ಬಿ ಕೇರ್ಫುಲ್, ಟಾಯ್ಲೆಟ್‍ನಲ್ಲೂ ಅಟ್ಯಾಕ್ ಮಾಡುತ್ತೆ ಕೊರೋನಾ!
ಕೊರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಅದೇನಂದ್ರೆ ಟಾಯ್ಲೆಟ್ ಫ್ಲಶ್ ಮಾಡಿದ್ರೂ ಕೊರೋನಾ ಬರುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಕೆಮ್ಮು,ಸೀನಿನ ಮೂಲಕ ಕೊರೋನಾ ವೈರಸ್ ಹರಡುತ್ತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಟಾಯ್ಲೆಟ್ ಫ್ಲಶ್‍ನಿಂದಲೂ ಕೊರೋನಾ ಬರಬಹುದು ಎನ್ನುವ ಆಘಾತಕಾರಿ ಮಾಹಿತಿಯನ್ನು ಇತ್ತೀಚೆಗೆ ಚೀನಾದ ಯಾಂಗ್‍ಝೋ ಯುನಿವರ್ಸಿಟಿ ಸಂಶೋಧಕರು ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ. ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ವಿರುದ್ಧದ ಸಮರಕ್ಕೆ ಸಜ್ಜಾಗಿರುವ ಜನರಿಗೆ ಈಗ ಈ ಮಾಹಿತಿ ಹೊಸ ತಲೆನೋವು ತಂದಿಟ್ಟಿದೆ. ಮನೆಯಲ್ಲಾದ್ರೆ ಹೇಗೋ ಮ್ಯಾನೇಜ್ ಮಾಡ್ಬಹುದು. ಆದ್ರೆ ಆಫೀಸ್ ಅಥವಾ ಇನ್ಯಾವುದೋ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋದಾಗ ಏನ್ ಮಾಡೋದು? ಪಬ್ಲಿಕ್ ಟಾಯ್ಲೆಟ್ ಬಳಸೋದು ಅನಿವಾರ್ಯ.
ಮಳೆಗಾಲದ ರೋಗಗಳಿಂದ ಮಕ್ಕಳ ರಕ್ಷಣೆ ಹೀಗಿರಲಿ!
ಎಚ್ಚರ ತಪ್ಪಿದ್ರೆ ಡೇಂಜರ್
ಕೊರೋನಾ ವೈರಸ್ ಮಾನವನ ಜೀರ್ಣ ನಾಳದಲ್ಲಿ ಬದುಕುವ ಸಾಮಥ್ರ್ಯ ಹೊಂದಿದ್ದು, ಮಲದಲ್ಲೂ ಕಾಣಿಸಿಕೊಳ್ಳುತ್ತೆ ಎಂದು ಫಿಸಿಕ್ಸ್ ಫ್ಲುವಿಡ್ಸ್ ಜರ್ನಲ್‍ನಲ್ಲಿ ಪ್ರಕಟವಾದ ಈ ಅಧ್ಯಯನ ತಿಳಿಸಿದೆ. ಹೀಗಾಗಿ ಇನ್ನು ಮುಂದೆ ಪಬ್ಲಿಕ್ ಟಾಯ್ಲೆಟ್ ಬಳಕೆ ಮಾಡುವಾಗ ಅಥವಾ ನಿಮ್ಮ ಮನೆಯಲ್ಲೇ ಯಾರಾದ್ರೂ ಕೊರೋನಾ ಶಂಕಿತರಿದ್ರೆ ಟಾಯ್ಲೆಟ್ ಬಳಸುವಾಗ ಮುನ್ನೆಚ್ಚರಿಕೆ ವಹಿಸೋದು ಅಗತ್ಯ. ಇಲ್ಲವಾದ್ರೆ ಕೊರೋನಾ ಹೆಮ್ಮಾರಿ ಗೊತ್ತೇ ಆಗದಂತೆ ನಿಮ್ಮ ದೇಹ ಸೇರಿಕೊಳ್ಳಬಹುದು.
ಫ್ಲಶ್ ಮೂಲಕ ಅದೇಗೆ ಹರಡುತ್ತೆ?
ಟಾಯ್ಲೆಟ್ ಫ್ಲಶ್ ಮಾಡಿದಾಗ ಬೌಲ್‍ಗೆ ನೀರು ವೇಗವಾಗಿ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತೆ. ಈ ಸಮಯದಲ್ಲಿ ವೈರಸ್‍ಗಳನ್ನೊಳಗೊಂಡ ಕಣ್ಣಿಗೆ ಕಾಣಿಸದಂತಹ ಏರೋಸೊಲ್ ಕಣಗಳು ಬೌಲ್‍ನಿಂದ ಹೊರಗೆ ಹಾರಿ ವಾತಾವರಣಕ್ಕೆ ಸೇರುವ ಸಾಧ್ಯತೆಯಿದೆ. ಶೇ.40-60ರಷ್ಟು ಕಣಗಳು ಟಾಯ್ಲೆಟ್ ಸೀಟ್‍ನಿಂದ ಮೇಲೆ ಹಾರುವ ಮೂಲಕ ನೆಲದಿಂದ 106 ಸೆಂ.ಮೀ.ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಹರಡುತ್ತವೆ. ಫ್ಲಶ್ ಮಾಡಿದ 35-70 ಸೆಕೆಂಡ್‍ಗಳ ಬಳಿಕವೂ ಈ ಕಣಗಳು ಮೇಲೇರುತ್ತಲಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಟಾಯ್ಲೆಟ್ ಬೌಲ್ ಸೋಂಕಿನ ಮೂಲ
ಕೊರೋನಾ ವೈರಸ್ ಸೋಂಕಿರುವ ವ್ಯಕ್ತಿ ಟಾಯ್ಲೆಟ್ ಬಳಸಿದ ಬಳಿಕ ಬೌಲ್‍ನಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಸ್‍ಗಳಿರುವ ಸಾಧ್ಯತೆಯಿದೆ. ಹೀಗಾಗಿ ಟಾಯ್ಲೆಟ್ ಬಳಸುವಾಗ ಎಚ್ಚರಿಕೆ ವಹಿಸದಿದ್ರೆ ಸೋಂಕು ಹರಡುವ ಸಾಧ್ಯತೆಯಿದೆ.
ಟಾಯ್ಲೆಟ್ ಬಳಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ
-ಪಬ್ಲಿಕ್ ಟಾಯ್ಲೆಟ್ ಬಳಸುವ ಮುನ್ನ ಲಿಡ್ ಮುಚ್ಚಿ ಫ್ಲಶ್ ಮಾಡಿ. ಇಲ್ಲವಾದ್ರೆ ಬೌಲ್‍ನಲ್ಲಿರುವ ವೈರಸ್‍ಗಳು ಸುತ್ತಲಿನ ವಾತಾವರಣವನ್ನು ಸೇರುವ ಸಾಧ್ಯತೆಯಿದೆ. ಇದ್ರಿಂದ ನಿಮಗೆ ಮಾತ್ರವಲ್ಲ, ನಿಮ್ಮ ಬಳಿಕ ಬರುವವರಿಗೂ ಸೋಂಕು ತಗುಲುವ ಅಪಾಯವಿದೆ.
-ಟಾಯ್ಲೆಟ್ ಸೀಟ್ ಮೇಲೂ ವೈರಸ್‍ಗಳಿರುವ ಸಾಧ್ಯತೆಯಿದೆ. ಹೀಗಾಗಿ ಸೀಟ್ ಅನ್ನು ನೀರಿನಿಂದ ತೊಳೆದು ಆ ಬಳಿಕ ಕುಳಿತುಕೊಳ್ಳಿ.
-ಪಬ್ಲಿಕ್ ಟಾಯ್ಲೆಟ್ ಬಳಕೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಂದ್ರೆ ಒಬ್ಬರು ಟಾಯ್ಲೆಟ್‍ನಿಂದ ಹೊರಗೆ ಬಂದ ತಕ್ಷಣ ನೀವು ಒಳ ಪ್ರವೇಶಿಸಬೇಡಿ. ಸ್ವಲ್ಪ ಸಮಯ ಬಿಟ್ಟು ಹೋಗಿ.
ಪುರುಷತ್ವಕ್ಕೆ ಅಪಾಯ ತಂದಿಡುತ್ತಿದೆ ಕೊರೋನಾ!
-ಮನೆಯಲ್ಲಿ ಕೊರೋನಾ ಸೋಂಕಿನ ಶಂಕೆಯಿರುವ ವ್ಯಕ್ತಿಗಳಿದ್ರೆ ಟಾಯ್ಲೆಟ್ ಅನ್ನು ನೀರು ಹಾಗೂ ಟಾಯ್ಲೆಟ್ ಕ್ಲೀನರ್‍ನಿಂದ ಸ್ವಚ್ಛಗೊಳಿಸದ ಬಳಿಕವೇ ಬಳಸಿ. ಟಾಯ್ಲೆಟ್‍ನಲ್ಲಿರುವ ಟ್ಯಾಪ್, ಕಮೋಡ್ ಸೇರಿದಂತೆ ಪ್ರತಿ ವಸ್ತುವನ್ನು ಕೂಡ ಸ್ವಚ್ಛಗೊಳಿಸೋದು ಮುಖ್ಯ. ಟಾಯ್ಲೆಟ್ ಬಾಗಿಲಿನ ಹಿಡಿಯನ್ನು ಕೂಡ ಸೋಪ್ ನೀರಿನಿಂದ ಒರೆಸಿ.
-ಫ್ಲಶ್ ಬಟನ್‍ನಲ್ಲಿಯೂ ವೈರಸ್‍ಗಳಿರುವ ಸಾಧ್ಯತೆಯಿದೆ. ಹೀಗಾಗಿ ಫ್ಲಶ್ ಮಾಡಿದ ಬಳಿಕ ಕೈಗಳನ್ನು ಸೋಪ್ ಹಾಗೂ ನೀರಿನಿಂದ ಸ್ವಚ್ಛಗೊಳಿಸಿ. ಮನೆಯ ಟಾಯ್ಲೆಟ್‍ನಲ್ಲಿ ಸೋಪ್ ಅಥವಾ ಹ್ಯಾಂಡ್‍ವಾಷ್ ಇಡಿ. ಇದ್ರಿಂದ ತಕ್ಷಣಕ್ಕೆ ಕೈಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತೆ.
-ಪ್ರಸ್ತುತ ಸನ್ನಿವೇಶದಲ್ಲಿ ಹೊರಗೆ ಹೋದಾಗ ಪಬ್ಲಿಕ್ ಟಾಯ್ಲೆಟ್ ಬಳಕೆ ಮಾಡದೇ ಇರೋದು ಒಳ್ಳೆಯದು. ಮಾಡಲೇಬೇಕಾದ ಅನಿವಾರ್ಯತೆ ಎದುರಾದ್ರೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಟಾಯ್ಲೆಟ್ ಬಳಕೆ ಬಳಿಕ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಷ್ ಬಳಸಿ ಸ್ವಚ್ಛಗೊಳಿಸಿ.
-ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಾಯ್ಲೆಟ್ ಇದ್ರೆ ಕೊರೋನಾ ಸೋಂಕಿನ ಶಂಕೆಯಿರುವ ಸದಸ್ಯರು ಬಳಸುವ ಟಾಯ್ಲೆಟ್ ಅನ್ನು ಉಳಿದವರು ಬಳಸದಿರೋದು ಒಳ್ಳೆಯದು.