Asianet Suvarna News Asianet Suvarna News

ಬಸವ ಜಯಂತಿ: ಹಿಂಸೆ, ಅಶಾಂತಿಗೆ ಬಸವತತ್ವವೇ ಪರಿಹಾರ

ಬಸವಣ್ಣನವರು ಲೌಕಿಕ ಬದುಕನ್ನು ನಿರಾಕರಿಸಿದವರಲ್ಲ. ಲೌಕಿಕ ಬದುಕಿನಿಂದ ಅವರು ಪಲಾಯನವಾದ ಮಾಡಲಿಲ್ಲ. ಅವರು ಬದುಕನ್ನು ಪ್ರೀತಿಸಿದವರು. ಸ್ವರ್ಗ-ನರಕಗಳ ಕಲ್ಪನೆಯನ್ನು ನಿರಾಕರಿಸಿ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಗುಣಾತ್ಮಕ ಶೀಲವಂತ ಸಮಾಜದ ಕಲ್ಪನೆಗೆ ಕಾರಣರಾದವರು.

Tributes to Jagadguru Basaveshwara on the occasion of Basava Jayanti hls
Author
Bengaluru, First Published May 3, 2022, 11:47 AM IST

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾದುದು. ಸಾಮಾಜಿಕ ಆರ್ಥಿಕ ಅಸಮಾನತೆ, ಸ್ತ್ರೀ ಶೋಷಣೆ, ಮೌಢ್ಯ, ವರ್ಣಭೇದ, ವರ್ಗಭೇದಗಳ ತಾರತಮ್ಯದಿಂದ ತತ್ತರಿಸಿ ಹೋಗಿದ್ದ ಮಾನವ ಸಮುದಾಯಕ್ಕೆ ದಯೆ, ಪ್ರೀತಿ, ಅನುಕಂಪದ ಮಾನವೀಯ ಸ್ಪರ್ಶವನ್ನು ನೀಡಿದ ಬಸವಣ್ಣನವರ ಸಾರಥ್ಯದಲ್ಲಿ ನಡೆಸಿದ ಸಮಗ್ರ ಕ್ರಾಂತಿ ವಿಶ್ವದ ಇತಿಹಾಸದಲ್ಲಿಯೇ ಅಪೂರ್ವವಾದುದು.

ದಯೆ ಎಂಬ ಜೀವದ್ರವ್ಯ

ದಯವಿಲ್ಲದ ಧರ್ಮವದೇವುದಯ್ಯಾ

ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿ

ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ

ಈ ವಚನದ ಮೂಲಕ ತಮ್ಮ ಸಾಮಾಜಿಕ ಕ್ರಾಂತಿಯ ಆಶಯಗಳಿಗೆ ಮಾನವ ಪ್ರೇಮವನ್ನೇ ಆಧಾರ ಸ್ತಂಭವಾಗಿ ಅವಲಂಬಿಸಿಕೊಂಡು ಜಗತ್ತಿನ ಸರ್ವರನ್ನೂ ಸಮಾನವಾಗಿ ಕಾಣುವ ಮೂಲಕ ವಿಶ್ವ ಭಾತೃತ್ವವನ್ನು ಪ್ರತಿಪಾದಿಸಿದವರು ಬಸವಣ್ಣ.

ಬಸವ ಜಯಂತಿ 2022 ಶುಭಾಶಯಗಳು ಮತ್ತು ಸಂದೇಶಗಳು

ಸಮಾಜಮುಖಿ ವಿಚಾರಧಾರೆ

ವಿಶ್ವದ ಪ್ರಥಮ ಪ್ರಜಾಸತ್ತಾತ್ಮಕ ಸಂಸ್ಥೆಯೆಂದೇ ಕರೆಯಲ್ಪಡುವ ಅನುಭವ ಮಂಟಪದ ಪರಿಕಲ್ಪನೆಯನ್ನು ಸಾಕಾರಗೊಳಿಸಿ, ತಮ್ಮ ಸಮಕಾಲೀನ ಶರಣರೊಂದಿಗೆ ಅಂದಿನ ಸಮಾಜದ ಸಾಮಾಜಿಕ ತಲ್ಲಣಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಅನುಭಾವದ ನೆಲೆಯಲ್ಲಿ ಅವರು ನಡೆಸುತ್ತಿದ್ದ ರೀತಿ ಅನನ್ಯವಾದುದು. ವಿವಿಧ ಕಾಯಕಗಳ ಹಿನ್ನೆಲೆಯಲ್ಲಿ ಕೆಳಸ್ತರಗಳಿಂದ ಬಂದಂತಹ ಶರಣರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಜಾತಿ ಸಂಘರ್ಷಗಳ ಮೂಲ ಬೇರನ್ನು ಸಮಾಜದಿಂದ ಕಿತ್ತೊಗೆಯಲು ಅವರು ನಡೆಸಿದ ವೈಚಾರಿಕ ನೆಲೆಯಲ್ಲಿನ ಸಾಮಾಜಿಕ ಕ್ರಾಂತಿ ಇಡೀ ವಿಶ್ವಕ್ಕೆ ಆದರ್ಶವಾದುದು. ಬಸವಣ್ಣನವರು ಲೌಕಿಕ ಬದುಕನ್ನು ನಿರಾಕರಿಸಿದವರಲ್ಲ. ಲೌಕಿಕ ಬದುಕಿನಿಂದ ಅವರು ಪಲಾಯನವಾದಿಗಳಾಗಲಿಲ್ಲ. ಅವರು ಬದುಕನ್ನು ಪ್ರೀತಿಸಿದವರು. ಸ್ವರ್ಗ-ನರಕಗಳ ಕಲ್ಪನೆಯನ್ನು ನಿರಾಕರಿಸಿ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಗುಣಾತ್ಮಕ ಶೀಲವಂತ ಸಮಾಜದ ಕಲ್ಪನೆಗೆ ಕಾರಣರಾದವರು. ಶರಣರ ಬದುಕಿನಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಅವರದು ಕಾಯಕವೇ ಪ್ರಧಾನವಾಗಿದ್ದ ಆಧ್ಯಾತ್ಮ ಚಿಂತನೆ. ಕಾಯಕವೇ ಕೈಲಾಸ ಎಂಬ ಕಾಯಕ ಸೂತ್ರವನ್ನು ಇಡೀ ವಿಶ್ವಕ್ಕೆ ನೀಡಿದ ಬಸವಾದಿ ಶರಣರು ಕಾಯಕಕ್ಕೆ ನೀಡಿದಷ್ಟೇ ಮಹತ್ವವನ್ನು ದಾಸೋಹಕ್ಕೂ ನೀಡಿದವರು. ಶರಣರ ದೃಷ್ಟಿಯಲ್ಲಿ ಕಾಯಕವು ಸತ್ಯಶುದ್ಧವಾಗಿರಬೇಕು. ಅವರ ದೃಷ್ಟಿಯಲ್ಲಿ ಭಕ್ತಿಯೆಂದರೆ ಬೆವರು ಸುರಿಸಿ ಕಾಯಕ ಮಾಡಿ ಅದರಿಂದ ಬಂದ ಫಲವನ್ನು ಸಮಾಜಕ್ಕೆ ಧಾರೆಯೆರುವಂತಹ ಅನನ್ಯವಾದ ಸಮಾಜಮುಖಿಯಾದ ವಿಚಾರಧಾರೆ.

ಜೀವನ ಸಂವಿಧಾನ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ

ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ

ಬಸವಣ್ಣನವರು ಈ ವಚನದ ಮೂಲಕ ನೀಡಿದಂತಹ ಜಾಗತಿಕ ಸಂದೇಶ ಎಲ್ಲ ಕಾಲಕ್ಕೂ ಎಲ್ಲ ಸಮುದಾಯಕ್ಕೂ ಅನ್ವಯವಾಗುವಂತಹ ಒಂದು ಬದುಕಿನ ಶಾಶ್ವತ ನೀತಿ ಸಂಹಿತೆಯಾಗಿದೆ. ಈ ವಚನದ ಆಶಯಗಳು ಇಡೀ ಮಾನವ ಸಮುದಾಯಕ್ಕೆ ನೀಡಿದ ಆದರ್ಶ ಜೀವನ ಸೂತ್ರಗಳಾಗಿವೆ. ಬಸವಾದಿ ಶರಣರು ನಡೆಸಿದ ಸಮಗ್ರ ಕ್ರಾಂತಿಗೆ ಈ ನೀತಿ ಪ್ರಧಾನವಾದ ವಚನವೇ ಮೂಲ ಪ್ರೇರಣೆ.

ವಿಶ್ವ ಪ್ರೇಮದ ಅನುಸಂಧಾನ

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ

ಇವನಮ್ಮವ, ಇವನಮ್ಮವ, ಇವನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಾ ನಿಮ್ಮ ಮಗನೆಂದೆನಿಸಯ್ಯಾ

ಇಂದು ಜಾತಿ, ಧರ್ಮ, ಉಚ್ಚ-ನೀಚ, ಮೇಲು-ಕೀಳು ಎಂಬ ಭಾವನೆಯಿಂದ ಜಗತ್ತಿನಲ್ಲಿ ನಡೆಯುತ್ತಿರುವ ಸಂಕುಚಿತ ಮನೋಧರ್ಮದ ಸಂಘಷÜರ್‍ಗಳಿಗೆ, ದಿಕ್ಕುಗೆಟ್ಟಸಮಾಜಕ್ಕೆ ಪ್ರೀತಿ, ಸಮಾನತೆ, ಸ್ವಾಭಿಮಾನದ ಮೌಲ್ಯಗಳನ್ನು ಸಾರುವ ಈ ವಚನವು ಇಡೀ ವಿಶ್ವವೇ ನಮ್ಮ ಕುಟುಂಬ, ವಿಶ್ವದ ಎಲ್ಲರೂ ನಮ್ಮವರೇ ಎಂಬ ಅವರ ವಿಶಾಲವಾದ ಮಾನವ ಪ್ರೇಮ ವಿಶೇಷವಾಗಿ ಶೋಷಿತ ವರ್ಗದ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಗೌರವದ ಸಂಕೇತವಾಗಿದೆ.

Ramadan: ಉಪವಾಸ, ದಾನ-ಧರ್ಮ, ಪ್ರಾರ್ಥನೆ, ಸಹಭೋಜನ, ಭ್ರಾತೃತ್ವವನ್ನು ಸಾರುವ ಮುಸ್ಲಿಮರ ಪವಿತ್ರ ಹಬ್ಬ

ಸ್ತ್ರೀ ಸಮಾನತೆ ಸಾರಿದ ಬಸವಣ್ಣ

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,

ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ,

ಈ ಮಾಯೆಯ ಕಳೆವಡೆ ಎನ್ನಳವಲ್ಲ,

ನೀವೆ ಬಲ್ಲಿರಿ ಕೂಡಲಸಂಗಮದೇವಾ.

ಈ ವಚನವು ಒಂಬತ್ತು ಶತಮಾನಗಳ ಹಿಂದೆಯೇ ಬಸವಣ್ಣನವರು ಸ್ತ್ರೀ ಸಮುದಾಯದ ಬಗ್ಗೆ ತೋರಿದ ಸಮಾನತೆ ಹಾಗೂ ಗೌರವದ ಸಂಕೇತವಾಗಿದೆ. ಸ್ತ್ರೀ ಸಮಾನತೆಯ ಕ್ರಾಂತಿಕಾರಕ ಸಂದೇಶವನ್ನು ಜಗತ್ತಿಗೆ ನೀಡಿದ ಮೊದಲ ಸಾಮಾಜಿಕ ಸುಧಾರಕ ಬಸವಣ್ಣನವರು ಎಂಬುದು ಹೆಮ್ಮೆಯ ವಿಷಯವಾಗಿದೆ.

ಶುದ್ಧ ಅಂತಃಕರಣ

ಕಲ್ಲನಾಗರ ಕಂಡರೆ ಕಂಡರೆ ಹಾಲನೆರೆಯಂಬರು,

ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ.

ಉಂಬ ಜಂಗಮ ಬಂದಡೆ ನಡೆಯೆಂಬರಯ್ಯ.

ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.

ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,

ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.

ಈ ವಚನದ ಮೂಲಕ ಬಸವಣ್ಣನವರು ಧರ್ಮ ಎಂದರೆ ಮಾನವನಿಗೆ ತೋರಬಹುದಾದ ನಿರ್ಮಲ, ಶುದ್ಧ ಅಂತಃಕರಣದ ಪ್ರೇಮವೇ ವಿನಹ ಎಲ್ಲೋ ಇರಬಹುದೆಂದು ಭಾವಿಸುವ ದೈವದ ಹೆಸರಿನಲ್ಲಿ ನಡೆಸುವ ಅರ್ಥರಹಿತ ಆಚರಣೆಗಳಲ್ಲ ಎಂದು ಸಾರಿದರು. ಬಸವಣ್ಣನವರು ಮೌಢ್ಯ, ಅಂಧಶ್ರದ್ಧೆ ಹಾಗೂ ಅರ್ಥರಹಿತ ಆಚರಣೆಗಳ ವಿರುದ್ಧ ಸಿಡಿದು ನಿಂತರು. ತಮ್ಮ ವೈಚಾರಿಕ ವಿಚಾರಧಾರೆಯಿಂದ ಧರ್ಮಕ್ಕೆ ವೈಚಾರಿಕತೆಯ ಸ್ಪರ್ಶವನ್ನು ನೀಡಿದ ಮಹಾನ್‌ ಸಾಮಾಜಿಕ ಚಿಕಿತ್ಸಕ ಮನೋಧರ್ಮದ ಸಮಾಜ ವಿಜ್ಞಾನಿಗಳು ಬಸವಣ್ಣನವರು.

ರಾಶಿಗನುಗುಣವಾಗಿ Akshaya Tritiya ದಂದು ಈ ಲೋಹ ಖರೀದಿಸಿ ಅದೃಷ್ಟ ಹೆಚ್ಚಿಸಿಕೊಳ್ಳಿ

ಏನು ಬಂದಿರಿ, ಹದುಳಿದ್ದಿರೆ ಎಂದಡೆ

ನಿಮ್ಮೈಸಿರಿ ಹಾರಿ ಹೋಹುದೆ?

ಕುಳ್ಳಿರೆಂದಡೆ ನೆಲ ಕುಳಿಹೋಹುದೆ?

ಒಡನೆ ನುಡಿದಡೆ ಸಿರ, ಪಟ್ಟಯೊಡೆವುದೆ?

ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ

ಮೂಗ ಕೊಯ್ಯುವ ಮಾಬನೆ ಕೂಡಲಸಂಗಮದೇವಯ್ಯ?

ಎಂಬ ಈ ವಚನದ ಮೂಲಕ ಜನಸಂವೇದನೆಯ ಸಾರ್ವಜನಿಕ ಆಡಳಿತದ ಸೂತ್ರವನ್ನು ಜಗತ್ತಿಗೆ ನೀಡಿದ ಹಿರಿಮೆ ಬಸವಣ್ಣನವರದು. ಆಡಳಿತ ನಡೆಸುವವರು ಜನಸಾಮಾನ್ಯರೊಂದಿಗೆ ಹೇಗೆ ಸ್ಪಂದಿಸಬೇಕೆಂದು ಸಾರುವ ಈ ವಚನವು ಆಡಳಿತ ನಡೆಸುವವರಿಗೆಲ್ಲ ಒಂದು ಅತ್ಯಂತ ಸೂಕ್ತವಾದ ಮಾನವೀಯ ಸಂದೇಶವಾಗಿದೆ.

ಜಾಗತಿಕ ಶಾಂತಿಗೆ ಸೂಕ್ತ ಸಂದೇಶ

ಬಸವಣ್ಣನವರ ಚಿಂತನೆಗಳಲ್ಲಿ ವಿಶ್ವದ ಎಲ್ಲಾ ದಾರ್ಶನಿಕರ ಸಂದೇಶಗಳನ್ನು ಕಾಣಬಹುದಾಗಿದೆ. ಕಾಯಕ-ದಾಸೋಹ ಸಿದ್ಧಾಂತ, ಜಾತ್ಯತೀತ ಸಮಾಜದ ಪರಿಕಲ್ಪನೆ, ವಿಶ್ವ ಭ್ರಾತೃತ್ವ ಭಾವ, ಸ್ತ್ರೀ ಸಮುದಾಯದ ಸಮಾನತೆ, ವೈಚಾರಿಕ ಪ್ರಜ್ಞೆ, ಇಹ ಪರಗಳ ಸಮನ್ವಯ, ನಡೆ ನುಡಿಯಲ್ಲಿ ಪರಿಶುದ್ಧತೆ, ಮುಂತಾದ ಮಹಾನ್‌ ಕ್ರಾಂತಿಕಾರಕ ಚಿಂತನೆಗಳಿಂದ ಶೋಷಣೆ ರಹಿತವಾದ ಸಮಾಜದ ಸೃಷ್ಟಿಗಾಗಿ ಒಂಭತ್ತು ಶತಮಾನಗಳ ಹಿಂದೆಯೇ ಒಂದು ವಿನೂತನವಾದ ಸಮಗ್ರ ಕ್ರಾಂತಿಯನ್ನು ನಡೆಸಿದ ಬಸವಣ್ಣನವರು ವಿಶ್ವ ಕಂಡಂತಹ ಒಬ್ಬ ಶ್ರೇಷ್ಠ ಸಮಾಜ ಸುಧಾರಕರು. ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಮಹಾನ್‌ ಮಾನವತಾವಾದಿ. ಜಾಗತಿಕ ನೆಲೆಯಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರ ಭಯೋತ್ಪಾದನೆಗಳಿಗೆ ಬಸವಾದಿ ಶರಣರು ಪ್ರತಿಪಾದಿಸಿದ ವಿಶ್ವ ಭಾತೃತ್ವ ಮೌಲ್ಯಗಳು ಪರಿಹಾರ ಸೂತ್ರಗಳಾಗಿವೆ. ಬಸವಣ್ಣನವರು ಪ್ರತಿಪಾದಿಸಿದ ಆದರ್ಶ ಮೌಲ್ಯಗಳು ನಮ್ಮೆಲ್ಲರಿಗೆ ಸನ್ಮಾರ್ಗದಲ್ಲಿ ನಡೆಯುವಂತಹ ಬೆಳಕನ್ನು ನೀಡುವಂತಾಗಲಿ.

- ಡಾ.ಸಿ.ಸೋಮಶೇಖರ್‌

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Follow Us:
Download App:
  • android
  • ios