ವಾಲ್ಮೀಕಿ ಜಯಂತಿ 2024: ಕವಿಕುಲ ಸಾರ್ವಭೌಮ ಮಹರ್ಷಿ ವಾಲ್ಮೀಕಿ

ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಾರೆ.

Valmiki Jayanti 2024 Kavikula Sarvabhauma Maharshi Valmiki Article Written By Dr P Manjunath gvd

ಡಾ.ಪಿ.ಮಂಜುನಾಥ ಮೈಸೂರು

ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವ ಮತ್ತು ಕಾವ್ಯದ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸುವ ಹಿನ್ನಲೆಯಲ್ಲಿ ಪ್ರತಿ ವರ್ಷವು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಹರ್ಷಿ ವಾಲ್ಮೀಕಿಯವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ.

೨೪ ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯವು ಭಾರತದ ಚಿತ್ರಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಗೀತ, ನೃತ್ಯ, ರಂಗಭೂಮಿ, ನಾಟಕ, ಯಕ್ಷಗಾನ, ಚಲನಚಿತ್ರ, ಮುಂತಾದ ಕ್ಷೇತ್ರಗಳ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದೆ. ಇಂಡೋನೇಷಿಯಾ, ಸಿಲೋನ್, ಥೈಲ್ಯಾಂಡ್, ಕಾಂಬೋಡಿಯಾ, ಮಲೇಷಿಯಾ, ಶ್ರೀಲಂಕಾ, ವಿಯೆಟ್ನಾಂ ಮತ್ತು ಲಾವೋಸ್ ಮುಂತಾದ ರಾಷ್ಟ್ರಗಳ ಭಾಷೆಗಳಿಗೂ ಅನುವಾದಗೊಂಡಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ಮೂಲ ಭಾಷೆಗಳಲ್ಲಿ ಅನುವಾದಗೊಂಡಿರುವ ರಾಮಾಯಣವು ವಿಶ್ವಸಾಹಿತ್ಯ ಮಟ್ಟದ ಮಹಾಕಾವ್ಯವಾಗಿ ಜನಪ್ರಿಯತೆಯನ್ನು ಪಡೆದಿದೆ. ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ವಿಶ್ವಕವಿಯಾಗಿ, ಇತಿಹಾಸಕಾರರಾಗಿ, ಶಾಸ್ತ್ರಜ್ಞರಾಗಿ, ತತ್ವಜ್ಞಾನಿಯಾಗಿ ಗೌರವಿಸಲ್ಪಡುತ್ತಾರೆ.

ಮಹಾಕವಿ ಕಾಳಿದಾಸ, ಭವಭೂತಿ, ತೊರವೆಯ ನರಹರಿ, ನಾಗಚಂದ್ರ, ಕುಮಾರವ್ಯಾಸ, ಮುದ್ದಣ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತುಳಸಿದಾಸರು, ತ.ಸು.ಶಾಮರಾಯರು, ತೆಲಗು ಕವಿ ವಿಶ್ವನಾಥ ಸತ್ಯನಾರಾಯಣ, ತಮಿಳು ಕವಿ ಕಂಬ ಮುಂತಾದ ಶ್ರೇಷ್ಠ ಕವಿಗಳು ರಚಿಸಿರುವ ನಾಟಕ ಮತ್ತು ಕಾವ್ಯಗಳ ಮೇಲೆ ಮಹರ್ಷಿ ವಾಲ್ಮೀಕಿ ರಾಮಾಯಣ ಮಾಹಾಕಾವ್ಯದ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮತ್ತು ತೆಲಗು ಕವಿ ವಿಶ್ವನಾಥ ಸತ್ಯನಾರಾಯಣರಿಂದ ರಚಿತವಾದ ‘ರಾಮಾಯಣ ಕಲ್ಪವೃಕ್ಷಮು’ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ‘ಮಹರ್ಷಿ ವಾಲ್ಮೀಕಿಯಂತಹ ಕವಿ, ರಾಮಾಯಣದಂತಹ ಮಹಾಕಾವ್ಯ’ ನಮಗೆ ದೊರೆತಿರುವುದು ‘ಭುವನದ ಭಾಗ್ಯ’ ಎಂದು ಬಣ್ಣಿಸಿದ್ದಾರೆ.

ತಲಕಾವೇರಿಯಲ್ಲಿ ಒಂದು ನಿಮಿಷ ತಡವಾಗಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!

ಮಹರ್ಷಿ ವಾಲ್ಮೀಕಿಯವರು ಮಹಾತಪಸ್ವಿಗಳು, ತಪದಿಂದ ದೈವಶಕ್ತಿಯನ್ನು ಪಡೆದುಕೊಂಡು ಅಗಾಧವಾದ ತಮ್ಮ ಕಾವ್ಯ ಪ್ರತಿಭೆಯಿಂದ ಸೃಷ್ಟಿಸಿರುವ ರಾಮಾಯಣ ಮಹಾಕಾವ್ಯದಲ್ಲಿರುವ ಭಾಷಾಸೃಷ್ಟಿ, ಛಂದಸ್ಸು, ಅಲಂಕಾರ, ಪ್ರಕೃತಿ ಸೌಂದರ್ಯ ಮತ್ತು ಪ್ರಾಣಿಪಕ್ಷಿ, ನದಿ, ಸರೋವರ, ಪರ್ವತ, ಕಾನನಗಳ ವರ್ಣನೆ, ಕಾವ್ಯದಲ್ಲಿನ ರಸಸಂಪತ್ತು, ಮನೋಜ್ಞ ಪಾತ್ರಗಳ ಮೂಲಕ ನಿರೂಪಿಸಿರುವ ಜೀವನ ಮೌಲ್ಯಗಳು ಮತ್ತು ಆದರ್ಶಗಳು, ಕಾವ್ಯದಲ್ಲಿನ ಬಹುವಿಷಯ ಪಾಂಡಿತ್ಯ, ಕಾವ್ಯವಸ್ತುಶ್ರೇಷ್ಠತೆ, ವೈಜ್ಞಾನಿಕ ಪರಿಕಲ್ಪನೆಗಳು ಜಗತ್ತಿನ ಯಾವುದೇ ಕಾವ್ಯದಲ್ಲೂ ಕಂಡುಬರುವುದಿಲ್ಲ. ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಟ್ಟಿದ್ದಾರೆ. ಕವಿತೆ ಎಂಬ ಮರದ ಕೊಂಬೆಯನ್ನು ಏರಿ ತನ್ನ ಮಧುರವಾದ ಕಂಠದಿಂದ ಇಂಪಾದ ರಾಮನಾಮವನ್ನು ಹಾಡುತ್ತಿರುವ ಮಹರ್ಷಿ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.

Latest Videos
Follow Us:
Download App:
  • android
  • ios