Bagalkote: ದೀಪಾವಳಿ ಪಾಡ್ಯದಂದು ಸಗಣಿ ಪಾಂಡವರ ಪೂಜೆ
ಮುಳುಗಡೆ ನಗರಿಯಲ್ಲಿ ದೀಪಾವಳಿ ಪಾಡ್ಯದಂದು ಸಗಣಿ ಪಾಂಡವರ ಸಂಪ್ರದಾಯ
ಆಕಳ ಸಗಣಿಯಿಂದ ಪಾಂಡವರ ಮೂರ್ತಿ
ಮನೆ ಮುಂದಿಟ್ಟು ನೈವೇದ್ಯ ಅರ್ಪಿಸಿ ಪೂಜೆ ಮಾಡುವ ಆಚರಣೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಈಗ ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರವೋ ಸಡಗರ. ನೋಡಿದೆಲ್ಲೆಡೆ ಪಟಾಕಿ ಬಾಣಗಳ ಬಿರುಸು. ಸಿಹಿ ಹಂಚಿಕೆ ಸಂಭ್ರಮ. ಆದರೆ ಉತ್ತರ ಕರ್ನಾಟಕದಲ್ಲಿ ಇವೆಲ್ಲವುಗಳ ಮಧ್ಯೆ ದೀಪಾವಳಿ ಪಾಡ್ಯದ ದಿನವನ್ನ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಗೋವಿನ ಸಗಣಿ ಮೂಲಕ ಪಂಚ ಪಾಂಡವರನ್ನು ರೂಪಿಸಿ ಅವುಗಳಿಗೆ ನೈವೇದ್ಯ ನೀಡುವ ಪರಿ ಅತ್ಯಂತ ವಿಶಿಷ್ಟವಾಗಿದೆ. ಮನೆ ಮನೆಗಳ ಮುಂದೆ ವಿರಾಜಿಸುವ ಈ ಸಗಣಿ ಪಾಂಡವರ ಸಂಪ್ರದಾಯಿಕ ಪದ್ಧತಿ ಕುರಿತ ವಿಶೇಷ ವರದಿ ಇಲ್ಲಿದೆ.
ಹೌದು, ಉತ್ತರ ಕರ್ನಾಟಕದಲ್ಲಿ ಈಗ ಎಲ್ಲರ ಮನೆ ಮನೆಗಳ ಮುಂದೆ ಎಲ್ಲಿ ನೋಡಿದ್ರೂ ಕಾಣುವುದು ಗೋವಿನ ಸಗಣಿಯಿಂದ ತಯಾರಿಸಿರೋ ಪಾಂಡವರ ಮೂರ್ತಿಗಳು, ಇವುಗಳ ಮಧ್ಯೆ ಸಗಣಿ ಪಾಂಡವರಿಗೆ ನಡೆಯುತ್ತಿರೋ ನೈವೇದ್ಯ, ಸಾಲದ್ದಕ್ಕೆ ಸಗಣಿ ಪಾಂಡವರಿಗೆ ಆರತಿ ಬೆಳಗುತ್ತಿರೋ ಮಹಿಳೆಯರು.. ಅಂದಹಾಗೆ ಇಂಥದೊಂದು ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ.
ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯು ಮುಳುಗಡೆಯಾಗುತ್ತಿದ್ದು, ಇಲ್ಲಿನ ಸಾಂಪ್ರದಾಯಿಕ ಆಚಾರ ವಿಚಾರಗಳು ಮಾತ್ರ ಇಂದಿಗೂ ಕಳೆಗುಂದದೇ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿರುವುದು ಸಂತಸದ ವಿಷಯ.
Karthika Masa 2022: ದಿನಾಂಕ, ಪ್ರಾಮುಖ್ಯತೆ, ಈ ಮಾಸದ ಹಬ್ಬ ಹರಿದಿನಗಳು..
ಬಲಿಪಾಡ್ಯದ ದಿನದಂದು ನಡೆಯುತ್ತೆ ಸಗಣಿ ಪಾಂಡವರ ಸಾಂಪ್ರದಾಯಿಕ ಆಚರಣೆ...
ಮಹಾಭಾರತದ ಪಾಂಡವರನ್ನು ನೆನಪಿಸುವಂತಹ ಬಲಿಪಾಡ್ಯದ ದಿನದಂದು ಗೋವಿನ ಸಗಣೆಯಿಂದ ವಿಶಿಷ್ಟವಾಗಿ ಈ ಮೂರ್ತಿಗಳನ್ನ ತಯಾರಿಸಲಾಗುತ್ತದೆ. ಹೀಗೆ ತಯಾರಿಸಿರೋ ಪಾಂಡವರಿಗೆ ವಿಶಿಷ್ಟ ಖಾದ್ಯದ ನೈವೇದ್ಯವು ಕೂಡಾ ನಡೆಯುತ್ತೆ. ಅಂದ್ರೆ ಅಂದು ವನವಾಸದಲ್ಲಿ ಪಾಂಡವರು ಕಲ್ಲಿನಿಂದ ಕಡಬು ಮತ್ತು ಮುಳ್ಳಿನಿಂದ ಶಾವಿಗೆಯನ್ನ ತಯಾರಿಸಿ ಊಟ ಮಾಡಿದರು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಸಗಣೆಯ ಪಾಂಡವರನ್ನ ರೂಪಿಸಿ ಸುತ್ತ ಬಿಳಿದಾರವನ್ನ ಸುತ್ತಿ, ಜೊತೆಗೆ ಪಾಂಡವರ ಛತ್ರಿ-ಚಾಮರ, ಕಿರೀಟಗಳಿದ್ದಂತೆ ಇಂದು ಉತ್ತರಾಣಿ ಕಡ್ಡಿ, ಬಿಳಿ ಹೊಣ್ಣೆ ಹೂವು, ಅನ್ನ ಮೊಸರಿನ ನೈವೇದ್ಯವನ್ನ ಈ ಸಗಣೆ ಪಾಂಡವರಿಗೆ ನೀಡಲಾಗುತ್ತೆ.
ಸಕಲ ಜನಾಂಗದಿಂದಲೂ ಆಚರಣೆ..
ಇನ್ನು ದೀಪಾವಳಿಯ ಪಾಡ್ಯದ ದಿನದಂದು ಈ ಭಾಗದ ರೈತಾಪಿ ಜನ, ಒಕ್ಕಲಿಗ, ನೇಕಾರರು ಸೇರಿದಂತೆ ಎಲ್ಲ ಜಾತಿ, ಪಂಗಡಗಳ ಜನತೆ ಗೋವಿನ ಸಗಣೆಯನ್ನು ತಂದು ಆ ಮೂಲಕ ಪಂಚ ಪಾಂಡವರನ್ನು ರೂಪಿಸುತ್ತಾರೆ. ಅವುಗಳನ್ನ ತಮ್ಮ ಮನೆಯ ಬಾಗಿಲಿನ ಅಕ್ಕಪಕ್ಕದಲ್ಲಿ ಸುತ್ತುವರೆದು ಇಟ್ಟು ಅವುಗಳ್ನ ಪೂಜಿಸುವ ಪರಿ ವಿಶೇಷ. ಇಂತಹ ಪದ್ದತಿ ಆಚರಣೆಯಿಂದ ನಮ್ಮ ಮನೆ ಮಕ್ಕಳಿಗೆ ಭವಿಷ್ಯದಲ್ಲಿ ಪಾಂಡವರ ರೀತಿಯಲ್ಲಿ ವನವಾಸ ಬರಬಾರದೆಂಬ ಉದ್ದೇಶದಿಂದ ಈ ಆಚರಣೆ ಮಾಡ್ತೀವಿ ಎಂದು ಸ್ಥಳೀಯರಾದ ಹನಮಂತ ಹೇಳುತ್ತಾರೆ.
Bhai Dooj 2022: ಅ.27 ಅಣ್ಣನ ಆಯಸ್ಸು ಹೆಚ್ಚಿಸೋ ಯಮದ್ವಿತೀಯ, ಆಚರಣೆ ಹೇಗೆ?
ಮುಳುಗಡೆ ನಗರಿ ಬಾಗಲಕೋಟೆ ಇಂದು ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಹೀಗೆ ಬೇರೆ ಬೇರೆ ಭಾಗಗಳಾಗಿ ಹಂಚಿ ಹೋಗಿದ್ದರೂ ಸಹ ಸಂಪ್ರದಾಯಕ್ಕೆ ಮಾತ್ರ ಕೊರತೆ ಇಲ್ಲ. ಪ್ರತಿಯೊಬ್ಬರು ಇನ್ನೂ ಸಹ ಆಚರಣೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಇಂದು ಯುವ ಜನಾಂಗ ಸಂಪ್ರದಾಯ ಮರೆಯುತ್ತಿದ್ದಾರೆಂಬ ಅಂಶಗಳ ಮಧ್ಯೆ ಇಂದು ಬಾಗಲಕೋಟೆಯಲ್ಲಿ ಯುವತಿಯರು ಸಂಪ್ರದಾಯಗಳನ್ನ ಉಳಿಸಿಕೊಂಡು ಸಗಣೆ ಪಾಂಡವರನ್ನ ಪೂಜಿಸಿ ಆರಾಧಿಸುವ ಪರಿ ಇನ್ನೂ ವಿಶೇಷ. ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ದೀಪಾವಳಿ ಭರ್ಜರಿಯಾಗಿ ನಡೆಯುತ್ತಿದ್ದು, ಇದರೊಟ್ಟಿಗೆ ಸಗಣೆ ಪಾಂಡವರು ಕೊಂಚ ಡಿಫರೆಂಟ್ ಆಗಿ ಕಾಣ ಸಿಗುತ್ತಿದ್ದಾರೆ.