ವ್ಯಕ್ತಿತ್ವಕ್ಕೆ ಧ್ರುವಗಳನ್ನು ನೀಡುವ Bipolar Disorder
ಧನುಷ್ ಅಭಿನಯದ “3’ ಸಿನಿಮಾ ನೆನಪಿರಬಹುದು ಅಥವಾ ಕೇಳಿರಬಹುದು. ಚಿತ್ರದಲ್ಲಿ ಆತ ಒಮ್ಮೆ ಮಹಾ ಕೂಲ್ ಆಗಿದ್ದರೆ ಇನ್ನೊಮ್ಮೆ ಕೆಟ್ಟ ಕ್ರೂರಿಯಾಗುತ್ತಾನೆ. ಇದು ಬೈಪೋಲಾರ್ ಡಿಸಾರ್ಡರ್ ಎನ್ನುವ ಮಾನಸಿಕ ಸಮಸ್ಯೆಯ ಮೇಲೆ ಆಧರಿತವಾಗಿದ್ದ ಚಿತ್ರವಾಗಿತ್ತು. ಅಂದ ಹಾಗೆ, ಪ್ರತಿವರ್ಷ ಮಾರ್ಚ್ 30ರಂದು ಬೈಪೋಲಾರ್ ದಿನವನ್ನು ಆಚರಿಸಲಾಗುತ್ತದೆ.
ಮನುಷ್ಯನ ಸ್ವಭಾವಕ್ಕೆ ಹಲವಾರು ಮುಖಗಳಿರುವುದು ಸಹಜ. ಆದರೆ, ಈ ನಿರ್ದಿಷ್ಟವಾದ ತೊಂದರೆಯಿದ್ದಲ್ಲಿ ಸ್ಪಷ್ಟವಾಗಿ ಎರಡು ಧ್ರುವಗಳು (Polar) ಗೋಚರಿಸುತ್ತವೆ. ಒಂದೊಂದು ಧ್ರುವಕ್ಕೂ ಅಜಗಜಾಂತರ ವ್ಯತ್ಯಾಸ. ಇದನ್ನೇ ಬೈಪೋಲಾರ್ (Bipolar) ಎನ್ನುತ್ತಾರೆ. ಹೀಗೆಂದರೆ, ಯಾರಿಗೂ ಅರ್ಥವಾಗುವುದಿಲ್ಲ. 2012ರಲ್ಲಿ ಬಿಡುಗಡೆಯಾದ ಧನುಷ್ ಅಭಿನಯದ “3” ಸಿನಿಮಾ ನೆನಪಿಸಿಕೊಳ್ಳಿ, ಆಗ ಎಲ್ಲರಿಗೂ ಅದರ ಅರ್ಥ ಹೊಳೆದುಬಿಡುತ್ತದೆ.
ಬೈಪೋಲಾರ್ ಡಿಸಾರ್ಡರ್ (Disorder) ಎನ್ನುವುದು ಕೇವಲ ಸಿನಿಮಾಕ್ಕಾಗಿ ಸೃಷ್ಟಿಸಿದ ಕಲ್ಪನೆಯಲ್ಲ. ಇದು ನೈಜವಾಗಿಯೂ ಕೆಲವರನ್ನು ಕಾಡುವ ಸಮಸ್ಯೆ. ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯನ್ನು ಕೇಂದ್ರೀಕೃತವಾಗಿಟ್ಟುಕೊಂಡು ಹಲವಾರು ಸಿನಿಮಾಗಳು (Cinema) ಬಂದಿವೆ. ಬಾಲಿವುಡ್ ನಲ್ಲಿ ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಕರೀನಾ ಕಪೂರ್ (Kareena Kapoor) ಅವರ “ಹೀರೋಯಿನ್’ ಕೂಡ ಇದೇ ಸಮಸ್ಯೆಯನ್ನು ಬಿಂಬಿಸಿರುವ ಚಿತ್ರ. ಹಾಲಿವುಡ್ ನಲ್ಲೂ ಹಲವು ಚಿತ್ರಗಳಿವೆ. ಅವುಗಳಲ್ಲಿ ಒಂದು “ದ ಡಾರ್ಕ್ ಹಾರ್ಸ್’. ನ್ಯೂಜಿಲ್ಯಾಂಡ್ ನ ಪ್ರತಿಭಾವಂತ ಚೆಸ್ ಆಟಗಾರ ಜೆನೆಸಿಸ್ ಪೊಟಿನಿ (Genesis Potini) ಅವರ ಜೀವನವನ್ನು ಆಧರಿಸಿದ ಈ ಚಿತ್ರ ಬೈಪೋಲಾರ್ ಸಮಸ್ಯೆಯನ್ನು ಎಲ್ಲೂ ಸಿನಿಮೀಯವಾಗಿ ತೋರಿಸದೆ, ಸಮಸ್ಯೆಯ ಎಳೆಯನ್ನೇ ಹಿಡಿದು ಸಾಗುವಲ್ಲಿ ಯಶಸ್ವಿಯಾಗಿದೆ.
ಮಹಾನ್ ಕಲಾವಿದನ ನೆನಪಿನಲ್ಲಿ....
ಬೈಪೋಲಾರ್ ಸಮಸ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಈ ತೊಂದರೆಗೆ ಬೆಂಬಲ ವ್ಯವಸ್ಥೆ ರೂಪಿಸಲು, ಈ ರೋಗದ ಕುರಿತು ಸಮಾಜದಲ್ಲಿರುವ ಮುಜುಗರದ ಮನಸ್ಥಿತಿಯನ್ನು ಹೋಗಲಾಡಿಸಲು ಪ್ರತಿವರ್ಷ ಮಾರ್ಚ್ 30ರಂದು “ವಿಶ್ವ ಬೈಪೋಲಾರ್ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಡಚ್ ಪೇಂಟರ್ (Painter) ವಿನ್ಸೆಂಟ್ ವ್ಯಾನ್ ಗೋಗ್ (Vincent Van Gogh) ಅವರ ಹುಟ್ಟುಹಬ್ಬದಂದು ಆಚರಿಸಲಾಗುತ್ತದೆ. ಏಕೆಂದರೆ, ಅವರಿಗೂ ಈ ಸಮಸ್ಯೆಯಿತ್ತು.
ಅಚ್ಚರಿಯೆಂದರೆ, ವಿನ್ಸೆಂಟ್ ವ್ಯಾನ್ ಗೋಗ್ ಅವರಿಗೆ ಬೈಪೋಲಾರ್ ವ್ಯಕ್ತಿತ್ವವಿತ್ತು ಎನ್ನುವುದು ಮರಣೋತ್ತರವಾಗಿ ಪತ್ತೆಯಾಗಿತ್ತು. ಅವರು ಜೀವನದಲ್ಲಿ ಎದುರಿಸಿದ ಸಮಸ್ಯೆಗಳ ಸರಮಾಲೆ ಬೆಳಕಿಗೆ ಬಂದ ಬಳಿಕ ಅವರಿಗಿದ್ದ ರೋಗದ ಪತ್ತೆಯಾಗಿತ್ತು. ಬೈಪೋಲಾರ್ ಸಮಸ್ಯೆಯ ವಿಕ್ಟಿಮ್ (Victim) ಆಗಿದ್ದ ಈ ಕಲಾವಿದ ಸ್ವತಃ ತಾವೇ ತಮ್ಮ ಕಿವಿಯನ್ನು ಕತ್ತರಿಸಿಕೊಂಡುಬಿಟ್ಟಿದ್ದರು! ಅತಿ ಹೆಚ್ಚು ಹಿಂಸೆಗೆ ಒಳಗಾದ ಮಹಾನ್ ಕಲಾವಿದ ಎನ್ನುವ ಖ್ಯಾತಿಯೂ ಅವರಿಗಿದೆ.
ನಿಮಗೆ ಗೊತ್ತೇ? ವಿಶ್ವದ ಹಲವೆಡೆ ಬೈಪೋಲಾರ್ ಸಮಸ್ಯೆ ಸಾಮಾನ್ಯವಾಗಿದೆ. ತೊಂದರೆಗೆ ಒಳಗಾದವರ ಅಂಕಿಸಂಖ್ಯೆಯ ಕುರಿತು ನಿಖರವಾದ ಮಾಹಿತಿ ಇಲ್ಲ. ಆದರೆ, ಈ ತೊಂದರೆಗೆ ಸಿಲುಕಿರುವ ಶೇ.77ರಷ್ಟು ಮಂದಿ ತಾವು ಅತೀವ ಏಕಾಂಗಿಗಳು (Alone) ಅಥವಾ ತಮಗೆ ಯಾರೂ ಇಲ್ಲ ಎನ್ನುವ ಭಾವನೆ ಹೊಂದಿರುತ್ತಾರಂತೆ. ಶೇ.81ರಷ್ಟು ಮಂದಿ ತಮ್ಮನ್ನು ಯಾರೂ ಅರ್ಥವೇ ಮಾಡಿಕೊಳ್ಳುವುದಿಲ್ಲ ಎನ್ನುವ ಫೀಲಿಂಗ್ ಹೊಂದಿರುತ್ತಾರೆ.
ಏನಿದು ಬೈಪೋಲಾರ್ ಡಿಸಾರ್ಡರ್?
ಮಾನಸಿಕ ಸ್ಥಿತಿಗತಿಯಲ್ಲಿ ತೀವ್ರವಾದ ಏರಿಳಿತವಿರುವುದು ಇದರ ಮೊದಲ ಲಕ್ಷಣ. ಇವರು ನಿಜಕ್ಕೂ ಮಾನಸಿಕವಾಗಿ ಎರಡು ಧ್ರುವಗಳನ್ನು ಹೊಂದಿರುತ್ತಾರೆ. ಇದನ್ನು ಬೈಪೋಲಾರ್ ಮೇನಿಯಾ (Mania) ಹಾಗೂ ಬೈಪೋಲಾರ್ ಖಿನ್ನತೆಯ (Depressive) ಹಂತ ಎಂದು ಗುರುತಿಸಲಾಗಿದೆ.
ಮಕ್ಕಳನ್ನು ಈ ರೀತಿ ಬೆಳೆಸ್ಬೇಡಿ, ಸಿಕ್ಕಾಪಟ್ಟೆ ಹಠಮಾರಿಗಳಾಗ್ತಾರೆ
ಮೇನಿಯಾ ಎಂದರೆ ಬಹುತೇಕರಿಗೆ ಗೊತ್ತಿರಬಹುದು. ಅದು ಒಂದು ರೀತಿಯ ಅತಿ ಉತ್ತೇಜಕ ಹಾಗೂ ಉದ್ವಿಗ್ನ ಸ್ಥಿತಿ. ಆ ಸಮಯದಲ್ಲಿ ಸಮಸ್ಯೆ ಹೊಂದಿರುವ ವ್ಯಕ್ತಿ ಅತಿಯಾಗಿ ಕ್ರಿಯಾಶೀಲವಾಗಿರುತ್ತಾರೆ. ಅತಿ ಕಡಿಮೆ ನಿದ್ದೆ ಮಾಡುತ್ತಾರೆ. ದಿನಕ್ಕೆ ಕೇವಲ ಒಂದೆರಡು ಗಂಟೆಗಳ ಕಾಲ ನಿದ್ದೆ ಮಾಡಿದರೂ ಲವಲವಿಕೆಯಿಂದಲೇ ಇರುತ್ತಾರೆ. ಅಲ್ಲಿ ಚಡಪಡಿಕೆ ಇರುತ್ತದೆ. ಹಾಗೂ ಒಂದು ಕಡೆ ಕೂತಲ್ಲಿ ಕೂರಲಾಗದ ಸ್ಥಿತಿ ಇರುತ್ತದೆ. ಇದೇ ಸಮಯದಲ್ಲಿ ಅತಿಯಾದ ಕಿರಿಕಿರಿಯನ್ನೂ ಅನುಭವಿಸುತ್ತಾರೆ. ಸಿಕ್ಕಾಪಟ್ಟೆ ಕೋಪವೂ ಬರಬಹುದು.
ಮೇನಿಯಾಕ್ಕೆ ಸಂಪೂರ್ಣ ವಿರುದ್ಧ ಸ್ಥಿತಿ ಖಿನ್ನತೆ. ಇಲ್ಲಿ ಮನಸ್ಥಿತಿ ಭಾರೀ ಕೆಳಮಟ್ಟದಲ್ಲಿರುತ್ತದೆ. ಯಾವುದನ್ನೂ ಮಾಡಲು ಇಷ್ಟವಾಗುವುದಿಲ್ಲ. ಯಾವುದರಲ್ಲೂ ಆಸಕ್ತಿ ಇಲ್ಲದೆ, ಹಾಸಿಗೆಯಿಂದ ಏಳಲಿಕ್ಕೂ ಬೇಸರವಾಗುತ್ತದೆ. ಅತಿಯಾದ ನಿದ್ದೆ ಮಾಡುತ್ತಾರೆ. ಸ್ನಾನ ಸೇರಿದಂತೆ ಸ್ವಚ್ಛತೆಯ ದೈನಂದಿನ ಕೆಲಸವನ್ನೂ ಮಾಡಿಕೊಳ್ಳದೆ ನಿರಾಸಕ್ತರಾಗಿರುತ್ತಾರೆ. ಇದರ ಪ್ರಮುಖ ಲಕ್ಷಣ ಎಂದರೆ ಅತಿಯಾದ ನಿದ್ದೆ. ದಿನವಿಡೀ ಮಲಗಿಕೊಂಡೇ ಕಳೆಯಬಹುದು.
Miss Universe ಹರ್ನಾಜ್ ಸಂಧುಗೆ ಈ ಕಾಯಿಲೆ ಇದೆಯಂತೆ!
ಬೇಕಿದೆ ಬೆಂಬಲ ವ್ಯವಸ್ಥೆ (Support System)
ಬೈಪೋಲಾರ್ ಡಿಸಾರ್ಡರ್ ಮಾತ್ರವಲ್ಲ, ಯಾವುದೇ ಮಾನಸಿಕ ಸಮಸ್ಯೆಯನ್ನು ನಮ್ಮ ಸಮಾಜ ಒಂದು ರೀತಿಯ ಮುಜುಗರದಿಂದ ಸ್ವೀಕಾರ ಮಾಡುತ್ತದೆ. ಸಮಸ್ಯೆ ಪೀಡಿತರು ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುವುದಿಲ್ಲ, ಸಮಾಜ ಅವರನ್ನು ಮುಕ್ತವಾಗಿ ಸ್ವೀಕಾರ ಮಾಡುವುದಿಲ್ಲ. ಹೀಗಾಗಿ, ಅವರು ಏಕಾಂಗಿಯಾಗಿ ಉಳಿಯುವ ಸಾಧ್ಯತೆಯೇ ಹೆಚ್ಚು. ಈ ನಿಟ್ಟಿನಲ್ಲಿ ಅವರನ್ನು ಸಮಾಜದೊಂದಿಗೆ ಜೋಡಿಸುವ ಅಗತ್ಯವಿರುತ್ತದೆ. ಸೂಕ್ತ ಚಿಕಿತ್ಸೆ ಹಾಗೂ ಬೆಂಬಲ ವ್ಯವಸ್ಥೆಯ ಮೂಲಕ ಅವರ ಜೀವನ ಹಾಗೂ ಸಂಬಂಧಗಳನ್ನು ಉತ್ತಮಗೊಳಿಸುವ ಅಗತ್ಯವಿರುತ್ತದೆ.