ಚಿತ್ರದುರ್ಗ: ಸಂಭ್ರಮದ ಮಿಂಚೇರಿ ಎತ್ತಿನ ಬಂಡಿ ಯಾತ್ರೆ
ಮಿಂಚೇರಿ ಗಾದ್ರಿ ಪಾಲನಾಯಕನ ಎತ್ತಿನಬಂಡಿ ಯಾತ್ರೆ ಜಾಗತೀಕರಣದ ಸವಾಲಿನ ನಡುವೆಯೂ ತನ್ನ ಬುಡಕಟ್ಟು ಪರಂಪರೆಯನ್ನು ಉಳಿಸಿಕೊಂಡಿದ್ದು, ತಮ್ಮ ಸಮುದಾಯದ ಸಾಂಸ್ಕೃತಿಕ ನಾಯಕನಿಗೆ ಸಲ್ಲಿಸುವ ಗೌರವವಾಗಿದ್ದು, ಚಿತ್ರದುರ್ಗದ ನಾಡಿನಲ್ಲಿ ಇನ್ನೂ ಬುಡಕಟ್ಟು ಸಂಸ್ಕೃತಿಗೆ ಜೀವಂತ ಸಾಕ್ಷಿಯಾಗಿದೆ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಡಿ.24): ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದಂತೆ ಮನುಷ್ಯ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಮರೆಯುತ್ತಿದ್ದಾನೆ ಆದ್ರೆ ಇಲ್ಲೊಂದು ಜಾತ್ರೆಯಲ್ಲಿ ಬುಡಕಟ್ಟು ನಾಯಕನಿಗೆ ನಮನ ಸಲ್ಲಿಸಲು ಇಡೀ ಸಮುದಾಯವೇ ಎತ್ತಿನ ಬಂಡಿ, ಕಾಲ ನಡಿಗೆಯ ಮೂಲಕ ಸುಮಾರು 65 ಕಿಮಿ ದೂರ ಕ್ರಮಿಸಿ ತಮ್ಮ ಸಾಂಸ್ಕೃತಿಕ ನಾಯಕನಿಗೆ ನಮಿಸುತ್ತಿದೆ....
ಹೀಗೆ ಗ್ರಾಮದ ಮದ್ಯದಲ್ಲಿ ದೇವರು ಎತ್ತುಗಳ ಸಮೇತ ನೆರೆದಿರುವ ಜನ ಸಂದಣಿ, ಸುಮಾರು ಕಿ ಮೀ ವರೆಗೆ ಉದ್ದವಾಗಿರುವ ಎತ್ತಿನ ಬಂಡಿ ಸಾಲು, ಉರಿಮೆ ಹೊಡೆತದ ಮೂಲಕ ಪೆಟ್ಟಿಗೆ ದೇವರನ್ನು ತಲೆ ಮೇಲೆ ಹೊತ್ತು ಬರಿಗಾಲಲ್ಲಿ ಸಾಗುತ್ತಿರುವ ನೂರಾರು ಮಂದಿ, ದೇವರ ಮುಂದೆಯೇ ಕಿಲಾರಿಗಳ ಜೊತೆಗೆ ಸಾಗುತ್ತಿರುವ ದೇವರ ಎತ್ತುಗಳು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲೂಕಿನ ಬಚ್ಚ ಬೋರನ ಹಟ್ಟಿಯಲ್ಲಿ.
ಚಿತ್ರದುರ್ಗ: ಅಂಬಾರಿ ಅರ್ಜುನನ ನೆನಪಿಗೆ ಕ್ರಿಕೆಟ್ ಟೂರ್ನಿ
ಹೌದು, ಚಿತ್ರದುರ್ಗ ಎಂದಕ್ಷಣ ನೆನಪಾಗೋದು ಮದಕರಿ ನಾಯಕ, ಅವನ ಚರಿತ್ರೆ ಬುಡಕಟ್ಟು ಸಮುದಾಯದೊಂದಿಗೆ ಬೆಸೆದು ಕೊಂಡಿರುವುದು ಅಷ್ಟೇ ಸತ್ಯ, ಪಾಳೇಗಾರರ ಚರಿತ್ರೆಗಿಂತ ಬುಡಕಟ್ಟು ಸಾಂಸ್ಕೃತಿಕ ನಾಯಕರ ಪರಂಪರೆ ಪ್ರಾಚೀನವಾದದ್ದು, ಮ್ಯಾಸನಾಯಕ ಬುಡಕಟ್ಟಿನ 12 ಜನ ಕುಲ ನಾಯಕರಲ್ಲಿ ಗಾದ್ರಿಪಾಲನಾಯಕ ದೊರೆ ಯಾಗಿದ್ದು,ಅವನಿಗೆ ನಮನ ಸಲ್ಲಿಸುವ ಸಲುವಾಗಿ ಈ ಮಿಂಚೇರಿ ಜಾತ್ರೆಯನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ಇಡೀ ನಾಯಕ ಬುಡಕಟ್ಟು ಸಮುದಾಯ ನಡೆಸಿಕೊಂಡು ಬಂದಿದೆ. ಮಿಂಚೇರಿ ಬೆಟ್ಟ ಚಿತ್ರದುರ್ಗದ ಮದಕರಿ ಪುರ ಸಮೀಪದ ಗ್ರಾಮದ ಕಾಡಿನ ಮಧ್ಯ ಇರುವ ಸ್ಥಳ, ಇಲ್ಲಿ ನಾಯಕ ಜನಾಂಗದ ಎನುಮಳೋರು ಕುಲದ ನಾಯಕ, ಈ ಪ್ರದೇಶದಲ್ಲಿ ಹುಲಿರಾಯ ಮತ್ತು ಗಾದ್ರಿಪಾಲ ನಾಯಕನಿಗೆ ಹೋರಾಟ ನಡೆದು ಇಬ್ಬರು ಸಮಾಧಿಯಾಗಿರುವ ಸ್ಥಳ ಇದು, ಅದಕ್ಕಾಗಿ ಇಡೀ ಮ್ಯಾಸ ಬೇಡ ಸಮುದಾಯದ ಜನತೆ ತಮಗೆ ಮಳೆ ಬೆಳೆ ಚನ್ನಾಗಿ ಆಗಲಿ ಎಂಬ ದೃಷ್ಟಿಯಿಂದ ಇಲ್ಲಿಗೆ ಕಟ್ಟು ನಿಟ್ಟಿನ ಆಚರಣೆಗಳ ಮೂಲಕ ತೆರಳಿ ಇಬ್ಬರಿಗೂ ವಂದಿಸಿ ಮರಳುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಪರಂಪರೆ ಇಂದಿಗೂ ಜೀವಂತವಾಗಿದೆ ಅಂತಾರೆ ಗ್ರಾಮಸ್ಥರು.
ಇನ್ನೂ ಈ ಮಿಂಚೇರಿ ಎತ್ತಿನ ಬಂಡಿ ಯಾತ್ರೆ ಚಿತ್ರದುರ್ಗದ ಬಚ್ಚ ಬೋರನಹಟ್ಟಿಯ ಮಜ್ಜಲ ಬಾವಿಯಿಂದ ಆರಂಭವಾಗಿ ನಂತರ ಕಚ್ಚಲ ಬೆಂಚಿನ ಬಳಿ ಪೂಜೆ ಮುಗಿಸಿ ಕ್ಯಾಸಾಪುರದಲ್ಲಿ ಬೀಡು ಬಿಡಲಾಗುತ್ತೆ. ಮರುದಿನ ಹೊತ್ತನಾಯಕ ಕೆರೆಗೆ ತೆರಳಿ ಸಂಪ್ರದಾಯದ ಪೂಜೆ ಮುಗಿಸಿ ನಂತರ ಮಿಂಚೇರಿ ಬೆಟ್ಟಕ್ಕೆ ಸೇರಲಾಗುತ್ತೆ, ಅಲ್ಲಿ ಹುಲಿರಾಯ ಮತ್ತು ಗಾದ್ರಿಪಾಲನಾಯಕನ ಸಮಾಧಿಗೆ ಪೂಜಾ ಕಾರ್ಯ ನೆರವೇರಿಸಿ ಬಂದ ಮಾರ್ಗದಲ್ಲೇ ವಾಪಾಸ್ ಬರಲಾಗುತ್ತೆ, ಈ ಯಾತ್ರೆಯಲ್ಲಿ 100ಕ್ಕೂ ಅಧಿಕ ಎತ್ತಿನ ಬಂಡಿಗಳು, ಆಧುನಿಕತೆಯ ಸ್ಪರ್ಶದಿಂದ 200ಟ್ರ್ಯಾಕ್ಟರ್ ಮತ್ತು ಬೈಕ್ ಗಳಲ್ಲಿ ಹೋಗುತ್ತೇವೆ, ಹಿಂದೆ ಬರಿಗಾಲಿನಲ್ಲಿ ಹೋಗುತಿದ್ದೆವು ಈಗ ಆಧುನಿಕತೆಯ ಸಂದರ್ಭದಲ್ಲಿ ಇತರೆ ವಾಹನಗಳಲ್ಲಿ ತೆರಳುತ್ತೇವೆ, ಆದ್ರೆ ಏನೇ ಆಧುನಿಕತೆ ಬಂದರೂ ಸಹ ನಮ್ಮ ಈ ಬುಡಕಟ್ಟು ಪರಂಪರೆ ಬಿಡಲ್ಲ ನಮ್ಮ ಪಶುಪಾಲನ ಸಂಸ್ಕೃತಿ ಇದು ಹೀಗೆ ಮುಂದುವರೆಯುತ್ತೆ ಎನ್ನುತ್ತಾರೆ ಗ್ರಾಮಸ್ಥರು.
ಒಟ್ಟಾರೆ ಮಿಂಚೇರಿ ಗಾದ್ರಿ ಪಾಲನಾಯಕನ ಎತ್ತಿನಬಂಡಿ ಯಾತ್ರೆ ಜಾಗತೀಕರಣದ ಸವಾಲಿನ ನಡುವೆಯೂ ತನ್ನ ಬುಡಕಟ್ಟು ಪರಂಪರೆಯನ್ನು ಉಳಿಸಿಕೊಂಡಿದ್ದು, ತಮ್ಮ ಸಮುದಾಯದ ಸಾಂಸ್ಕೃತಿಕ ನಾಯಕನಿಗೆ ಸಲ್ಲಿಸುವ ಗೌರವವಾಗಿದ್ದು, ಚಿತ್ರದುರ್ಗದ ನಾಡಿನಲ್ಲಿ ಇನ್ನೂ ಬುಡಕಟ್ಟು ಸಂಸ್ಕೃತಿಗೆ ಜೀವಂತ ಸಾಕ್ಷಿಯಾಗಿದೆ......