ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!
ಧಾರ್ಮಿಕ ಪರಂಪರೆಯಿಂದ ನಡೆದು ಬಂದ ಹಲವು ವಿಷಯಗಳಿಗೆ ಆಂತರ್ಯ ಬಹಳಷ್ಟಿದೆ. ಪೂಜಾ ಕೈಂಕರ್ಯದಲ್ಲಿ ಒಂದು ಭಾಗವಾಗಿರುವ ಮಂಗಳಾರತಿಯ ವಿಶೇಷತೆಯನ್ನು ತಿಳಿದುಕೊಂಡರೆ ದೇವರಿಗೆ ಆರತಿ ಬೆಳಗುವಾಗ ಶ್ರದ್ಧಾ-ಭಕ್ತಿ ಇನ್ನಷ್ಟು ಹೆಚ್ಚುತ್ತದೆ. ಆರತಿಯ ಸುಗಂಧ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶವಾಗಿಸಿ ಸಕಾರಾತ್ಮಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಮಂತ್ರವನ್ನು, ಪೂಜಾವಿಧಾನವನ್ನು ಅರಿಯದಿದ್ದರೂ ಶ್ರದ್ಧೆಯಿಂದ ಮಾಡಿದ ಆರತಿಗೆ ಪೂರ್ಣ ಫಲವಿದೆ ಎಂಬ ಮಾತಿದೆ. ಆರತಿಯ ಮಹತ್ವ ಮತ್ತು ಕ್ರಮಗಳ ಬಗ್ಗೆ ಇಲ್ಲಿ ತಿಳಿಯೋಣ.
ದೇವರಿಗೆ ಆರತಿ ಏಕೆ ಬೆಳಗುತ್ತಾರೆ? ಹೀಗೆ ಬೆಳಗುವುದು ಶಾಸ್ತ್ರ ಮಾತ್ರವೇ? ಇಲ್ಲವೇ ಅದಕ್ಕೆ ಧಾರ್ಮಿಕ ಮಹತ್ವ ಇದೆಯೇ? ಆರತಿ ಬೆಳಗುವುದರಿಂದ ಏನು ಫಲ ಸಿಗುತ್ತದೆ ಎಂಬುದು ಗೊತ್ತೇ?
ಹೌದು. ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ದೇವರಿಗೆ ಮಂಗಳಾರತಿಯನ್ನು ಬೆಳಗುತ್ತೇವೆ. ಆರತಿ ಮಾಡುವಾಗ ದೇವರಲ್ಲಿ ಪ್ರಾರ್ಥನೆ ಮಾಡಿ ಮನಸ್ಸಿನ ಆಶಯವನ್ನು ಪೂರ್ತಿ ಮಾಡೆಂದು ಬೇಡಿಕೊಂಡರೆ ಅದು ಈಡೇರುತ್ತದೆ ಎಂಬ ನಂಬಿಕೆ ಇದೆ.
ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಹಲವು ಪರಂಪರೆ, ವಿಧಿ-ವಿಧಾನಗಳಲ್ಲಿ ಆರತಿಯೂ ಒಂದು. ಸ್ಕಂದ ಪುರಾಣದಲ್ಲೂ ಇದಕ್ಕೆ ವಿಶೇಷ ಮಹತ್ವವಿರುವುದರ ಬಗ್ಗೆ ಉಲ್ಲೇಖವಿದೆ. ಪೂಜೆ, ಹೋಮ-ಹವನಗಳಲ್ಲಿ, ಅನುಷ್ಠಾನದ ಕೊನೆಯಲ್ಲಿ ಒಂದು ತಟ್ಟೆಯಲ್ಲಿ ದೀಪವನ್ನು ಇಟ್ಟು ಬೆಳಗುತ್ತೇವೆ. ಎಷ್ಟು ಭಕ್ತಿ-ಶ್ರದ್ಧೆಗಳಿಂದ ಆರತಿ ಮಾಡುತ್ತೇವೆಯೋ ಅದಕ್ಕೆ ಅಷ್ಟೇ ಫಲವಿದೆ. ಆ ಸಮಯದಲ್ಲಿ ಸಕಾರಾತ್ಮಕ ಶಕ್ತಿ ನಮ್ಮನ್ನು ಆವರಿಸುತ್ತದೆ. ವ್ಯಕ್ತಿತ್ವದಲ್ಲಿ ಹೊಸ ತೇಜಸ್ಸನ್ನು ಕಾಣಬಹುದು. ಯಾವುದೇ ಮಂತ್ರ, ಪೂಜಾ ವಿಧಾನಗಳು ತಿಳಿಯದಿದ್ದರೂ ಆರತಿಯನ್ನು ಶ್ರದ್ಧೆಯಿಂದ ಮಾಡಿದಾಗ ದೇವರು ಪ್ರಸನ್ನನಾಗಿ ಪೂಜೆಯನ್ನು ಸ್ವೀಕರಿಸುತ್ತಾನೆ ಎಂದು ಸ್ಕಂದ ಪುರಾಣ ಹೇಳುತ್ತದೆ. ಹಲವು ಬಗೆಯಲ್ಲಿ ಆರತಿಯನ್ನು ಮಾಡುತ್ತೇವೆ, ಪ್ರತಿ ಆರತಿಗೂ ಅದರದ್ದೇ ವಿಶೇಷತೆ ಇದೆ.
ಇದನ್ನು ಓದಿ: ಶನಿ ದೇವರ ಕೃಪೆಗೆ ಹೀಗೆ ಮಾಡಿ, ವಕ್ರದೃಷ್ಟಿಯಿಂದ ಬಚಾವಾಗಿ!
ಕಾರ್ಯ ಸಫಲತೆಗೆ ತುಪ್ಪದಾರತಿ
ತುಪ್ಪ ಸಮೃದ್ಧಿಯ ಸಂಕೇತ. ತುಪ್ಪ ಮನಸ್ಸನ್ನು ತಿಳಿಗೊಳಿಸುತ್ತದೆ. ಮುನಿಸುಗಳಿದ್ದರೆ ಅದನ್ನು ನಿವಾರಿಸುವ ಶಕ್ತಿ ಅದಕ್ಕಿದೆ. ಯಾವುದೇ ಕೆಲಸದಲ್ಲೂ ತೊಡಕಾಗದೇ ಸರಿಯಾದ ಕ್ರಮದಲ್ಲಿ ಪೂರ್ತಿಗೊಳಿಸು ಎಂದು ದೇವರಲ್ಲಿ ಬೇಡುವಾಗ ತುಪ್ಪದ ದೀಪವನ್ನು ಹಚ್ಚಬೇಕು. ತುಪ್ಪದಾರತಿಯು ಆತ್ಮದ ಜ್ಯೋತಿಯ ಪ್ರತೀಕ. ಅಂತರ್ಮನದಿಂದ ದೇವರಿಗೆ ಆರತಿ ಮಾಡಿದರೆ ಅದು ಪಂಚಾರತಿ ಆಗುತ್ತದೆ.
ದೇವರ ಆಹ್ವಾನಕ್ಕೆ ಕರ್ಪೂರದಾರತಿ
ಕರ್ಪೂರದ ಘಮ ವಾತಾವರಣವನ್ನು ಶುದ್ಧಿಗೊಳಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಪೂಜಾ ಸ್ಥಳಕ್ಕೆ ದೇವರನ್ನು ಆಹ್ವಾನಿಸಲು ಕರ್ಪೂರದ ಆರತಿ ಮಾಡುತ್ತಾರೆ.
ಶಂಖಧ್ವನಿ-ಘಂಟಾನಾದ
ಮಂಗಳಾರತಿಯನ್ನು ಮಾಡುವಾಗ ಜೊತೆಗೆ ಘಂಟೆಯನ್ನು ಬಾರಿಸುತ್ತೇವೆ. ಶಂಖ ಧ್ವನಿ ಮೊಳಗುವುದರಿಂದ ಮನಸ್ಸು ಒಂದು ಕಡೆ ಕೇಂದ್ರಿತವಾಗುತ್ತದೆ. ಶರೀರದ ಸುಪ್ತ ಶಕ್ತಿಗಳು ಜಾಗೃತವಾಗಿ ಹೊಸ ಚೈತನ್ಯ ಮೂಡುತ್ತದೆ.
ಇದನ್ನು ಓದಿ: ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?
ಎಷ್ಟು ಬಾರಿ ಆರತಿ ಮಾಡಬೇಕು?
ಒಂದರಿಂದ ಐದು ಬಾರಿ ಆರತಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಪ್ರತಿ ನಿತ್ಯ ಮನೆಯಲ್ಲಿ ಎರಡು ಬಾರಿ ಆರತಿಯನ್ನು ಮಾಡಬಹುದು. ಒಂದು ಪ್ರಾತಃಕಾಲ ಪೂಜಾ ಸಮಯದಲ್ಲಿ, ಇನ್ನೊಂದು ಸಂಧ್ಯಾಕಾಲದಲ್ಲಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳಲ್ಲಿ ಐದು ವಸ್ತುಗಳಿಂದ ಆರತಿಯನ್ನು ಮಾಡುತ್ತೇವೆ. ಧೂಪ, ದೀಪ, ಶುಭ್ರ ವಸ್ತ್ರದಿಂದ, ಕರ್ಪೂರದಿಂದ ಮತ್ತು ನೀರಿನಿಂದ ಆರತಿಯನ್ನು ಮಾಡುತ್ತಾರೆ.
ಆರತಿ ಮಾಡುವ ಕ್ರಮ
ಆರತಿಯನ್ನು ಮಾಡುವಾಗ ಓಂ ಆಕಾರ ಬರುವ ರೀತಿಯಲ್ಲಿ ಕೈಯನ್ನು ತಿರುಗಿಸಬೇಕು. ನಮ್ಮ ಎಡಭಾಗದಿಂದ ಆರಂಭಿಸಿ ಬಲಭಾಗದ ವರೆಗೆ ತರಬೇಕು, ಮೊದಲು ದೇವರ ಪಾದಗಳಿಗೆ ನಾಲ್ಕುಬಾರಿ, ನಾಭಿಯ ಬಳಿ ಎರಡು ಬಾರಿ, ಮುಖದ ಬಳಿ ಒಂದು ಸಾರಿ ಆರತಿ ಮಾಡಬೇಕು ಆನಂತರ ಮೂರ್ತಿಯ ಬಳಿ ಏಳು ಬಾರಿ ದುಂಡಾಕಾರವಾಗಿ ಆರತಿ ಬೆಳಗಬೇಕು. ಆರತಿಯಾದ ಬಳಿಕ ತಟ್ಟೆಯ ನಾಲ್ಕು ಕಡೆಗೆ ಜಲವನ್ನು ಪ್ರೋಕ್ಷಿಸಬೇಕು ಇದರಿಂದ ಆರತಿ ಶಾಂತವಾಗುತ್ತದೆ.
ಯಾವ ದೇವರಿಗೆ ಎಷ್ಟು ಬಾರಿ ಆರತಿ
ಬೇರೆ ಬೇರೆ ದೇವತೆಗಳಿಗೆ ಆರತಿಯನ್ನು ಮಾಡುವಾಗ ತಿರುಗಿಸುವ ಸಂಖ್ಯೆ ಬೇರೆ ಇದೆ. ಶಿವನಿಗೆ ಮೂರು ಅಥವಾ ಐದು ಬಾರಿ. ಗಣಪತಿಗೆ ನಾಲ್ಕು ಬಾರಿ. ವಿಷ್ಣುವಿಗೆ ಹನ್ನೆರಡು ಬಾರಿ, ಸೂರ್ಯನಿಗೆ ಏಳು ಬಾರಿ ಮತ್ತು ದೇವಿ ದುರ್ಗೆಗೆ ಒಂಭತ್ತು ಬಾರಿ ತಿರುಗಿಸಿ ಆರತಿ ಮಾಡಬೇಕು.
ಇದನ್ನು ಓದಿ: ದೇವರ ಪ್ರದಕ್ಷಿಣೆ ಹೀಗೆ ಮಾಡಿ, ದೌರ್ಭಾಗ್ಯ ದೂರ ಮಾಡಿಕೊಳ್ಳಿ!
ಮಂಗಳಾರತಿ ತೆಗೆದುಕೊಳ್ಳುವ ಕ್ರಮ
ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್/ಯದಿ ಹಸ್ತ ದ್ವಯೇನೈವ ಮಮ ದ್ರೋಹಿ ನ ಸಂಶಯಃ//
ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಯಿಂದ ತೆಗೆದುಕೊಳ್ಳಬಾರದು. ಆರತಿಯನ್ನು ಬಲಗೈಯಿಂದ ಮಾತ್ರ ತೆಗೆದುಕೊಳ್ಳಬೇಕು. ವರಾಹ ದೇವರು ತನ್ನ ಪತ್ನಿಗೆ ಈ ವಿಷಯದ ಬಗ್ಗೆ ಅರುಹುತ್ತಾನೆ. ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ನಂತರ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು. ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು. ಆಗ ನಮ್ಮ ಶರೀರ ಶುದ್ಧವಾದಂತೆ.