ಕೆಲವು ದೇಶಗಳು ಕೊರೋನಾ ಸೋಂಕು ತಗುಲಿ ಮೃತಪಟ್ಟವರನ್ನು ಸಮುದ್ರಕ್ಕೆ ಎಸೆಯುತ್ತಿವೆ. ಆದ್ದರಿಂದ ದಯವಿಟ್ಟು ಸಮುದ್ರ ಮೀನು ಸೇವಿಸಬೇಡಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಹೆಣಗಳು ತೀರದತ್ತ ಸಾಗಿ ಬರುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಇದೀಗ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಭಾರಿ ವೈರಲ್‌ ಆಗುತ್ತಿದೆ.

ವೈರಲ್‌ ಚೆಕ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಕೊರೋನಾಗೆ ಸಂಬಂಧವೇ ಇಲ್ಲದ ಹಳೆಯ ವಿಡಿಯೋವನ್ನು ಈಗ ಪೋಸ್ಟ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ ಎನ್ನುವುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಮೂಲ ವಿಡಿಯೋ 2014ರದ್ದು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, 2014ರಲ್ಲಿ ಆಫ್ರಿಕಾದ 170 ಅಕ್ರಮ ವಲಸಿಗರು ಯುರೋಪಿನತ್ತ ಸಾಗುತ್ತಿದ್ದ ವೇಳೆ ದೋಣಿ ಮುಳುಗಿ ಈ ದುರ್ಘಟನೆ ನಡೆದಿದ್ದು, ಲಿಬಿಯಾ ನೌಕಾಪಡೆ 17 ಜನರನ್ನು ರಕ್ಷಿಸಿತ್ತು. ಮೃತ ದೇಹಗಳು ಲಿಬಿಯಾ ರಾಜಧಾನಿಯಿಂದ 30 ಕಿ.ಮೀ ದೂರದ ಸಮುದ್ರ ತೀರದಲ್ಲಿ ಬಂದು ಬಿದ್ದಿದ್ದವು. ಇದನ್ನು ಅರೇಬಿಕ್‌, ಡೈಲಿ ಮೇಲ್‌ ಮುಂತಾದ ಸುದ್ದಿಸಂಸ್ಥೆಗಳು ವರದಿ ಮಾಡಿದ್ದು, ಘಟನೆಯ ರಕ್ಷಣಾ ಕಾರಾರ‍ಯಚರಣೆಯ ಫೋಟೋಗಳೂ ಇಂಟರ್‌ನೆಟ್‌ನಲ್ಲಿ ಲಭ್ಯವಿವೆ.

ಸದ್ಯ ಇದೇ ವಿಡಿಯೋವನ್ನು ಪೋಸ್ಟ್‌ ಮಾಡಿ, ಕೊರೋನಾ ವೈರಸ್‌ ಸೋಂಕು ತಗುಲಿ ಮೃತಪಟ್ಟವರನ್ನು ಸಮುದ್ರಕ್ಕೆ ಎಸೆಯಲಾಗುತ್ತಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಈ ಹಿಂದೆ ಕೋಳಿ ಮಾಂಸ ಸೇವಿಸಿದರೆ ಕೊರೋನಾ ತಗುಲುತ್ತದೆ ಎಂದು ವದಂತಿ ಹಬ್ಬಿಸಲಾಗಿತ್ತು.

"