ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆಯ ಮಹೋತ್ಸವಕ್ಕೆ ಕ್ಷಣಗಣನೆ
ಅ.13ಕ್ಕೆ ತಾಯಿಯ ದಿವ್ಯ ದರ್ಶನ
ದರುಶನಕ್ಕೆ ಕಾದು ಕುಳಿತಿರುವ ಭಕ್ತ ಗಣ
ಅಕ್ಟೋಬರ್ 13 ರಿಂದ ಅ.27ರವರೆಗೆ ನಡೆಯಲಿರುವ ಹಾಸನಾಂಬ ಉತ್ಸವ
ಹಾಸನಾಂಬೆ ದೇವಿಗೆ ಕಳೆದ ವರ್ಷ ಮುಡಿಸಿದ್ದ ಹೂ ಬಾಡಿರುವುದಿಲ್ಲ, ದೀಪ ಉರಿಯುತ್ತಲೇ ಇರುತ್ತದೆ!
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ ಎಂದರೆ ತಕ್ಷಣ ನೆನಪಾಗುವುದು ಬೇಲೂರು ಹಳೇಬೀಡಿನ ವಿಶ್ವವಿಖ್ಯಾತ ಶಿಲ್ಪಕಲೆ. ಹೊಯ್ಸಳರ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಹಾಸನ ಪ್ರಖ್ಯಾತವಾಗಿದೆ. ಹಾಸನ ಎಂಬ ಹೆಸರು ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿರುವ ಐತಿಹ್ಯವಿದೆ. ಈ ಪ್ರದೇಶಕ್ಕೆ ಹಾಸನ ಎಂಬ ಹೆಸರು ಬರಲು ಮತ್ತೊಂದು ಕಾರಣ ಜಿಲ್ಲೆಯ ಅಧಿದೇವತೆ, ಶಕ್ತಿ ದೇವತೆ ಹಾಸನಾಂಬೆ.
ಸಪ್ತಮಾತೃಕೆ ಎಂದು ಕರೆಯಲ್ಪಡುವ ಹಾಸನಾಂಬೆಯ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆಗೆಯುವ ವಿಶಿಷ್ಠ ಪದ್ಧತಿಯಿಂದ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ದೀಪಾವಳಿ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಹಾಸನಾಂಬೆಯ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಅಪರೂಪದ ದರ್ಶನ ಮಾಡುತ್ತಾರೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ
ಇಲ್ಲಿ ವರ್ಷಕ್ಕೊಮ್ಮೆ ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವ ಗುರುವಾರದಂದು ಬಾಗಿಲನ್ನು ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮೂರನೇ ದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ. ಈ ವರ್ಷ ಅಕ್ಟೋಬರ್ 13ರಿಂದ 27ರವರೆಗೆ ಹಾಸನಾಂಬ ಉತ್ಸವ ನಡೆಯಲಿದೆ. ಈ ವರ್ಷ ದೇವಿ ದರ್ಶನ ಪಡೆಯಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಕುಡಿಯುವ ನೀರು, ವಾಹನಗಳ ನಿಲುಗಡೆ ಮತ್ತಿತರೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಹಾಸನ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದ್ದು, ಸ್ಥಳೀಯ ಸಂಘಟನೆಗಳಮುಖಂಡರು, ಜನಪ್ರತಿನಿಧಿಗಳು, ವರ್ತಕರು ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
2022ರಲ್ಲಿ ಈ ಎರಡು ದಿನ ಬಾಗಿಲು ಮುಚ್ಚಿರುತ್ತೆ ತಿರುಪತಿ ದೇವಸ್ಥಾನ!
ಹಾಸನದ ಹೆಸರು
ಹಾಸನ(Hasan)ಕ್ಕೆ ಸಿಂಹಾಸನಪುರಿ ಎಂಬ ಹೆಸರು ಇದ್ದಿದ್ದಕ್ಕೆ ಕಾರಣ ಹುಡುಕುತ್ತಾ ಹೊರಟರೆ, ಮಹಾಭಾರತದ ಕಾಲಘಟ್ಟದ ಪುಟಗಳು ತೆರೆದುಕೊಳ್ಳುತ್ತವೆ. ಮಹಾಭಾರತದ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ನಂತರ ಸಿಂಹಾಸನಪುರ ಆಡು ಮಾತಿನಿಂದ ಹಾಸನ ಎಂದಾಗಿದೆ. ಇನ್ನು ಪುರಾಣಗಳಲ್ಲೂ ಸಿಂಹಾಸನಪುರಿ ಅಂದರೆ ಹಾಸನದ ಬಗ್ಗೆ ಉಲ್ಲೇಖಗಳಿದ್ದು ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲಿ ನೆಲೆಸಲು ನಿರ್ಧರಿಸಿದ ಕ್ಷೇತ್ರವೇ ಸಿಂಹಾಸನಪುರಿ ಅಂದರೆ ಹಾಸನ ಎಂದು ವರ್ಣಿಸಲಾಗಿದೆ.
ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿ ನೆಲೆಸಿದರು ಎನ್ನಲಾಗಿದೆ.
ಈ ನಾಲ್ಕು ನಕ್ಷತ್ರಗಳಲ್ಲಿ ಮಗು ಹುಟ್ಟಿದರೆ ಬಹಳ ಶುಭ, ನಿಮ್ಮ ನಕ್ಷತ್ರ ಇದರಲ್ಲಿದ್ಯಾ?
ಹುತ್ತದ ರೂಪ
ಹಾಸನಾಂಬ ದೇವಾಲಯವನ್ನು 12ನೆಯ ಶತಮಾನದಲ್ಲಿ ನಿರ್ಮಿಸಲಾಗಿದ್ದು ಹಾಸನಾಂಬೆ ದೇವಿಯು ಹುತ್ತದ ರೂಪದಲ್ಲಿ ನೆಲೆಸಿರುವುದನ್ನು ಕಾಣಬಹುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಹೆಣ್ಣು ದೇವತೆಗಳಂತೆ ಮುಖವಾಡಗಳನ್ನು ಮಾಡಿ ಅಲಂಕರಿಸಲಾಗಿದೆ.
ನಂದಾದೀಪ
ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಗರ್ಭಗುಡಿಯಲ್ಲಿ ಉರಿಯುವುದು. ದೇವಿಗೆ ಮುಡಿಸಿದ ಹೂ ಬಾಡಿರುವುದಿಲ್ಲ. ಇಟ್ಟ ಅನ್ನ ಹಳಸಿರುವುದಿಲ್ಲ. ಇದು ಹಾಸನಾಂಬೆ ದೇವಿಯ ವಿಶೇಷ ಮಹಿಮೆ ಹಾಗೂ ದೇವಾಲಯದಲ್ಲಿ ನಡೆದು ಬಂದಿರುವ ಪ್ರತೀತಿ. ಮತ್ತೊಂದು ಸಂಗತಿ ಎಂದರೆ ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಬಾಗಿಲು ತೆರೆದ ಕೂಡಲೇ ದೇವಿಯ ದರ್ಶನ ಮಾಡಿದರೆ ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆಯಾಗಿದೆ. ಆ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಸಂಪ್ರದಾಯ ರೂಢಿಯಲ್ಲಿದೆ.
ಕಳ್ಳಪ್ಪನ ಗುಡಿ
ಹಾಸನಾಂಬೆ ದೇವಾಲಯದ ಬಗ್ಗೆ ಮತ್ತೊಂದು ಸ್ವಾರಸ್ಯಕರವಾದ ಸಂಗತಿ ಇದೆ. ಒಮ್ಮೆ ದೇವಿಯ ಆಭರಣಗಳನ್ನು ಅಪಹರಿಸುವ ಉದ್ದೇಶದಿಂದ ನಾಲ್ಕು ಜನ ಕಳ್ಳರು ಒಳ ನುಗ್ಗಿ ಆಭರಣಗಳಿಗೆ ಕೈ ಹಾಕಿದಾಗ ಕುಪಿತಳಾದ ದೇವಿ, ನಾಲ್ಕು ಮಂದಿ ಕಳ್ಳರಿಗೆ ಕಲ್ಲಾಗಿ ಹೋಗಿ ಎಂದು ಶಾಪ ಕೊಟ್ಟಳು. ಅದರ ಪರಿಣಾಮವಾಗಿ ಅ ನಾಲ್ಕು ಜನ ಕಳ್ಳರು ಕಲ್ಲಾದರು. ಇಲ್ಲಿ ಕಳ್ಳತನ ಮಾಡಲು ಬಂದು ಕಲ್ಲಾದವರಿಗೂ ಗುಡಿ ನಿರ್ಮಿಸಲಾಗಿದ್ದು, ಕಳ್ಳಪ್ಪನ ಗುಡಿ ಎಂದೇ ಪ್ರಸಿದ್ಧಿ ಪಡೆದಿದೆ.
Temples renovation: ಮೋದಿ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯುತ್ತಿವೆ ದೇವಾಲಯಗಳು!
ಹಾಸನಾಂಬೆ ದೇವಾಲಯ(Hasanamba temple)ದ ದ್ವಾರವನ್ನು ಪ್ರವೇಶ ಮಾಡಿದರೆ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯ ಇದ್ದು, ಈಶ್ವರ ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಇನ್ನು ದೇವಾಲಯದ ಆವರಣದಲ್ಲಿ 101 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ದೊರೆಯುತ್ತದೆ. ಈ ಗುಡಿಯ ಮೇಲ್ಭಾಗದಲ್ಲಿ 4 ಅಡಿ ಎತ್ತರದ ಇನ್ನೊಂದು ಮಹಾಲಿಂಗವಿದೆ.
ಬನ್ನಿ ಕಡಿಯುವುದು
ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುವುದಕ್ಕೂ ಮೊದಲು ಸಾಂಪ್ರದಾಯಿಕ ವಿಧಿ ವಿಧಾನ ಹಾಗೂ ಅರಸು ವಂಶಸ್ಥರು ಬನ್ನಿ ಕಡಿಯುತ್ತಾರೆ. ನಂತರ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮುಂಭಾಗ ಕಳೆದ ವರ್ಷ ಹಚ್ಚಿದ್ದ ದೀಪ ಹಾಗೆಯೇ ಪ್ರಜ್ವಲಿಸುತ್ತಲೇ ಇರುತ್ತದೆ. ಹೂ ಮತ್ತು ಎಡೆಯು ಬಾಡದಿರುವುದು ಭಕ್ತರಲ್ಲಿ ಅಪಾರ ನಂಬಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಹಚ್ಚಿದಂತಹ ದೀಪ ಆರಿ ಹೋದರೆ, ಹೂ ಬಾಡಿದರೆ ಮತ್ತು ಎಡೆಯಲ್ಲಿ ಸ್ವಲ್ಪ ಏರುಪೇರಾದರೂ ಏನಾದರೂ ತೊಂದರೆಯಾಗಲಿದೆ ಎಂಬ ನಂಬಿಕೆ ಭಕ್ತರದ್ದು.
ಹಾಸನಾಂಬಾ ದೇವಿಯ ಇತಿಹಾಸ
ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರಿಗೆ ಕನಸಿನಲ್ಲಿ ಹಾಸನಾಂಬ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಕೃಷ್ಣಪ್ಪ ನಾಯ್ಕರು ಹುತ್ತದ ರೂಪದಲ್ಲಿದ್ದ ದೇವಿಗೆ ಗುಡಿಯನ್ನು ಕಟ್ಟಿಸಿದರು.
ಒಗ್ಗರಣೆ ಹಾಕುವಂತಿಲ್ಲ
ದೇಗುಲ ಬಾಗಿಲು ತೆರೆದಾಗ ದೇವಿ ಕಣ್ಣುಬಿಟ್ಟ ರೀತಿಯಲ್ಲೇ ಗೋಚರಿಸುವುದರಿಂದ ಯಾರೂ ಒಗ್ಗರಣೆ ಹಾಕಲ್ಲ. ಸಾಂಬಾರು ಪದಾರ್ಥ ಕರಿಯುವುದಿಲ್ಲ. ಮೊದಲ ದಿನ ಜಿಲ್ಲಾ ಖಜಾನೆಯಿಂದ ತಂದಿರುವ ಆಭರಣಗಳಿಂದ ದೇವಿಗೆ ಅಲಂಕಾರ ಮಾಡಲಾಗುತ್ತದೆ.
ಮಹಾಕಾಲ ಕಾರಿಡಾರ್: ಮೊದಲ ಬಾರಿ ಮಂಗಳವಾರ ಉದ್ಘಾಟನೆ ಮಾಡಿದ ಮೋದಿ
ದೇವಸ್ಥಾನದ ವೈಶಿಷ್ಟ್ಯ
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮರು ವರ್ಷ ದೇಗುಲದ ಬಾಗಿಲು ತೆರೆಯುವವರೆಗೆ ಆ ಹೂವು ಬಾಡದೆ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ಸಂದರ್ಭ ಈ ಆಕಸ್ಮಿಕ ಸಂಭವಿಸಿತ್ತು. ಮನೆಯಲ್ಲಿ ಮಡಿಮೈಲಿಗೆ ಕಾರಣ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಊರಿನ ಮನೆಯಲ್ಲಿ ಈ ದೇವಿ ಭಾವಚಿತ್ರ ಈಗಲೂ ಇಟ್ಟುಕೊಳ್ಳುವುದಿಲ್ಲ.
ದೇವಿಕೆರೆಯ ವೈಶಿಷ್ಟ್ಯ
ದೇವಸ್ಥಾನದಿಂದ 100 ಮೀಟರ್ ದೂರದಲ್ಲಿ ಇರುವ ದೇವಿಗೆರೆಯಲ್ಲಿ ಮೂರು ದೇವಿಯರಿದ್ದಾರೆ. ಈ ದೇವಿಯರನ್ನು ಭೇಟಿಯಾಗಲು ದೇಗುಲದಿಂದ ಅಕ್ಕಂದಿರು ಕೆರೆಗೆ ಬರುತ್ತಾರೆ. ಅಲ್ಲಿ ಸ್ನಾನ ಮಾಡುತ್ತಾರೆ. ದೇಗುಲದಲ್ಲಿ ಅಭಿಷೇಕ ಮಾಡಿದ ನೀರು ಈ ಕೆರೆಯಲ್ಲಿ ಬಂದು ಬೀಳುತ್ತದೆ. ಒಬ್ಬ ಹುಡುಗಿಗೆ ಅತ್ತೆ ಕಷ್ಟ ಕೊಡುತ್ತಿದ್ದಳು. ಆ ಸೊಸೆ ಪ್ರತೀ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದಳು. ದೇವತೆಯರು ಅವಳನ್ನು ಮಾತನಾಡಿಸುತ್ತಿದ್ದರು. ಮತ್ತು ಈ ವಿಷಯ ಯಾರ ಬಳಿಯೂ ಹೇಳಬಾರದೆಂದು ಹೇಳಿದ್ದರು. ಒಂದು ದಿನ ಸೊಸೆ ದೇಗುಲಕ್ಕೆ ಹೊರಟಾಗ, ಅತ್ತೆ ಅವಳನ್ನು ಹಿಂಬಾಲಿಸಿ ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತಿದ್ದ ಸೊಸೆಯನ್ನು ಕಂಡು ಸಿಟ್ಟಾಗಿ ತಲೆ ಮೇಲೆ ಕುಟ್ಟಿದಾಗ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ದೇವಿ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆ ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸುತ್ತದೆ. ಆ ಕಲ್ಲು ಪ್ರತೀ ವರ್ಷ ಬತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ. ಅದು ಸಂಪೂರ್ಣ ಚಲಿಸಿ ದೇವಿ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ನಂಬಿಕೆ ಇದೆ.