ಈ ದೇವಾಲಯದಲ್ಲಿ ದುರ್ಗೆಗೆ ನಿತ್ಯ ಪೂಜಿಸುವುದು ಮುಸ್ಲಿಂ ಅರ್ಚಕ!
ಭಾರತ ಹಲವು ಅಚ್ಚರಿಗಳ ತವರು ಎಂಬುದರಲ್ಲಿ ಅನುಮಾನವಿಲ್ಲ. ಇಲ್ಲಿ ಪ್ರತಿ ಕಿಲೋಮೀಟರ್‌ಗೂ ಒಂದೊಂದು ಅಚ್ಚರಿಯ ವಿಷಯ ಸಿಗುತ್ತದೆ. ಈ ಸ್ಟೋರಿಯನ್ನೇ ನೋಡಿ, ಈ ದೇವಾಲಯದಲ್ಲಿ ದುರ್ಗೆಯನ್ನು ನಿತ್ಯ ಆರಾಧಿಸುವುದು ಮುಸ್ಲಿಂ ಅರ್ಚಕರು ಎಂಬುದು ಅಚ್ಚರಿಯಲ್ಲದೇ ಮತ್ತೇನು?
ಹಿಂದೂ ಮುಸ್ಲಿಮರು ಒಗ್ಗಟ್ಟಾಗಿರುವ ಪ್ರಸಂಗಗಳು ಸುದ್ದಿಯಾಗುವುದೇ ಒಂದು ವಿಪರ್ಯಾಸ. ಆದರೂ, ಸದಾ ಹಿಂದೂ ಮುಸ್ಲಿಂ ಜಗಳ, ವಿವಾದಗಳು ಸುದ್ದಿ ಮಾಡುವ ಹೊತ್ತಿನಲ್ಲಿ ಸೌಹಾರ್ದತೆಯ ಕತೆಗಳು ಹುಬ್ಬೇರಿಸುವಂತೆ ಮಾಡುವುದಂತೂ ಸತ್ಯ.
ರಾಜಸ್ಥಾನದ ಈ ದೇವಾಲಯದ ವಿಷಯಕ್ಕೇ ಬನ್ನಿ, ದುರ್ಗೆಯ ಈ ದೇವಾಲಯಕ್ಕೆ ಪ್ರತಿ ದಿನ ಪೂಜೆ ನಡೆಸುವುದು ಮುಸ್ಲಿಂ ಅರ್ಚಕರು ಎಂಬುದು ಅಚ್ಚರಿಯ ವಿಷಯವಲ್ಲವೇ?
ಹೌದು, ರಾಜಸ್ಥಾನದ ಹಳ್ಳಿಯೊಂದರ ದೂರದ ಬೆಟ್ಟದಲ್ಲಿರುವ 600 ವರ್ಷಗಳಷ್ಟು ಹಳೆಯದಾದ ದುರ್ಗಾ ದೇವಿಯ ದೇವಸ್ಥಾನಕ್ಕೆ ಜಲಾಲುದ್ದೀನ್ ಖಾನ್ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. ಇಷ್ಟಕ್ಕೂ ಈ ದೇವಾಲಯದ ಅರ್ಚಕರಾಗಿ ಮುಸ್ಲಿಂ ವ್ಯಕ್ತಿ ನಿಯೋಜಿತರಾಗಿರುವುದು ಇದೇನು ಸದ್ಯದ ವಿಷಯವಲ್ಲ. ಕಳೆದ 13 ತಲೆಮಾರುಗಳಿಂದ, ಜೋಧ್‌ಪುರ ಜಿಲ್ಲೆಯ ಭೋಪಾಲ್‌ಗಢ್ ತೆಹಸಿಲ್‌ನ ಬಗೋರಿಯಾ ಗ್ರಾಮದಲ್ಲಿರುವ ದೇವಾಲಯದ ಅರ್ಚಕರಾಗಿ ಮುಸ್ಲಿಮರೇ ಸೇವೆ ಸಲ್ಲಿಸುತ್ತಿದ್ದಾರೆ.
ಮುಸ್ಲಿಂ ಧರ್ಮಗುರುಗಳು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ಮಾತ್ರವಲ್ಲ, ಹಿಂದೂ ಸಂಪ್ರದಾಯಗಳಂತೆಯೇ ದೇವಿಗೆ ಪ್ರತಿ ದಿನ ಪೂಜೆ ಮಾಡುತ್ತಾರೆ.
Akshaya Tritiya 2023: ಚಿನ್ನ ದುಬಾರಿ ಎಂದರೆ, ಅದೃಷ್ಟಕ್ಕಾಗಿ ಈ ಮಂಗಳಕರ ವಸ್ತುಗಳನ್ನು ಖರೀದಿಸಿ
ಎಲ್ಲಾ ಜಾತಿ ಮತ್ತು ಸಮುದಾಯದ ಜನರು ದುರ್ಗೆಯನ್ನು ಪೂಜಿಸಲು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮುಖ್ಯ ಅರ್ಚಕರು ಮತ್ತು ಅವರ ಕುಟುಂಬದವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ನಮಾಜನ್ನು ಕೂಡಾ ಏಕಕಾಲದಲ್ಲಿ ಮಾಡುತ್ತಾರೆ.
ರಾಜಸ್ಥಾನದ ಬಗೋರಿಯಾ ಗ್ರಾಮದಲ್ಲಿರುವ ಮಾ ದುರ್ಗಾ ದೇವಸ್ಥಾನ ಬೆಟ್ಟದ ಮೇಲಿದೆ ಮತ್ತು 500 ಮೆಟ್ಟಿಲುಗಳನ್ನು ಹತ್ತುವ ಮೂಲಕ ಅಲ್ಲಿಗೆ ತಲುಪಬಹುದು. ದೇವಿಯ ದರ್ಶನಕ್ಕಾಗಿ ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಜಲಾಲುದ್ದೀನ್ ಕುಟುಂಬದ ಹಕ್ಕು
ಜಲಾಲುದ್ದೀನ್ ಖಾನ್ ಅವರ ಪೂರ್ವಜರು ನೂರಾರು ವರ್ಷಗಳ ಹಿಂದೆ ಈಗ ಪಾಕಿಸ್ತಾನದಲ್ಲಿರುವ ಸಿಂಧ್‌ನಿಂದ ವ್ಯಾಪಾರಕ್ಕಾಗಿ ಇಲ್ಲಿಗೆ ಬಂದು, ಕಾರಣಾಂತರಗಳಿಂದ ಗ್ರಾಮದಲ್ಲಿ ನೆಲೆಸಿದರು. ಜಲಾವುದ್ದೀನ್ ಅವರ ಪೂರ್ವಜರು ಅನಾರೋಗ್ಯಕ್ಕೆ ಒಳಗಾದರು ಮತ್ತು ಹಸಿವು ಮತ್ತು ಬಾಯಾರಿಕೆಯಿಂದಾಗಿ ಅವರು ಸಾಯುವ ಹಂತ ತಲುಪಿದರು. ಈ ದೇವಾಲಯದ ಆವರಣದಲ್ಲಿ ಅವರ ಜೀವ ಉಳಿಸಲಾಯಿತು ಮತ್ತು ದೇವಿಯ ಆಶೀರ್ವಾದವೇ ಜೀವ ಉಳಿಯಲು ಕಾರಣ ಎಂದು ಕುಟುಂಬವು ನಂಬಿತು. ಅಂದಿನಿಂದ ಅವರ ಕುಟುಂಬ ದೇವಿಯ ಸೇವೆ ಮಾಡುತ್ತಿದ್ದಾರೆ.
ಬಿಜೆಪಿಯೋ, ಕಾಂಗ್ರೆಸ್ಸೋ? ರಾಜ್ಯ ಚುನಾವಣೆ ಫಲಿತಾಂಶದ ಮೇಲೆ ಸೂರ್ಯಗ್ರಹಣ ಪರಿಣಾಮ ಏನು?
ಜಲಾಲುದ್ದೀನ್ ಅವರು ಆವರಣವನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ದೇವಾಲಯದಲ್ಲಿ ಎಲ್ಲಾ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾರೆ. ಅವರ ಕುಟುಂಬದಿಂದ ದೇವಿಯ ಸೇವೆ ಮಾಡುತ್ತಿರುವ 13ನೇ ಪೀಳಿಗೆಯ ವ್ಯಕ್ತಿ ಇವರಾಗಿದ್ದಾರೆ. ದೇವಾಲಯಕ್ಕೆ ಸೇವೆ ಸಲ್ಲಿಸುವ ಮತ್ತು ದೇವಾಲಯದಲ್ಲಿ ಆಚರಣೆಗಳ ಅಧ್ಯಕ್ಷತೆ ವಹಿಸುವ ಈ ಸಂಪ್ರದಾಯವು ಇವರದೇ ಕುಟುಂಬದ ಮುಂದಿನ ಪೀಳಿಗೆಗೆ ವರ್ಗಾಯಿಸಲ್ಪಡುತ್ತದೆ.