ನೀರು ಆರೋಗ್ಯಕ್ಕೆ ಒಳಿತು ಹೌದು, ಸಿಕ್ಕಾಪಟ್ಟೆ ಆದರೆ ಡೇಂಜರಸ್!
ದೇಹಕ್ಕೆ ಯಾವುದೂ ಅತಿಯಾಗಬಾರದು. ಪ್ರತಿಯೊಬ್ಬರ ದೇಹ ರಚನೆ ಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಆಹಾರ ಹಾಗೂ ನೀರಿನ ಸೇವನೆ ಮಾಡ್ಬೇಕು. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದ್ರೆ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ.
ನೀರಿ (Water) ಲ್ಲದೆ ನಾವಿರಲು ಸಾಧ್ಯವಿಲ್ಲ. ನೀರನ್ನು ಇದೇ ಕಾರಣಕ್ಕೆ ಜೀವಜಲ ಅಂತ ಕರೆಯೋದು. ನೀರು ಆರೋಗ್ಯ (Health) ಕ್ಕೆ ಒಳ್ಳೆಯದು, ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ಅನೇಕ ಸಮಸ್ಯೆ ಶುರುವಾಗುತ್ತದೆ ಎನ್ನುವ ಕಾರಣಕ್ಕೆ ನೀರನ್ನು ಹೆಚ್ಚೆಚ್ಚು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಅನೇಕರು ದಿನದಲ್ಲಿ ನಾಲ್ಕೈದು ಲೀಟರ್ ನೀರು ಸೇವನೆ ಮಾಡುವವರಿದ್ದಾರೆ. ನೀರು ಒಳ್ಳೆಯದು ಎನ್ನುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿತಾರೆ. ಗಂಟೆಗಳನ್ನು ಲೆಕ್ಕವಿಟ್ಟು ನೀರು ಕುಡಿಯುವವರೂ ಇದ್ದಾರೆ. ಅನೇಕರ ದೇಹ ಇಷ್ಟು ನೀರನ್ನು ಕೇಳುವುದಿಲ್ಲ. ಆದ್ರೆ ಒತ್ತಾಯ ಪೂರ್ವಕವಾಗಿ ನೀರನ್ನು ದೇಹಕ್ಕೆ ಸೇರಿಸುತ್ತಿರುತ್ತಾರೆ. ಆದ್ರೆ ಅತಿಯಾದ ನೀರಿನ ಸೇವನೆ ಕೂಡ ಒಳ್ಳೆಯದಲ್ಲ. ಅಗತ್ಯಕ್ಕಿಂತ ಹೆಚ್ಚು ನೀರನ್ನು ಕುಡಿದ್ರೆ ಅನೇಕ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ. ನಿಮಗೆ ಇದನ್ನು ಕೇಳಿ ಅಚ್ಚರಿ ಎನಿಸಬಹುದು. ಆದ್ರೆ ಇದು ಸತ್ಯ. ನಮ್ಮ ದೇಹ ಅಗತ್ಯಕ್ಕಿಂತ ಹೆಚ್ಚು ನೀರು ನೀಡಿದ್ರೆ ಅದನ್ನು ಸಹಿಸುವುದಿಲ್ಲ. ಇದ್ರಿಂದ ತೊಂದರೆ ಶುರುವಾಗುತ್ತದೆ. ಇಂದು ಅತಿ ಹೆಚ್ಚು ನೀರು ಕುಡಿದ್ರೆ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುದನ್ನು ನಾವು ಹೇಳ್ತೇವೆ.
ಅತಿಯಾದ ನೀರು ಸೇವನೆಯಿಂದ ಕಾಡುವ ಸಮಸ್ಯೆ :
ದೇಹದಲ್ಲಿ ಕಾಡಲಿದೆ ಊತದ ಸಮಸ್ಯೆ : ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಇರುವ ದ್ರವಗಳು ತೆಳುವಾಗುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿನ ಸೋಡಿಯಂ ಮಟ್ಟವು ಕಡಿಮೆಯಾಗುತ್ತದೆ. ಇದರಿಂದಾಗಿ ಜೀವಕೋಶಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಊತ ಮೆದುಳಿನ ಕೋಶದಲ್ಲೂ ಕಾಣಿಸಿಕೊಳ್ಳುತ್ತದೆ. ಇದು ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಅತಿಯಾಗಿ ನೀರು ಕುಡಿಯುವುದರಿಂದ ರಕ್ತದಲ್ಲಿ ಸೋಡಿಯಂ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಹೈಪೋನಾಟ್ರೀಮಿಯಾ (HYPONATREMIA) ಸಮಸ್ಯೆ ಶುರುವಾಗಬಹುದು. ಹೈಪೋನಾಟ್ರೀಮಿಯಾ ಸಮಸ್ಯೆ ಕಾಡುವ ಜನರಿಗೆ ದೇಹದಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ವಾಕರಿಕೆ, ತಲೆನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಸೋಡಿಯಂ ಎಂಬ ಎಲೆಕ್ಟ್ರೋಲೈಟ್, ನೀರು ಮತ್ತು ಇತರ ವಸ್ತುಗಳ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸೋಡಿಯಂ ಪ್ರಮಾಣವು 135 (MEQ/L) ಗಿಂತ ಕಡಿಮೆಯಿದ್ದರೆ ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೈಪೋನಾಟ್ರೀಮಿಯಾದಿಂದ ಬಳಲುತ್ತಿರುವ ವ್ಯಕ್ತಿ ಸಾವನ್ನಪ್ಪುವ ಅಪಾಯವಿದೆ. ಹೈಪೋನಾಟ್ರೀಮಿಯಾ ರೋಗಲಕ್ಷಣಗಳನ್ನು ಹೊಂದಿರುವವರು ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಇಲ್ಲವಾದ್ರೆ ಅಪಾಯ ಎದುರಿಸಬೇಕಾಗತ್ತೆ.
40 ಆಯ್ತು, ಹೆಚ್ಚುತ್ತಿದೆ ತೂಕ, ತಲೆ ಬಿಸಿ ಬಿಡಿ ಇಲ್ಲಿದೆ ಪರಿಹಾರ
ಹೈಪೋನಾಟ್ರೀಮಿಯಾ ಲಕ್ಷಣಗಳು : ಹೈಪೋನಾಟ್ರೀಮಿಯಾ ಸಮಸ್ಯೆಯಾದವರಿಗೆ ಚಟಪಡಿಕೆ ಕಾಣಿಸಿಕೊಳ್ಳುತ್ತದೆ. ವಿಪರೀತ ಸುಸ್ತಾಗುತ್ತದೆ. ಅನೇಕರು ಪ್ರಜ್ಞೆ ತಪ್ಪುವ ಸಮಸ್ಯೆ ಎದುರಿಸುತ್ತಾರೆ. ಮೈನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತೀವ್ರವಾದ ತಲೆನೋವು ಕಾಡುತ್ತದೆ. ವಾಕರಿಕೆ ಬಂದಂತ ಅನುಭವವಾಗುತ್ತದೆ. ಹಾಗೆಯೇ ಆಗಾಗ ವಾಂತಿ ಬರುತ್ತದೆ.
ದೇಹದಲ್ಲಿ ಯಾವುದು ಅಧಿಕವಾದ್ರೂ ಹಾನಿಯಾಗುತ್ತದೆ. ಎಷ್ಟು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಂಡು ನಂತ್ರ ಸೇವನೆ ಮಾಡಿ. ಪ್ರತಿಯೊಬ್ಬ ವ್ಯಕ್ತಿಗೂ ಆತನ ವೈದ್ಯಕೀಯ ಸ್ಥಿತಿ ಮೇಲೆ ನೀರು ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ನೀರು ಕುಡಿಯಬೇಕೆಂಬ ಕಾರಣಕ್ಕೆ ವಿಪರೀತ ನೀರು ಸೇವನೆ ಮಾಡುವ ಬದಲು ವೈದ್ಯರನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆದು ನಂತ್ರ ನೀರು ಸೇವನೆ ಮಾಡಿ.
ಬೇಸಿಗೆಯಲ್ಲಿ ಆರೋಗ್ಯ ಚೆನ್ನಾಗಿರಬೇಕಾ? ನೇರಳೆ ತಿನ್ನೋದ ಮರೀಬೇಡಿ
ಒಬ್ಬ ವ್ಯಕ್ತಿ ಎಷ್ಟು ನೀರು ಸೇವನೆ ಮಾಡ್ಬೇಕು ಎಂಬ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಒಂದು ಅಧ್ಯಯನದ ಪ್ರಕಾರ, ಪುರುಷರು ದಿನಕ್ಕೆ ಸುಮಾರು 15.5 ಕಪ್ ಅಂದ್ರೆ 3.7 ಲೀಟರ್ ದ್ರವ ಆಹಾರವನ್ನು ಸೇವನೆ ಮಾಡ್ಬೇಕು. ದ್ರವದಲ್ಲಿ ನೀರು ಸೇರಿದೆ. ಆದ್ರೆ ನೀರು ಮಾತ್ರ ದ್ರವವಲ್ಲ ಎಂಬುದು ನೆನಪಿರಲಿ. ಹಾಗೆಯೇ ಮಹಿಳೆಯರು ದಿನಕ್ಕೆ ಸುಮಾರು 11.5 ಕಪ್ ಅಂದ್ರೆ 2.7 ಲೀಟರ್ ದ್ರವ ಆಹಾರ ಸೇವನೆ ಮಾಡ್ಬೇಕು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.