Fact check: ಹತ್ರಾಸ್ ಆರೋಪಿ ತಂದೆ ಜತೆ ಮೋದಿ ಕಾಣಿಸಿಕೊಂಡ್ರಾ?
ಹತ್ರಾಸ್ ಅತ್ಯಾಚಾರ ಆರೋಪಿಯೊಬ್ಬನ ತಂದೆ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದಾ ಇದು? ಏನಿದರ ಸತ್ಯಾಸತ್ಯತೆ?
ಉತ್ತರ ಪ್ರದೇಶದ ಹಥ್ರಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮಾಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣ ಸಂಬಂಧ ಸಂದೀಪ್, ರಾಮು, ಲವಕುಶ್ ಮತ್ತು ರವಿ ಎಂಬ ನಾಲ್ವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವನ್ನು ಸಿಬಿಐ ತನಿಖೆಗೂ ವಹಿಸಲಾಗಿದೆ. ಈ ನಡುವೆ ಅತ್ಯಾಚಾರ ಪ್ರಕರಣ ರಾಜಕೀಯ ಸಂಘರ್ಷಕ್ಕೂ ಕಾರಣವಾಗುತ್ತಿದ್ದು, ಬಂಧಿತ ಅತ್ಯಾಚಾರ ಆರೋಪಿಯೊಬ್ಬನ ತಂದೆ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರೊಟ್ಟಿಗೆ ವ್ಯಕ್ತಿಯೊಬ್ಬರು ನಿಂತಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ.
Fact Check: ದೇಶವನ್ನೇ ಬೆಚ್ಚಿ ಬೀಳಿಸುವ ಹತ್ರಾಸ್ ಅತ್ಯಾಚಾರ ಸಂತ್ರಸ್ತೇ ಈಕೆನಾ?
ಕೆಲವರು ಈ ಫೋಟೋಗಳನ್ನು ಪೋಸ್ಟ್ ಮಾಡಿ, ‘ಯೋಗಿಜಿ ಮತ್ತು ಮೋದಿಜಿ ಜತೆಗೆ ನಿಂತಿರುವ ಈ ವ್ಯಕ್ತಿ ಅತ್ಯಾಚಾರ ಅರೋಪಿ ಸಂದೀಪ್ ತಂದೆ. ಈಗ ನಾಲ್ವರು ಆರೋಪಿಗಳೂ ಪಾರಾಗಲಿದ್ದಾರೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
ಆದರೆ ನಿಜಕ್ಕೂ ಫೋಟೋದಲ್ಲಿ ಮೋದಿ ಪಕ್ಕ ನಿಂತಿರುವ ವ್ಯಕ್ತಿ ಆರೋಪಿ ತಂದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಫೋಟೋದಲ್ಲಿರುವ ವ್ಯಕ್ತಿ ಹೆಸರು ಶ್ಯಾಂ ಪ್ರಕಾಶ್ ದ್ವಿವೇದಿ. ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕ. ಕಾಶಿ ಘಟಕದ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರೂ ಹೌದು. ಇವರು ಆರೋಪಿ ಸಂದೀಪ್ ತಂದೆ ಅಲ್ಲ. ಸಂದೀಪ್ ತಂದೆ ಹೆಸರು ನರೇಂದ್ರ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.
- ವೈರಲ್ ಚೆಕ್