ಹಾವೇರಿಯ ಹಂದಿಗನೂರಿನಲ್ಲಿ 408 ವರ್ಷದಿಂದ ನಡೆಯುತ್ತಿದೆ ಖಾಸಗಿ ದರ್ಬಾರ್
ಹಂದಿಗನೂರು ವಾಡೆಯಲ್ಲಿ ಖಾಸಗಿ ದರ್ಬಾರ್| ಮೈಸೂರು ದಸರಾ ನೆನಪಿಸಿದ ಹಂದಿನಗೂರು ಉತ್ಸವ| ಮೈಸೂರು ದಸರಾ ಆರಂಭಗೊಂಡ ಒಂದು ವರ್ಷದ ಬಳಿಕ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ಖಾಸಗಿ ದರ್ಬಾರ್ ಆರಂಭಿಸಿದರು| ಅಂದಿನಿಂದ ಇಂದಿನವರೆಗೂ ಕಳೆದ ನಾಲ್ಕು ಶತಮಾನಗಳಿಂದ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷ ಖಾಸಗಿ ದರ್ಬಾರ್ ಹಾಗೂ ಬನ್ನಿ ಮೂಡಿಯುವ ಸಂಪ್ರದಾಯ ನಡೆಸುತ್ತಾ ಬಂದಿದ್ದಾರೆ|
ಹಾವೇರಿ(ಅ.9): ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ಮಾದರಿಯಲ್ಲಿ ತಾಲೂಕಿನ ಹಂದಿಗನೂರು ಗ್ರಾಮದ ವಾಡೆಯ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ನಡೆಸುವ 408 ನೇ ಖಾಸಗಿ ದರ್ಬಾರ್ ಎಲ್ಲರ ಗಮನ ಸೆಳೆಯಿತು.
ಮೈಸೂರು ದಸರಾ ಆರಂಭಗೊಂಡ ಒಂದು ವರ್ಷದ ಬಳಿಕ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ಖಾಸಗಿ ದರ್ಬಾರ್ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಕಳೆದ ನಾಲ್ಕು ಶತಮಾನಗಳಿಂದ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷ ಖಾಸಗಿ ದರ್ಬಾರ್ ಹಾಗೂ ಬನ್ನಿ ಮೂಡಿಯುವ ಸಂಪ್ರದಾಯ ನಡೆಸುತ್ತಾ ಬಂದಿದ್ದಾರೆ.
ಮೈಸೂರು ಮಹಾರಾಜರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದರೆ, ಹಂದಿಗನೂರು ದೇಸಾಯಿ ಮನೆತನದವರು ವಾಡೆಯಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾ ಬಂದಿದ್ದಾರೆ. ಹಂದಿಗನೂರಿನ ಮಾಮಲೆದೇಸಾಯಿ ಸಂಸ್ಥಾನದ ವಂಶಸ್ಥರು ನಡೆಸುತ್ತಿರುವ ಖಾಸಗಿ ದರ್ಬಾರ್‌ಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಇದು ಈಗ ಸಾಂಕೇತಿಕ ಆಚರಣೆಗೆ ಸೀಮಿತವಾಗಿರಬಹುದು. ಆದರೆ, ಇಂದಿಗೂ ಅದರ ಹೊಳಪು ಮಾತ್ರ ಹಾಗೆಯೇ ಮುಂದುವರೆದಿದೆ.
ಖಾಸಗಿ ದರ್ಬಾರ್..
ಗ್ರಾಮದ ವಾಡೆಯಲ್ಲಿರುವ ಮಾಮಲೆದೇಸಾಯಿ ಅವರು ಬಿಳಿ ಬಣ್ಣದ ರೇಷ್ಮೆ ವಸ್ತ್ರ ಹಾಕಿಕೊಂಡು ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ಇದಕ್ಕೂ ಮುನ್ನ ವಾಡೆ ಪೂರೋಹಿತರೊಂದಿಗೆ ಆಯುಧ ಪೂಜೆ ನೆರವೇರಿಸುತ್ತಾರೆ. ನಂತರ ಗ್ರಾಮಸ್ಥರಿಂದ ಒಪ್ಪಿಗೆ ಪತ್ರ ಪಡೆದು ವಾಡೆ ಮಾಲೀಕರ ಸಂಪ್ರದಾಯದಂತೆ ಸೇವಕರಿಗೆ ಆಯುಧಗಳನ್ನು ನೀಡಿ ಖಾಸಗಿ ದರ್ಬಾರ್ ಆರಂಭಿಸುವ ಸಂಪ್ರದಾಯ ನೋಡುಗರ ಗಮನ ಸೆಳೆಯಿತು.
ಬನ್ನಿಮುಡಿಯುವ ಕಾರ್ಯಕ್ರಮ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಖಾಸಗಿ ದರ್ಬಾರ್ ಮುಗಿಸಿದ ನಂತರ ಮಾಮಲೆದೇಸಾಯಿ ಅವರು ಗ್ರಾಮಸ್ಥರೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ದ್ಯಾಮವ್ವ ದೇವಿ ಪಲ್ಲಕ್ಕಿ, ಗಾಳೆವ್ವದೇವಿ ಪಲ್ಲಕ್ಕಿ, ದುರ್ಗಾದೇವಿ ಪಲ್ಲಕ್ಕಿ, ಬಸವೇಶ್ವರ ದೇವರ ಪಲ್ಲಕ್ಕಿ, ಆಂಜನೇಯ ದೇವರ ಪಲ್ಲಕ್ಕಿಯೊಂದಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿಯಲಾಯಿತು.
ನಂತರ ಅಲ್ಲಿಂದ ಮೆರವಣಿಗೆ ಮೂಲಕ ಮರಳಿ ವಾಡೆಗೆ ಬರುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು 17ನೇ ಗಾದಿ (ತಲೆಮಾರಿನ) ಮಾಲೀಕರಾದ ಅರವಿಂದ ಮಾಮಲೆದೇಸಾಯಿ ಅವರಿಗೆ ಆರತಿ ಬೆಳಗಿ ಹರಸಿದರು. ಮೆರವಣಿಗೆ ವಾಡೆಗೆ ತಲುಪಿದ ನಂತರ ಗ್ರಾಮಸ್ಥರು ಮಾಮಲೆದೇಸಾಯಿ ಅವರಿಗೆ ಬನ್ನಿ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಬಳಿಕ ಗ್ರಾಮದಲ್ಲಿ ಬನ್ನಿ ವಿನಿಯಮ ಕಾರ್ಯ ಆರಂಭಗೊಂಡಿತು.
ಈ ಬಗ್ಗೆ ಮಾನಾಡಿದ 17ನೇ ಗಾದಿ ಮಾಲೀಕರು ಅರವಿಂದ ಮಾಮಲೆದೇಸಾಯಿ ಅವರು, ಕಳೆದ ನಾಲ್ಕು ದಶಕದಿಂದಲೂ ನವರಾತ್ರಿ ಸಂದರ್ಭದಲ್ಲಿ ವಾಡೆಯಲ್ಲಿ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗುತ್ತಿದೆ. ಹಿರಿಯರು ಹಾಕಿಕೊಟ್ಟಮಾರ್ಗದಲ್ಲಿ ಮುನ್ನಡೆಯುತ್ತಿರುವ ನಾವು ಸಾಧ್ಯವಾದಷ್ಟುಸಂಪ್ರದಾಯಗಳನ್ನು ಆಚರಿಸುತ್ತಾ ಬಂದಿದ್ದೇವೆ. ಹಂದಿಗನೂರು ಗ್ರಾಮಸ್ಥರು ಸಾಕಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.