ಶಾಲಾ ಹಾಜರಾತಿ ಏರಿಕೆ: 40% ಮಕ್ಕಳು ಹಾಜರು
* 50% ಶಾಲೆಗಳು ಇನ್ನೂ ಆರಂಭವಾಗಿಲ್ಲ
* ಐದು ಜಿಲ್ಲೆಗಳಲ್ಲಿ ಭೌತಿಕ ತರಗತಿ ಆರಂಭವಾಗಿಲ್ಲ
* ಸಾಕಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತ ತೋರುತ್ತಿಲ್ಲ
ಬೆಂಗಳೂರು(ಆ.25): ರಾಜ್ಯದ 26 ಜಿಲ್ಲೆಗಳಲ್ಲಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳು ಆರಂಭವಾದ ಎರಡನೇ ದಿನ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು ಶೇ.40 ದಾಟಿದೆ. ಆದರೆ, ಒಟ್ಟು 15 ಸಾವಿರ ಪ್ರೌಢ ಶಾಲೆಗಳಲ್ಲಿ ಶೇ.50ರಷ್ಟು ಶಾಲೆಗಳು ಇನ್ನೂ ಕೂಡ ಆರಂಭವೇ ಆಗಿಲ್ಲ. ಇವುಗಳಲ್ಲಿ ಬಹುತೇಕ ಎಲ್ಲ ಶಾಲೆಗಳೂ ಖಾಸಗಿ ಶಾಲೆಗಳೇ ಆಗಿವೆ ಎಂಬುದು ಬಹಿರಂಗವಾಗಿದೆ.
ಮೊದಲ ದಿನ ಸೋಮವಾರ ಶೇ.20 ರಷ್ಟಿದ್ದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಎರಡನೇ ದಿನ ಮಂಗಳವಾರ ಕ್ರಮವಾಗಿ ಶೇ.41 ಮತ್ತು 43ಕ್ಕೆ ಏರಿಕೆಯಾಗಿದೆ. ದ್ವಿತೀಯ ಪಿಯುಸಿ ಹಾಜರಾತಿ ಕೊಂಚ ಏರಿಕೆಯಾಗಿದ್ದು ಮೊದಲ ದಿನ ಶೇ.36ರಷ್ಟಿದ್ದ ಹಾಜರಾತಿ ಮಂಗಳವಾರ ಶೇ.38ಕ್ಕೆ ಏರಿದೆ. ಪ್ರಥಮ ಪಿಯುಸಿಗೆ ಇನ್ನೂ ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ತರಗತಿ ಆರಂಭವಾಗಿಲ್ಲ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಇನ್ನು ಕೋವಿಡ್ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಈ ಐದು ಜಿಲ್ಲೆಗಳಲ್ಲಿ ಭೌತಿಕ ತರಗತಿ ಆರಂಭವಾಗಿಲ್ಲ.
7500 ಶಾಲೆ ಆರಂಭವಾಗಿಲ್ಲ: ಶಿಕ್ಷಣ ಇಲಾಖೆಯು ಇದುವರೆಗೆ ಎಷ್ಟುಶಾಲೆಗಳು ಆರಂಭವಾಗಿವೆ ಎಂಬ ಅಂಕಿ ಅಂಶಗಳನ್ನೂ ಕಲೆ ಹಾಕಿದೆ. ರಾಜ್ಯದ ಒಟ್ಟು 14956 ಪ್ರೌಢ ಶಾಲೆಗಳ ಪೈಪಿ 7447 ಶಾಲೆಗಳು ಆರಂಭವಾಗಿವೆ. ಉಳಿದ 7509 ಶಾಲೆಗಳು ಇನ್ನೂ ಆರಂಭವಾಗಿಲ್ಲ. ಇನ್ನು, ಪಿಯು ಕಾಲೇಜುಗಳಿಗೆ ದಾಖಲಾಗಿರುವ 6.06 ಲಕ್ಷಕ್ಕೂ ಹೆಚ್ಚು ದ್ವಿತೀಯ ಪಿಯು ವಿದ್ಯಾರ್ಥಿಗಳ ಪೈಕಿ ಮಂಗಳವಾರ 2.27 ಲಕ್ಷ ಮಕ್ಕಳು ಕಾಲೇಜಿಗೆ ಹಾಜರಾಗಿದ್ದಾರೆ. 3.78 ಲಕ್ಷ ಮಕ್ಕಳು ಗೈರು ಹಾಜರಾಗಿದ್ದರೆ 60 ಸಾವಿರ ಮಕ್ಕಳು ಆನ್‌ಲೈನ್‌ನಲ್ಲಿ ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಎಷ್ಟು ಕಾಲೇಜುಗಳು ಇನ್ನೂ ಆರಂಭವಾಗಿಲ್ಲ ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.
ಕಲಬುರಗಿಯಲ್ಲಿ ಸಂವಾದ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿವರಿಸಿದ ಅಶ್ವತ್ಥ ನಾರಾಯಣ
26 ಜಿಲ್ಲೆಗಳಲ್ಲಿ 8ನೇ ತರಗತಿಗೆ ದಾಖಲಾತಿ ಪಡೆದಿರುವ 8.70 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ 3.58 ಲಕ್ಷ (ಶೇ.41.17) ಮಕ್ಕಳು ಹಾಜರಾಗಿದ್ದಾರೆ. 9ನೇ ತರಗತಿಗೆ ದಾಖಲಾಗಿರುವ 8.71 ಲಕ್ಷ ಮಕ್ಕಳಲ್ಲಿ 3.82 ಲಕ್ಷ ಮಕ್ಕಳು (ಶೇ.43.86) ಹಾಜರಾಗಿದ್ದಾರೆ. ಪ್ರಸ್ತುತ ನೀಡಿರುವ ಹಾಜರಾತಿ ಅಂಕಿ ಅಂಶಗಳು ಭೌತಿಕ ತರಗತಿ ಆರಂಭಿಸಿರುವ ಶೇ.50ರಷ್ಟು ಶಾಲೆಗಳಿಗೆ ಸೀಮಿತವಾದುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಭೌತಿಕ ತರಗತಿ ಆರಂಭಿಸದ ಬಹುತೇಕ ಶಾಲೆಗಳು ಖಾಸಗಿ ಶಾಲೆಗಳೇ ಆಗಿವೆ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಕೋವಿಡ್ ಆತಂಕದಿಂದ ಸಾಕಷ್ಟುಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸು ಇನ್ನೂ ಮಾಡುತ್ತಿಲ್ಲ. ಹಾಗಾಗಿ ಶಾಲೆಗೆ ಬಂದವರಿಗೆ ಭೌತಿಕ ತರಗತಿ, ಬಾರದವರಿಗೆ ಆನ್‌ಲೈನ್ ತರಗತಿ ಮುಂದುವರೆಸಲು ಸರ್ಕಾರ ಹೇಳಿದೆ. ಆದರೆ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಹಲವು ಶಾಲೆಗಳು ಎರಡೂ ಮಾದರಿ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಭೌತಿಕ ತರಗತಿ ಆರಂಭಿಸಿಲ್ಲ ಎನ್ನಲಾಗುತ್ತಿದೆ. ಆದರೆ, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ಹೇಳುವುದೇ ಬೇರೆ, ಸಾಕಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತ ತೋರುತ್ತಿಲ್ಲ. ಒಪ್ಪಿಗೆ ಪತ್ರವನ್ನೂ ನೀಡುತ್ತಿಲ್ಲ. ಒಬ್ಬರೋ ಇಬ್ಬರೋ ಬಂದರೆ ಭೌತಿಕ ತರಗತಿ ಹೇಗೆ ನಡೆಸೋದು. ಹಾಗಾಗಿ ಇನ್ನೂ ಅರ್ಧದಷ್ಟು ಶಾಲೆಗಳು ಆನ್‌ಲೈನ್ ತರಗತಿಯನ್ನೇ ಮುಂದುವರೆಸಿರಬಹುದು ಎನುತ್ತಾರೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ.
ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಎಷ್ಟೇ ಮಕ್ಕಳು ಶಾಲೆಗೆ ಬರಲಿ ಅವರಿಗೆ ಶಾಲೆಗಳು ಭೌತಿಕ ತರಗತಿ ನಡೆಸಬೇಕು. ಸಿಬ್ಬಂದಿ ಕೊರತೆ ಇದ್ದರೆ ಅದು ಶಾಲೆಯ ಸಮಸ್ಯೆ ಅಗತ್ಯ ಸಿಬ್ಬಂದಿ ನೇಮಿಸಿಕೊಂಡು ಆನ್‌ಲೈನ್, ಭೌತಿಕ ತರಗತಿ ಎರಡೂ ನಡೆಸಬೇಕು. ಮಕ್ಕಳು ಶಾಲೆಗೆ ಬರಲು ಸಿದ್ಧರಿದ್ದರೂ ಯಾವುದೇ ಶಾಲೆ ಭೌತಿಕ ತರಗತಿ ನಡೆಸದಿರುವುದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ.