Asianet Suvarna News Asianet Suvarna News

Akshaya Tritiya: ಬಂಗಾರ ಖರೀದಿ ಬಗ್ಗೆ ಶಾಸ್ತ್ರದಲ್ಲೇನಿದೆ?

ನಿರ್ಣಯ ಸಿಂಧು, ಪುರಾಣ ಮುಂತಾದ ಸನಾತನ ಗ್ರಂಥಗಳಲ್ಲಿ ಈ ದಿನ ಬಂಗಾರದ ದಾನ ಮಾಡಲು ಹೇಳಿದ್ದಾರೆಯೇ ಹೊರತು ಬಂಗಾರ ಖರೀದಿಸುವ ಕುರಿತು ಹೇಳಿಲ್ಲ. ಈ ದಿನ ಸುವಸ್ತುಗಳನ್ನು ಸತ್ಪಾತ್ರರಿಗೆ ದಾನ ಮಾಡಿ ಪುಣ್ಯಸಂಗ್ರಹಣೆ ಮಾಡುವ ದಿನವಾಗಿದೆ. 

Significance of Akshaya Tritiya hls
Author
Bengaluru, First Published May 3, 2022, 1:09 PM IST

ಬೇಸಿಗೆಯ ಪ್ರಖರವಾದ ಬೇಗೆ ಎಲ್ಲೆಲ್ಲೂ ವ್ಯಾಪಿಸಿರುವ ಸಮಯವಾದ ವೈಶಾಖ ಮಾಸದಲ್ಲಿ ಪರಶುರಾಮ ಜಯಂತಿ, ಶಂಕರ ಜಯಂತಿ, ನೃಸಿಂಹ ಜಯಂತಿ, ಕೂರ್ಮ ಜಯಂತಿ, ಶನೈಶ್ಚರ ಜಯಂತಿ ಮೊದಲಾದ ಧಾರ್ಮಿಕವಾಗಿ ಮಹತ್ವ ಪಡೆದ ಹಬ್ಬಗಳಲ್ಲಿ ಬಹು ಮುಖ್ಯವಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾದಂದು ಆಚರಿಸಲ್ಪಡುವ ಹಬ್ಬವೇ ಅಕ್ಷಯ ತೃತೀಯಾ ಅಥವಾ ಅಕ್ಷಯ ತದಿಗೆ.

ಅಕ್ಷಯ ತೃತಿಯಾ ಕೃತ ಯುಗದ ಆರಂಭದ ದಿನ. ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ, ಅಂದರೆ ಪರಶುರಾಮ ಜಯಂತಿ. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯಪಾತ್ರ ನೀಡಿದ ದಿನ. ಹಿಂದೂ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣ ಕ್ರಾಂತಿಯ ರೂವಾರಿ ಬಸವೇಶ್ವರರ ಜನ್ಮದಿನವೂ ಹೌದು. ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯವು ವರ್ಷದ ಅತ್ಯಂತ ಶುಭವಾದ, ಪುಣ್ಯವಾದ ಮುಹೂರ್ತಗಳಲ್ಲಿ ಒಂದಾಗಿದೆ. ಆ ಕಾರಣಕ್ಕಾಗಿ ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಬಹುದು.

Eid Mubarak 2022: ಪವಿತ್ರ ರಂಜಾನ್ ಹಬ್ಬದ ಪ್ರಾಮುಖ್ಯತೆ, ಇತಿಹಾಸ ಮತ್ತು ಆಚರಣೆ

ಅಕ್ಷಯ ತೃತೀಯಾ ಮಹತ್ವವೇನು?

ನಿರ್ಣಯ ಸಿಂಧುವಿನ ಪ್ರಕಾರ ವೈಶಾಖ ಶುಕ್ಲ ತೃತೀಯಾ ಅಕ್ಷಯ ತೃತೀಯೋಚ್ಯತೇ

ವೈಶಾಖ ಮಾಸದ ಶುಕ್ಲಪಕ್ಷದ ತೃತೀಯಾ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯ(ನಾಶ)ವೇ ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗಿದೆ. ಭವಿಷ್ಯ ಪುರಾಣದಲ್ಲಿ-

ಯತ್ಕಿಂಚಿತ್‌ ದೀಯತೇ ದಾನಂ ಸ್ವಲ್ಪಂ ವಾ ಯದಿ ವಾ ಬಹು

ತತ್ಸರ್ವಂ ಅಕ್ಷಯಂ ಯಸ್ಮಾತ್‌ ತೆನೇಯಂ ಅಕ್ಷಯಾ ಸ್ಮೃತಾ

ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.

ಯಾ ಮನ್ವಾದ್ಯಾ ಯುಗಾದ್ಯಾಶ್ಚ ತಿಥಿ ಯಸ್ತಾಸು ಮಾನವಃ

ಸ್ನಾತ್ವಾ ಹುತ್ವಾ ಚ ದತ್ವಾ ಚ ಜಪ್ತಾ್ವನಂತ ಫಲಂ ಲಭೇತ್‌

ಉದಕುಂಭಾನ್ಸಕನಕಾನ್‌ ಸ್ನಾನಾನ್‌ ಸರ್ವರಸೈಃ ಸಹ

ಯವಗೋಧೂಮ ಚಣಕಾನ್‌ ಸಕ್ತುದಧ್ಯೋದನಂ ತಥಾ

ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂ ದಾನೇ ಪ್ರಶಸ್ಯತೇ

ಅಕ್ಷಯ ಫಲದಾಯಿನಿಯಾದ ಈ ದಿನ ದೇವ-ಪಿತೃಪೂಜೆಗೆ ಪ್ರಶಸ್ತವಾಗಿದ್ದು, ಗಂಗಾದಿ ಪುಣ್ಯನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನನ್ನು ಉದ್ದೇಶಿಸಿ ಹೋಮ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ ನೀಗಿಸುವ ಕಬ್ಬಿನರಸ ಮುಂತಾದ ಪಾನೀಯಗಳು, ಅಕ್ಕಿ, ಗೋದಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆ ದಾನ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ, ಅನಂತಫಲ ದೊರಕುವುದು ಎಂದು ಮಹಾಭಾರತ, ಭವಿಷ್ಯಪುರಾಣವೇ ಮೊದಲಾದ ಪುರಾಣಗಳಲ್ಲಿ ಹೇಳಿದೆ.

ಬಸವ ಜಯಂತಿ: ಹಿಂಸೆ, ಅಶಾಂತಿಗೆ ಬಸವ ತತ್ವವೇ ಪರಿಹಾರ

ಬೃಹತ್ಪರಾಶರ ಸಂಹಿತೆಯಲ್ಲಿ ದಾನಮೇಕಂ ಕಲೌಯುಗೇ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ-ಸಹಕಾರ-ಸೇವೆ ಮಾಡಿದರೆ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ. ದಾನದಿಂದಲೇ ಮನಸ್ಸಂತೋಷ, ಚಿತ್ತಶ್ಶುದ್ಧಿ ದೊರಕುವುದು, ಅಕ್ಷಯ ಮೋಕ್ಷಸ್ಯ ಕಾರಣಮ್‌ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷಕ್ಕೂ ಕಾರಣವಾಗುವುದು ಎಂದು ಪುರಾಣಗಳು ಸಾರಿವೆ.

ಅಕ್ಷಯ ತೃತೀಯಾ ಕುರಿತ ಪುರಾಣ ಕಥೆ

ಅಕ್ಷಯ ತೃತೀಯಾ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದು ಹೀಗಿದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಅತ್ಯಂತ ಸದಾಚಾರಿಯಾದ ಆತ ದೇವತೆಗಳನ್ನು, ವಿಪ್ರರನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಷಯ ತೃತೀಯಾ ವ್ರತದ ಮಹತ್ವ ಅರಿತ ಆತ, ಅಕ್ಷಯ ತೃತೀಯಾ ಹಬ್ಬದ ದಿನದಂದು ಗಂಗಾನದಿಯಲ್ಲಿ ಸ್ನಾನ ಮಾಡಿ, ವಿಧಿ ಪೂರ್ವಕವಾಗಿ ಭಗವಂತನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ, ವಸ್ತ್ರ, ಆಹಾರ ಧಾನ್ಯಗಳನ್ನು ದಾನ ಮಾಡಿದ. ವರ್ಷ ಕಳೆದಂತೆ ಅಶಕ್ತನಾದರೂ, ವೃದ್ಧನಾದರೂ ಈ ದಿನ ಉಪವಾಸ, ದಾನ, ಧರ್ಮಗಳನ್ನು ಮಾಡುತ್ತಾ ಬಂದ.

ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದ. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ ತೃತೀಯಾ ವ್ರತವನ್ನು ಆಚರಿಸಿದ. ಅಂದು ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿದ. ಸಾಕ್ಷಾತ್‌ ದೇವೆಂದ್ರನೇ ವೇಷ ಮರೆಸಿ ವಿಪ್ರ ವೇಷ ತೊಟ್ಟು ಅಕ್ಷಯ ತೃತೀಯಾದಂದು ರಾಜನ ದಾನ ಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ. ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯ ಕುರಿತಾಗಿ ಸ್ವಲ್ಪವೂ ಅಹಂಕಾರವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿಯಾಗಿ ರಾಜ್ಯವಾಳಿದರೂ ಧರ್ಮಮಾರ್ಗದಿಂದ ವಿಚಲಿತನಾಗಿರಲಿಲ್ಲ. ಅಕ್ಷಯ ತೃತೀಯಾ ದಿನದಂದು ರಾಜ ನಡೆಸಿದ ದೇವಪೂಜನ ಹಾಗೂ ಸತ್ಪಾತ್ರರಿಗೆ ಸುವಸ್ತುಗಳನ್ನು ನೀಡಿದ ಫಲವಾಗಿ ಧನವಂತ, ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.

ಆಚರಣೆ ಹೇಗೆ?

ಎಲ್ಲಾ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ, ಮಂಗಲಸ್ನಾನ, ನವವಸ್ತ್ರಧಾರಣೆ ಮಾಡಿ, ಲಕ್ಷ್ಮೀನಾರಾಯಣನನ್ನು ದರ್ಶಿಸಿ, ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ದಾನ ಮಾಡಿ ಅಥವಾ ದಾನ ಮಾಡುವೆ ಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯಾದ ಮಹತ್ವ ಸಾರುವ ಪುರಾಣಕಥೆ ಶ್ರವಣ ಮಾಡಬೇಕು.

ರಾಶಿಗನುಗುಣವಾಗಿ Akshaya Tritiyaದಂದು ಈ ಲೋಹ ಖರೀದಿಸಿ, ಅದೃಷ್ಟ ಹೆಚ್ಚಿಸಿಕೊಳ್ಳಿ

ಬಂಗಾರ ಖರೀದಿ ಬಗ್ಗೆ ಶಾಸ್ತ್ರದಲ್ಲೇನಿದೆ?

ಬಂಗಾರ ಅಥವಾ ಯಾವುದೇ ಅಮೂಲ್ಯವಾದ ವಸ್ತುಗಳನ್ನು ಅವಶ್ಯಕತೆ ಇದ್ದಾಗ ಯಾವಾಗ ಬೇಕಾದರೂ ಖರೀದಿಸಬಹುದು. ನಿರ್ಣಯ ಸಿಂಧು, ಪುರಾಣ ಮುಂತಾದ ನಮ್ಮ ಸನಾತನ ಗ್ರಂಥಗಳಲ್ಲಿ ಈ ದಿನದಂದು ಬಂಗಾರವನ್ನು ದಾನ ಮಾಡಲು ಹೇಳಿದ್ದಾರೆಯೇ ಹೊರತೂ, ಎಲ್ಲಿಯೂ ಬಂಗಾರ, ಭೂಮಿ, ಮನೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಕುರಿತಾಗಲಿ, ಸಂಗ್ರಹಿಸುವುದರ ಕುರಿತಾಗಿ ಹೇಳಿಲ್ಲ. ಈ ದಿನ ಸುವಸ್ತುಗಳನ್ನು ಸತ್ಪಾತ್ರರಿಗೆ ದಾನಮಾಡಿ ಪುಣ್ಯಸಂಗ್ರಹಣೆ ಮಾಡುವ ದಿನವಾಗಿದೆ. ಕೊಟ್ಟರೆ ಪುಣ್ಯ ಅಕ್ಷಯವಾಗುವುದು ಎಂದು ಹೇಳಲಾಗಿದೆಯೇ ಹೊರತೂ ಖರೀದಿಸಿದ, ಸಂಗ್ರಹಿಸಿದ ವಸ್ತು ಅಕ್ಷಯವಾಗುವುದು ಎಂಬುದಕ್ಕೆ ಯಾವುದೇ ಪ್ರಾಚೀನ ಗ್ರಂಥಗಳ ಆಧಾರವಿಲ್ಲ. ಚಿನ್ನ ಖರೀದಿಸುವ ಪರಿಪಾಠ ಬಂದದ್ದು ತೀರಾ ಇತ್ತೀಚಿಗೆ. ಮೌಲ್ಯವರ್ಧನೆಗೆ ವಸ್ತುಗಳನ್ನು ಖರೀದಿಸುವುದು, ಸಂಗ್ರಹಿಸುವುದು, ಕಾಲಾಂತರದಲ್ಲಿ ಆರ್ಥಿಕವಾಗಿ ಲಾಭದ ದೃಷ್ಟಿಯಿಂದ ಬೇಕಾದರೆ ಖರೀದಿಸಬಹುದು.

ಎಲ್ಲಾ ಹಬ್ಬಗಳೂ ನಮ್ಮ ಜೀವನಕ್ಕೆ ಅಮೂಲ್ಯ ಸಂದೇಶ-ಪಾಠಗಳನ್ನು ಸಾರುತ್ತವೆ. ಅಕ್ಷಯ ತೃತೀಯಾ ಕೂಡ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ ಎನ್ನುವ ಬಹುದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನೆಲೆಯಲ್ಲಿ ಹಬ್ಬವನ್ನು ಅರಿತು ಆಚರಿಸಿದಲ್ಲಿ ಇಹ ಪರಕ್ಕೆ ಕ್ಷೇಮವಾಗುವುದು.

- ಗಣೇಶ ಭಟ್ಟ, ಕುಮಟಾ

Follow Us:
Download App:
  • android
  • ios