Asianet Suvarna News Asianet Suvarna News

Government Model School: ಸರ್ಕಾರಿ ಮಕ್ಕಳಿಗೆ ‘ಸ್ಪೋಕನ್‌ ಇಂಗ್ಲಿಷ್‌’: ನಾಗೇಶ್‌

*  ಸರ್ಕಾರಿ ಮಾದರಿ ಶಾಲೆಗಳಲ್ಲಿ ನುರಿತ ಇಂಗ್ಲಿಷ್‌ ವಿಷಯ ಶಿಕ್ಷಕರಿಂದ ತರಗತಿ
*  ದುಂಡು ಮೇಜಿನ ಸಭೆಯಲ್ಲಿ ಘೋಷಣೆ
*  ಕನ್ನಡದ ಮಕ್ಕಳಿಗೂ ಇಂಗ್ಲಿಷ್‌ ಪಾಠ ಮಾಡಿ: ಭೈರಪ್ಪ
 

Spoken English for Government Children in Karnataka Says Minister BC Nagesh grg
Author
Bengaluru, First Published Apr 6, 2022, 8:46 AM IST

ಬೆಂಗಳೂರು(ಏ.06):  ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಎಲ್ಲ ಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುತ್ತಿರುವ ‘ಸರ್ಕಾರಿ ಮಾದರಿ ಶಾಲೆ’ಗಳಲ್ಲಿ(Government Model School) 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನುರಿತ ಇಂಗ್ಲೀಷ್‌ ವಿಷಯ ಶಿಕ್ಷಕರಿಂದ ‘ಸ್ಪೋಕನ್‌ ಇಂಗ್ಲಿಷ್‌’(Spoken English) ತರಗತಿಗಳನ್ನು ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ತಿಳಿಸಿದ್ದಾರೆ.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ವಿಷಯ ಕುರಿತ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಿಗೆ ಇಂಗ್ಲಿಷ್‌(English) ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ವ್ಯಾಮೋಹ ಪೋಷಕರಲ್ಲಿ ಹೆಚ್ಚುತ್ತಿರುವುದರಿಂದ ಕನ್ನಡ(Kannada) ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪುತ್ತಿವೆ. ಇಂತಹ ಶಾಲೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬೇಕಾಗಿದೆ ಎಂದರು.

ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಶೀಘ್ರವೇ ದೊರೆಯಲಿದೆ ಸಾರಿಗೆ ಸೌಲಭ್ಯ

ಇದಕ್ಕಾಗಿ 1ರಿಂದ 4ನೇ ತರಗತಿ ವರೆಗಿನ ಮಕ್ಕಳ(Children) ಪಠ್ಯಪುಸ್ತಕಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಮುದ್ರಿಸಲಾಗುತ್ತಿದೆ. ಪಠ್ಯಪುಸ್ತಕದ ಪ್ರತಿ ಪುಟದ ಒಂದು ಭಾಗದಲ್ಲಿ ಕನ್ನಡದ ಪಠ್ಯ ಮತ್ತೊಂದು ಭಾಗದಲ್ಲಿ ಅದೇ ಪಠ್ಯ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತಿದೆ. ಈಗಾಗಲೇ 3ನೇ ತರಗತಿ ವರೆಗೆ ಇದ್ದ ಈ ವ್ಯವಸ್ಥೆಯು ಈ ವರ್ಷ 4ನೇ ತರಗತಿ ಮಕ್ಕಳ ಪಠ್ಯದಲ್ಲೂ ಬರಲಿದೆ. ಅದೇ ರೀತಿ ಪ್ರತಿ ಗ್ರಾ.ಪಂ.ಗೊಂದರಂತೆ ಸ್ಥಾಪಿಸುತ್ತಿರುವ ಸರ್ಕಾರಿ ಮಾದರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ವಿಷಯವಾಗಿ ಬೋಧಿಸುವ ಜತೆಗೆ ಎಲ್ಲ ತರಗತಿ ಮಕ್ಕಳಿಗೂ ನುರಿತ ಆಂಗ್ಲ ಭಾಷಾ ಶಿಕ್ಷಕರಿಂದ ‘ಸ್ಪೋಕನ್‌ ಇಂಗ್ಲಿಷ್‌’ ತರಗತಿ ನಡೆಸಲಾಗುವುದು. ಈ ವರ್ಷ ಹೊಸದಾಗಿ 3000 ಮಾದರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಆ ಶಾಲೆಗಳಲ್ಲೂ ಸ್ಪೋಕನ್‌ ಇಂಗ್ಲಿಷ್‌ ತರಗತಿ ನಡೆಸಲು ಅರ್ಹ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಲ್‌.ಬೈರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ವಾಂಸರಾದ ಶತಾವಧಾನಿ ಗಣೇಸ್‌, ಚಂದ್ರಶೇಖರ ದಾಂಮ್ಲೆ, ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಸೇರಿದಂತೆ ಹಲವು ಸಾಹಿತಿಗಳು, ಬರಹಗಾರರು ಭಾಗವಹಿಸಿ ತಮ್ಮ ಸಲಹೆ, ಅಭಿಪ್ರಾಯಗಳನ್ನು ಮಂಡಿಸಿದರು.

ಕನ್ನಡದ ಮಕ್ಕಳಿಗೂ ಇಂಗ್ಲಿಷ್‌ ಪಾಠ ಮಾಡಿ: ಎಸ್‌.ಎಲ್‌.ಭೈರಪ್ಪ

ಕನ್ನಡದ ಶಾಲೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸರ್ಕಾರಿ ಹಾಗೂ ಇತರೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ (5ರಿಂದ 10ನೇ ತರಗತಿ) ಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲೂ ಪಾಠ ಮಾಡುವುದು, ಇಂಗ್ಲಿಷ್‌ನಲ್ಲಿ ಮಾತನಾಡುವುದು, ಬರೆಯುವುದನ್ನು ಕಲಿಸುವ ಕೆಲಸ ಆಗಬೇಕು ಎಂದು ಇದೇ ವೇಳೆ ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಲ್‌.ಭೈರಪ್ಪ(SL Byarappa) ಪ್ರತಿಪಾದಿಸಿದರು.

ಮಾತೃಭಾಷೆಯಲ್ಲಿ(Mother Tongue) ಶಿಕ್ಷಣ(Education) ನೀಡುವುದರಿಂದ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಹಾಗಾಗಿ ಪ್ರಾಥಮಿಕ ಶಾಲಾ ಹಂತದಲ್ಲಿ ಶುದ್ಧ ಕನ್ನಡದಲ್ಲೇ ಪಾಠ ಮಾಡಬೇಕು. ನಂತರ ಮಾಧ್ಯಮಿಕ ತರಗತಿಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಪಾಠ ಪರಿಚಯ ಮಾಡುವುದು, ಜತೆಗೆ ಆಂಗ್ಲಭಾಷೆಯಲ್ಲಿ ಮಾತನಾಡುವ, ಬರೆಯುವುದನ್ನೂ ಕಲಿಸಬೇಕು. ಪ್ರೌಢ ಶಾಲೆಯಲ್ಲಿ ಪ್ರತಿ ವಿಷಯದ ಬೋಧನಾ ತರಗತಿಯಲ್ಲೂ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ನಿರ್ಧಿಷ್ಟ ನಿಮಿಷಗಳ ಕಾಲ ಪಠ್ಯಬೋಧನೆ ಮಾಡಬೇಕು. ಇದಕ್ಕೆ ಪೂರಕವಾಗಿ ಭಾಷಾ ಭಾರತಿಯಂತಹ ಸರ್ಕಾರದ ಭಾಷಾಂತರ ಸಂಸ್ಥೆಗಳು ಕನ್ನಡದ ಪಠ್ಯಗಳನ್ನು ಇಂಗ್ಲೀಷ್‌ಗೆ ಭಾಷಾಂತರಿಸಿ ನೀಡಬೇಕು ಎಂದರು.

ಪಠ್ಯದಿಂದ ಟಿಪ್ಪು ಮಾಹಿತಿ ಕೈ ಬಿಡುವ ಬಗ್ಗೆ ಸಮಿತಿ ಪರಿಶೀಲನೆ: ಸಚಿವ ನಾಗೇಶ್‌

ಸಭೆಯಲ್ಲಿ ಕೈಗೊಂಡ ಆರು ನಿರ್ಣಯ

‘ಇನ್ಮುಂದೆ ಸರ್ಕಾರವು ಯಾವುದೇ ಕಾರಣಗಳನ್ನು ಮುಂದೊಡ್ಡಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬಾರದು. ರಾಜ್ಯದ ಒಟ್ಟು ಉತ್ಪನ್ನದಲ್ಲಿ (ಎಸ್‌ಜಿಡಿಪಿ) ಶೇ.6ರಷ್ಟುಹಣಕಾಸನ್ನು ಶಿಕ್ಷಣಕ್ಕಾಗಿ ಪ್ರತೀ ವರ್ಷದ ಬಜೆಟ್‌ನಲ್ಲಿ ಮೀಸಲಿಡಬೇಕು, ಕನ್ನಡ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) 2009ರ ಅನ್ವಯ ಇರುವ ಒಂಬತ್ತು ಮೂಲಭೂತ ಮಾನದಂಡಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅನುದಾನ ರಹಿತ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ವಿಶೇಷ ಅನುದಾನ ಮತ್ತು ರಿಯಾಯಿತಿಯನ್ನು ನೀಡಬೇಕು. ರಾಜ್ಯ ಭಾಷೆಯೇ 1ರಿಂದ 8ನೇ ತರಗತಿವರೆಗೆ ಶಿಕ್ಷಣ ಮಾಧ್ಯಮವಾಗಬೇಕೆಂದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, 2022-23ನೇ ಸಾಲಿನಿಂದ ಯಾವುದೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬಾರದು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಈ ಎಲ್ಲಾ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟು ಅವುಗಳ ಅನುಷ್ಠಾನಗೊಳಿಸುವಂತೆ ಒತ್ತಡ ಹಾಕಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.
 

Follow Us:
Download App:
  • android
  • ios