Lal Bahadur Shastri: ಶಾಂತಿ, ಸರಳತೆಯ ಸಾಕಾರ ಮೂರ್ತಿ

ಶಾಸ್ತ್ರೀಜಿ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು. ಇಂದಿನ ಕೆಲಸ ಇಂದೇ ಮಾಡು ಎಂದು ಬದುಕಿ ತೋರಿಸಿದ ಅವರ ಸರಳ ಬದುಕು ಎಲ್ಲರಿಗೂ ಆದರ್ಶವಾಗಿದೆ. ಶಾಂತಚಿತ್ತದಿಂದ ಎಂಥದ್ದನ್ನೂ ಸಾಧಿಸಬಹುದು ಎಂಬುದಕ್ಕೆ ಅವರೊಂದು ನಿದರ್ಶನ.

Special article by Basavaraja M Yaraguppi on the occasion of Lal Bahadur Shastris 118th Birth Anniversary gvd

ಬಸವರಾಜ ಎಮ್ ಯರಗುಪ್ಪಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಮಹಾವ್ಯಕ್ತಿಗಳು ಹಲವರು. ಶಾಸ್ತ್ರೀಜಿ ಕೂಡಾ ಎತ್ತರದಲ್ಲಿ ಹೆಚ್ಚಲ್ಲ; ಸಾಹಸದಲ್ಲಿ ಕಡಿಮೆಯಲ್ಲ. ದೃಢತೆ, ಸಾಹಸ, ಸಹನೆ ಮತ್ತು ಚಾತುರ್ಯ ಮುಂತಾದವು ಒಂದು ದಿನದಲ್ಲಿ ಅಥವಾ ಒಂದು ವರ್ಷದಲ್ಲಿ ಸಂಪಾದಿಸಿದ ಗುಣಗಳಲ್ಲ. ಅವರ ಬಾಳು ಬೆಳೆದು ಬಂದ ಬಗೆಯನ್ನು ಕಂಡಾಗ ಅವರಿಗೆ ಈ ಗುಣಗಳೆಲ್ಲ ಹೇಗೆ ಬಂದುವೆಂಬುದು ಅರ್ಥವಾಗುತ್ತದೆ. ಕೆಲಸ, ಮನಸ್ಸು ಹಾಗೂ ಮಾತು ಮೂರನ್ನೂ ಶುದ್ಧವಾಗಿಟ್ಟುಕೊಂಡು ಬಾಳಿದ ಜೀವ. ನಿರ್ಲಿಪ್ತ, ಸ್ವಾರ್ಥರಹಿತ, ಸರಳತೆಯ ಸಾಕಾರಮೂರ್ತಿ. ಭಾರತದ ವೀರ ಪುತ್ರರ ಸಾಲಿಗೆ ಸೇರಿದ ಆ ವ್ಯಕ್ತಿ ಲಾಲ್‌ ಬಹದ್ದೂರ್‌ ಶಾಸ್ತ್ರಿ. ಇವರು ಭಾರತದ ಎರಡನೇ ಪ್ರಧಾನ ಮಂತ್ರಿ.

ಬಡತನದಲ್ಲಿ ಅರಳಿದ ಬದುಕು: ಲಾಲ್‌ ಬಹದ್ದೂರ್‌ ಶಾಸ್ತ್ರಿ ಹುಟ್ಟಿದ್ದು ಅಕ್ಟೋಬರ್‌ 2, 1904, ವಾರಾಣಸಿಗೆ ಏಳು ಮೈಲು ದೂರದಲ್ಲಿರುವ ಮುಘಲ್‌ಸರಾಯ… ಎಂಬ ಊರಿನಲ್ಲಿ. ತಂದೆ ಶಾರದಾ ಪ್ರಸಾದ, ತಾಯಿ ರಾಂದುಲಾರಿ ದೇವಿ. ಶಾಸ್ತ್ರೀಜಿ ಮೂರು ತಿಂಗಳ ಮಗುವಾಗಿದ್ದಾಗ ನಡೆದ ಒಂದು ಘಟನೆ ಸ್ವಾರಸ್ಯಕರವಾಗಿದೆ. ಗಂಗೆಯಲ್ಲಿ ಸ್ನಾನ ಮಾಡುವುದಕ್ಕಾಗಿ ದುಲಾರಿ ದೇವಿ ಹೋಗಿದ್ದಾಗ ನೂಕುನುಗ್ಗಲಿನಲ್ಲಿ ಮಗು ತಾಯಿಯ ತೋಳಿನ ತೆಕ್ಕೆಯಿಂದ ಜಾರಿಕೊಂಡು ದನ ಕಾಯುವವನೊಬ್ಬನ ತೆಕ್ಕೆಯೊಳಗೆ ಬಿತ್ತು. ಅವನಿಗೆ ಮಕ್ಕಳಿರಲಿಲ್ಲ. ಮಗುವಿನ ಆಗಮನವನ್ನು ಅವನು ದೇವರು ಕೊಟ್ಟವರವೆಂದೇ ಸಂಭ್ರಮದಿಂದ ಹಬ್ಬ ಮಾಡಿದ. ಮಗುವನ್ನು ಕಳೆದುಕೊಂಡ ರಾಂದುಲಾರಿ ಗೋಳಾಡಿದರು. ಪೊಲೀಸರಿಗೆ ದೂರು ಕೊಟ್ಟರು. ಪೊಲೀಸರು ಮಗುವನ್ನು ನಿಜವಾದ ತಂದೆ ತಾಯಿಯರಿಗೆ ಒಪ್ಪಿಸಲು ಕೊಂಡೊಯ್ದಾಗ ರೈತ ದಂಪತಿಗಳ ಗೋಳು ಹೇಳತೀರದು.

ಹುಡುಗನಿಗೆ ಹತ್ತು ವರ್ಷ ಆಗುವವರೆಗೂ ಅವನು ತಾತನ ಮನೆಯಲ್ಲೇ ಇದ್ದ. ಆ ಊರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ಹೀಗಾಗಿ ಮುಂದೆ ಓದಲು ವಾರಾಣಸಿಗೆ ಕಳುಹಿಸಿದರು. ಧೈರ್ಯ, ಆತ್ಮಾಭಿಮಾನಗಳು ಶಾಸ್ತ್ರೀಜಿಗೆ ಚಿಕ್ಕಂದಿನಿಂದಲೂ ಬಂದ ಎರಡು ದೊಡ್ಡ ಗುಣಗಳು. ವಾರಾಣಸಿಯಲ್ಲಿದ್ದಾಗ ಒಮ್ಮೆ ಇವರು ತಮ್ಮ ಗೆಳೆಯರೊಂದಿಗೆ ಗಂಗೆಯ ಇನ್ನೊಂದು ದಡದಲ್ಲಿದ್ದ ಜಾತ್ರೆ ನೋಡಲು ಹೋದರು. ಬರುವಾಗ ದೋಣಿಗೆ ಹಣವಿರಲಿಲ್ಲ. ಗೆಳೆಯರಲ್ಲಿ ಹಣ ಕೇಳಲು ಅವರ ಸ್ವಾಭಿಮಾನ ಒಪ್ಪಲಿಲ್ಲ. ಗೆಳೆಯರಿಗೆ ಗೊತ್ತಾಗದ ಹಾಗೆ ಅವರು ಗುಂಪಿನಿಂದ ಹಿಂದುಳಿದರು. ಗೆಳೆಯರು ಮಾತಿನ ಭರದಲ್ಲಿ ಲಾಲ್‌ ಬಹದ್ದೂರರನ್ನು ಮರೆತು ದೋಣಿ ಹತ್ತಿದರು. ಅವರು ಮುಂದೆ ಸಾಗಿದ ಮೇಲೆ, ಮಬ್ಬಿನಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಗಂಗೆಯಲ್ಲಿ ಧುಮುಕಿದರು. ಇತರರು ಭಯದಿಂದ ಉಸಿರು ಹಿಡಿದು ನೋಡುತ್ತಿದ್ದಾಗ ಇವರು ಈಜಿ ದಡ ಸೇರಿದರು. 

ರಾಜಕಾರಣಿಗಳಿಗೆ ಸಾರ್ವಕಾಲಿಕ ಮಾದರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ

ನೀರಿನಲ್ಲಿ ಹೇಗೋ ಹಾಗೆ ಬಾಳಿನಲ್ಲೂ ಅವರು ಈಸಿ ಗೆದ್ದರು. ಎರಡು ಸಾರಿ ಅವರು ನೀರಿನಲ್ಲಿ ಮುಳುಗಿ ಹೋಗುತ್ತಿದ್ದರು. ಅದೃಷ್ಟವಶಾತ್‌ ಪಾರಾದರು. ಲಾಲ್‌ ಬಹದ್ದೂರ್‌ ಧೈರ್ಯ, ಸಾಹಸ, ಸಹನೆ, ಸಂಯಮ, ವಿನಯ, ಪರೋಪಕಾರ ಬುದ್ಧಿ ಇವನ್ನೆಲ್ಲ ಪಡೆದುಕೊಂಡದ್ದು ತಮ್ಮ ಬಾಲ್ಯದಲ್ಲಿ. ಚಿಕ್ಕಂದಿನಿಂದಲೂ ಅವರಿಗೆ ಓದಿನಲ್ಲಿ ತುಂಬ ಪ್ರೀತಿ. ಸಿಕ್ಕಿದ ಪುಸ್ತಕವನ್ನೆಲ್ಲ ಅದು ಅರ್ಥವಾಗಲಿ, ಆಗದಿರಲಿ ಓದುತ್ತಿದ್ದರು. ಗುರುನಾನಕರ ಪದ್ಯಗಳೆಂದರೆ ಅವರಿಗೆ ಬಲು ಇಷ್ಟ. ‘ಓ ನಾನಕನೆ, ಹುಲ್ಲಿನ ಹಾಗೆ ಪುಟಾಣಿಯಾಗಿಯೇ ಇರು, ಏಕೆಂದರೆ ಗಿಡಗಳು ಒಣಗಿದರೂ ಹುಲ್ಲು ಹಸುರಾಗಿಯೇ ಇರುತ್ತದೆ’ ಎಂಬ ಸಾಲುಗಳನ್ನು ಸದಾ ಹೇಳಿಕೊಂಡು ಸ್ಮರಿಸಿಕೊಳ್ಳುತ್ತಿದ್ದರು.

ಸರಳ ಜೀವನದ ಪ್ರವರ್ತಕ: ಲಾಲ್‌ ಬಹದ್ದೂರ್‌ ತಮ್ಮ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿಯನ್ನು 1927ರಲ್ಲಿ ವಿವಾಹವಾದರು. ವರದಕ್ಷಿಣೆಯ ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ವಿವಾಹ ಸಾಂಪ್ರದಾಯಿಕವಾಗಿತ್ತು. ವರ ಇದಕ್ಕಿಂತ ಹೆಚ್ಚಿನದೇನನ್ನೂ ಸ್ವೀಕರಿಸಲಿಲ್ಲ. ಯಾವುದನ್ನೂ ವ್ಯರ್ಥ ಮಾಡಬೇಡ ಎಂಬ ನಂಬಿಕೆಯುಳ್ಳ ಶಾಸ್ತ್ರಿ ಅವರು ಪ್ರಾಮಾಣಿಕ ಮತ್ತು ಸರಳ ಜೀವನವನ್ನು ನಡೆಸಿದರು. ಎಲ್ಲದಕ್ಕೂ ಮೊದಲು ಆದರ್ಶಗಳನ್ನು ಇರಿಸಿಕೊಂಡಿದ್ದರು. ಒಂದು ಬಾರಿ ಅವರ ಪುತ್ರರು ಸರ್ಕಾರ ಒದಗಿಸಿದ ಕಾರಿನಲ್ಲಿ ಸವಾರಿ ಮಾಡಲು ಹೋದರು. ಅದು ತಿಳಿದಾಗ ಶಾಸ್ತ್ರಿ ಅವರು ತಮ್ಮ ಸ್ವಂತ ಸಂಬಳದಿಂದ ಸರ್ಕಾರದ ನಿಧಿಗೆ ಇಂಧನ ವೆಚ್ಚವನ್ನು ಠೇವಣಿ ಮಾಡಿದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಒಮ್ಮೆ ಅವರು ಜೈಲುಪಾಲಾದರು. 

ಆಗ ಅವರ ಮಗಳು ತೀವ್ರ ಅನಾರೋಗ್ಯದಿಂದ ನಿಧನರಾದರು. ಮಗಳ ಅಂತಿಮ ಸಂಸ್ಕಾರಕ್ಕಾಗಿ ಶಾಸ್ತ್ರಿ ಅವರಿಗೆ ಹನ್ನೆರಡು ದಿನಗಳ ರಜೆ ನೀಡಲಾಯಿತು. ಆದರೆ ಪರಿಸ್ಥಿತಿಯ ಗಂಭೀರತೆ ಅರಿತು ಅವರು ಅಂತ್ಯಕ್ರಿಯೆ ಮಾಡಿದ ನಂತರ ಮೂರು ದಿನಗಳಲ್ಲಿ ಮರಳಿದರು. ಇದು ಅವರ ಸಾತ್ವಿಕತೆ. ಆಗಿನ ಕಾಲದಲ್ಲಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆಯನ್ನು ಶಾಸ್ತ್ರೀಜಿ ಕಟುವಾಗಿ ವಿರೋಧಿಸಿದ್ದರು. ತಮ್ಮ ಮದುವೆಯಲ್ಲಿ ಪತ್ನಿಯ ಮನೆಯಿಂದ ಏನನ್ನೂ ಸ್ವೀಕರಿಸಲು ಇಷ್ಟಪಟ್ಟಿರಲಿಲ್ಲ. ಶಾಸ್ತ್ರಿ ಅವರ ಮಾವನವರು ಹಲವು ಬಾರಿ ಮನವಿ ಮಾಡಿದ ಮೇಲೆ ಕೆಲವು ಮೀಟರ್‌ ಖಾದಿ ಬಟ್ಟೆಯನ್ನು ಮದುವೆಯ ಉಡುಗೊರೆಯಾಗಿ ಪಡೆದಿದ್ದರು.

ಶಾಸ್ತ್ರಿ ಬಿರುದು ಹೇಗೆ ಬಂದಿತು?: ಬ್ರಿಟಿಷ್‌ ಆಡಳಿತಕ್ಕೆ ವಿರುದ್ಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಾಣಸಿಯ ಕಾಶಿ ವಿದ್ಯಾಪೀಠವನ್ನು ಲಾಲ್‌ ಬಹಾದ್ದೂರ ಶಾಸ್ತ್ರಿ ಸೇರಿದ್ದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧಿಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್‌ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.

ಭಾರತೀಯರ ವಿಜಯ ಪತಾಕೆ: 1965ರಲ್ಲಿ ಪಾಕಿಸ್ತಾನವು ಭಾರತದ ದುರ್ಬಲತೆಯ ಲಾಭವನ್ನು ಪಡೆಯಲು ದಾಳಿ ಮಾಡಿತು. ಸೌಮ್ಯ ಸ್ವಭಾವದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆ ಸಂದರ್ಭದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದರು. ಸೈನಿಕರು ಮತ್ತು ರೈತರನ್ನು ಹುರಿದುಂಬಿಸಲು ಅವರು ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷಣೆಯನ್ನು ರಚಿಸಿದರು. ಪಾಕಿಸ್ತಾನವು ಯುದ್ಧದಲ್ಲಿ ಸೋತಿತು. ಶಾಸ್ತ್ರೀಜಿಯವರ ನಾಯಕತ್ವವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಯಿತು.

ಸೋಮವಾರದ ಉಪವಾಸ: ಶಾಸ್ತ್ರೀಜಿ ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂತು. ಆಗ ಹೊರ ದೇಶದಿಂದ ಆಹಾರ ಆಮದು ಮಾಡಿಕೊಳ್ಳಬೇಕಾಯಿತು. ಸಾಲದ ಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟುಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ, ಸೋಮವಾರದ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟ ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ‘ಸೋಮವಾರ’ ಪ್ರಚಲಿತದಲ್ಲಿದೆ.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಕುರಿತ ಅಪರೂಪದ ಸಂಗತಿಗಳು

ಇಂದಿನ ಕೆಲಸ ಇಂದೇ ಮಾಡಿ: ಶಾಸ್ತ್ರಿ ಅವರು ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿಯೂ ಶಾಂತಚಿತ್ತದಿಂದ ವರ್ತಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸ್ವಾವಲಂಬನೆ ಮತ್ತು ರಾಷ್ಟ್ರೀಯತೆಯ ಚಿಂತನೆಯಲ್ಲಿ ಅಖಂಡ ನಂಬಿಕೆ ಇರಿಸಿದ, ಕ್ರಿಯೆಯನ್ನು ನಂಬಿದ ವ್ಯಕ್ತಿ. ಅವರ ಸರಳತೆಯು ವಿದ್ಯಾರ್ಥಿಗಳು ಖಂಡಿತವಾಗಿಯೂ ಕಲಿಯಬೇಕಾದ ಸಂಗತಿ. ಶಾಂತ ಮನಸ್ಸನ್ನು ಹೊಂದಲು, ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಲು ಕೂಡ ಶಾಸ್ತ್ರೀಜಿಯವರ ಬದುಕು ಆದರ್ಶವಾಗಿದೆ. ಅವರ ಜೀವನದಿಂದ ಕಲಿಯಬೇಕಾದ ಇನ್ನೊಂದು ವಿಷಯವೆಂದರೆ ಕೆಲಸಗಳನ್ನು ಮುಂದೂಡುವ ಬದಲು ಅಂದೇ ಮಾಡಿ ಮುಗಿಸುವುದು. ಮೂವತ್ತು ವರುಷಗಳ ಸಮರ್ಪಣಾ ಸೇವೆ ಶಾಸ್ತ್ರಿಯವರದು. ಈ ಅವಧಿಯಲ್ಲಿ ಅವರೊಬ್ಬ ಪ್ರಾಮಾಣಿಕ ಮತ್ತು ಸಮರ್ಥ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. 

ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ದೂರದೃಷ್ಟಿಯುಳ್ಳ ವ್ಯಕ್ತಿಯಾದರು. ಶಾಸ್ತ್ರಿಯವರು ಮಹಾತ್ಮಾ ಗಾಂಧೀಜಿಯ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ‘ಕಠಿಣ ಪರಿಶ್ರಮ ಪ್ರಾರ್ಥನೆಗೆ ಸಮನಾದುದು’ ಎಂದು ಒಮ್ಮೆ ಅವರು ತಮ್ಮ ಗುರುವನ್ನು ಸ್ಮರಿಸುತ್ತಾ ಹೇಳಿದ್ದರು. ಶಾಸ್ತ್ರೀಜಿಯವರು ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು. ಅವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರದಾನ ಮಾಡಲಾಯಿತು. ಅವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಅವರ ಜನಪ್ರಿಯ ವಾಕ್ಯ ಜೈ ಜವಾನ್‌, ಜೈ ಕಿಸಾನ್‌ ಇಂದಿಗೂ ಜನರ ಮನಸ್ಸಿನಲ್ಲಿ ಚಿರವಾಗಿ ಉಳಿದಿದೆ.

Latest Videos
Follow Us:
Download App:
  • android
  • ios