ನಿಶಬ್ಧ ದೀಪಾವಳಿ ಮೊರೆ ಹೋದ ಹಳ್ಳಿಗರು, ಕಾರಣ ಕೇಳಿದ್ರೆ ಖುಷಿ ಪಡ್ತೀರಿ!
ದೀಪಾವಳಿ ಎಂದರೆ ಸದ್ದಿನ ಹಬ್ಬ. ಪಟಾಕಿಯ ಮೊರೆತ ಅಕ್ಕಪಕ್ಕದ ಹಳ್ಳಿಗಳಿಗೂ ಕೇಳಬೇಕು, ಆ ಮಟ್ಟಿಗೆ ಎಲ್ಲೆಡೆ ಲಕ್ಷ್ಮಿಪಟಾಕಿ, ಆನೆ ಪಟಾಕಿ ಸಿಡಿಸುತ್ತಾರೆ. ಪಟಾಕಿ ಪರಿಸರಕ್ಕೆ ಮಾರಕ ಎಂಬುದು ಗೊತ್ತಿದ್ದೂ, ಅದರ ಮಜವನ್ನು ತ್ಯಾಗ ಮಾಡಲು ಯಾರೂ ಸುತಾರಾಂ ಸಿದ್ಧವಿರಲ್ಲ. ಆದರೆ, ತಮಿಳುನಾಡಿನ ಈ ಹಳ್ಳಿಗರು ಮಾತ್ರ ನಿಶಬ್ದವಾಗಿ ಹಬ್ಬ ಆಚರಿಸುತ್ತಾರೆ.
ದೀಪಾವಳಿ ಎಂಬುದು ದೀಪಗಳ ಹಬ್ಬವಾದರೂ, ಅವುಗಳ ಆಡಂಬರ ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ತರಹೇವಾರಿ ಪಟಾಕಿಗಳನ್ನು ಸಿಡಿಸಿ ಮೋಜು ಅನುಭವಿಸುವುದು ಹಲವು ದಶಕಗಳಿಂದ ನಡೆದು ಬಂದಿದೆ. ಪಟಾಕಿ ಪರಿಸರಕ್ಕೆ ಮಾರಕ, ಪ್ರಾಣಿಗಳಿಗೆ ಅಪಾಯಕಾರಿ ಎಂದು ಪರಿಸರವಾದಿಗಳು ಬಾಯಿ ಬಾಯಿ ಬಡಿದುಕೊಂಡರೂ ಅದನ್ನು ಕೇಳುವವರು ಬೆರಳೆಣಿಕೆಯಷ್ಟು ಜನ ಮಾತ್ರ.
ಹಸಿರು ದೀಪಾವಳಿ ಆಚರಿಸುವುದು ಹೇಗೆ?
ಸುಶಿಕ್ಷಿತರು, ನಗರವಾಸಿಗಳು ಕೂಡಾ ಪಟಾಕಿಯ ಮೋಹ ಕಳಚಿಕೊಳ್ಳಲು ಪರದಾಡಿ, ಕಡೆಗೆ ಇದೊಂದು ವರ್ಷ ಹೊಡೆದೇಬಿಡುವಾ ಎಂದು ಸಾವಿರಾರು ರುಪಾಯಿಗಳನ್ನು ಕ್ಷಣಾರ್ಧದಲ್ಲಿ ಸುಟ್ಟು ಉಡಾಯಿಸುತ್ತಾರೆ. ಆದರೆ ಇಂಥವರಿಗೆಲ್ಲ ಮಾದರಿಯಾಗಿ ನಿಂತು ನಿಶಬ್ದವಾಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ ತಮಿಳುನಾಡಿನ ಕೆಲ ಹಳ್ಳಿಗಳ ಜನತೆ.
ತ್ರಿಚಿ ಜಿಲ್ಲೆಯ ತೊಪ್ಪುಪಟ್ಟಿ ಹಾಗೂ ಸಾಂಪಟ್ಟಿ ಹಳ್ಳಿಗಳ ಜನರು ಹಾಗೂ ವಿಲ್ಲುಪುರಂ ಜಿಲ್ಲೆಯ ಕಝುಪೆರುಂಪಕ್ಕಮ್ ಹಳ್ಳಿಗರೇ ಹಲವು ವರ್ಷಗಳಿಂದ ಪಟಾಕಿರಹಿತ ಸುಂದರ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿರುವವರು. ಈ ಹಳ್ಳಿಗಳಲ್ಲಿ ದೀಪಾವಳಿ ಸಹಿತ ಯಾವುದೇ ಸಂಭ್ರಮಾಚರಣೆಗಾಗಿ ಒಂದೂ ಗರ್ನಲ್ ಢಂ ಎನ್ನುವುದಿಲ್ಲ, ಲಕ್ಷ್ಮಿ ಪಟಾಕಿಯ ಸರ ಪಟಪಟ ಎಂದು ಚಟಪಟಗುಟ್ಟುವುದಿಲ್ಲ, ಸುರ್ ಸುರ್ ಬತ್ತಿ ಸುರ್ ಎನ್ನುವುದಿಲ್ಲ, ರಾಕೆಟ್ ಬಾಲಕ್ಕೆ ಬೆಂಕಿ ಹೆಚ್ಚಿಕೊಂಡು ಆಕಾಶಕ್ಕೆ ಹಾರಿ, ಯಾರದೋ ಮನೆಯ ಸೂರಿನ ಮೇಲೆ ಬೀಳುತ್ತೇನೆಂದು ಬೆದರಿಸುವುದಿಲ್ಲ, ಮಕ್ಕಳ ಪಿಸ್ತೂಲ್ ಡಿಶ್ಕ್ಯಾವ್ ಎನ್ನೋಲ್ಲ...
ದೀಪಾವಳಿಗೆ ಎಣ್ಣೆ ಸ್ನಾನ ಮಾಡಿದ್ರಾ? ಅಷ್ಟಕ್ಕೂ ಇದರ ಮಹತ್ವವೇನು?
ಬದಲಿಗೆ ಪ್ರತಿ ಮನೆಯ ಒಳಹೊರಗೆ ಎಣ್ಣೆಯ ಹಣತೆಗಳು ಬೆಳಗುತ್ತವೆ. ಸಾಂಪ್ರದಾಯಿಕ ಸಿಹಿತಿಂಡಿಗಳು ಸಂತೋಷ ನೀಡುತ್ತವೆ, ಎಣ್ಣೆಸ್ನಾನ ರಿಲ್ಯಾಕ್ಸ್ ಆಗಿಸುತ್ತದೆ. ಅಂಟಿಗೆಪಿಂಟಿಗೆ ತರುವ ಊರ ದೇವಾಲಯದ ಹಣತೆ ಮನೆಮನೆಯಲ್ಲೂ ಹೊತ್ತಿಕೊಳ್ಳುತ್ತದೆ, ವಾಹನಗಳ ಪೂಜೆ, ಗೋಪೂಜೆ ಸಾಂಗವಾಗಿ ನೆರವೇರುತ್ತದೆ. ಪಟಾಕಿ ಹೊತ್ತಿಸಿಲ್ಲ ಎಂಬುದು ದೀಪಾವಳಿಯ ಸಂಭ್ರಮವನ್ನು ಕಿಂಚಿತ್ತೂ ಕಡಿಮೆಗೊಳಿಸುವುದಿಲ್ಲ.
ಅಂದ ಹಾಗೆ ಈ ಹಳ್ಳಿಗರೇಕೆ ಪಟಾಕಿ ಹೊಡೆಯಲ್ಲ ಗೊತ್ತೇ?
ಈ ಹಳ್ಳಿಗಳ ಅಶ್ವತ್ಥ ಮರಗಳಲ್ಲಿ ಸಾವಿರಾರು ಬಾವಲಿಗಳು ವಾಸವಾಗಿದ್ದು, ಪಟಾಕಿಯಿಂದಾಗಿ ಅವುಗಳಿಗೆ ತೊಂದರೆಯಾಗಬಹುದು, ಡಿಸ್ಟರ್ಬ್ ಆಗಬಹುದು ಎಂಬುದು ಹಳ್ಳಿಗರ ಚಿಂತನೆ. ಈ ಬಾವಲಿಗಳು ಇಲ್ಲಿ ಬಂದು ನೆಲೆಸಿ ಸುಮಾರು 30 ವರ್ಷಗಳೇ ಕಳೆದಿದ್ದು, ಈ ಅಶ್ವತ್ಥ ಮರದ ಕೆಳಗೆ ತಮಿಳರ ದೇವರು ಮುನಿಯಪ್ಪ ಸ್ವಾಮಿ ವಾಸಿಸುತ್ತಾನೆ. ಹಾಗಾಗಿ, ಈ ಬಾವಲಿಗಳನ್ನು ಕೂಡಾ ಹಳ್ಳಿಗರು ದೇವರ ಸ್ವರೂಪವೆಂದು ಪೂಜಿಸುತ್ತಾರೆ. ಪಟಾಕಿ ಹೊಡೆದರೆ ಅವು ಹೆದರಿ ವಾಸಸ್ಥಾನ ಬಿಟ್ಟು ತೆರಳುತ್ತವೆ ಎಂಬುದು ಇವರ ಕಳಕಳಿ.
ಹಳ್ಳಿಗರೇನಂತಾರೆ?
ಈ ಬಗ್ಗೆ ತೊಪ್ಪುಪಟ್ಟಿಯ ನಿವಾಸಿ ವೇಲಾಯುಧಂ ಹೇಳುವುದು ಹೀಗೆ- "ಇದೊಂದು ಶತಮಾನ ಹಳೆಯ ಕತೆ. ಆಗ ಇಲ್ಲಿ ಕೇವಲ ಕೆಲವು ಬ್ರಾಹ್ಮಣ ಕುಟುಂಬಗಳು ನೆಲೆಸಿದ್ದವು. ಅವರು ಕೃಷಿ ಕೆಲಸಕ್ಕಾಗಿ ಬೇರೆಯವರನ್ನೂ ಊರಿಗೆ ಕರೆತಂದರು. ಮನೆಗಳ ಹತ್ತಿರವಿದ್ದ ಹುಣಸೇಮರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾವಲಿಗಳು ನೆಲೆಸಿದ್ದವು. ಈ ಬಾವಲಿಗಳು ಹಣ್ಣುಗಳನ್ನು ತಿನ್ನುತ್ತಿದ್ದುದರಿಂದ ಬ್ರಾಹ್ಮಣ ಕುಟುಂಬಗಳು ಅವಕ್ಕಾಗಿ ಆಹಾರ ಇಡಲು ಆರಂಭಿಸಿದವು.
ಬಂದೇ ಬಿಡ್ತು ದೀಪಾವಳಿ; ಪ್ರೀತಿಪಾತ್ರರಿಗೆ ಈ ಗಿಫ್ಟ್ ಗಳನ್ನು ಕೊಡಿ!
ಈ ಕುಟುಂಬಗಳ ಪುರುಷರು ಮರವೇರಿ ಕೊಂಬೆಗಳ ಮಧ್ಯೆ ನೀರು ತುಂಬಿದ ಪಾತ್ರೆಯಿಟ್ಟು ಬರುತ್ತಿದ್ದರು. ನನ್ನ ಬಾಲ್ಯದಲ್ಲಿ ನಾನು ಹಾಗೂ ಗೆಳೆಯರು ಈ ಬಾವಲಿಗಳ ಚಟುವಟಿಕೆ ನೋಡಿ ಖುಷಿ ಪಟ್ಟಿದ್ದೇವೆ. ಅವುಗಳಿಗೆ ಆಹಾರ ನೀಡಿ ಸಂಭ್ರಮಿಸಿದ್ದೇವೆ. ವರ್ಷಗಳು ಕಳೆದಂತೆ ಇವು ನಮ್ಮ ಜೀವನದ ಭಾಗವೇ ಆಗಿವೆ. ಹಾಗಾಗಿ, ಹಳ್ಳಿಗರು ಅವುಗಳ ಸುರಕ್ಷತೆಗೆ ಹೆಚ್ಚು ಗಮನ ಹರಿಸಿದ್ದೇವೆ. ಹಾಗಾಗಿ ಗ್ರಾಮ ಪಂಚಾಯಿತಿಯೇ ಊರಿನೊಳಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಬ್ರಾಹ್ಮಣ ಕುಟುಂಬಗಳು ಊರು ತೊರೆದರೂ, ಪಟಾಕಿ ನಿಷೇಧ ಮುಂದುವರೆದುಕೊಂಡು ಬಂದಿದೆ," ಎನ್ನುತ್ತಾರೆ.
ಸಹಜೀವನ ಪಾಠ
ನಮ್ಮ ಹಿಂದೂ ಧರ್ಮದಲ್ಲಿ ಮುಂಚಿನಿಂದಲೂ ಗೋವು, ಹಾವು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು, ಮರಗಿಡಗಳನ್ನು ದೇವರೆಂದು ಪೂಜಿಸಿ, ಅವುಗಳೊಂದಿಗೇ ಬದುಕು ನಡೆಸುವ ಪದ್ಧತಿ ಇದ್ದೇ ಇದೆ. ನಮ್ಮ ಸುತ್ತಲಿನ ಪ್ರಾಣಿಪಕ್ಷಿಗಳೊಂದಿಗೆ ಸಹಜೀವನ ನಡೆಸುವುದು ನಮ್ಮ ಬದುಕಿನ ರೀತಿಯೇ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಕಳೆದು, ಸ್ವಾರ್ಥ ಬೆಳೆದು ಮನುಷ್ಯನೊಬ್ಬನ ಜೀವ ಮಾತ್ರ ಬೆಲೆಯುಳ್ಳದ್ದು, ಉಳಿದೆಲ್ಲವೂ ನಗಣ್ಯ ಎಂಬಂಥ ಮನಸ್ಥಿತಿ ಸೃಷ್ಟಿಯಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ 'ಬಲೀಂದ್ರ ಪೂಜೆ'
ಇದು ಸ್ವಯಂವಿನಾಶಕ್ಕೆ ಬುನಾದಿಯೇ ಹೊರತು ಮತ್ತೇನಲ್ಲ. ಈ ಜಗತ್ತಿನಲ್ಲಿ ನಮಗಿರುವಷ್ಟೇ ಬದುಕುವ ಹಕ್ಕು ಇತರ ಜೀವಿಗಳಿಗೂ ಇದೆ ಎಂಬ ತತ್ವ ಅರಿವಾದಲ್ಲಿ, ನಮ್ಮಂತೆಯೇ ಅವು ಎಂಬುದನ್ನು ಒಪ್ಪಿಕೊಂಡಲ್ಲಿ ಮಾತ್ರ ಇಂಥ ಆದರ್ಶಗಳು ಮೈದೋರಲು ಸಾಧ್ಯ.