ಇನ್ನು ವಿವಿ, ಕಾಲೇಜುಗಳಿಗೆ ನ್ಯಾಕ್ ‘ಗ್ರೇಡ್’ ಇಲ್ಲ: ಮಾನ್ಯತೆ ಮಾತ್ರ ನೀಡಲು ನಿರ್ಧಾರ
ನ್ಯಾಕ್ ಶ್ರೇಣಿ ನೀಡಿಕೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಮಾನ್ಯತೆ ಮಾತ್ರ ನೀಡಲು ನಿರ್ಧಾರ ಮಾಡಿದೆ. ಹೀಗಾಗಿ ಶ್ರೇಣಿ ನೀಡುವ ಪದ್ಧತಿ ರದ್ದು ಮಾಡುತ್ತಿದೆ ಎಂದು ತಿಳಿದುಬಂದಿದೆ.
ಮುಂಬೈ: ಇನ್ನು ದೇಶದ ವಿಶ್ವವಿದ್ಯಾಲಯಗಳು (University) ಹಾಗೂ ಕಾಲೇಜುಗಳಂಥ (College) ಉನ್ನತ ಶಿಕ್ಷಣ ಸಂಸ್ಥೆಗಳಿಗೆ (Higher Education Institutes) ‘ಎ ಪ್ಲಸ್’ ಅಥವಾ ‘ಎ’ ಮೊದಲಾದ ಶ್ರೇಣಿಗಳನ್ನು (ಗ್ರೇಡ್) (Grade) ನೀಡದಿರಲು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (National Assessment and Accreditation Council) (ನ್ಯಾಕ್) (NAAC) ನಿರ್ಧರಿಸಿದೆ. ಇದರ ಬದಲಾಗಿ ಕಾಲೇಜು ಹಾಗೂ ವಿವಿಗಳಿಗೆ ‘ಮಾನ್ಯತೆ ಪಡೆದ’ (Accredited) ಅಥವಾ ‘ಮಾನ್ಯತೆ ಪಡೆಯಬೇಕಾದ’ (Still to be accredited) ಈ ಎರಡು ಟ್ಯಾಗ್‌ಗಳನ್ನು ಮಾತ್ರ ನೀಡಲಿದೆ.
ಉನ್ನತ ಶ್ರೇಣಿ ಪಡೆಯಲು ಭ್ರಷ್ಟಾಚಾರ ಹಾಗೂ ಅನಾರೋಗ್ಯಕರ ಸ್ಪರ್ಧೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳು ಡೀಲ್ ಕುದುರಿಸಿ ಮಾನ್ಯತೆ ನೀಡಿಸುತ್ತಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಹೀಗಾಗಿ ಶ್ರೇಣಿಗೆ ಕಡಿವಾಣ ಹಾಕಲು ನ್ಯಾಕ್ ತೀರ್ಮಾನಿಸಿದೆ.
ಇದನ್ನು ಓದಿ: NAAC Recruitment 2022: ಉಪ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
ಈ ನಿಟ್ಟಿನಲ್ಲಿ ನ್ಯಾಕ್, ಎನ್‌ಐಆರ್‌ಎಫ್ (NIRF) (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಫ್ರೇಮ್‌ವರ್ಕ್) (National Institutional Ranking Framework) ಹಾಗೂ ಎನ್‌ಬಿಎ (NBA) (ರಾಷ್ಟ್ರೀಯ ಮಾನ್ಯತಾ ಬೋರ್ಡ್) (National Board of Accreditation) ಇನ್ನು ‘ರಾಷ್ಟ್ರೀಯ ಮಾನ್ಯತಾ ಮಂಡಳಿ’ (National Assessment Council) ಹೆಸರಿನಲ್ಲಿ ವಿಲೀನವಾಗಲಿವೆ. ಸ್ವಾಯತ್ತ ಕಾಲೇಜು, ವಿಶ್ವವಿದ್ಯಾಲಯಗಳಿಗಾಗಿ ಪ್ರತ್ಯೇಕ ಮಾನದಂಡಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಕ್ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಭೂಷಣ್ ಪಟ್‌ವರ್ಧನ್, ‘ಪ್ರಸ್ತುತ ವಿಶ್ವವಿದ್ಯಾಲಯ ಎ ಶ್ರೇಣಿ ಪಡೆದಿದೆ ಎಂದರೆ ಅಲ್ಲಿರುವ ಎಲ್ಲ ಕೋರ್ಸುಗಳು ಉನ್ನತ ಮಟ್ಟದ್ದೇ ಆಗಿರುತ್ತವೆ ಎಂದಲ್ಲ. ಕೆಲವು ಕೋರ್ಸುಗಳು ನೀಡಿದ ಶ್ರೇಣಿಗಳಿಗಿಂತಲೂ ಉತ್ತಮವಾಗಿರಬಹುದು. ಅದೇ ರೀತಿ ಎ ಪ್ಲಸ್ ಶ್ರೇಣಿ ಪಡೆದ ವೈದ್ಯಕೀಯ ವಿಶ್ವವಿದ್ಯಾಲಯಕ್ಕೂ ಅದೇ ಶ್ರೇಣಿ ಪಡೆದ ಕಲಾ ವಿಶ್ವವಿದ್ಯಾಲಯಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಶ್ರೇಣಿ ವ್ಯವಸ್ಥೆ ಕೈಬಿಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಬದಲಾವಣೆಯ ಸಾಧನ: ವೆಂಕಯ್ಯ ನಾಯ್ಡು
ಏನಿದು ನ್ಯಾಕ್..?
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಸದಸ್ಯರು ಪ್ರತಿ ವರ್ಷ ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳು ಹಾಗೂ ವಿವಿಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಶೈಕ್ಷಣಿಕ ಮೂಲಸೌಕರ್ಯ ಪರಿಶೀಲಿಸಿ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಶ್ರೇಣಿ ನೀಡುವ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ: ಸುಪ್ರೀಂ ಕೋರ್ಟ್