ಮಾರುಕಟ್ಟೆಗೆ ಬರಲಿದೆ ಗೇರುಹಣ್ಣಿನ ವೈನ್! ಪೇಟೆಂಟ್ ಪಡೆದ ಮಂಗಳೂರು ಪ್ರೊಫೆಸರ್
ಸುರತ್ಕಲ್ ನ ಎನ್ಐಟಿಕೆ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ.ಯವರು ಸಂಶೋಧನೆ ಮಾಡಿರುವ ಈ ಪೇಯಕ್ಕೆ ಭಾರತೀಯ ಸಂಸ್ಥೆಯಿಂದ ಅಧಿಕೃತ ಪೇಟೆಂಟ್ ಲಭ್ಯವಾಗಿದೆ. ಇನ್ನು ಮುಂದೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೇರು ವೈನ್ ಸಿಗಲಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಗೇರುಹಣ್ಣಿನ ಮದ್ಯ(Cashewnut wine)ವೆಂದರೆ ತೀರಾ ಲೋಕಲ್ ಎಂಬ ಅಸಡ್ಡೆ ಎಲ್ಲರಲ್ಲೂ ಇದೆ. ಆದರೆ ಇದೀಗ ಪಾನಪ್ರಿಯರಿಗೊಂದು ಸಿಹಿಸುದ್ದಿಯೇನೆಂದರೆ, ಇನ್ನು ಮುಂದೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೇರುಹಣ್ಣಿನ ವೈನ್ ದೊರೆಯಲಿದೆ. ಸುರತ್ಕಲ್ ನ ಎನ್ಐಟಿಕೆ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ.ಯವರು ಸಂಶೋಧನೆ ಮಾಡಿರುವ ಈ ಪೇಯಕ್ಕೆ ಭಾರತೀಯ ಸಂಸ್ಥೆಯಿಂದ ಅಧಿಕೃತ ಪೇಟೆಂಟ್ ಲಭ್ಯವಾಗಿದೆ.
ಈ ಗೇರುಹಣ್ಣಿನ ವೈನ್ ನಲ್ಲಿ ಗೇರುಹಣ್ಣಿನ ಮದ್ಯದಲ್ಲಿರುವಂತೆ ವಾಸನೆಯಿಲ್ಲ, ಸೇವಿಸಿದ ತಕ್ಷಣ ತಲೆಗೇರುವ ಕಿಕ್ ಇಲ್ಲ. ಈ ವೈನ್ ಬಾಟಲಿಯ ಮುಚ್ಚಳವನ್ನು ತೆರೆದ ತಕ್ಷಣ ಹಿತವಾದ ಪರಿಮಳ ಮೂಗಿಗೆ ಬಡಿದರೆ, ಕುಡಿದಾಗ ಹುಳಿ, ಸಿಹಿ ಹಾಗೂ ಒಗರು ಮಿಶ್ರಿತ ರುಚಿಯಿದೆ. ಪ್ರೊ.ಪ್ರಸನ್ನ ಬಿ.ಡಿ.ಯವರ ಸಂಶೋಧನೆಯ ಫಲವಾಗಿ ಗೇರುಹಣ್ಣಿನ ಆರು ತರಹೇವಾರಿ ವೈನ್ ಸಿದ್ಧಗೊಂಡಿದೆ. 2010ರಲ್ಲಿಯೇ ಅವರು ಸಂಶೋಧನೆಯನ್ನು ಆರಂಭಿಸಿದ್ದು, ಡಿಸೆಂಬರ್ 2012ರಲ್ಲಿ ಪೇಟೆಂಟ್ ಗೆ ಸಲ್ಲಿಸಿದ್ದರು. ಇದೀಗ ಈ ಸಂಶೋಧನೆಗೆ ಅಧಿಕೃತ ಪೇಟೆಂಟ್ ಲಭ್ಯವಾಗಿದೆ. ಅಲ್ಲದೆ ಇದರ ಬಗ್ಗೆ ಆಸಕ್ತರಿರುವ ಉದ್ಯಮಿಯೋರ್ವರಿಗೆ ಈ ವೈನ್ ಅನ್ನು ನೀಡುವ ಬಗ್ಗೆಯೂ ಪ್ರೊಫೆಸರ್ ಉತ್ಸುಕರಾಗಿದ್ದಾರೆ. ಅಂದುಕೊಂಡಂತೆ ಉದ್ಯಮಿಯು ಈ ವೈನ್ ಸಂಶೋಧನೆಯನ್ನು ಎನ್ಐಟಿಕೆ ಮೂಲಕ ಖರೀದಿಸಿದ್ದಲ್ಲಿ ಖಂಡಿತವಾಗಿಯೂ ಇನ್ನುಮುಂದೆ ಮಾರುಕಟ್ಟೆಗೆ ಗೇರುಹಣ್ಣಿನ ವೈನ್ ಲಗ್ಗೆಯಿಡಲಿದೆ.
ಯಾವಾಗ್ಲೂ ಚಾಕ್ಲೇಟ್ ಬೇಕೆಂದು ರಚ್ಚೆ ಹಿಡಿಯೋ ಮಕ್ಕಳಿಗೆ ಈ ಹೆಲ್ದೀ ಸ್ವೀಟ್ಸ್ ಕೊಡಿ
ಈ ಗೇರುಹಣ್ಣಿನ ವೈನ್ ಅನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ 500 ಲೀ. ಸಾಮರ್ಥ್ಯವಿರುವ ಪ್ಲ್ಯಾಂಟ್ ನಲ್ಲಿ ಗೇರುಹಣ್ಣಿನ ವೈನ್ ಅನ್ನು ತಯಾರು ಮಾಡಲಾಗಿದೆ. ಅದಕ್ಕೆ ತಗಲುವ ಖರ್ಚು, ವೆಚ್ಚಗಳು, ಯಾವ ರೀತಿ ತಯಾರು ಮಾಡಬಹುದು ಎಂಬ ಪ್ರಯೋಗಗಳನ್ನು ಮಾಡಿ ಫಲಿತಾಂಶವನ್ನು ಪಡೆಯಲಾಗಿದೆ. ಅಲ್ಲದೆ ವೈನ್ ತಜ್ಞರಿಂದಲೂ ಇದೊಂದು ಗೇರುಹಣ್ಣಿನ ಉತ್ತಮ ಪೇಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೇವಲ 8-15 % ವರೆಗೆ ಅಲ್ಕೋಹಾಲ್ ಪ್ರಮಾಣವಿರುವ ಈ ಗೇರುಹಣ್ಣಿನ ಪೇಯ ಮಾರುಕಟ್ಟೆಯಲ್ಲಿ ಲಭ್ಯವಾದಲ್ಲಿ ವೈನ್ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.