಲುರು, ಅವಿನ್‌ ದಯಾಳ್‌, ಜಯ ಪ್ರಕಾಶ್‌, ಅಜ್ಡೆರ್‌ ವಿವಿಯ ಲಿಂಗ ರೆಡ್ಡಿ, ಓಸ್ಲೋ ವಿವಿಯ ಹಾವರ್ಡ್‌ ಜೆನ್ಸೆನ್‌, ಥಾಮಸ್‌ ಸಾಕಿನಿಸ್‌ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.