Asianet Suvarna News Asianet Suvarna News

ಮೈಸೂರು ದಸರಾ ಕಣ್ತುಂಬಿಕೊಂಡ್ರಾ, ಮೈಸೂರ್ ಪಾಕ್ ಬಗ್ಗೆ ತಿಳ್ಕೊಳ್ಳಿ

ವಿಶ್ವವಿಖ್ಯಾತ ನಾಡಹಬ್ಬ ದಸರಾದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅರಮನೆ ನಗರಿ, ದಸರೆಯ ದಿನಗಳಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ. ಮೈಸೂರಿನ ಹೆಸರು ಕೇಳಿದಾಗ ದಸರಾ ನೆನಪಾಗೋ ಹಾಗೆಯೇ ಬಾಯಲ್ಲಿ ನೀರೂರಿಸೋ ಮೈಸೂರ್ ಪಾಕ್ ಕಣ್ಮುಂದೆ ಬರುತ್ತದೆ. ಇದಕ್ಕೂ ಮೈಸೂರಿಗೂ ಇರೋ ಸಂಬಂಧವೇನು ? ಇದನ್ನು ತಯಾರಿಸೋದು ಹೇಗೆ ತಿಳಿಯೋಣ.

Myosre Pak, A Royal Delicacy Continues To Enthral Mysore Vin
Author
First Published Oct 5, 2022, 2:54 PM IST

ಮೈಸೂರ್ ಪಾಕ್ ಎಂದರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಇತರ ರಾಜ್ಯಗಳಲ್ಲಿಯೂ, ಇತರ ದೇಶಗಳಲ್ಲಿಯೂ ಮೈಸೂರ್‌ ಪಾಕ್‌ ಹೆಸರುವಾಸಿಯಾಗಿದೆ. ಜನರು ಈ ಸಿಹಿತಿಂಡಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದರೆ ಈ ರುಚಿಕರವಾದ ಸಿಹಿತಿಂಡಿ ಮೊದಲು ತಯಾರಿಸಿದ್ದು ಎಲ್ಲಿ ಅನ್ನೋದು ನಿಮ್ಗೊತ್ತಾ ? ಮೈಸೂರಿಗೂ, ಮೈಸೂರ್‌ ಪಾಕ್‌ ಇರುವ ನಂಟೇನು. ಇಲ್ಲಿದೆ ಸಂಪೂರ್ಣ ಮಾಹಿತಿ.

ಮೈಸೂರು ಪಾಕ್ ಎಂಬ ಸಿಹಿತಿಂಡಿಯ ಇತಿಹಾಸ
ಮೈಸೂರು ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ (Mysore palace) ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ. ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು (Sweet) ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು ಎಂದು ಹೇಳಲಾಗುತ್ತದೆ. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ (Responsibility) ವಹಿಸಿಕೊಂಡಿದ್ದರು.

ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ

ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಯಾರಿಸಿದ ತಿಂಡಿ
ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು. ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು 'ಕಾಕಾಸುರ ಮಾದಪ್ಪ' ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ (Ghee), ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. 

ರಾಜರಿಗೆ ಊಟದ ಸಮಯವಾಯಿತೆಂಬ ಅವಸರದಲ್ಲಿ ಮಾದಪ್ಪ ತುಪ್ಪ, ಬೇಳೆ ಹಿಟ್ಟು ಮತ್ತು ಸಕ್ಕರೆಯ ಮಿಶ್ರಣದಿಂದ ಮಾಡಿದ ಸಿರಪ್ ಅನ್ನು ಬಡಿಸಿದರು. ರಾಜನು ತಮ್ಮ ಊಟಕ್ಕೆ ಬರುವ ಹೊತ್ತಿಗೆ ಈ ಮಿಶ್ರಣವು ಥಾಲಿಯ ಮೇಲೆ ಗಟ್ಟಿಯಾಗಿತ್ತು. ರಾಜನಿಗೆ ಬಾಣಸಿಗನ ಈ ವೈಫಲ್ಯದ ಬಗ್ಗೆ ತಿಳಿದಿರಲಿಲ್ಲ, ಈ ಕರಗಿದ ಸಿಹಿತಿಂಡಿಯ ಅದ್ಭುತ ರುಚಿಗೆ (Taste) ಅವರು ಬೆರಗುಗೊಂಡರು. ಸಿಹಿ ಪಾಕದ ರುಚಿ ನೋಡಿದ ಮಹಾರಾಜರು ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು  ಪ್ರಶಂಶಿಸಿದರು.

ನವರಾತ್ರಿಯ ಸಂಭ್ರಮ ಹೆಚ್ಚಿಸಲು ಒಮ್ಮೆಯಾದರೂ ಈ ಅದ್ಭುತ ನಗರಗಳಿಗೆ ಹೋಗ್ಲೇ ಬೇಕು

ನಳಪಾಕದಂತಿದ್ದ ಅಡುಗೆಗೆ ಮೈಸೂರ್ ಪಾಕ್ ಎಂಬ ಹೆಸರು
ಆದರೆ ದಿಢೀರ್ ಎಂದು ರೆಡಿ ಮಾಡಿ ಸಿಹಿತಿಂಡಿಗೆ ಯಾವುದೇ ಹೆಸರಿರಲ್ಲಿಲ್ಲ. ಹೀಗಾಗಿ ಹೊಸ ತಿಂಡಿಗಾಗಿ ಏನಾದರೂ ಹೆಸರಿಡಬೇಕೆಂದು ಮಹಾರಾಜರು  ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ 'ನಳಪಾಕ' ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ 'ಮೈಸೂರು ಪಾಕ' ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಹಾಗಾಗಿ ಅಂದಿನಿಂದ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ನಂತರದ ದಿನಗಳಲ್ಲಿ ಈ ಹೆಸರು ಮೈಸೂರ್ ಪಾಕ್ ಎಂದು ರಾಜ್ಯದ ಇತರೆಡೆ, ದೇಶದ ಹಲವಡೆ, ಅಷ್ಟೇ ಯಾಕೆ ಪ್ರಪಂಚದ ಹಲವೆಡೆ ಫೇಮಸ್ ಆಗಿದೆ. 

ಮೈಸೂರು ಪಾಕ್ ಮಾರಾಟ ಮಾಡುವ ಮಾದಪ್ಪನವರ ಅಂಗಡಿ
ಅರಮನೆಯ ಅಡುಗೆಮನೆಯಲ್ಲಿ ಸಿಹಿತಿಂಡಿಯನ್ನು ತಯಾರಿಸಿದ ನಂತರ, ಮಾದಪ್ಪನವರ ಕುಟುಂಬದವರು ಮೈಸೂರ್ ಪಾಕ್‌ನ್ನು ಅಂಗಡಿಯಲ್ಲಿ ಮಾರಾಟ ಮಾಡಲು ಶುರು ಮಾಡಿದರು. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಅಂಗಡಿಯೊಂದನ್ನು ಹಾಕಿ ಮೈಸೂರು ಪಾಕ್ ಮಾರಾಟ ಮಾಡುತ್ತಿದ್ದರು. ಮೈಸೂರ್‌ ಪಾಕ್‌ ಮಾಡಲು ಎರಡು ವಿಧಾನಗಳಿವೆ. ಅದರಲ್ಲಿ ಮುಖ್ಯವಾದುದು ಎರಡು ವಿಧಾನ. ಒಂದು ವಿಧಾನದಲ್ಲಿ ಗಟ್ಟಿಯಾಗಿ ಪಾಕವನ್ನು ತಯಾರಿಸಿದರೆ, ಇನ್ನೊಂದು ವಿಧಾನದಲ್ಲಿ ತುಂಬಾ ಮೃದುವಾಗಿ, ಬಾಯಲ್ಲಿ ಇರಿಸಿದ ಕೂಡಲೇ ಕರಗಿ ಹೋಗುವಷ್ಟು ಮೆತ್ತಗೆ ಮೈಸೂರ್ ಪಾಕ್‌ನ್ನು ತಯಾರಿಸುತ್ತಾರೆ.

Myosre Pak, A Royal Delicacy Continues To Enthral Mysore Vin

Follow Us:
Download App:
  • android
  • ios