ಮುಟ್ಟಾಗಿದ್ದಾಗ ವ್ಯಾಕ್ಸೀನ್ ತಗೊಳ್ಬೋದಾ ?
ಮುಟ್ಟಾದಾಗ ವ್ಯಾಕ್ಸಿನ್ ತಗೊಳ್ಬೋದಾ? ಪಿರಿಯಡ್ಸ್ ಸಮಯದಲ್ಲಿ ವ್ಯಾಕ್ಸಿನ್ ತಗೊಂಡ್ರೇನಾಗುತ್ತೆ? ವ್ಯಾಕ್ಸೀನ್‌ನಿಂದ ಮುಟ್ಟಿನ ಡೇಟ್‌ನಲ್ಲಿ ಏರುಪೇರು ಆಗೋದು ಹೌದಾ? ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಸುತ್ತೊಂದು ಸುತ್ತು...
ಮೊದಲ ಅಥವಾ ಎರಡನೆಯ ಡೋಸ್ ಕೊರೋನಾ ಲಸಿಕೆ ಪಡೆದ ನಂತರ ಬಹಳಷ್ಟು ಮಹಿಳೆಯರಿಗೆ ಮುಟ್ಟಿನ ಅವಧಿ ಬದಲಾವಣೆ ಅನುಭವಕ್ಕೆ ಬಂದಿದೆ ಎನ್ನಲಾಗಿದೆ. ಮುಟ್ಟಾದಾಗ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳಬೇಡ ಎಂಬೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇ ಸಮಯದಲ್ಲಿ ಮುಟ್ಟಿಗೂ, ವ್ಯಾಕ್ನಿನ್‌ಗೆ ಯಾವ ಸಂಬಂಧವೂ ಇಲ್ಲ. ಇದು ಹೆಣ್ಣು ಮಕ್ಕಳನ್ನು ಕೊರೋನಾ ಲಸಿಕೆ ಪಡೆಯದಂತೆ ದಾರಿ ತಪ್ಪಿಸುವ ಕೆಲಸವೆಂದೂ ಕೆಲವು ವೈದ್ಯರು ತಮ್ಮ ಅನುಭವವನ್ನು ಹಂಚಿ ಕೊಳ್ಳುತ್ತಿದ್ದಾರೆ.
ಅಲ್ಲದೇ ಅನೇಕ ಹೆಣ್ಣು ಮಕ್ಕಳೂ ತಮ್ಮ ತಮ್ಮ ಅನುಭವವನ್ನು, ವ್ಯಾಕ್ಸಿನ್ ಪಡೆದಾಗ ತಮ್ಮ ದೇಹದಲ್ಲಾದ ಬದಲಾವಣೆಗಳು, ಮುಟ್ಟಿನ ದಿನಾಂಕದಲ್ಲಾದ ವ್ಯತ್ಯಾಸವನ್ನು ಹೇಳಿ ಕೊಂಡಿದ್ದಾರೆ. ಯಾರು, ಏನೇನು ಹೇಳಿದ್ದಾರೆ?
ಬಹಳಷ್ಟು ರೋಗಿಗಳು ಮುಟ್ಟಿನ ಸಂದರ್ಭ ವ್ಯಾಕ್ಸೀನ್ ತೆಗೆದುಕೊಳ್ಳಬಹುದಾ ಎಂದು ಮೆಸೇಜ್ ಮಾಡುತ್ತಿದ್ದೀರಿ. ಇವೆಲ್ಲವೂ ಸುಳ್ಳು ವಾಟ್ಸಾಪ್ ರೂಮರ್‌ಗಳು. ವ್ಯಾಕ್ಸೀನ್‌ನಿಂದ ನಿಮ್ಮ ಮುಟ್ಟಿನಲ್ಲಿ ಬದಲಾವಣೆಯಾಗುವುದಿಲ್ಲ. ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ಡಾ.ಮುಂಜಲ್ ವಿ ಕಪಾಡಿಯಾ ಟ್ವೀಟ್ ಮಾಡಿದ್ದಾರೆ.
ಡಾ.ಮುಂಜಲ್ ವಿ ಕಪಾಡಿಯಾ ಅವರು ಮುಟ್ಟು ಮತ್ತು ವ್ಯಾಕ್ಸೀನ್ ಕುರಿತ ಊಹಾಪೋಹಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ರೂಮರ್‌ಗಳೆಲ್ಲಾ ಮಹಿಳೆಯರು ಶೀಘ್ರ ಲಸಿಕೆ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಇದಕ್ಕೆ ನೀವು ಬೀಳಬೇಡಿ ಎಂದಿದ್ದಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಲಿನೊಂದಿಗೆ ಈ ವಸ್ತು ಬೆರೆಸಿ ಸೇವಿಸಿ
ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಕೇಟ್ ಕ್ಲಾನ್ಸಿ ಫೆಬ್ರವರಿಯಲ್ಲಿ ತಮ್ಮ ಅನುಭವವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ವ್ಯಾಕ್ಸಿನ್ ಪಡೆದ ನಂತರ ಮುಟ್ಟಾಗುವಾಗ ಹೆಚ್ಚು ಋತುಸ್ರಾವವಾಗಿದ್ದಾಗಿಯೂ ಕೇಳಲ್ಪಟ್ಟ ನನ್ನ ಸಹುದ್ಯೋಗಿ ಈ ವಿಚಾರ ನನಗೆ ಹೇಳಿದರು. ಮುಟ್ಟಿನ ಅವಧಿಯಲ್ಲೂ ಬದಲಾವಣೆ ಆಗಿದೆಯಾ ಎಂಬ ಬಗ್ಗೆ ನನಗೆ ಕುತೂಹಲವಿದೆ. ನನಗೆ ವ್ಯಾಕ್ಸೀನ್ ಪಡೆದ ನಂತರ ಬೇಗ ಮುಟ್ಟಾಗಿದ್ದು, ನಾನು ಮತ್ತೆ 20ರ ಹರೆಯದಲ್ಲಿದ್ದೇನೆ ಎನಿಸುತ್ತಿದೆ ಎಂದಿದ್ದಾರೆ. ಬಹಳಷ್ಟು ಜನ ಮಹಿಳೆಯರು ಇವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಮಹಿಳೆಯೊಬ್ಬರು 28 ತಿಂಗಳುಗಳಲ್ಲಿ ತನ್ನ ಮೊದಲ ಮುಟ್ಟು ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ. ಇನ್ನೊಬ್ಬರು ಸಾಕಷ್ಟು ಕೆಟ್ಟ ಅನುಭವ ಎಂದು ಹೇಳಿದ್ದಾರೆ. ಇನ್ನು ಕೆಲವರಿಗೆ ಜನನ ನಿಯಂತ್ರಣ ಟ್ಯಾಬ್ಲೆಟ್ ತೆಗೆದುಕೊಂಡಿರುವುದರ ಮಧ್ಯೆಯೇ ಮುಟ್ಟಾಗಿದೆ, ಎಂದೂ ಹೇಳಿ ಕೊಂಡಿದ್ದಾರೆ.
ಬಹಳಷ್ಟು ಜನರು ಲಸಿಕೆ ಪಡೆದ ನಂತರ ಅವಧಿಗೆ ಮೊದಲೇ ಮುಟ್ಟಾಗಿದ್ದು, ಅತಿ ಎನಿಸುವಷ್ಟು ಋತುಸ್ರಾವದ ನೋವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ಇನ್ನೂ ಕೆಲವರಿಗೆ ವ್ಯಾಕ್ಸೀನ್ ಪಡೆದ ನಂತರ ಅಲ್ಲ, ಕೊರೋನಾದಿಂದ ರಿಕವರಿಯಾದ ನಂತರ ಮುಟ್ಟಿನಲ್ಲಿ ಬದಲಾವಣೆ ಅನುಭಕ್ಕೆ ಬಂದಿದೆ.
ಕೊರೋನಾ ಎದುರಿಸಲು 10 ಹಾದಿ: ಡಾ. ಬಿಎಂ ಹೆಗ್ಡೆ ಕೊಟ್ಟ ಸಲಹೆಗಳಿವು
ಅಡ್ಡಪರಿಣಾಮಗಳು ಲಸಿಕೆ ಪ್ರತಿಕ್ರಿಯೆಯ ಸಾಮಾನ್ಯ ಮತ್ತು ಪ್ರಮುಖ ಅಂಶ. ನಮ್ಮ ರೋಗ ನಿರೋಧಕ ಶಕ್ತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಋತುಸ್ರಾವದ ಮಾದರಿಗಳು ಒಂದು ಪ್ರಮುಖ ಮಾರ್ಗವೆಂದು ಸಮೀಕ್ಷೆಗಳು ಹೇಳಿವೆ.
ಕೊರೋನಾ ಸೋಂಕಿತರಾಗದೆ ಅಥವಾ ಲಸಿಕೆ ಪಡೆಯದೆಯೂ ಕೊರೋನಾ ನಂತರ ಮುಟ್ಟಿನ ಬದಲಾವಣೆಗಳು ವರದಿಯಾಗುತ್ತಿವೆ. ಮುಟ್ಟಿನ ಅವಧಿ, ರಕ್ತದ ಪ್ರಮಾಣ ಮತ್ತು ಮುಟ್ಟಿನ ಸಂಬಂಧಿ ನೋವಿನ ಮಟ್ಟದಲ್ಲಿ ಹೆಚ್ಚಳ ಅಥವಾ ಇಳಿಕೆ ಕಂಡುಬಂದಿದೆ. ಕೊರೋನಾ ಕಾಲದಲ್ಲಿ ಬರುವ ಮಾನಸಿಕ ಒತ್ತಡದಿಂದಲೂ ಈ ರೀತಿ ಮುಟ್ಟಿನ ಅವಧಿ ಏರುಪೇರಾಗುವ ಸಾಧ್ಯತೆ ಇದೆ..
ವ್ಯಾಕ್ಸಿನ್ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಸಂದರ್ಭದಲ್ಲಿ ಗಂಡಸರಿಗಾಗಲಿ, ಮಹಿಳೆಯರಿಗಾಗಲಿ ಆರೋಗ್ಯದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಹಾಗಂಥ ಮುಟ್ಟಿಗೂ, ವ್ಯಾಕ್ಸಿನ್‌ಗೂ ನೇರ ಸಂಬಂಧವಿಲ್ಲ ಎನ್ನುವುದು ಹಲವರ ಅಭಿಪ್ರಾಯ.
ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ