ಮಹಾ ಕುಂಭ ಮೇಳದಲ್ಲಿ ಟ್ರಾನ್ಸ್‌ಜೆಂಡರ್ ಸಾಧುಗಳಿಗೇ ಒಂದು ಅಖಾಡ! ಕಿನ್ನರ ಅಖಾಡದ ಬಗ್ಗೆ ತಿಳ್ಕೊಳಿ
ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಸಾಧು-ಸಂತರ ನಡುವೆ ಕಿನ್ನರ ಅಖಾಡದ ಟ್ರಾನ್ಸ್‌ಜೆಂಡರ್ ಸಾಧುಗಳು ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. 2018ರಲ್ಲಿ ಸ್ಥಾಪಿತವಾದ ಈ ಅಖಾಡ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಧಾರ್ಮಿಕ ಗುರುತಿಸುವಿಕೆ ನೀಡಿದೆ. ಇವರು ಹೇಗಿರ್ತಾರೆಗೊತ್ತಾ?
ಇದೀಗ ಕೋಟ್ಯಂತರ ಜನ ಹಿಂದೂ ಶ್ರದ್ಧಾಳುಗಳ ಆಕರ್ಷಣೆಯ ಕೇಂದ್ರವಾಗಿರುವ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಲಕ್ಷಂತರ ಸಾಧು ಸಂತರು, ನಾಗಾಬಾಬಾಗಳು, ಅಘೋರಿಗಳು ಬಂದು ಸೇರಿದ್ದಾರೆ. ಮೊದಲ ಪವಿತ್ರ ಶಾಹಿ ಸ್ನಾನವೂ ಅಮೃತ ಸ್ನಾನವೂ ನೆರವೇರಿದೆ. ಈ ನಡುವೆ ಹಲವು ಅಖಾಡಗಳ ಸಾಧುಗಳು ಇಲ್ಲಿ ಬೀಡು ಬಿಟ್ಟಿದ್ದು, ಇನ್ನೂ ಒಂದು ತಿಂಗಳ ಕಾಲ ಇವರ ಆಚರಣೆ, ವ್ರತ, ಸ್ನಾನ ಎಲ್ಲ ನಡೆಯಲಿವೆ.
ಇವರೆಲ್ಲರ ನಡುವೆ ಒಂದು ವಿಶಿಷ್ಟ ಅಖಾಡ ಎದ್ದು ನಿಂತಿದೆ. 2016ರವರೆಗೂ ಈ ಅಖಾಡ ಸೀನ್‌ನಲ್ಲೇ ಇರಲಿಲ್ಲ. ಇದು ಪುರುಷರದಲ್ಲ, ಸ್ತ್ರೀಯರದೂ ಅಲ್ಲ. ಆದರೆ ಇವೆರಡೂ ಆಗಿರುವ ಟ್ರಾನ್ಸ್‌ಜೆಂಡರ್‌ಗಳದು. ಇದರ ಹೆಸರು ʼಕಿನ್ನರ ಅಖಾಡʼ. ಕಿನ್ನರ ಎಂಬ ಹೆಸರೇಕೆ? ಪುರಾಣದಲ್ಲಿ, ಮಹಾಭಾರತದಲ್ಲಿ ಈ ಕಿನ್ನರರ, ಕಿಂಪುರುಷರ ಉಲ್ಲೇಖ ಇದೆ. ಇವರು ದೇವತೆಗಳನ್ನು ಸಂತೋಷಪಡಿಸಲು ಇರುವವರು, ಇವರು ನಾನಾ ಕಲೆಗಳ ಸಂಗಮ. ಗಂಧರ್ವರಂತೆಯೇ ಇವರು ಕೂಡ ಹಾಡು ಕುಣಿತ ಸಂಗೀತ ನೃತ್ಯಗಳನ್ನು ಕರಗತಗೊಳಿಸಿಕೊಂಡವರು.
ಅಖಾಡಗಳೆಂದರೆ ಸಾಧು ಸನ್ಯಾಸಿಗಳ ಸಮೂಹ. ಸನ್ಯಾಸಿಗಳ ನಂಬಿಕೆ ಹಾಗೂ ಅವರು ಅನಸರಿಸುವ ಮಾರ್ಗದಿಂದ ಇವುಗಳನ್ನು ವಿಂಗಡಿಸಲಾಗಿರುತ್ತದೆ. ಹೀಗೆ ಒಟ್ಟು 13 ಅಖಾಡಗಳಾಗಿ ವಿಂಗಡಿಸಲಾಗಿದೆ. ಅವುಗಳ ಜೊತೆಗೆ 14ನೆಯದಾಗಿ ಕಿನ್ನರ ಸೇರಿದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಅಖಾಡಗಳನ್ನು ರಚಿಸಲಾಯಿತು. ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಅಖಾಡಗಳನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ಅಖಾಡಗಳಲ್ಲಿರುವವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆಧ್ಯಾತ್ಮಿಕ ಜಾಗೃತಿಯ ಜೊತೆಗೆ ಆಯುಧಗಳನ್ನು ಹೇಗೆ ಬಳಸಬೇಕೆಂದು ಅವರಿಗೆ ಕಲಿಸಲಾಗುತ್ತೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ.
ಕಿನ್ನರ ಅಖಾಡದ ಗುರು ಮಹಾಮಂಡಲೇಶ್ವರ ಆಚಾರ್ಯ ಲಕ್ಷ್ಮೀನಾರಾಯಣ ತ್ರಿಪಾಠಿ. ಇವರು ಮೊದಲು ಟ್ರಾನ್ಸ್‌ಜೆಂಡರ್ ಆಕ್ಟಿವಿಸ್ಟ್ ಆಗಿದ್ದವರು. ಈಗ ಧಾರ್ಮಿಕ ಗುರುವಾಗಿ, ಆಧ್ಯಾತ್ಮಿಕ ಹಾದಿಯಲ್ಲಿ ಹೋಗಲು ಬಯಸುತ್ತಿರುವ ಟ್ರಾನ್ಸ್‌ಜೆಂಡರ್‌ಗಳನ್ನು ಒಟ್ಟುಗೂಡಿಸಿ ಅವರಿಗೆ ದೀಕ್ಷೆ ನೀಡಿ ಮುನ್ನಡೆಸುತ್ತಿದ್ದಾರೆ. 2016ರವರೆಗೂ ಈ ಸಮುದಾಯದ ಸಾಧುಗಳಿಗೆ ಮನ್ನಣೆ ಇರಲಿಲ್ಲ. ತ್ರಿಪಾಠಿ ಇವರ ಹಕ್ಕುಗಳಿಗಾಗಿ ಹೋರಾಡಿದರು. 2018ರಲ್ಲಿ ಕಿನ್ನರ ಅಖಾಡ ಸ್ಥಾಪಿಸಿದರು. ಇದು ಜುನಾ ಅಖಾಡ (ಶ್ರೀ ಪಂಚದಶ್ನಾಂ ಜುನಾ ಅಖಾಡ) ಅಡಿಯಲ್ಲಿದೆ. 2019ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಮೊದಲ ಬಾರಿಗೆ ಇವರಿಗೂ ಕುಂಭ ಮೇಳದ ತಾಣದಲ್ಲಿ ತಮ್ಮದೇ ಅಖಾಡ ಟೆಂಟ್ ಹಾಕಿಕೊಂಡು ಶಾಹಿ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಯಿತು.
ಕಿನ್ನರ ಅಖಾಡದ ಸಾಧುಗಳನ್ನು ಕಿನ್ನರರೆಂದು ಕರೆಯಲಾಗುತ್ತದೆ. ಇವರೂ ಇತರ ಅಖಾಡದ ಸಾಧುಗಳಂತೆ ಭಿಕ್ಷೆ ಬೇಡಬೇಕು, ಕಠಿಣ ವ್ರತ ಕೈಗೊಳ್ಳಬೇಕು, ಜಪತಪಾದಿಗಳನ್ನು ಮಾಡಬೇಕು. ವರ್ಷಗಳ ಕಾಲ ಗುರುಸೇವೆ ಮಾಡಬೇಕು. ಉತ್ತಮ ಕೆಲಸದಲ್ಲಿ ಇದ್ದುಕೊಂಡು ಕಿನ್ನರ ಅಖಾಡದ ಸದಸ್ಯರಾಗಿರುವವರೂ ಇದ್ದಾರೆ. ಯಾವುದೇ ಕಾನೂನುಬಾಹಿರ, ಅನೈತಿಕ ಕೃತ್ಯಗಳಲ್ಲಿ ಇವರು ತೊಡಗುವಂತಿಲ್ಲ. ಸುಮಾರು 25000ಕ್ಕಿಂತಲೂ ಅಧಿಕ ಕಿನ್ನರರು ಈ ಅಖಾಡದಲ್ಲಿ ಸದ್ಯ ಇದ್ದಾರೆ ಎಂಬುದೊಂದು ಅಂದಾಜು.
ಪ್ರಯಾಗರಾಜ್ ಮಹಾಕುಂಭ 2025: ಇತಿಹಾಸ, ಮಹತ್ವ, ಕಥೆ
ಮಹಾ ಕುಂಭಮೇಳ 850 ವರ್ಷಗಳಿಗೂ ಹಳೆಯದು. ಇದನ್ನು ಮೊದಲ ಬಾರಿಗೆ ಆದಿ ಶಂಕರಾಚಾರ್ಯರು ಆಯೋಜಿಸಿದ್ದರು ಎನ್ನಲಾಗುತ್ತದೆ. ಕೆಲವು ಕಥೆಗಳ ಪ್ರಕಾರ, ಸಾಗರ ಮಂಥನದ ನಂತರ ಮಹಾ ಕುಂಭಮೇಳ ಪ್ರಾರಂಭವಾಯಿತು. ಸಮುದ್ರ ಮಂಥನದಿಂದ ಪಡೆದ ಅಮೃತ ಕಲಶದಿಂದ ಅಮೃತ ಬಿದ್ದ ಸ್ಥಳಗಳೇ ಇಂದು ಕುಂಭಮೇಳ ನಡೆಯುವ ಸ್ಥಳಗಳಾಗಿವೆ. ಅಷ್ಟೇ ಅಲ್ಲದೆ, ಆ ಸ್ಥಳದ ನದಿಗಳ ನೀರಿನಲ್ಲಿ ಅಮೃತವಿದೆ. ಅದರಲ್ಲಿ ಸ್ನಾನ ಮಾಡುವವರು ಅಮೃತವನ್ನು ಕುಡಿದಷ್ಟೇ ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!