ಮಳೆಗಾಲವೆಂದರೆ ಮಕ್ಕಳ ಮಜವೇ ಅದು, ಬೀಳುತ್ತಿರುವ ಮುತ್ತಿನಂಥ ಹನಿಗಳಿಗೆ ನಾಲಿಗೆಯೊಡ್ಡುವುದು, ಕೈಯೊಡ್ಡುವುದು, ಆಲಿಕಲ್ಲು ಬಿದ್ದರೆ ಎತ್ತಿಕೊಂಡು ಆಟವಾಡಿ ತಿನ್ನುವುದು, ಒಮ್ಮೆ ನೆನೆದು ಕುಣಿದಾಡುವುದು, ಹರಿವ ನೀರಿಗೆ ಕಾಗದದ ದೋಣಿ ಬಿಡುವುದು- ಒಟ್ಟಿನಲ್ಲಿ ಅವರನ್ನು ಮಳೆಯಿಂದ ತಪ್ಪಿಸಿ ಮನೆಯೊಳಗೆ ಕೂಡಿ ಹಾಕುವುದು ಆಗದ ಮಾತು. ಇಂಥ ಅನುಭವಗಳಿಂದ ಅವರನ್ನು ವಂಚಿತವಾಗಿಸುವುದು ನ್ಯಾಯವೂ ಅಲ್ಲ. ಆದರೆ, ಹೀಗೆ ನೆನೆದಾಗ ಬರುವ ವೈರಲ್ ಫೀವರ್, ಶೀತ, ಫ್ಲೂ, ನ್ಯುಮೋನಿಯಾ ಸೇರಿದಂತೆ ಇತರೆ ಗಾಳಿಯಿಂದ ಹರಡುವ ಕಾಯಿಲೆಗಳನ್ನು ದೂರವಿಡುವುದಾದರೂ ಹೇಗೆ?

ಈ ರೋಗಗಳಿಂದ ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸುವುದು ಕಷ್ಟದ ಮಾತಾದರೂ, ಪೋಷಕರೊಂದಿಷ್ಟು ರೋಗಗಳನ್ನು ತಡೆವ ವಿಧಾನದ ಮೊರೆ ಹೋಗಬೇಕಾದುದು ಜವಾಬ್ದಾರಿ ಮತ್ತು ಬುದ್ಧಿವಂತಿಕೆ ಕೂಡಾ. ಗಾಳಿಯಿಂದ ಹರಡುವ ಕಾಯಿಲೆಗಳೆಂದರೆ ಗಾಳಿಯಲ್ಲಿರುವ ಫಂಗೈ, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ ರೋಗಾಣುಗಳು ದೇಹಕ್ಕೆ ಸೇರಿ ತಂದೊಡ್ಡುವ ಇನ್ಫೆಕ್ಷನ್‌ಗಳು. ಉಸಿರಾಟದ ಮೂಲಕವೇ ದೇಹ ಸೇರಿ ನಂತರ ಕೆಮ್ಮು, ಸೀನು, ಮ್ಯೂಕಸ್ ಮೂಲಕ ಇತರರಿಗೂ ಹರಡುತ್ತವೆ. ಇದು ಯಾರಿಗಾದರೂ ಹರಡಬಹುದಾದರೂ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದಾದ್ದರಿಂದ ಅವರಲ್ಲಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಗಾಳಿಯಿಂದ ಹರಡುವ ಕಾಯಿಲೆಗಳು ಕೆಲ ದಿನಗಳಿಂದ ವಾರಗಳವರೆಗೆ ಇರಬಹುದು. ಹಾಗಂಥ ಅವುಗಳ ಚಿಕಿತ್ಸೆಯೂ ಹೆಚ್ಚಿನ ಬಾರಿ ಸುಲಭದ್ದಾಗಿಯೇ ಇರುತ್ತದೆ. ಆದರೂ ಮಕ್ಕಳಿಗೆ ಇವನ್ನೆಲ್ಲ ತಾಳಿಕೊಳ್ಳುವುದು ಕಷ್ಟವೇ. 

ಮಕ್ಕಳ ಬೆಸ್ಟ್ ಫ್ರೆಂಡ್ ಈ ಪೆಂಗ್ವಿನ್ ಡ್ಯಾಡ್

ಮಕ್ಕಳನ್ನು ಈ ಕಾಯಿಲೆಗಳಿಂದ ದೂರವಿಡಲು ಪೋಷಕರು ಏನು ಮಾಡಬಹುದು?

ಸ್ವಚ್ಛತೆ: ಮಕ್ಕಳಲ್ಲಿ ಸ್ವಚ್ಛತೆ ಕುರಿತ ಪ್ರಜ್ಞೆ ಹೆಚ್ಚಿಸಿ. ಅದರಲ್ಲೂ ಕೊರೋನಾದ ಈ ಕಾಲದಲ್ಲಿ ಸ್ವಚ್ಛತೆ ಹೆಚ್ಚೇ ಬೇಕಾಗುತ್ತದೆ. ಮಕ್ಕಳು ಸ್ವಚ್ಛತೆಯ ಎಲ್ಲ ಅಭ್ಯಾಸಗಳನ್ನು ಫಾಲೋ ಮಾಡುತ್ತಿದ್ದಾರೆಂಬುದನ್ನು ಪೋಷಕರು ಗಮನಿಸಬೇಕು. ಗಾಳಿಯಿಂದ ಹರಡುವ ಕಾಯಿಲೆಯನ್ನು ಸ್ವಚ್ಛತೆ ಬಹು ಮಟ್ಟಿಗೆ ತಡೆಯುತ್ತದೆ. 

- ನಿಮ್ಮ ಮಗು ಮನೆಯಿಂದ ಹೊರಗೆ ಕಾಲಿಡುವಾಗ ತನ್ನ ಮುಖಕ್ಕೆ ಸೇಫ್ಟಿ ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯವಾಗಿಸಿ. ಬಹಳ ಚಿಕ್ಕ ಮಕ್ಕಳಾದರೆ ಅವರ ಬಾಯಿಗೆ ಕಾಟನ್ ಬಟ್ಟೆಯನ್ನು ಅಡ್ಡ ಕಟ್ಟಿ. 

- ಮಕ್ಕಳು ಕೆಮ್ಮುವಾಗ ಹಾಗೂ ಆಕ್ಷಿ ಮಾಡುವಾಗ ತಮ್ಮ ಮೊಣಕೈ ಅಥವಾ ಟಿಶ್ಯೂದಿಂದ ಬಾಯಿ ಮುಚ್ಚಿಕೊಳ್ಳುವ ಅಭ್ಯಾಸ ಮಾಡಿಸಿ. ಪದೇ ಪದೆ ಕೈಗಳನ್ನು ಸೋಪ್ ಹಾಕಿ ತೊಳೆಯುವ ಅಭ್ಯಾಸ ಇರಬೇಕು. ಇದರಿಂದ ಬಹಳಷ್ಟು ಕಾಯಿಲೆ ಹರಡುವ ಕೀಟಾಣುಗಳನ್ನು ದೇಹಕ್ಕೆ ಸೇರುವ ಮುಂಚೆಯೇ ಓಡಿಸಿದಂತಾಗುತ್ತದೆ. 

- ಪ್ರತಿ ಬಾರಿ ಊಟಕ್ಕೆ ಕೂರುವ ಮುನ್ನ, ಯಾವುದೇ ಆಹಾರವನ್ನು ಬಾಯಿಗೆ ಹಾಕುವ ಮೊದಲು, ಹೊರಗೆ ಆಡಿ ಮನೆಗೆ ಬಂದ ಕೂಡಲೇ, ವಾಶ್‌ರೂಂ ಬಳಸಿದ ಬಳಿಕ ಮಕ್ಕಳಿಗೆ ಕೈಕಾಲು ತೊಳೆಸಿ. ದಿನಕ್ಕೆ ಕನಿಷ್ಠ 8-10 ಬಾರಿಯಾದರೂ ಕೈ ತೊಳೆಯುವ ಅಭ್ಯಾಸ ಒಳ್ಳೆಯದು. 

- ಮಳೆಯಲ್ಲಿ ನೆನೆದ ಬಳಿಕ, ಕೆಸರಲ್ಲಿ ಆಡಿ ಬಂದ ಬಳಿಕ, ಸಾರ್ವಜನಿಕ ಪ್ಲೇ ಏರಿಯಾ ಬಳಸಿದ ನಂತರದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದು ಉತ್ತಮ ಅಭ್ಯಾಸ. ಇದರಿಂದ ಹೊರಗಿಂದ ಬಂದ ಬ್ಯಾಕ್ಟೀರಿಯಾಗಳು ನೀರಿನೊಂದಿಗೆ ಹೊರ ಹರಿದು ಹೋಗುತ್ತವೆ. ಪೋಷಕರು ಏನು ಮಾಡುತ್ತಾರೋ ಮಕ್ಕಳು ಅದನ್ನೇ ಅನುಕರಿಸುತ್ತಾರೆ. ಹಾಗಾಗಿ, ನೀವು ಕೂಡಾ ಇಂಥ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. 

ಮನೆಯಲ್ಲಿ ಗಾಳಿಬೆಳಕು: ಮನೆಯಲ್ಲಿ ಗಾಳಿಬೆಳಕ್ಕು ಹೆಚ್ಚು ಒಳಹೊರಗೆ ಆಡುತ್ತಿದ್ದಾಗ ಎಲ್ಲವೂ ಸ್ವಚ್ಛವಿರುತ್ತದೆ. ಮನಸ್ಸೂ ಪ್ರಶಾಂತವಾಗಿರುತ್ತದೆ, ಕಾಯಿಲೆಗಳೂ ಕಡಿಮೆ. ಆದರೆ, ಗಾಳಿಯಿಲ್ಲದ ಸಂತೆ ಮಾರುಕಟ್ಟೆಯಂತಾದ ಮನೆಯಲ್ಲಿ ಕಾಯಿಲೆ ಹರಡುವ ಕೀಟಾಣುಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ. ಇಂಥಲ್ಲಿ ಏರ್ ಫಿಲ್ಟರ್ ಬಳಸಬೇಕು, ಡಿಸ್‌ಇನ್ಪೆಕ್ಟೆಂಟ್ ಆಗಾಗ ಸ್ಪ್ರೇ ಮಾಡಬೇಕು. ಧೂಳನ್ನು ಪ್ರತಿ ದಿನ ಒರೆಸಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. 

ಆಹಾರ: ಮಕ್ಕಳಿಗೆ ಸಾಧ್ಯವಾದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರ ನೀಡಿ. ತಾಜಾ ತರಕಾರಿಗಳು, ಹಣ್ಣುಗಳು, ಕುದಿಸಿದ ನೀರು, ಡ್ರೈ ಫ್ರೂಟ್ಸ್, ನಟ್ಸ್, ಹಾಲು, ಮೊಸರು, ಮೊಟ್ಟೆ ಇವೆಲ್ಲವೂ ಮಗುವಿನ ಡಯಟ್‌ನಲ್ಲಿರಲಿ. ಇದರೊಂದಿಗೆ ಲೇಹಗಳು, ಕಷಾಯ, ಅರಿಶಿನ, ಜೀರಿಗೆ ಮುಂತಾದ ಔಷಧೀಯ ಗುಣವುಳ್ಳ ಅಡುಗೆ ಸಾಮಗ್ರಿಗಳ ಬಳಕೆ ಹೆಚ್ಚಿಸಿ. ಇದು ವೈರಸ್, ಬ್ಯಾಕ್ಟೀರಿಯಾ ಜೊತೆ ಗುದ್ದಾಡುವ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. 

ನೋವನ್ನು ತಿರಸ್ಕರಿಸಬೇಡಿ, ತಬ್ಬಿಕೊಳ್ಳಿ; ಟಾಂಗ್ಲಿನ್ ಧ್ಯಾನ!

ವ್ಯಾಕ್ಸಿನೇಶನ್ಸ್: ಮಕ್ಕಳ ವ್ಯಾಕ್ಸಿನೇಶನ್ ವಿಷಯದಲ್ಲಿ ಕಡೆಗಣನೆ ಬೇಡವೇ ಬೇಡ. ಸಮಯಕ್ಕೆ ಸರಿಯಾಗಿ ಕೊಡಬೇಕಾದ ಎಲ್ಲ ವ್ಯಾಕ್ಸಿನೇಶನ್‌ಗಳನ್ನೂ ಕೊಡಿಸಿ. ವ್ಯಾಕ್ಸಿನೇಶನ್ ಮಕ್ಕಳಿಗೆ ಕೆಲ ನಿರ್ದಿಷ್ಟ ಗಂಭೀರ ಕಾಯಿಲೆಗಳು ಎಂದಿಗೂ ಬಾರದಂತೆ ನೋಡಿಕೊಳ್ಳುತ್ತದೆ. 

- ಇದಲ್ಲದೆ, ಮಕ್ಕಳಿಗೆ ವಾಂತಿ, ಕೆಮ್ಮು, ಹಸಿವಿಲ್ಲದಿರುವುದು, ಜ್ವರ, ಹೊಟ್ಟೆನೋವು, ಮೂತ್ರ ಕಡಿಮೆ ಹೋಗುವುದು ಏನೇ ಕಂಡುಬರಲಿ, ಮನೆಯಲ್ಲೇ ಗೊತ್ತಿರುವ ಮದ್ದು ತೆಗೆದುಕೊಳ್ಳುತ್ತಾ ಸಮಯ ಮುಂದೂಡುವ ಬದಲು ಮಕ್ಕಳ ತಜ್ಞರ ಬಳಿ ಮೊದಲು ತೋರಿಸಿ. ಗಾಳಿಯಿಂದ ಹರಡುವ ಸಾಮಾನ್ಯ ಕಾಯಿಲೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸದಿದ್ದಲ್ಲಿ ಅವು ನ್ಯುಮೋನಿಯಾಗೆ ತಿರುಗಬಹುದು.