ರಾಜ್ಯದಲ್ಲಿ ಕಾಲೇಜು ಆರಂಭಕ್ಕೆ ಸಿದ್ಧತೆ: ಸಚಿವ ಅಶ್ವತ್ಥ್ ನಾರಾಯಣ
* ವಿದ್ಯಾರ್ಥಿಗಳಿಗೆ ಲಸಿಕೀಕರಣ ಮುಗಿದ ನಂತರ ನಿರ್ಧಾರ
* ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ
* ಸುರಕ್ಷತೆಯ ಜತೆ ಜತೆಗೇ ಜೀವನ ಸಾಗುತ್ತಿರಬೇಕು
ಹುಬ್ಬಳ್ಳಿ(ಜು.12): ಉನ್ನತ ಶಿಕ್ಷಣ ವ್ಯಾಪ್ತಿಯ ಕಾಲೇಜುಗಳ ಆರಂಭಕ್ಕೆ ಸರಕಾರ ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ. ಆದರೆ, ಭೌತಿಕ ತರಗತಿಗಳ ಆರಂಭಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಬೆಳಿಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗಾಗಲೇ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುವ ಕೆಲಸ ಭರದಿಂದ ಸಾಗುತ್ತಿದೆ. ಲಸಿಕೆ ಕಾರ್ಯ ಮುಗಿಯುತ್ತಿದ್ದಂತೆ ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಾಲೇಜುಗಳನ್ನು ತೆರೆಯಲು ಸವಾಲುಗಳಿರುವುದು ನಿಜ. ಆದರೆ ಎಷ್ಟು ದಿನವೆಂದು ಹಾಗೇ ಇರಲು ಸಾಧ್ಯ? ಜೀವನ ಸಾಗುತ್ತಲೇ ಇರಬೇಕು. ಸುರಕ್ಷತೆಯ ಜತೆ ಜತೆಗೇ ಜೀವನ ಸಾಗುತ್ತಿರಬೇಕು. ಈ ನಿಟ್ಟಿನಲ್ಲಿ ಲಸಿಕೆ ಮಾತ್ರವೇ ಪರಿಹಾರ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಆತ್ಮನಿರ್ಭರ ತಾಂತ್ರಿಕ ಶಿಕ್ಷಣ; ಸ್ಥಳೀಯ ಭಾಷೆಗಳಲ್ಲೇ ಎಂಜಿನಿಯರಿಂಗ್ ಕೋರ್ಸು!
ಮೂರನೇ ಅಲೆ ತಡೆಗೆ ಸಿದ್ಧತೆ
ಸರಕಾರ ಎಲ್ಲೂ ಮೈಮರೆತಿಲ್ಲ. ಒಂದೆಡೆ ಲಸಿಕೀಕರಣದ ವೇಗ ಹೆಚ್ಚಿಸುತ್ತಲೇ ಇನ್ನೊಂದೆಡೆ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ರಾಜ್ಯಾದ್ಯಂತ ಕೋವಿಡ್ ಸೋಂಕಿತರಿಗಾಗಿಯೇ 6,000 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಪ್ರಮಾಣಲ್ಲಿ ವೈದ್ಯರು, ನರ್ಸುಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಗ್ರೂಪ್ ಡಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 2,000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಜನಸಂಖ್ಯೆಯನ್ನು ತಡೆಯಬೇಕು
ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದ ʼಇಬ್ಬರು ಮಕ್ಕಳ ನೀತಿʼಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಭಿವೃದ್ಧಿಗೆ ಪೂರಕವಾಗಿ ಜನಸಂಖ್ಯೆ ಪ್ರಮಾಣವನ್ನು ತಡೆಯಬೇಕಾಗಿದೆ. ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ ಎಂದರು.
ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ
ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿಯಲ್ಲಿ ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಮೂಲಕ ಇನ್ನಷ್ಟು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.
ಈಗಾಗಲೇ ಸರಕಾರ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (esdm) ನೀತಿಯನ್ನು ಜಾರಿಗೆ ತಂದಿದ್ದು ಅದರ ಮೂಲಕ ಹಲವಾರು ಕಂಪನಿಗಳು ಹುಬ್ಬಳ್ಳಿಗೆ ಬಂದಿವೆ ಎಂದರು.
ಈ ಭಾಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ದಿಕ್ಕಿನಲ್ಲಿ ಬಹಳಷ್ಟು ಪ್ರಗತಿ ಆಗುತ್ತಿದೆ. ಮುಖ್ಯವಾಗಿ ಇಎಸ್‌ಡಿಎಂ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಕಾಣುತ್ತಿದೆ. ಇನ್ನಷ್ಟು ಪ್ರೋತ್ಸಾಹ ನೀಡಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ಡಿಸಿಎಂ ಅವರು ಹೇಳಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್‌ಕ್ಲಾಸ್ ರೂಂ ಅಭಿವೃದ್ಧಿ: ಅಶ್ವತ್ಥನಾರಾಯಣ
ಬಿಯಾಂಡ್ ಬೆಂಗಳೂರುʼ ಮೂಲಕ ಬೆಂಗಳೂರು ಹೊರಗಿನ ನಗರಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಅದರ ಮೂಲಕವೇ ಮತ್ತಷ್ಟು ಕಂಪನಿಗಳು ಹುಬ್ಬಳ್ಳಿಗೆ ಬರಲಿವೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳು ಬೆಳೆಯಲು ಬಹಳಷ್ಟು ಸಹಕಾರಿ ಆಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಹಿನ್ನಡೆ ಆಗಿಲ್ಲ:
ಹುಬ್ಬಳ್ಳಿ ಭಾಗದಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹಿನ್ನಡೆಯಾಗಿಲ್ಲ. ಮಾರುಕಟ್ಟೆಗೆ ತಕ್ಕಂತೆ ಕೆಲ ವ್ಯತ್ಯಾಸಗಳಾಗುತ್ತವೆಯೇ ವಿನಾ, ಅದನ್ನು ಹಿನ್ನಡೆ ಎನ್ನಲಾಗದು. ಇನ್ಫೋಸಿಸ್, ದೇಶಪಾಂಡೆ ಫೌಂಡೇಶ್ ವತಿಯಿಂದ ಈ ಭಾಗದಲ್ಲಿ ಇನ್ನೂ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ಭಾಗದ ಬೆಳವಣಿಗೆಗೆ ಭಾರೀ ಕೊಡುಗೆ ನೀಡಲಿದೆ ಎಂದು ಡಿಸಿಎಂ ಹೇಳಿದರು.
ಇದಕ್ಕೂ ಮುನ್ನ ಹುಬ್ಬಳ್ಳಿ ನಗರದ ಸಿದ್ಧಾರೂಢಮಠ ಆಗಮಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ ಅವರು ಸಿದ್ಧಾರೂಢ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದಾದ ಬಳಿಕ ಮಠದ ಆಡಳಿತ ಮಂಡಳಿಯಿಂದ ಅಶ್ವತ್ಥ್ ನಾರಾಯಣ ಅವರಿಗೆ ಶಾಲು ಹೊದಿಸಿ ಸತ್ಕರಿಸಲಾಗಿದೆ.